Advertisement

ಎಟಿಎಂಗಳಲ್ಲಿ ನಗದು ಕೊರತೆ ಇಲ್ಲ; ಗ್ರಾಹಕರಲ್ಲಿ ಆತಂಕ ಬೇಡ: ಬ್ಯಾಂಕ್‌

06:20 AM Apr 19, 2018 | |

ಮಹಾನಗರ: ದೇಶದ ಹಲವೆಡೆ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಏಕಾಏಕಿ ನಗದು ಕೊರತೆ ಎದುರಾಗಿರುವ ವಿಚಾರ ಭಾರೀ ಚರ್ಚೆಗೆ ಎಡೆ ಮಾಡಿದ್ದು, ಕರ್ನಾಟಕದಲ್ಲಿಯೂ ಕೆಲವು ಕಡೆ ಈ ಸಮಸ್ಯೆಯನ್ನು ಗ್ರಾಹಕರು ಎದುರಿಸುತ್ತಿ ದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಇದರಿಂದ ಸಹಜವಾಗಿಯೇ ಗ್ರಾಹಕರು ಆತಂಕ ಹಾಗೂ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. 

Advertisement

ಈ ಹಿನ್ನೆಲೆಯಲ್ಲಿ “ಉದಯವಾಣಿ’ಯು ಬುಧವಾರ ನಗರದ ಹಲವು ಕಡೆ ರಿಯಾಲಿಟಿ ಚೆಕ್‌ ನಡೆಸಿದ್ದು, ಬಹುತೇಕ ಎಟಿಎಂಗಳಲ್ಲಿ ನಗದು ಲಭ್ಯವಾಗುತ್ತಿದೆ.

ದೇಶದ ಸುಮಾರು ಆರು ರಾಜ್ಯಗಳ ಎಟಿಎಂ ಕೇಂದ್ರಗಳಲ್ಲಿ “ನಗದು ಇಲ್ಲ’ ಎಂಬ ಫಲಕಗಳಿಂದ ಎಲ್ಲೆಡೆ ಜನ ಆತಂಕಕ್ಕೆ ಒಳಗಾಗಿದ್ದು, ಇಂಥಹ ಸನ್ನಿವೇಶದಲ್ಲಿ ನಮ್ಮ ವರದಿಗಾರರು ನಗರ ವ್ಯಾಪ್ತಿಯ ಸುಮಾರು 30ಕ್ಕೂ ಹೆಚ್ಚು ವಿವಿಧ ಬ್ಯಾಂಕ್‌ಗಳ ಎಟಿಂಎಂಗಳಿಗೆ ಖುದ್ದು ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸುವ ಪ್ರಯತ್ನ ಮಾಡಿದ್ದಾರೆ. ಆ ಮೂಲಕ ನಗರದ ಬಹುತೇಕ ಎಲ್ಲ ಎಟಿಎಂ ಕೇಂದ್ರ ಗಳಲ್ಲಿಯೂ ನಗದು ಲಭ್ಯ ವಿದ್ದು, ಜನಸಾಮಾನ್ಯರಿಗೆ ಸರಿಯಾಗಿ ದೊರೆಯುತ್ತಿದೆ. ಹೀಗಾಗಿ ಗ್ರಾಹಕರು ಗಾಬರಿಪಡುವ ಅಗತ್ಯವಿಲ್ಲ.

ನಗರದ ಪಿವಿಎಸ್‌, ಲಾಲ್‌ಬಾಗ್‌, ಲೇಡಿಹಿಲ್‌, ಉರ್ವಸ್ಟೋರ್‌, ಬಂಟ್ಸ್‌ ಹಾಸ್ಟೆಲ್‌, ಜ್ಯೋತಿ, ಕದ್ರಿ, ಕಂಕನಾಡಿ, ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್‌, ಕೆ.ಎಸ್‌. ರಾವ್‌ ರಸ್ತೆ ಮುಂತಾದೆಡೆಗಳಲ್ಲಿ ಕಾರ್ಯಾಚರಿಸುತ್ತಿರುವ ಹಲವು ಎಟಿಎಂ ಕೇಂದ್ರಗಳಲ್ಲಿ ನಗದು ಇರುವ ಬಗ್ಗೆ ಖಚಿತಪಡಿಸಿಕೊಳ್ಳಲಾಯಿತು. ಕಾರ್ಪೊರೇಶನ್‌ ಬ್ಯಾಂಕ್‌, ಭಾರತೀಯ ಸ್ಟೇಟ್‌ಬ್ಯಾಂಕ್‌, ಸ್ಟೇಟ್‌ಬ್ಯಾಂಕ್‌ ಆಫ್‌ ಮೈಸೂರು, ಕರ್ಣಾಟಕ ಬ್ಯಾಂಕ್‌, ಕೆನರಾ ಬ್ಯಾಂಕ್‌, ವಿಜಯಾ ಬ್ಯಾಂಕ್‌ ಸಹಿತ ಬಹುತೇಕ ಎಲ್ಲ ರಾಷ್ಟ್ರೀಯ ಬ್ಯಾಂಕ್‌ಗಳು ಮತ್ತು ಖಾಸಗಿ ಬ್ಯಾಂಕ್‌ಗಳ ಎಟಿಎಂಗಳಲ್ಲಿ ನಗದು ಲಭ್ಯವಿತ್ತು. 

ಈ ಸಂಬಂಧ ಎಟಿಎಂ ಭದ್ರತಾ ಸಿಬಂದಿಯನ್ನು ವಿಚಾರಿಸಿದಾಗ ಅವರು ಕೂಡ ಎಲ್ಲಿಯೂ ದುಡ್ಡಿನ ಕೊರತೆ ಉಂಟಾಗಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಕಾರ್ಪೊರೇಶನ್‌ ಬ್ಯಾಂಕಿನ ಎಟಿಎಂ ಕೇಂದ್ರದಲ್ಲಿ ನಗದು ಲಭ್ಯವಿದೆ. ಎಂದಿನಂತೆಯೇ ಜನ ಎಟಿಎಂ ನಿಂದ ಹಣ ಡ್ರಾ ಮಾಡುತ್ತಿದ್ದಾರೆ. 

Advertisement

ಜನಸಾಮಾನ್ಯರಿಗೆ ತುರ್ತು ಹಣ ಪಡೆಯಲು ಯಾವುದೇ ಸಮಸ್ಯೆ ಉಂಟಾಗಿಲ್ಲ’ ಎಂದು ಕಂಕನಾಡಿ ಕಾರ್ಪೊರೇಶನ್‌ ಬ್ಯಾಂಕಿನ ಎಟಿಎಂನ ಭದ್ರತಾ ಸಿಬಂದಿ ತಿಳಿಸಿದ್ದಾರೆ.

ಬ್ಯಾಂಕ್‌ ರಜೆಯಿಂದಾಗಿ ಹಣ ಇಲ್ಲ
ಮಿಲಾಗ್ರಿಸ್‌ ಬಳಿಯ ಒಂದು ಎಟಿಎಂ ಕೇಂದ್ರದಲ್ಲಿ ಬೆಳಗ್ಗೆ ಹಣ ಇದ್ದು ಬಳಿಕ ಖಾಲಿಯಾಗಿದ್ದರಿಂದ ಗ್ರಾಹಕರು ವಾಪಾಸ್‌ ಹೋಗುತ್ತಿದ್ದರು. ಆದರೆ ಬುಧವಾರ ಬ್ಯಾಂಕ್‌ಗೆ ರಜೆ ಇದ್ದ ಕಾರಣ ಎಟಿಎಂ ಯಂತ್ರಕ್ಕೆ ಹಣ ತುಂಬಿಸಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಹೀಗಾಗಿದೆ ಎಂದು ಅಲ್ಲಿನ ಸಿಬಂದಿ ತಿಳಿಸಿದ್ದಾರೆ. ಪಿವಿಎಸ್‌ ಬಳಿಯ ಎಟಿಎಂ ಕೇಂದ್ರವೊಂದರಲ್ಲಿ ಯಂತ್ರ ನಿರ್ವಹಣೆಯಲ್ಲಿರುವುದರಿಂದ ಸೇವೆ ಲಭ್ಯವಾಗಿರಲಿಲ್ಲ.

ಸಹಜ ಸ್ಥಿತಿಯಲ್ಲಿ
ರಿಯಾಲಿಟಿ ಚೆಕ್‌ನಲ್ಲಿ ನಗರದ ಒಂದೆರಡು ಎಟಿಎಂ ಕೇಂದ್ರಗಳನ್ನು ಹೊರತುಪಡಿಸಿ ಮಿಕ್ಕೆಲ್ಲ  ಕೇಂದ್ರಗಳಲ್ಲಿ ನಗದು ಲಭ್ಯವಿರುವುದು ಕಂಡುಬಂತು. ಎಲ್ಲೆಡೆಯೂ ಗ್ರಾಹಕರು ಕೂಡ ಆರಾಮವಾಗಿಯೇ ನಗದು ಡ್ರಾ ಮಾಡುತ್ತಿದ್ದು, ಎಲ್ಲಿಯೂ ಎಟಿಎಂಗಳ ಮುಂದೆ ಹಣಕ್ಕಾಗಿ ಜನ ಸಾಲುಗಟ್ಟಿ ನಿಲ್ಲುವ ದೃಶ್ಯಗಳು ಕೂಡ ಕಂಡುಬಂದಿಲ್ಲ. ಇದರಿಂದಾಗಿ, ನಗರದ ಸಾರ್ವಜನಿಕರಿಗೆ ಹಣಕಾಸಿನ ಅಗತ್ಯಕ್ಕೆ ಯಾವುದೇ ಅಡಚಣೆಯಾಗಿಲ್ಲ. ಎಲ್ಲೆಡೆಯೂ ಹಣಕಾಸಿನ ಲಭ್ಯತೆ ಸಹಜ ಸ್ಥಿತಿಯಲ್ಲಿದೆ.

ಹಣದ ಕೊರತೆಯಾಗದಂತೆ ಎಚ್ಚರ
ಮಂಗಳೂರಿನ ಎಲ್ಲ  ಬ್ಯಾಂಕ್‌ಗಳಲ್ಲಿಯೂ ಗ್ರಾಹಕರಿಗೆ ನಗದು ಲಭ್ಯವಾಗುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ಎಚ್ಚರ ವಹಿಸಿವೆ. ನಗರದ ಯಾವುದೇ ಬ್ಯಾಂಕಿನ ಎಟಿಎಂ ಕೇಂದ್ರಗಳಲ್ಲಿ ಹಣದ ಕೊರತೆಯಾಗಿರುವ ಬಗ್ಗೆ ಗ್ರಾಹಕರಿಂದ ದೂರುಗಳು ಬಂದಿಲ್ಲ. 

– ರಾಘವ ಯಜಮಾನ್ಯ, ಜಿಲ್ಲೆಯ ಲೀಡ್‌ ಬ್ಯಾಂಕ್‌ ಹಾಗೂ ಸಿಂಡಿಕೇಟ್‌ ಬ್ಯಾಂಕಿನ ಮ್ಯಾನೇಜರ್‌.

ಆತಂಕದಿಂದಲೇ ಬಂದಿದ್ದೆ
ದೊಡ್ಡ ಮಟ್ಟದ ಖರೀದಿಗೆಲ್ಲ ಸ್ಪೈಪ್‌ ಮಾಡಬಹುದಾದರೂ ಸಣ್ಣ ಸಣ್ಣ ವಸ್ತುಗಳಿಗೆ ನಗದು ಅಗತ್ಯ. ಆದರೆ ಎಟಿಎಂನಲ್ಲಿ ಯಾವಾಗ ಬೇಕಾದರೂ ಡ್ರಾ ಮಾಡಬಹುದಾದ್ದರಿಂದ ಕೈಯಲ್ಲಿ ಹಣ ಇಟ್ಟುಕೊಳ್ಳುವುದೇ ಕಡಿಮೆ. ಇವತ್ತೂ ಹಣ ಅಗತ್ಯವಾಗಿ ಬೇಕಿತ್ತು. ಆದರೆ ಕೆಲವೆಡೆ ಎಟಿಎಂಗಳಲ್ಲಿ ನಗದು ಇಲ್ಲ ಎಂಬುದಾಗಿ ಪತ್ರಿಕೆಗಳಲ್ಲಿ ಓದಿದ್ದೆ. ಹಣ ಇದೆಯೋ ಇಲ್ಲವೋ ಎಂಬ ಆತಂಕದಲ್ಲೇ ಬಂದಿದ್ದೆ. ಆದರೆ ಇದೀಗ ಹಣ ಇರುವುದು ಖುಷಿಯಾಯಿತು.

 - ಮಧುರಾ ಶಕ್ತಿನಗರ, ಗ್ರಾಹಕಿ

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next