Advertisement
ಅಮಾಸೆಬೈಲು ಗ್ರಾ.ಪಂ.ನ ಎರಡನೇ ವಾರ್ಡಿನ ಬಳ್ಮನೆ ಸಮೀಪದ ಕುಡಿಸಾಲು – ಹಂದಿಮನೆ ಭಾಗದಲ್ಲಿ 6 ಮನೆಗಳಿವೆ. ಇವರಿಗೆ ಶಾಲೆಗೆ ಹೋಗಬೇಕಾದರೆ 4 ಕಿ.ಮೀ. ದೂರದ ಜಡ್ಡಿನಗದ್ದೆಗೆ ಬರಬೇಕು. 2 ಕಿ.ಮೀ. ದೂರದ ಬಳ್ಮನೆಯಲ್ಲಿ ಕಿ.ಪ್ರಾ. ದವರೆಗೆ ಮಾತ್ರವಿದೆ. ಎರಡೂ ಕಡೆಗೂ ಈ ಹೊಳೆಯನ್ನೇ ದಾಟಿ ಬರಬೇಕು. ಹೊಳೆಗೆ ಸೇತುವೆಯಿಲ್ಲ. ಮರದ ಪಾಲ ಹಾಕಿದರೆ ಭಾರೀ ಮಳೆಗೆ ಕೊಚ್ಚಿ ಕೊಂಡು ಹೋಗುತ್ತಿದೆ. ಮಳೆಗಾಲವಿಡೀ ಮಕ್ಕಳನ್ನು ಮನೆಯವರೇ ಎತ್ತಿಕೊಂಡು ಬಂದು, ಹೊಳೆ ದಾಟಿಸಬೇಕಾದ ಸ್ಥಿತಿಯಿದೆ. ದಶಕಗಳಿಗೂ ಹೆಚ್ಚು ಕಾಲದಿಂದ ಇಲ್ಲಿ ಸೇತುವೆಗಾಗಿ ಬೇಡಿಕೆ ಇಡುತ್ತಿದ್ದರೂ, ಈಡೇರುವ ಲಕ್ಷಣ ಮಾತ್ರ ಕಾಣುತ್ತಿಲ್ಲ. ಹೀಗಾಗಿ ಪೀಳಿಗೆ ಯಿಂದ ಪೀಳಿಗೆ ಮಕ್ಕಳನ್ನು ಹೊತ್ತುಕೊಂಡು ದಾಟಿಸುವುದನ್ನು ಅಭ್ಯಾಸ ಮಾಡಿಕೊಂಡಂತಿದೆ.
Related Articles
ಸ್ಥಳೀಯರೇ ಹೇಳುವ ಪ್ರಕಾರ ಕುಡಿಸಾಲು ಹೊಳೆಗೆ ಸೇತುವೆ ಬೇಡಿಕೆ ಇಂದು- ನಿನ್ನೆಯದಲ್ಲ. ಬರೋಬ್ಬರಿ 7 ದಶಕಗಳಿಂದ ನಾವು ಬೇಡಿಕೆ ಕೊಡುತ್ತಿದ್ದೇವೆ. ಎಲ್ಲ ಜನಪ್ರತಿನಿಧಿಗಳು, ಅಮಾಸೆಬೈಲು ಗ್ರಾ.ಪಂ.ಗೆ ಮನವಿ ಕೊಟ್ಟಿದ್ದೇವೆ. ಈಗಿನ ಶಾಸಕರಿಗೂ ಮನವಿ ಕೊಟ್ಟಿದ್ದು, ಮಾಡಿಕೊಡುವ ಬಗ್ಗೆ ಭರವಸೆ ಕೊಟ್ಟಿದ್ದಾರೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
Advertisement
ಇನೆಷ್ಟು ವರ್ಷ ಕಾಯಬೇಕು…ಇಲ್ಲಿನ ನಿವಾಸಿಗರು ಕಳೆದ 70 ವರ್ಷಗಳಿಗೂ ಹೆಚ್ಚು ಕಾಲದಿಂದ ಸೇತುವೆಯೊಂದು ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಆದರೆ ಯಾರೂ ಓಗೊಟ್ಟಿಲ್ಲ. ಬಹುಷಃ ಇಲ್ಲಿರುವುದು 6 ಮನೆಗಳು ಮಾತ್ರ ಅನ್ನುವ ಕಾರಣಕ್ಕೆ ಈ ರೀತಿಯ ತಾತ್ಸಾರ ತೋರುತ್ತಿದ್ದಾರೆಯೇ? 6 ಮನೆಗಳಿದ್ದರೂ, ಅವರಿಗೆ ಮೂಲ ಸೌಕರ್ಯ ಕೇಳಿ ಪಡೆಯುವ ಹಕ್ಕಿಲ್ಲವೇ? ಅನ್ನುವುದಾಗಿ ಆಳುವ ವರ್ಗವನ್ನು ಅಲ್ಲಿನ ಜನ ಪ್ರಶ್ನಿಸುತ್ತಿದ್ದಾರೆ. 6 ತಿಂಗಳು ವಾಹನ ಸಂಚಾರವಿಲ್ಲ
ಮಳೆಗಾಲ ಆರಂಭವಾಗುವ ಜೂನ್‌ನಿಂದ ಮುಂದಿನ ಡಿಸೆಂಬರ್‌ವರೆಗೆ ಇಲ್ಲಿನ ಜನರಿಗೆ ಹೊಳೆಯಾಚೆಗೆ ವಾಹನ ಸಂಚಾರವೇ ಇಲ್ಲ. ಅದಕ್ಕೂ ಮೊದಲೇ ಕುಂದಾಪುರ ಅಥವಾ ಅಮಾಸೆಬೈಲು ಪೇಟೆಯಿಂದ ರಿಕ್ಷಾ ಮಾಡಿಕೊಂಡು, ಮನೆಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ತಂದಿಟ್ಟುಕೊಳ್ಳಬೇಕು. ಅದರ ಅನಂತರ ಏನಾದರೂ ಬೇಕಾದರೂ 8 ಕಿ.ಮೀ. ದೂರದ ಅಮಾಸೆಬೈಲಿನಿಂದ ಕುಡಿಸಾಲು ಹೊಳೆಯವರೆಗೆ ರಿಕ್ಷಾ ಅಥವಾ ಬೈಕ್‌ನಲ್ಲಿ ತರಬೇಕು. ಅಲ್ಲಿಂದ ಮುಂದಕ್ಕೆ ತಲೆ ಮೇಲೆ ಹೊತ್ತು ಕೊಂಡೇ ಬರಬೇಕು ಎನ್ನುತ್ತಾರೆ ಸ್ಥಳೀಯರಾದ ಸುದೀಪ್. ಹುಷಾರಿಲ್ಲ ಅಂದ್ರೆ ಭಯವಾಗುತ್ತೆ!
ನಾವು ಚಿಕ್ಕವರಿದ್ದಾಗಲೂ ನಮ್ಮ ಅಪ್ಪ- ಅಮ್ಮ ಹೀಗೆ ಎತ್ತಿಕೊಂಡೇ ಹೊಳೆ ದಾಟಿಸುತ್ತಿದ್ದರು. ಈಗ ನಾವು ನಮ್ಮ ಮಕ್ಕಳನ್ನು ಸಹ ಎತ್ತಿಕೊಂಡೇ ಹೊಳೆ ದಾಟಿಸಿ, ಕಳುಹಿಸುತ್ತಿದ್ದೇವೆ. ಸೇತುವೆಯಿಲ್ಲದೆ ತುಂಬಾ ಕಷ್ಟವಾಗುತ್ತಿದೆ. ಅದರಲ್ಲೂ ಯಾರಿಗಾದರೂ ಹುಷಾರಿಲ್ಲಂದ್ರೆ ತುಂಬಾ ಭಯವಾಗುತ್ತೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದೇ ಒಂದು ದೊಡ್ಡ ಪ್ರಯಾಸದ ಕೆಲಸ. ಸಣ್ಣ ಮಗುವಿಗೆ ಈಗ ಕೆಮ್ಮು, ಕಫ ಇದೆ. ಆದರೆ ಆಸ್ಪತ್ರೆಗೆ ಹೊಳೆ ದಾಟಿ, ಕರೆದುಕೊಂಡು ಹೋಗಬೇಕು. ಅದು ಕಷ್ಟವೆಂದು ಆಸ್ಪತ್ರೆಗೆ ಹೋಗಿಲ್ಲ ಎನ್ನುವುದಾಗಿ ಅಳಲು ತೋಡಿಕೊಳ್ಳುತ್ತಾರೆ ಕುಡಿಸಾಲಿನ ನಿವಾಸಿ ಶ್ಯಾಮಲಾ. – ಪ್ರಶಾಂತ್ ಪಾದೆ