Advertisement

By-election: ಆಯನೂರು, ಪುಟ್ಟಣ್ಣ ಕ್ಷೇತ್ರಗಳಿಗೆ ಉಪ ಚುನಾವಣೆ ಇಲ್ಲ

09:42 PM Aug 10, 2023 | Team Udayavani |

ಬೆಂಗಳೂರು: ಆಯನೂರು ಮಂಜುನಾಥ್‌ ಹಾಗೂ ಪುಟ್ಟಣ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಇದೇ ವೇಳೆ ವಿಧಾನಪರಿಷತ್ತಿನ ಏಳು ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆಗೆ ಮತದಾರರ ಪಟ್ಟಿ ತಯಾರಿಸುವ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ.

Advertisement

ಅದರಂತೆ, ಈ ಎರಡೂ ಕ್ಷೇತ್ರಗಳು ಸೇರಿದಂತೆ 2024ರ ಜೂನ್‌ನಲ್ಲಿ ಅವಧಿ ಮುಗಿಯಲಿರುವ 5 ಕ್ಷೇತ್ರಗಳು ಒಳಗೊಂಡಂತೆ ಒಟ್ಟು ಏಳು ಕ್ಷೇತ್ರಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಲಿದೆ. ಹೀಗಾಗಿ, ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದವರಿಗೆ ಹಿನ್ನಡೆ ಉಂಟಾದಂತಾಗಿದೆ.

ಬಿಜೆಪಿಯಿಂದ ನೈರುತ್ಯ ಪದವೀಧರರ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಆಯನೂರು ಮಂಜುನಾಥ್‌ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಪುಟ್ಟಣ್ಣ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಆಯನೂರು ಮಂಜುನಾಥ್‌ ಅವರ ಅವಧಿ 2024ರ ಜೂ.21ರವರೆಗೆ ಹಾಗೂ ಪುಟ್ಟಣ ಅವರ ಅವಧಿ 2026ರ ನ.11ರವರೆಗೆ ಇತ್ತು. ಈ ಎರಡೂ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಾಗಿತ್ತು. ಆಯನೂರು ಮಂಜುನಾಥ್‌ ಹಾಗೂ ಪುಟ್ಟಣ್ಣ ಪುನಃ ಉಪ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು.

ಯಾಕೆ ಉಪ ಚುನಾವಣೆ ಇಲ್ಲ?: ಆಯನೂರು ಮಂಜುನಾಥ್‌ ಅವರು ಪ್ರತಿನಿಧಿಸುತ್ತಿದ್ದ ನೈರುತ್ಯ ಪದವೀಧರ ಕ್ಷೇತ್ರ 2023ರ ಏಪ್ರಿಲ್‌ 19ರಂದು ಹಾಗೂ ಪುಟ್ಟಣ್ಣ ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ಶಿಕ್ಷಕರ ಕ್ಷೇತ್ರ 2023ರ ಮಾ.16ರಿಂದ ತೆರವಾಗಿತ್ತು. ಪ್ರಜಾಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್‌ 151 ಅ ಪ್ರಕಾರ ಖಾಲಿಯಾದ ಕ್ಷೇತ್ರಕ್ಕೆ 6 ತಿಂಗಳಲ್ಲಿ ಉಪ ಚುನಾವಣೆ ನಡೆಯಬೇಕು. ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ಚುನಾವಣೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಹತಾ ದಿನಾಂಕ 2023ರ ನ.1 ಆಗಿದೆ. ಹೀಗಾಗಿ, ತೆರವಾದ ಎರಡು ಕ್ಷೇತ್ರಗಳಿಗೆ 6 ತಿಂಗಳಲ್ಲಿ ಉಪ ಚುನಾವಣೆ ಸಾಧ್ಯವಿಲ್ಲ.

ಚುನಾವಣಾ ಆಯೋಗ ಕೇಂದ್ರ ಕಾನೂನು ಸಚಿವಾಲಯದ ಜೊತೆಗೆ ಸಮಾಲೋಚನೆ ನಡೆಸಿ ಅನುಮತಿ ಪಡೆದುಕೊಂಡ ಬಳಿಕ ಎರಡೂ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಘೋಷಿಸಿದೆ. ಪುಟ್ಟಣ್ಣ ಅವರು ಸ್ಪರ್ಧಿಸುತ್ತಿದ್ದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಅವಧಿ 2026 ನ.11ರಂದು ಮುಗಿಯಲಿದ್ದು, ಈ ಕ್ಷೇತ್ರಕ್ಕೂ 2024ರಲ್ಲಿ ಚುನಾವಣೆ ನಡೆದರೂ ಅದು ಉಪ ಚುನಾವಣೆಯಂದೇ ಪರಿಗಣಿಸಬೇಕಾಗುತ್ತದೆ. ಏಕೆಂದರೆ ಅದರ ಅವಧಿ 2026ರ.ನ.11ರವರೆಗೆ ಮಾತ್ರ ಇರುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮಾಹಿತಿ ನೀಡಿದೆ.

Advertisement

ಮತದಾರರ ಪಟ್ಟಿ ತಯಾರಿಕೆಗೆ ವೇಳಾಪಟ್ಟಿ: ಈ ಮಧ್ಯೆ 2026ರ ನ.11ಕ್ಕೆ ಅವಧಿ ಮುಗಿಯಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ 2024ರ ಜೂನ್‌ 21ರಂದು ಅವಧಿ ಮುಗಿಯಲಿರುವ ಈಶಾನ್ಯ ಪದವೀಧರ ಕ್ಷೇತ್ರ, ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ, ನೈರುತ್ಯ ಪದವೀಧರ ಕ್ಷೇತ್ರಗಳ ಚುನಾವಣೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡಗೆ 2023ರ ನ.1 ಅರ್ಹತಾ ದಿನಾಂಕವಾಗಿದ್ದು, ಅದಕ್ಕಾಗಿ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.

ವೇಳಾಪಟ್ಟಿ
ಸಾರ್ವಜನಿಕ ಪ್ರಕಟಣೆ-ಸೆ.30
ಮಾಧ್ಯಮಗಳಲ್ಲಿ ಮರು ಪ್ರಕಟಣೆ-ಅ.16
ಮಾಧ್ಯಮಗಳಲ್ಲಿ ಎರಡನೇ ಪ್ರಕಟಣೆ-ಅ.25
ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಕೊನೆ ದಿನ: ನ.6
ಕರಡು ಮತದಾರರ ಪಟ್ಟಿ ತಯಾರಿಕೆ: ನ.20
ಕರಡು ಮತದಾರರ ಪಟ್ಟಿ ಪ್ರಕಟಣೆ: ನ.23
ಆಕ್ಷೇಪಣೆ ಸಲ್ಲಿಕೆ: ನ.23ರಿಂದ ಡಿ.9
ಆಕ್ಷೇಪಣೆಗಳ ವಿಲೇವಾರಿ: ಡಿ.25
ಅಂತಿಮ ಮತದಾರರ ಪಟ್ಟಿ ಪ್ರಕಟ: ಡಿ.30

 

Advertisement

Udayavani is now on Telegram. Click here to join our channel and stay updated with the latest news.

Next