Advertisement

ಸೊಸೈಟಿ ಸಾಲವಿದ್ದರೆ ಸ್ಪರ್ಧೆ ಇಲ್ಲ

10:11 AM Mar 09, 2020 | Sriram |

ಬೆಂಗಳೂರು: ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಂದರ್ಭ ಸಹಕಾರ ಸಂಘಗಳಲ್ಲಿ ಸಾಲ ಸುಸ್ತಿದಾರರಲ್ಲ ಎಂಬ ನಿರಾಕ್ಷೇಪಣ ಪತ್ರ (ಎನ್‌ಒಸಿ) ಸಲ್ಲಿಕೆ ಕಡ್ಡಾಯ ಗೊಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದ್ದಾರೆ.

Advertisement

ರಾಜ್ಯದ ಹಲವಾರು ರಾಜಕಾರಣಿಗಳು ವಿವಿಧ ಸಹಕಾರ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರೂ. ಸಾಲ ಮಾಡಿ ಸುಸ್ತಿ ದಾರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ಸಹಕಾರ ಬ್ಯಾಂಕ್‌ಗಳ ಎನ್‌ಒಸಿ ಸಲ್ಲಿಸಬೇಕು ಎಂಬ ಕಾನೂನು ಜಾರಿಗೆ ತರುವ ಬಗ್ಗೆ ಚರ್ಚೆ ನಡೆದಿದೆ ಎಂದಿದ್ದಾರೆ.

ಸಹಕಾರ ಭಾರತಿ ವತಿಯಿಂದ ಶನಿವಾರ ಪುರಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‌ ಮತ್ತು ಸಹಕಾರ ಸಂಘಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಚಿವರು, ನಾವು ಶಾಸಕರ ಭವನದಲ್ಲಿ ಕೊಠಡಿ ಪಡೆದಿದ್ದರೆ ಅದರ ಬಾಡಿಗೆ ಪಾವತಿ ಮಾಡಿರುವ ಸಂಬಂಧ ನಾಮಪತ್ರ ಸಲ್ಲಿಕೆ ವೇಳೆ ಎನ್‌ಒಸಿ ಸಲ್ಲಿಸಬೇಕಾಗುತ್ತದೆ. ಮನೆ ತೆರಿಗೆ ಬಾಕಿ ಉಳಿಸಿಕೊಂಡಿದ್ದರೂ ಪಾವತಿಸಿ ಎನ್‌ಒಸಿ
ಸಲ್ಲಿಸಬೇಕು. ಅದೇ ನಿಯಮವನ್ನು ಸಹಕಾರ ಕ್ಷೇತ್ರಕ್ಕೂ ಜಾರಿಗೆ ತರುವ ಆಲೋಚನೆ ಇದೆ ಎಂದು ತಿಳಿಸಿದರು.

ಈ ಕಾಯ್ದೆ ಜಾರಿಯಾದರೆ ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವು ಸಂಸ್ಥೆಗಳು ನಷ್ಟ ಹೊಂದುವುದಿಲ್ಲ. ಜತೆಗೆ ಅವುಗಳನ್ನು ನಂಬಿಕೊಂಡವರಿಗೂ ಅನುಕೂಲ ಆಗಲಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಯಾವ ಸಹಕಾರ ಬ್ಯಾಂಕ್‌ಗಳಲ್ಲಿ ಸದಸ್ಯತ್ವ ಹೊಂದಿದ್ದಾರೋ ಆಯಾ ಬ್ಯಾಂಕ್‌ ಮತ್ತು ಸಂಘ ಸಂಸ್ಥೆಗಳಿಂದ ಎನ್‌ಒಸಿ ತರಬೇಕಾಗುತ್ತದೆ. ಈ ಕುರಿತ ಮಸೂದೆಯ ಸಾಧಕ-ಬಾಧಕದ ಬಗ್ಗೆ ಹಿರಿಯರ ಸಲಹೆ ಪಡೆದು ಮುಂದು ವರಿಯುವುದಾಗಿ ತಿಳಿಸಿದರು.

ನಂಬಿಕೆ ಕಳೆದುಕೊಳ್ಳುತ್ತಿವೆ
ಮಾಜಿ ಸಚಿವ ಎಚ್‌.ಕೆ. ಪಾಟೀಲ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳು ನಷ್ಟ ಅನುಭವಿಸುತ್ತಿದ್ದು, ಗ್ರಾಹಕರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ನಂಬಿಕೆ ಕಳೆದುಕೊಳ್ಳುವ ಕೆಲಸ ಎಂದೂ ಆಗಬಾರದು. ಇದು ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮತ್ತು ಆರ್‌ಬಿಐ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

Advertisement

ಸಹಕಾರ ಬ್ಯಾಂಕ್‌ಗಳ ಬಗ್ಗೆ ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಸಹಕಾರ ಬ್ಯಾಂಕ್‌ಗಳು ಬಂದ್‌ ಆಗಲಿವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇಂಥ ಬೆಳವಣಿಗೆಗಳು ಆರೋಗ್ಯಕರವಲ್ಲ. ಸಹಕಾರ ಕ್ಷೇತ್ರ ಅಭಿವೃದ್ಧಿಯಾದರೆ ದೇಶದ ಆರ್ಥಿಕ ಪರಿಸ್ಥಿತಿಯ ಪ್ರಮಾಣ ಕೂಡ ಸುಧಾರಣೆ ಆಗಲಿದೆ ಎಂದು ಎಚ್‌.ಕೆ. ಪಾಟೀಲ್‌ ಹೇಳಿದರು.

ನಿರ್ಮಲಾ ಸೀತಾರಾಮನ್‌ ಭೇಟಿ
ಸಹಕಾರ ಬ್ಯಾಂಕ್‌ಗಳು ಹಲವು ರೀತಿಯ ಆದಾಯ ತೆರಿಗೆ ಸಮಸ್ಯೆಗಳನ್ನು ಎದುರಿಸುತ್ತಿವೆ. ಆ ಹಿನ್ನೆಲೆಯಲ್ಲಿ ಮಾರ್ಚ್‌ 20ರಂದು ರಾಜ್ಯದಿಂದ ಸಹಕಾರ ಭಾರತಿ ನಿಯೋಗವು ದಿಲ್ಲಿಗೆ ತೆರಳಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಲಿದೆ. ನಾನೂ ಈ ನಿಯೋಗದೊಂದಿಗೆ ತೆರಳಿ ಸಹಕಾರಿ ಕ್ಷೇತ್ರದ ಮುಂದಿರುವ ಹಲವು ರೀತಿಯ ಸಮಸ್ಯೆಗಳನ್ನು ಸಚಿವರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next