Advertisement

ಬೇಕಾಬಿಟ್ಟಿ ಕಾಮಗಾರಿ ನಡೆದರೂ ಕೇಳ್ಳೋರಿಲ್ಲ, ಹೇಳ್ಳೋರಿಲ್ಲ

12:59 PM Mar 27, 2019 | Lakshmi GovindaRaju |

ಎಚ್‌.ಡಿ.ಕೋಟೆ: ಪಟ್ಟಣದಲ್ಲಿ ಶಾಸಕರ ಅನುದಾನದಡಿ ರಸ್ತೆ ಬದಿ ಫ‌ುಟ್‌ಪಾತ್‌ ಕಾಮಗಾರಿ ನಡೆಯುತ್ತಿದ್ದು, ಇದು ಸಂಪೂರ್ಣವಾಗಿ ಅವೈಜ್ಞಾನಿಕ ಹಾಗೂ ಕಳಪೆಯಿಂದ ಕೂಡಿದೆ. ಆದರೂ ಕೂಡ ಯಾರೊಬ್ಬರೂ ಗಮನ ಹರಿಸುತ್ತಿಲ್ಲ.

Advertisement

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದರೆ ಇದಕ್ಕೂ ತಮಗೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಹೀಗೆ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಕಾಮಗಾರಿ ನಡೆಸಿದರೆ ಮುಂದಾಗುವ ಅನಾಹುತಕ್ಕೆ ಯಾರು ಹೊಣೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಮೈಸೂರು-ಮಾನಂದವಾಡಿ ರಾಷ್ಟ್ರೀಯ ಹೆದ್ದಾರಿ ಆಗಲೀಕರಣಕ್ಕೆ ಸರ್ವೆ ನಡೆಯುತ್ತಿದೆ. ಇಲ್ಲಿ ಪುರಸಭೆಯಿಂದಾಗಲಿ, ಲೋಕೋಪಯೋಗಿ ಇಲಾಖೆಯಿಂದಾಗಲಿ ಇನ್ನೂ ಫ‌ುಟ್‌ಪಾತ್‌ ಸ್ಥಳವನ್ನು ಗುರುತಿಸಿಲ್ಲ. ಅದರೂ ರಸ್ತೆ ಬದಿ ಫ‌ುಟ್‌ಪಾತ್‌ ಕಾಮಗಾರಿ ಕೈಗೊಳ್ಳಲಾಗಿದೆ. ತೀರಾ ಕಳಪೆ ಮಟ್ಟದಲ್ಲಿ ಕಾಮಗಾರಿಗಳು ನಡೆಯುತ್ತಿದ್ದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ.

12.5 ಲಕ್ಷ ರೂ.ಕಾಮಗಾರಿ: ಪುರಸಭೆ ವ್ಯಾಪ್ತಿಯ ಹ್ಯಾಂಡ್‌ ಪೋಸ್ಟ್‌ನ ಆರ್‌.ಪಿ.ವೃತ್ತದ ಮೈಸೂರು ಕಡೆಗೆ ಹೋಗುವ ರಸ್ತೆ ಹಾಗೂ ಸರಗೂರು ಹ್ಯಾಂಡ್‌ಪೋಸ್ಟ್‌ ರಸ್ತೆಗಳ ಬದಿಯ ಪಾದಚಾರಿ ಮಾರ್ಗಕ್ಕೆ ಇಂಟರ್‌ ಲಾಕ್‌ ಆಳವಡಿಸುವ ಕಾಮಗಾರಿಗೆ ಕ್ಷೇತ್ರದ ಶಾಸಕ ಅನಿಲ್‌ ಚಿಕ್ಕಮಾದು ಅವರು ತಮ್ಮ ಶಾಸಕ ಅನುದಾನದಲ್ಲಿ ಸುಮಾರು 12.50 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ.

ಕಾಮಗಾರಿ ಮಾಹಿತಿಯಿಲ್ಲ: ಶಾಸಕರ ನಿಧಿಯಿಂದ ನಿರ್ಮಾಣವಾಗುತ್ತಿರುವ ಈ ಕಾಮಗಾರಿಯನ್ನು ಶಾಸಕರ ಆಪ್ತರೊಬ್ಬರು ಖಾಸಗಿ ಕಂಪನಿಯೊಂದರ ಮೂಲಕ ನಡೆಸುತ್ತಿದ್ದು, ಶಾಸಕ ಅನುದಾನದ ಕಾಮಗಾರಿ ಮುನ್ನ ಕೈಗೊಳ್ಳಬೇಕಾದ ಯಾವುದೇ ನಿಯಮಗಳನ್ನು ಪಾಲಿಸಿಲ್ಲ.

Advertisement

ಜತೆಗೆ ಕಾಮಗಾರಿ ನಿರ್ವಹಣೆ ಜವಾಬ್ದಾರಿ ವಹಿಸಬೇಕಾದ ಇಲ್ಲಿನ ಜಿಲ್ಲಾ ಪಂಚಾಯತ್‌ ಹಾಗೂ ಪುರಸಭೆ ಅಧಿಕಾರಿಗಳು ಕೂಡ ಕಾಮಗಾರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಕಾಮಗಾರಿ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಾರೆ.

ನಿಯಮ ಉಲ್ಲಂಘನೆ: ಇನ್ನೂ ಕಾಮಗಾರಿ ನಡೆಸುವ ಮುನ್ನ ನಡೆಯುವ ಕಾಮಗಾರಿ ವೆಚ್ಚದ ಅಂದಾಜು ಪಟ್ಟಿ, ಕ್ರಿಯಾ ಯೋಜನೆ ತಯಾರು ಮಾಡದೆ ಸರ್ಕಾರದ ನಿಯಮಗಳನ್ನು ಉಲ್ಲಂ ಸಿ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿ ಗುಣಮಟ್ಟದ ಬಗ್ಗೆ ಇಲ್ಲಿನ ವರ್ತಕರು, ನಾಗರಿಕರು ಅಕ್ಷೇಪ ವ್ಯಕ್ತಪಡಿಸಿದ್ದಾರೆ.

ದೇಶದ ಮೊಟ್ಟ ಮೊದಲ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರಪ್ರಸಾದ್‌ ಅವರ ಹೆಸರಿನ ವೃತ್ತದ ಸಮೀಪದಲ್ಲೇ ಇಂತಹ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದೆ. ಜನಪ್ರತಿನಿಧಿಗಳ ಮಾರ್ಗದರ್ಶನದ ಮೂಲಕ ಕೇಂದ್ರ ಸ್ಥಾನದಲ್ಲೇ ಈ ಮಟ್ಟಿಗೆ ಕಳಪೆ ಕಾಮಗಾರಿ ನಡೆದರೆ, ಇನ್ನೂ ಗ್ರಾಮೀಣ ಪ್ರದೇಶ ಮತ್ತು ಕಾಡಂಚಿನ ಪ್ರದೇಶದ ಭಾಗದಲ್ಲಿ ನಡೆಯುವ ಕಾಮಗಾರಿಗಳು ಎಷ್ಟರ ಮಟ್ಟಿಗೆ ಗುಣಮಟ್ಟದಲ್ಲಿ ನಡೆಯುತ್ತಿವೆ ಎಂಬ ಅನುಮಾನ ಮೂಡುತ್ತಿದೆ.

ಇಲ್ಲಿ ನಡೆಯುತ್ತಿರುವ ಕಾಮಗಾರಿ ವಿಚಾರವಾಗಿ ಇಲ್ಲಿನ ವರ್ತಕರು, ಸಂಘ ಸಂಸ್ಥೆಗಳ ಮುಖಂಡರು, ಜನಸಾಮಾನ್ಯರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೇ, ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬ ಉತ್ತರ ಕೇಳಿ ಬರುತ್ತಿದ್ದು, ಅಧಿಕಾರಿಗಳು ಕೂಡ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.

ಇಲ್ಲಿನ ವರ್ತಕರು, ನಾಗರಿಕರು ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರನನ್ನು ಪ್ರಶ್ನಿಸಿದರೆ, ನಾ ಮಡೋದೇ ಹೀಗೆ ಎಂದು ಉಡಾಫೆಯಾಗಿ ವರ್ತಿಸುತ್ತಾರೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಹಿಂದುಳಿದ ತಾಲೂಕಿನ ಅಭಿವೃದ್ಧಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನದಲ್ಲಿ ನಡೆಯುವ ಕಾಮಗಾರಿಯನ್ನು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಇಂತಹ ಕಳಪೆ ಮತ್ತು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದರೆ, ಎಚ್‌.ಡಿ.ಕೋಟೆಯಂತಹ ಹಿಂದುಳಿದ ಕ್ಷೇತ್ರ ಮುಂದುವರಿದ ಕ್ಷೇತ್ರ ಹೇಗಾದಿತು ಎಂದು ಯರಹಳ್ಳಿ ಹ್ಯಾಂಡ್‌ಪೋಸ್ಟ್‌ ವರ್ತಕ ರಾಜು ಮತ್ತಿತರರು ಪ್ರಶ್ನಿಸುತ್ತಿದ್ದಾರೆ.

ಕ್ರಮ ಕೈಗೊಳ್ಳಿ:ಪಟ್ಟಣದಲ್ಲಿ ಅಭಿವೃದ್ಧಿ ಹೆಸರಲ್ಲಿ ಅವೈಜ್ಞಾನಿಕವಾಗಿ, ನಿಯಮಬಾಹಿರವಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕಳಪೆ ಕಾಮಗಾರಿ ನಡೆಸಲು ಮುಂದಾಗದೇ, ಶಾಸಕರ, ಸಂಸದರ, ಸರ್ಕಾರದ ಅನುದಾನಗಳು ತಾಲೂಕು ಅಭಿವೃದ್ಧಿಗೆ ಸದ್ಬಳಕೆಯಾಗಲಿ. ಶಾಸಕ ಅನಿಲ್‌ ಚಿಕ್ಕಮಾದು ವೈಜ್ಞಾನಿಕವಾಗಿ ಗುಣಮಟ್ಟದಲ್ಲಿ ಕಾಮಗಾರಿ ನಿರ್ಮಿಸುವ ಸಂಬಂಧ ಸರ್ಕಾರದ ಇಲಾಖೆಗಳ ಮೂಲಕ ಕಾಮಗಾರಿ ನಿರ್ವಹಿಸಲು ಮುಂದಾಗಬೇಕಿದೆ.

ಮೈಸೂರು-ಮಾನಂದವಾಡಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ರಸ್ತೆ ಆಗಲೀಕರಣಕ್ಕೆ ಸರ್ವೆ ನಡೆಯುತ್ತಿದೆ. ಅದ್ಯಾಗೂ ಇಲ್ಲಿ ಪುರಸಭೆಯಿಂದಾಗಲಿ, ಲೋಕೋಪಯೋಗಿ ಇಲಾಖೆಯಿಂದಾಗಲೀ ಇನ್ನೂ ಫ‌ುಟ್‌ಪಾತ್‌ ಸ್ಥಳ ಗುರುತಿಸಿಲ್ಲ. ಅದರೂ ಯಾರೋ ರಸ್ತೆ ಬದಿ ಫ‌ುಟ್‌ಪಾತ್‌ ಕಾಮಗಾರಿ ಮಾಡುತ್ತಿದ್ದಾರೆ. ತೀರಾ ಕಳಪೆಯಾಗಿದೆ.
-ವೈ.ಬಿ.ಹರೀಶ್‌ಗೌಡ, ಪುರಸಭೆ ಸದಸ್ಯ

ಕಾಮಗಾರಿಗೆ ನಮ್ಮ ಇಲಾಖೆ ಮೂಲಕ ಟೆಂಡರ್‌ ಅಗಬೇಕಿತ್ತು. ಅದರೆ, ನಮ್ಮ ಇಲಾಖೆಯಲ್ಲಿ ಈ ಸಂಬಂಧ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಈ ಕಾಮಗಾರಿಗೂ ನಮಗೂ ಯಾವುದೇ ಸಂಬಂಧ ಇಲ್ಲ.
-ಮಹೇಶ್‌. ಎಇಇ, ಪಂಚಾಯತ್‌ ರಾಜ್‌ ಇಲಾಖೆ

ಎಚ್‌.ಡಿ.ಕೋಟೆ ಪಟ್ಟಣದಲ್ಲಿ ಇಂಟರ್‌ಲಾಕ್‌ ಅಳವಡಿಸುವ ಕಾಮಗಾರಿ ಶಾಸಕರ ಅನುದಾನದಲ್ಲಿ ನಡೆಯುತ್ತಿದೆ ಎಂದಷ್ಟೇ ಗೊತ್ತು. ಈ ಕಾಮಗಾರಿಗೂ ನಮಗೂ ಯಾವುದೇ ಸಂಬಂಧ ಇಲ್ಲ.
-ಡಿ.ಎನ್‌.ವಿಜಯಕುಮಾರ್‌, ಪುರಸಭೆ ಮುಖ್ಯಾಧಿಕಾರಿ

* ಬಿ.ನಿಂಗಣ್ಣ ಕೋಟೆ

Advertisement

Udayavani is now on Telegram. Click here to join our channel and stay updated with the latest news.

Next