Advertisement

ATM card “ಅದಲು-ಬದಲು’ ವಂಚಕರ ಸೆರೆ

11:29 PM Sep 25, 2024 | Team Udayavani |

ಅಜೆಕಾರು: ಅಜೆಕಾರು ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಲು ಹೋಗಿದ್ದವರನ್ನು ವಂಚಿಸಿ ಅವರ ಕಾರ್ಡ್‌ ಬಳಸಿಕೊಂಡು ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದ ಮೂವರು ಆರೋಪಿಗಳನ್ನು ಅಜೆಕಾರು ಪೊಲೀಸರು ಮರ್ಣೆ ಗ್ರಾಮದ ಕಾಡುಹೊಳೆ ಪೊಲೀಸ್‌ ಚೆಕ್‌ಪೋಸ್ಟ್‌ ಬಳಿ ಸೆ. 24ರಂದು ಬಂಧಿಸಿದ್ದಾರೆ.

Advertisement

ಮಹಾರಾಷ್ಟ್ರದ ಶ್ರವಣ್‌ ಸತೀಶ ಮಿನಜಗಿ (27), ಪ್ರದೀಪ ಮಾರುತಿ ಇಂಗ್ಲೆ (27) ಹಾಗೂ ಕಿರಣ್‌ ಬಾಲು ಚೌಹಾಣ್‌ (28) ಬಂಧಿತ ಆರೋಪಿಗಳು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಪ್ರಕರಣ 1
ಮರ್ಣೆ ಗ್ರಾಮದ ಹೆನ್ರಿ ಡಿ’ಸೋಜಾ ಅವರು ಸೆ. 16ರಂದು ಅಜೆಕಾರು ಪೇಟೆಯಲ್ಲಿರುವ ಕರ್ನಾಟಕ ಬ್ಯಾಂಕ್‌ ಎಟಿಎಂ ಕೇಂದ್ರಕ್ಕೆ ಹಣ ತೆಗೆಯಲು ಬಂದಿದ್ದಾಗ ಅಲ್ಲಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಹಣ ತೆಗೆಯಲು ಸಹಾಯ ಮಾಡುವ ನಾಟಕವಾಡಿ ಅವರ ಗಮನವನ್ನು ಬೇರೆಡೆ ಸೆಳೆದು ಎಟಿಎಂ ಕಾರ್ಡ್‌ ಬದಲಾವಣೆ ಮಾಡಿ ಬೇರೊಂದು ಎಟಿಎಂ ಕಾರ್ಡ್‌ ನೀಡಿದ್ದರು. ಅನಂತರ ವಂಚಕರು ಕಾರ್ಕಳದ ಬ್ಯಾಂಕ್‌ ಆಫ್ ಬರೋಡ ಎಟಿಎಂನಿಂದ ಹೆನ್ರಿಯವರ ಎಟಿಎಂ ಕಾರ್ಡ್‌ ಬಳಸಿ 1 ಲಕ್ಷ ರೂ. ಹಣ ತೆಗೆದಿದ್ದರು. ಈ ಕುರಿತು ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್ನೆರಡು ಪ್ರಕರಣ
ಇದೇ ಆರೋಪಿಗಳು ಎಟಿಎಂ ಕೇಂದ್ರದಲ್ಲಿ ಹಣ ತೆಗೆದುಕೊಡುವ ನಾಟಕವಾಡಿ ಅವರ ಗಮನವನ್ನು ಬೇರೆಡೆ ಸೆಳೆಯುವಂತೆ ಮಾಡಿ ಎಟಿಎಂ ಕಾರ್ಡ್‌ ಬದಲಾಯಿಸಿ ಕಾರ್ಕಳದ ಕುಕ್ಕುಂದೂರು ಗ್ರಾಮದ ರಫೀಕ್‌ ಅಹ್ಮದ್‌ ಅವರಿಗೆ, ಶಿವಪುರದ ವಸಂತ-ಸುನೀತಾ ದಂಪತಿಗೆ ತಲಾ 70 ಸಾವಿರ ರೂ. ವಂಚಿಸಿದ್ದರು.

ಆರೋಪಿಗಳಲ್ಲಿತ್ತು 52 ಎಟಿಎಂ ಕಾರ್ಡ್‌
ಆರೋಪಿಗಳಿಂದ ಸ್ವಿಫ್ಟ್ ಕಾರು, 70,000 ರೂ. ಹಣ, 3 ಮೊಬೈಲ್‌ ಫೋನ್‌ ಹಾಗೂ ವಿವಿಧ ಬ್ಯಾಂಕ್‌ಗಳ 52 ಎಟಿಎಮ್‌ ಕಾರ್ಡ್‌ಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ದ ಎಟಿಎಂ ಕಾರ್ಡ್‌ ವಂಚನೆಗೆ ಸಂಬಂದಿಸಿದಂತೆ 70 ಕ್ಕೂ ಹೆಚ್ಚು ಪ್ರಕರಣ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದೆ. ಆರೋಪಿಗಳು ಕುಖ್ಯಾತ ಅಂತಾರಾಜ್ಯ ಕಳ್ಳರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next