Advertisement

ಕೋಲಾರದಲ್ಲಿ ಸ್ವಚ್ಛತೆ ಮರೀಚಿಕೆ

08:23 PM Jan 25, 2020 | Team Udayavani |

ಕೋಲಾರ: ಸ್ವಚ್ಛ ಭಾರತ ಯೋಜನೆಯಡಿ ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದರೂ, ಸಮರ್ಪಕವಾಗಿ ಬಳಸಿಕೊಂಡು ಸುಂದರ ನಗರ ಮಾಡುವಲ್ಲಿ ನಗರಸಭೆ ವಿಫ‌ಲವಾಗಿರುವುದು ಸರ್ವೇಕ್ಷಣೆ ವೇಳೆ ಕಂಡು ಬಂತು.

Advertisement

ರಸ್ತೆ ಬದಿ, ಚರಂಡಿಗೆ ಪ್ಲಾಸ್ಟಿಕ್‌ ಸೇರಿದಂತೆ ಇತರೆ ತ್ಯಾಜ್ಯ ತುಂಬಿರುವುದು, ಬಯಲು ಪ್ರದೇಶದಲ್ಲಿ ಮಲ ಮೂತ್ರ ವಿಸರ್ಜನೆ ಮಾಡಿರುವುದು, ಮಾರುಕಟ್ಟೆ ಪ್ರದೇಶ, ಜನನಿಬಿಡ ಸ್ಥಳ, ಪ್ರಮುಖ ರಸ್ತೆಗಳು ಹಾಗೂ ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆದಿರುವುದು, ಅದನ್ನು ವಿಲೇವಾರಿ ಮಾಡದೇ ಬಿಟ್ಟಿರುವ ದೃಶ್ಯ ಢಾಳಾಗಿ ಗೋಚರಿಸಿತು. ಚರಂಡಿಗಳಲ್ಲಿ ಕೊಳಚೆ ನೀರು ಮಡುಗಟ್ಟಿ, ದುರ್ನಾತ ಬೀರುತ್ತಿದ್ದನ್ನು ಕಂಡು ಸರ್ವೇಕ್ಷಣೆಗೆ ಬಂದಿದ್ದವರೇ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದದ್ದು ಕಂಡು ಬಂತು.

ಸ್ವಚ್ಛ ಭಾರತ ಸರ್ವೇಕ್ಷಣೆಗಾಗಿ ತನಿಖಾಧಿಕಾರಿ ಎನ್‌.ಮಂಜುಳಾ ನಿಯೋಜಿತರಾಗಿದ್ದು, ಶನಿವಾರ ನಗರದ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ, ನಗರಸಭೆಯ ಸ್ವಚ್ಛತಾ ಕಾರ್ಯವೈಖರಿಯನ್ನು ಖುದ್ದು ಪರಿಶೀಲಿಸಿ, ಫೋಟೋ ಸಮೇತ ದಾಖಲೆ ಮಾಡಿಕೊಂಡರು.

ಹರಡಿಕೊಂಡಿದ್ದ ಕಸ: ನಗರದ ಬಸ್‌ ನಿಲ್ದಾಣ, ಮಾರುಕಟ್ಟೆ ಸುತ್ತಮುತ್ತಲು, ಹೋಟೆಲ್‌, ತಳ್ಳುವ ಗಾಡಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ, ಪ್ರಮುಖ ರಸ್ತೆಗಳು, ಹಳೇ ಬಸ್‌ ನಿಲ್ದಾಣ, ಎಂ.ಬಿ.ರಸ್ತೆ, ಬೊಂಬುಬಜಾರ್‌ ರಸ್ತೆ, ಗಂಗಮ್ಮನಪಾಳ್ಯದ ರಸ್ತೆ, ಕುರುಬರಪೇಟೆ, ಗೌರಿಪೇಟೆ, ಕೋಟೆ ಪ್ರದೇಶ ಇತ್ಯಾದಿಗಳೆಲ್ಲೆಡೆ ಕಸ ವಿಲೇವಾರಿಯಾಗದೇ ರಸ್ತೆ ಬದಿಯಲ್ಲಿಯೇ ಹರಡಿಕೊಂಡಿದ್ದ ದೃಶ್ಯ ಕಂಡು ಬಂತು.

ಮಧ್ಯಾಹ್ನವಾದ್ರೂ ಕಸ ಸ್ವಚ್ಛ ಮಾಡಿಲ್ಲ: ಹಲವೆಡೆ ಮಧ್ಯಾಹ್ನದ ನಂತರವೂ ನಗರಸಭಾ ಸಿಬ್ಬಂದಿ ಕಸ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ಆದರೆ, ಬಹುತೇಕ ಸಿಬ್ಬಂದಿ ಸುರಕ್ಷತಾ ಸಮವಸ್ತ್ರವನ್ನು ಧರಿಸದೇ ಕಾರ್ಯನಿರ್ವಹಿಸುತ್ತಿದ್ದುದು ಕಂಡು ಬಂದಿತು. ಕೆಲವೆಡೆ ಕಸ ತೆಗೆದ ಕೆಲವೇ ಕ್ಷಣಗಳಲ್ಲಿ ಮತ್ತೆ ಕಸವನ್ನು ತಂದು ಹಾಕುತ್ತಿದ್ದ ದೃಶ್ಯ ಕಂಡು ಬಂದಿತು.

Advertisement

ವಿಲೇವಾರಿಗೆ ಜಾಗವೇ ಇಲ್ಲ: ಬೊಂಬು ಬಜಾರ್‌, ಎಂ.ಬಿ.ರಸ್ತೆ ಮತ್ತಿತರೆಡೆ ಸುತ್ತಮುತ್ತಲ ಪ್ರದೇಶದ ಜನರು ಕಸವನ್ನು ಪ್ರಮುಖ ರಸ್ತೆಗೆ ತಂದು ಎಸೆದು ಗುಡ್ಡಿ ಹಾಕುತ್ತಿದ್ದುದು ಕಂಡು ಬಂದಿತು. ಮಾರುಕಟ್ಟೆ ಪ್ರದೇಶದಲ್ಲಿ ಕಸ ತೆಗೆಯುವ ವಾಹನದ ಸಿಬ್ಬಂದಿ ಕಸವನ್ನು ಸಂಪೂರ್ಣವಾಗಿ ತೆಗೆಯಲು, ಘನತ್ಯಾಜ್ಯ ವಿಲೇವಾರಿ ಮಾಡಲು ಪ್ರತ್ಯೇಕ ಜಮೀನು ಇಲ್ಲ. ಹೀಗಾಗಿ ಸ್ವಚ್ಛತೆ ಮರೀಚಿಕೆಯಾಗಿದೆ ಎಂಬ ಕಾರಣ ನೀಡಿದರು.

ಕೆರೆ ಕುಂಟೆ ಹಾಕಿ ಬರುತ್ತಿದ್ದೇವೆ: ಕಸವನ್ನು ವಾಹನಗಳಲ್ಲಿ ತುಂಬಿ ನಗರಸಭೆ ಆವರಣದಲ್ಲಿ ನಿಲ್ಲಿಸಿ, ನಸುಕಿನಲ್ಲಿಯೇ ನಗರದ ಹೊರವಲಯದ ಬಾವಿ, ಕೆರೆ ಕುಂಟೆಗಳ ಬದಿಯಲ್ಲಿ ಹಾಕಿ ಬರುತ್ತಿದ್ದೇವೆ ಎಂದು ವಾಹನ ಚಾಲಕರು ವಿವರಿಸಿದರು. ಕೋಲಾರ ನಗರವನ್ನು ಬಯಲು ಶೌಚ ಮುಕ್ತವಾಗಿ ಘೋಷಣೆ ಮಾಡಿದ್ದರೂ ನಗರದ ಬಹುತೇಕ ಜಾಗಗಳಲ್ಲಿ ಜನರು ಬಯಲು ಶೌಚ, ಮೂತ್ರ ವಿಸರ್ಜನೆ ಮಾಡುತ್ತಿದ್ದುದು ಕಂಡು ಬಂದಿತು. ಸರ್ವೇಕ್ಷಣೆ ಸಂದರ್ಭದಲ್ಲಿ ಕೋಲಾರ ನಗರದ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವಿಚಾರದಲ್ಲಿ ಜಾಗ ಇಲ್ಲದೇ ಇರುವುದು, ಸಿಬ್ಬಂದಿಯ ಕೊರತೆ ಇರುವ ಬಗ್ಗೆಯೂ ದೂರುಗಳು ಕೇಳಿ ಬಂದವು.

ಕೋಲಾರ ನಗರಸಭೆಯಲ್ಲಿ ಸತತ ಎರಡು ವರ್ಷಗಳಿಂದಲೂ ಸ್ವಚ್ಛ ಸರ್ವೇಕ್ಷಣೆ ನಡೆಯುತ್ತಿದೆ. ಈಗ ಮೂರನೇ ಬಾರಿ ನಡೆಸಲಾಗುತ್ತಿದೆ. ಆದರೆ, ಸ್ವಚ್ಛತೆಯ ವಿಚಾರದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬರುತ್ತಿಲ್ಲ. ಇದಕ್ಕೆ ಕಾರಣಗಳೇನು ಎಂಬುದರ ಬಗ್ಗೆ ವರದಿ ತಯಾರಿಸಿ ಕೇಂದ್ರ ಸರ್ಕಾರಕ್ಕೆ ನೀಡಲಾಗುವುದು.
-ಎನ್‌.ಮಂಜುಳಾ, ಸರ್ವೇಕ್ಷಣಾ ತನಿಖಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next