Advertisement

ನಿಲ್ಲಿಸಿ ಕೇಳಲು ಧೈರ್ಯ ಬರುತ್ತಿಲ್ಲ

06:00 AM Sep 11, 2018 | Team Udayavani |

ಅಂದು ಭಾಸ್ಕರ ಮೋಡಗಳ ಮಧ್ಯೆ ಸಿಲುಕಿ ವಸುಂಧರೆಯ ಚುಂಬಿಸಲು ಒದ್ದಾಡುತ್ತಿದ್ದ. ಇತ್ತ ಮೈಮೇಲಿದ್ದ ಕಂಬಳಿ ನನ್ನನ್ನು ಬಿಗಿಯಾಗಿ ಅಪ್ಪಿಕೊಂಡಿತ್ತು. ಅದನ್ನು ಚೂರು ಎಳೆದು, ಕಿಟಕಿಯತ್ತ ಕಣ್ಣು ಹಾಯಿಸಿದಾಗ ಮಳೆ ನಿಲ್ಲುವ ಯಾವ ಮುನ್ಸೂಚನೆಯೂ ಕಾಣುತ್ತಿರಲಿಲ್ಲ. ಮಬ್ಬುಗತ್ತಲಿನಿಂದ ತುಂಬಿದ ಕೋಣೆಯಲ್ಲಿ ಮಳೆಯ ಆರ್ಭಟ ಬಿಟ್ಟರೆ ಎಲ್ಲವೂ ಶಾಂತವಾಗಿತ್ತು. ಅಮ್ಮ ಬಂದು ಬಡಿದೆಬ್ಬಿಸಲು ಗಂಟೆ ಒಂಬತ್ತಾಗಿತ್ತು. ನಿತ್ಯ ಕರ್ಮವ ಮುಗಿಸಿ ಎಡೆಬಿಡದೆ ಸುರಿಯುವ ಮಳೆಯಲ್ಲೇ ಕಾಲೇಜಿಗೆ ಹೊರಟೆ. 

Advertisement

ಮೊದಲೇ ಟೈಮಾಗಿತ್ತು. ಚಲಿಸುತ್ತಿರುವ ಬಸ್‌ ಹಿಡಿಯಲು ಓಡುತ್ತಾ ಸರ್ರನೆ ಕಾಲು ಜಾರಿ ನೆಲಕ್ಕೆ ಬಿದ್ದೆ. ಅದನ್ನು ಕಂಡು ನಿಂತವರಲ್ಲಿ ಕೆಲವರು ಒಳಗೊಳಗೆ ಕುಹಕದ ನಗೆ ಬೀರಿದರೆ, ಇನ್ನು ಕೆಲವರು ಕಂಡರೂ ಕಾಣದ ಹಾಗೆ ಸುಮ್ಮನಿದ್ದರು. ಇನ್ನೇನು ಎಲ್ಲರನ್ನೂ ಬೈದುಕೊಂಡು ಮೇಲೇಳಬೇಕು ಎನ್ನುವಷ್ಟರಲ್ಲಿ ಆತ ನನ್ನ ಕೈಗಳಿಗೆ ತನ್ನ ಕೈ ನೀಡಿ, ನಿಧಾನಕ್ಕೆ ಏಳಿ ಎಂದ. ನಂತರ, ನನ್ನಿಂದ ಬಹು ದೂರ ಬಿದ್ದಿದ್ದ ಬ್ಯಾಗನ್ನು ತಂದು ಕೈಯಲ್ಲಿಟ್ಟು, ಟೇಕ್‌ಕೇರ್‌ ಎಂದು ಹೇಳಿ ಪೂರ್ಣ ಚಂದಿರನಂತೆ ಮಾಯವಾಗಿಬಿಟ್ಟ. 

ಮೊದಲ ನೋಟದಲ್ಲೇ ಅವನ ವಶನಾಗಿಬಿಟ್ಟೆ ಎಂದೆನಿಸಿತು. ಹುಣ್ಣಿಮೆ ಚಂದ್ರನ ತೇಜಸ್ಸು ಅವನ ಮುಖದ ಮೇಲೆ ರಾರಾಜಿಸುತ್ತಿತ್ತು. ಆತನ ಗುಂಗುರು ಕೂದಲು, ಚಿಗುರು ಮೀಸೆಯಲ್ಲಿನ ಹುಮ್ಮಸ್ಸು, ಹೆಣ್ಣು ಮಕ್ಕಳ ಹುಬ್ಬನ್ನು ನಾಚಿಸುವಂತಿದ್ದ ಅವನ ಹುಬ್ಬುಗಳು, ದಾಳಿಂಬೆಯೂ ನಾಚುವಷ್ಟು ಚೆಂದಕ್ಕಿದ್ದ ಅವನ ದಂತಪಂಕ್ತಿಗಳು… ಇಷ್ಟು ಸಾಕಾಗಿತ್ತು ಮೈತುಂಬ ಅವನ ಗುಂಗೇರಲು.

ಮರುದಿನದಿಂದ ಕಣ್ಣು ಮುಚ್ಚಿದರೆ ಸಾಕು, ಆತನದ್ದೇ ಚಹರೆ. ರಾತ್ರಿಯೆಲ್ಲಾ ಅವನೇ ಆವರಿಸಿದ್ದ. ಮಾರನೇ ದಿನ ಅವನನ್ನು ಮಾತನಾಡಿಸಲೇಬೇಕೆಂದು ಅದೇ ಬಸ್‌ ಸ್ಟಾಂಡಿನ ಹತ್ತಿರ ನಿಂತೆ. ಆತ ಬರಲೇ ಇಲ್ಲ. ನಿರಾಶೆ ಜೊತೆಯಾಗಿ ಹೆಜ್ಜೆ ಹಾಕಲು, ಕೂಗಳತೆಯ ದೂರದಲ್ಲಿ ಗೆಳೆಯರ ಗುಂಪಿನೊಂದಿಗೆ ಚಾ ಹೀರುತ್ತಾ ನಿಂತಿದ್ದ. ಇನ್ನೇನು ಮಾತನಾಡಿಸಬೇಕೆಂದು ಅಲ್ಲಿಗೆ ದೌಡಾಯಿಸುವಷ್ಟರಲ್ಲಿ ಬೈಕ್‌ ಏರಿ ಹೋರಟೇ ಹೋದ. ಈ ಹದಿಹರೆಯದ ಮನಸ್ಸೇ ಹೀಗೇನೋ! ಈಗಲೂ ನಾನು ಅವನ ಕಲ್ಪನೆಯಲ್ಲೇ ಹೊಯ್ದಾಡುತ್ತಿರುವೆ, ಚಿಟಪಟ ಮಳೆಯಂತೆ, ಸುಳಿಮಿಂಚಂತೆ ಅವನು ಆವರಿಸಿಕೊಂಡಿದ್ದಾನೆ… 

ಆದರೆ, ಮೊನ್ನೆಯಿಂದ ಹೀಗೊಂದು ಯೋಚನೆ ಜೊತೆಯಾಗಿದೆ. ನಾನೇನೋ ಅವನಿಗಾಗಿ ಹಂಬಲಿಸ್ತಾ ಇದೀನಿ. ಆದರೆ, ಅಂಥದೇ ಫೀಲ್‌ ಅವನೊಳಗೂ ಇದೆಯಾ? ಅವನ ಮನಸೊಳಗೆ ಈಗಾಗಲೇ ಬೇರೆ ಯಾರಾದರೂ ಇರಬಹುದಾ? ಅದೇ ಕಾರಣಕ್ಕೆ ಅವನು ಒಮ್ಮೆಯೂ ಭೇಟಿಯಾಗದೆ ಅಥವಾ ನನ್ನನ್ನು ಕಂಡರೂ ಕಾಣದವನಂತೆ ವರ್ತಿಸುತ್ತಾ ಸುಮ್ಮನೆ ಉಳಿದುಬಿಟ್ಟಿದ್ದಾನಾ? ಇಂಥ ಯೋಚನೆಗಳಲ್ಲೇ ಕಳೆದುಹೋಗಿದ್ದೇನೆ. ಉತ್ತರ ಹೇಳಬೇಕಾದವನು ಕೈಗೇ ಸಿಗುತ್ತಿಲ್ಲ. ನಿಲ್ಲಿಸಿ ಕೇಳ್ಳೋಣವೆಂದರೆ, ನನಗೆ ಧೈರ್ಯ ಬರುತ್ತಿಲ್ಲ… ಏನು ಮಾಡಲಿ?

Advertisement

ಮಾಲತಿ ಅಗಸರ

Advertisement

Udayavani is now on Telegram. Click here to join our channel and stay updated with the latest news.

Next