ಕಾರವಾರ: ಪಾಕಿಸ್ತಾನದ ಹೆಸರು ತೆಗೆದುಕೊಳ್ಳದೇ ಬಿಜೆಪಿ ಒಂದೇ ಒಂದು ದಿನ ರಾಜಕಾರಣ ಮಾಡುವುದಿಲ್ಲ. ಪ್ರಧಾನಿಯಾಗಿ ಹತ್ತು ವರ್ಷವಿದ್ದ ಮನಮೋಹನ್ ಸಿಂಗ್ ಪಾಕಿಸ್ತಾನಕ್ಕೆ ಭೇಟಿ ನೀಡಿರಲಿಲ್ಲ. ಅವರು ಭಯೋತ್ಪಾದನೆ ನಿರ್ಮೂಲನೆ ಆಗುವವರೆಗೆ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ದಿಟ್ಟ ನಿರ್ಧಾರ ಕೈಗೊಂಡಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಶೇರವಾನಿ ಹಾಕಿ ಬಿರಿಯಾನಿ ತಿನ್ನಲು ಹೋಗಿದ್ದು 56 ಇಂಚಿನ ಎದೆಯ ನರೇಂದ್ರ ಮೋದಿಯವರೇ ಹೊರತು ಬೇರೆ ಯಾರೂ ಅಲ್ಲ. ನಮ್ಮ ದೇಶಕ್ಕೆ ಪಾಕಿಸ್ತಾನದ ಎದುರು ಇದಕ್ಕಿಂತ ಅವಮಾನ ಬೇರೆಯಿಲ್ಲ ಎಂದು ಕಿಡಿಕಾರಿದರು.
ಇನ್ನೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆ ಮಾಡಿದಾಗ ಅದನ್ನು ವಿರೋಧಿಸಿ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ, ನಟಿ ಮಾಳವಿಕಾರಂತಹ ಬಿಜೆಪಿ ಮುಖಂಡರುಗಳೇ ರಸ್ತೆಗಿಳಿದು ಪ್ರತಿಭಟಿಸಿದ್ದರು. ಆದರೆ ಈಗ ಅವರ ಬಳಿ ಕೇಳಿದ್ರೆ ಇಲ್ಲಸಲ್ಲದ ಉತ್ತರ ಕೊಡುತ್ತಾರೆ. ಇಂಥ ಬೇಜವಾಬ್ದಾರಿ, ನಾಚಿಕೆಗೆಟ್ಟ ಸರಕಾರ ದೇಶದಿಂದ ತೊಲಗಲಿ ಎಂದರು.
ಇನ್ನು ಹಣ ಕೊಟ್ಟರೆ ಮಾತ್ರ ಕಾಂಗ್ರೆಸ್‌ನಲ್ಲಿ ಟಿಕೆಟ್ ನೀಡುತ್ತಾರೆ ಎನ್ನುವ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಣದಿಂದ ಎಂಎಲ್‌ಎಗಳನ್ನೇ ಖರೀದಿ ಮಾಡಬಹುದು ಅಂತಾ ತೋರಿಸಿಕೊಟ್ಟಿದ್ದೇ ಬಿಜೆಪಿಯವರು. ಆಪರೇಷನ್ ಕಮಲ ಸಂಸ್ಕೃತಿಯ ಜನಕ ಯಡಿಯೂರಪ್ಪ. ಅಪರೇಶನ್ ಕಮಲದ ಜನಕ ಯಡಿಯೂರಪ್ಪ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ನನ್ನ ಕೆಲಸದಿಂದ ಗುರುತಿಸಿಕೊಂಡು ಇಷ್ಟು ದೂರ ಬೆಳೆದು ಬಂದಿದ್ದೇನೆ. ನಾನು ಯಾರಿಗೂ ಹಣಕೊಟ್ಟಿಲ್ಲ, ಯಾರಿಂದಲೂ ಹಣವನ್ನೂ ಪಡೆದಿಲ್ಲ ಎಂದರು. ಇನ್ನು ಬಿಜೆಪಿ ಆರ್‌ಎಸ್‌ಎಸ್‌ನ ಒಂದು ರಾಜಕೀಯ ಘಟಕವಾಗಿದೆ. ಅಲ್ಲಿನ ಸರಸಂಘ ಚಾಲಕರ ಸೂಚನೆ ಮೇರೆಗೆ ಬಿಜೆಪಿಯಲ್ಲಿ ಎರಡು ವರ್‌ಷಕ್ಕೊಮ್ಮೆ ಅಧ್ಯಕ್ಷರ ಬದಲಾವಣೆಯಾಗುತ್ತದೆ. ಆದರೆ ಕಾಂಗ್ರೆಸ್‌ನಲ್ಲಿ 11 ಸಾವಿರ ಮಂದಿ ಪ್ರದೇಶ ಕಾಂಗ್ರೆಸ್ ಸದಸ್ಯರು ಇದ್ದು, ಅವರಿಂದಲೇ ನೇರವಾಗಿ ಅಧ್ಯಕ್ಷರ ಆಯ್ಕೆ ನಡೆಯುತ್ತದೆ. ಅವರ ಆಶಯ ಇರುವವರೆಗೆ ಕಾಂಗ್ರೆಸ್ ನಲ್ಲಿ ಈಗಿರುವ ಅಧ್ಯಕ್ಷರೇ ಮುಂದುವರೆಯುತ್ತಾರೆ ಎಂದರು. ಭೀಮಣ್ಣ ನಾಯ್ಕ ಹಾಗೂ ಇತರರು ಇದ್ದರು.