Advertisement

ವಿವಿ ಅಂಕಪಟ್ಟಿ ಹಗರಣಕ್ಕೂಇಲಾಖೆಗೂ ಸಂಬಂಧವಿಲ್ಲ

11:11 AM Dec 08, 2017 | Team Udayavani |

ಬೆಂಗಳೂರು: “ಅಂಕಪಟ್ಟಿ ಹಗರಣಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ‘ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಆದ ನಿರ್ಣಯದಂತೆ ಸರ್ಕಾರಿ ಸಂಸ್ಥೆಯಾದ ಎಂಎಸ್‌ಐಎಲ್‌ಗೆ ಅಂಕಪಟ್ಟಿ ಸಿದ್ಧಪಡಿಸಲು ಗುತ್ತಿಗೆ ನೀಡಲಾಗಿತ್ತು ‘ ಎಂದು ಹೇಳಿದ್ದಾರೆ.

Advertisement

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಂಕಪಟ್ಟಿ ಯಾವ ಮಾದರಿಯದು ಬೇಕು, ಎಷ್ಟು ಮೊತ್ತ ನಿಗದಿ ಎಂಬುದು ಆಯಾ ವಿಶ್ವವಿದ್ಯಾಲಯಕ್ಕೆ ಬಿಟ್ಟಿದ್ದು. ಆ ವಿಚಾರದಲ್ಲಿ ಉನ್ನತ ಶಿಕ್ಷಣ ಇಲಾಖೆ ಪಾತ್ರವೇನೂ ಇಲ್ಲ. ವಿಶ್ವಾಸಾರ್ಹತೆ ಇರುತ್ತದೆಂಬ ಕಾರಣಕ್ಕೆ ಸರ್ಕಾರಿ ಸಂಸ್ಥೆಯಾದ ಎಂಎಸ್‌ಐಎಲ್‌ಗೆ ಗುತ್ತಿಗೆ ನೀಡಿ ಎಂದು ಉನ್ನತ ಶಿಕ್ಷಣ ಪರಿಷತ್‌ನಲ್ಲಿ ನಿರ್ಣಯ ಕೈಗೊಳ್ಳ 
ಲಾಗಿತ್ತು. ಆ ಸಭೆಯಲ್ಲಿ ಎಲ್ಲ ವಿವಿಗಳ ಉಪ ಕುಲಪತಿಗಳೂ  ಹಾಜರಿದ್ದರು. ಅದರಂತೆ ನಮ್ಮ ಇಲಾಖೆಯಿಂದ ಪತ್ರ ಬರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು. 

ಈ ಹಿಂದೆ ಹರಿದು ಹೋಗುವ ಹಾಗೂ ನೀರಿನಲ್ಲಿ ಒದ್ದೆಯಾದರೆ ಹಾಳಾಗುವ ಪೇಪರ್‌ನಲ್ಲಿ ಅಂಕಪಟ್ಟಿ ಸಿದ್ಧಪಡಿಸಲಾಗುತ್ತಿತ್ತು. ಅದಕ್ಕೆ
ಬದಲಾಗಿ ಹರಿಯದಂತೆ ಹಾಗೂ ನೀರಿನಲ್ಲಿ ಹಾಕಿ  ದರೂ ಹಾಳಾಗದಂತಹ ಪೇಪರ್‌ನಲ್ಲಿ ಅಂಕಪಟ್ಟಿ ಸಿದ್ಧಪಡಿಸಲು ಎಂಎಸ್‌ಐಎಲ್‌ನ ಲೇಖಕ್‌ ಚಿಹ್ನೆ ಸಮೇತ ಖಾತರಿ ನೀಡುವ ಒಪ್ಪಂದದೊಂದಿಗೆ ಗುತ್ತಿಗೆ ನೀಡಲಾಗಿತ್ತು. ನನ್ನ ಪ್ರಕಾರ ಎಂಎಸ್‌
ಐಎಲ್‌ ಸರ್ಕಾರಿ ಸಂಸ್ಥೆಯಾದ್ದರಿಂದ ಅಲ್ಲಿ ಹಗರಣ ನಡೆಯಲು ಸಾಧ್ಯವೇ ಇಲ್ಲ ಎಂದರು. ಸರ್ಕಾರದ ಆದೇಶದನ್ವಯ ಉನ್ನತ ಶಿಕ್ಷಣ
ಇಲಾಖೆಯ ವ್ಯಾಪ್ತಿಗೆ ಬರುವ ಆರು ವಿವಿಗಳಿಗೆ ವಿಶ್ವವಿದ್ಯಾಲಯಗಳ ಅವಶ್ಯಕತೆಯ ಅನುಗುಣವಾಗಿ ಕನಿಷ್ಠ 8 ರಹಸ್ಯ ಹಾಗೂ ರಕ್ಷಣಾತ್ಮಕ ಗುಣಗಳಾದ ತಿದ್ದಪಡಿ ಮಾಡಲಾಗದ ಹಾಗೂ ನೀರಿನಿಂದ ನೆನೆಯದ, ಹರಿಯದ ಅಂಕಪಟ್ಟಿ /ಪದವಿ ಪ್ರಮಾಣ ಪತ್ರಗಳನ್ನು ಸರಬರಾಜು ಮಾಡ ಲಾಗಿದೆ. ಇದರಿಂದ ವಿವಿಗಳಿಗೆ ಉಳಿತಾಯ ಸಹ ಆಗಿದೆ ಎಂದು ಸಮರ್ಥಿಸಿ ಕೊಂಡರು. ಈ ಹಿಂದೆ 160 ರೂ.ಗೆ ನೀಡಿದ್ದ ಟೆಂಡರ್‌ ಬದಲಾಗಿ ಈ ಬಾರಿ 22 ರೂ.ಗೆ ನೀಡಲಾಗಿತ್ತು. ಅಂಕಪಟ್ಟಿ ಹಾಗೂ ಸರ್ಟಿμಕೇಟ್‌ 90ರೂ. ದರದಲ್ಲಿ ಯಾವುದೇ ವಿವಿಗಳಿಗೆ ಸರಬರಾಜು ಮಾಡಿಲ್ಲ. 18.50 ರೂ.ನಿಂದ 36.50 ರೂ. ದರದಲ್ಲಿ ಸರಬರಾಜು ಮಾಡಲಾ 
ಗುತ್ತಿದೆ ಎಂದು ಹೇಳಿದ ಅವರು, ಈ ಕುರಿತು ಎಂಎಸ್‌ಐಎಲ್‌ ವ್ಯವಸ್ಥಾಪಕ ನಿರ್ದೇಶಕರ ಪತ್ರವನ್ನೂ ಪ್ರದರ್ಶಿಸಿದರು.

ಎಂಎಸ್‌ಐಎಲ್‌ ಸಂಸ್ಥೆ ದೇವರ್ ಇನ್‌ ಫೋಟೆಕ್‌ ಪ್ರೈವೇಟ್‌ ಲಿಮಿಟೆಡ್‌ಗೆ ಗುತ್ತಿಗೆ ನೀಡಿದೆ. ಆ ಸಂಸ್ಥೆ ಬ್ಲಾಕ್‌ಲಿಸ್ಟ್‌ಗೆ ಸೇರಿದೆಯೆಂಬ ಆರೋಪ ವಿದೆ. ಆ ಕುರಿತು ತನಿಖೆ ಮಾಡಿಸಲಾಗುವುದು. ಒಂದೊಮ್ಮೆ ಲೋಪ ಆಗಿದ್ದರೆ ಕ್ರಮ ಕೈಗೊಳ್ಳಲಾ ಗುವುದು. ಎಂಎಸ್‌ಐಎಲ್‌ ನಿಂದ ಅಕ್ರಮ ಆಗಿ ದ್ದರೂ ಕ್ರಮಕ್ಕೆ ಸೂಚಿಸಲಾಗುವುದು ಎಂದರು. ರಾಜ್ಯದ ಎಲ್ಲ ವಿವಿಗಳಲ್ಲೂ ಏಕರೂಪದ
ಅಂಕಪಟ್ಟಿ ಹಾಗೂ ಒಂದೇ ದರದಲ್ಲಿ ಖರೀದಿ ಮಾಡಬೇಕೆಂಬ ಬಗ್ಗೆಯೂ ಮುಂದಿನ ಉನ್ನತ ಶಿಕ್ಷಣ ಪರಿಷತ್‌ ಸಭೆಯಲ್ಲಿ ಪ್ರಸ್ತಾಪಿಸಲಾ  ಗುವುದು ಎಂದು ತಿಳಿಸಿದರು.

ನಕಲಿ ಅಂಕಪಟ್ಟಿ ಹಾವಳಿ ತಡೆಗಟ್ಟಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ವತಿಯಿಂದ ಎನ್‌ಎಫ್ಸಿ ತಂತ್ರಜ್ಞಾನದ ಅಂಕಪಟ್ಟಿ ಪ್ರಸ್ತಾವನೆ ಉನ್ನತ ಶಿಕ್ಷಣ ಪರಿಷತ್‌ ನಿರಾಕರಿಸಿತ್ತು ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಆ ಬಗ್ಗೆ ನನಗೆ ಗೊತ್ತಿಲ್ಲ ಎಂದಷ್ಟೇ ಹೇಳಿ ನಿರ್ಗಮಿಸಿದರು.

Advertisement

ವರದಿ ಸಲ್ಲಿಕೆ: ಮೈಸೂರು ಮುಕ್ತ ವಿವಿಯ ಹಗರಣಗಳಿಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ನೇತೃತ್ವದ ಸಮಿತಿ
ವರದಿ ಸಲ್ಲಿಸಿದೆ. ಶಿಫಾರಸುಗಳ ಬಗ್ಗೆ ಪರಾಮರ್ಶಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆ  ಯೊಂದಕ್ಕೆ ಉತ್ತರಿಸಿದರು.

ಕ್ಯಾರಿ ಓವರ್‌ಗೆ ಒತ್ತಡ
ಬೆಂಗಳೂರು: ಅಂಕಪಟ್ಟಿ ಹಗರಣದ ಆರೋಪ ಮಾಡಿರುವ ಎನ್‌ಎಸ್‌ಯುಐ ಅಧ್ಯಕ್ಷ ಮಂಜುನಾಥ್‌ ವಿಟಿಯುನಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ಕ್ಯಾರಿ ಓವರ್‌ ಮಾಡಿಸಲು ಒತ್ತಡ ಹೇರಿದ್ದರು ಎಂದು ಉನ್ನತ ಶಿಕ್ಷಣ ಸಚಿವ ರಾಯರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂಜುನಾಥ್‌ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿಗಳ ವಿಚಾರದಲ್ಲಿ ಕ್ಯಾರಿ ಓವರ್‌ ಮಾಡಿಸಲು ನನ್ನ ಬಳಿ ಬಂದಿದ್ದರು. ಅದು ನನ್ನ ವ್ಯಾಪ್ತಿಗೆ ಬರುವುದಿಲ್ಲ, ಆ ಕೆಲಸ ನಾನು ಮಾಡುವುದೂ ಇಲ್ಲ, ಅದು ಸರಿಯಲ್ಲ ಎಂದು ಹೇಳಿ ಕಳುಹಿಸಿದ್ದೆ ಎಂದು ಹೇಳಿದರು.

ಪ್ರಾಮಾಣಿಕರಂತೆ ವರ್ತನೆ
ಹುಬ್ಬಳ್ಳಿ: “ಕಾಂಗ್ರೆಸ್‌ ಭ್ರಷ್ಟಾಚಾರ ಹಾಗೂ ಹಗರಣಗಳ ಸರಕಾರವಾಗಿದೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರ ಹಗರಣಗಳು ಹೊರಬರುತ್ತಿವೆ. ಇಷ್ಟೆಲ್ಲಾ ಹಗರಣಗಳು ಇದ್ದರೂ ರಾಯರಡ್ಡಿ ಪ್ರಾಮಾಣಿಕರಂತೆ ವರ್ತಿಸುತ್ತಿದ್ದಾ ರೆಂದು’ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್‌ ವಾಗ್ಧಾಳಿ ನಡೆಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಂತಹ ಹಲವು ಹಗರಣಗಳು ಉನ್ನತ ಶಿಕ್ಷಣ ಇಲಾಖೆಯಲ್ಲಿ ನಡೆದಿರುವ ಸಾಧ್ಯತೆಗಳಿವೆ. ರಾಜ್ಯಪಾಲರೊಂದಿಗೆ ಹೇಗೆ ವರ್ತಿಸಬೇಕೆಂಬ ಸಾಮಾನ್ಯ ಪರಿಜ್ಞಾನವೂ ಸಚಿವ ರಾಯರಡ್ಡಿಗಿಲ್ಲ ಎಂದು ಲೇವಡಿ ಮಾಡಿದರು. 

ಸಚಿವರೊಂದಿಗೆ ಸಂಧಾನ
ಬೆಂಗಳೂರು: ಎನ್‌ಎಸ್‌ಯುಐ ಅಧ್ಯಕ್ಷ ಮಂಜುನಾಥ ಹಾಗೂ ಸಚಿವ ರಾಯರಡ್ಡಿ ನಡುವೆ ದಿನೇಶ್‌ ಗುಂಡೂರಾವ್‌ ಸಂಧಾನ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಇಬ್ಬರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಅಧಿಕಾರಿಗಳು ಮತ್ತು ಎಂಎಸ್‌ಐಎಲ್‌ ಮಧ್ಯ ವರ್ತಿ ಗಳ ಹಾವಳಿಯಿಂದ ಕಳಪೆ ಗುಣಮಟ್ಟದ ಅಂಕಪಟ್ಟಿ ನೀಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಮಂಜುನಾಥ ಆರೋಪಿಸಿದ್ದಾರೆ. ಈ ಬಗ್ಗೆ ತಮಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳಿರುವ ಸಚಿವ ರಾಯರೆಡ್ಡಿ, ಎನ್‌ಎಫ್ಸಿ ತಂತ್ರಜ್ಞಾನ ಉತ್ತಮ ಎಂಬ ಅಭಿಪ್ರಾಯ ಇದ್ದರೆ, ಅದನ್ನೇ ಅಳವಡಿ ಸುವ ಬಗ್ಗೆ ತಾಂತ್ರಿಕ ಸಮಿತಿ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಕುರಿತು ಎನ್‌ಎಸ್‌ಯುಐ ಅಧ್ಯಕ್ಷರಿಗೆ ಅಧಿಕೃತ ಮನವಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next