ಸಿರಿಗೆರೆ (ಚಿತ್ರದುರ್ಗ ಜಿಲ್ಲೆ): “ಹೊತ್ತು ಬಂದಂತೆ ಕೊಡೆ ಹಿಡಿಯುವ ಸಂಸ್ಕೃತಿ’ ರಾಜ್ಯ ರಾಜಕಾರಣದಲ್ಲಿ ದಟ್ಟವಾಗಿ ಬೆಳೆದಿದೆ. ಇಂತಹ ಸಂದರ್ಭದಲ್ಲಿ ಅಧಿಕಾರಕ್ಕೆ ಬರುತ್ತಿರುವ ಸಮ್ಮಿಶ್ರ ಸರ್ಕಾರದಿಂದ ರಾಜ್ಯದ ಜನರಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇಲ್ಲ ಎಂದು ತರಳಬಾಳು ಜಗದ್ಗುರು ಶಾಖಾ ಮಠ ಸಾಣೇಹಳ್ಳಿಯ ಪೀಠಾಧ್ಯಕ್ಷ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ವಿಭಿನ್ನ ವಿಚಾರಧಾರೆ ಹೊಂದಿರುವ ಎರಡು ಪಕ್ಷಗಳು ಒಟ್ಟಿಗೆ ಸೇರಿ ಜನಪರ ಆಡಳಿತ ನೀಡುವುದು ಕಷ್ಟ ಸಾಧ್ಯ. ಹೀಗಾಗಿ ನೂತನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರದಿಂದ ನಾಡಿನ ಅಭಿವೃದ್ಧಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.
ಮಾತೆತ್ತಿದರೆ ಸಂವಿಧಾನದ ಕಡೆ ಬೆರಳು ಮಾಡುವ ರಾಜಕಾರಣಿಗಳು, ಸಂವಿಧಾನದಲ್ಲಿ ಇಲ್ಲದೇ ಇರುವ ಉಪಮುಖ್ಯಮಂತ್ರಿ ಸ್ಥಾನ ದಕ್ಕಿಸಿಕೊಳ್ಳಲು ನಡೆಸುತ್ತಿರುವ ಹುನ್ನಾರವನ್ನು ಯಾವುದೇ ಸಂದರ್ಭದಲ್ಲಿಯೂ ಒಪ್ಪಿಕೊಳ್ಳುವಂಥದ್ದಲ್ಲ. ಸಂವಿಧಾನದಲ್ಲಿ ಮುಖ್ಯಮಂತ್ರಿ ಸ್ಥಾನವೇ ಶ್ರೇಷ್ಠವಾದುದು. ಅಧಿಕಾರದ ಗದ್ದುಗೆಯನ್ನು ಉಳಿಸಿಕೊಳ್ಳಲು ಹಲವು ಸಂದರ್ಭಗಳಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ಹುಟ್ಟುಹಾಕಲಾಗಿದೆಯೇ ಹೊರತು ಇದು ಸಾಂವಿಧಾನಿಕ ಹುದ್ದೆಯೇನಲ್ಲ ಎಂದರು.
ಚುನಾವಣೆಗೂ ಮೊದಲು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡುವುದಾಗಿ ಹತ್ತಾರು ಬಾರಿ ಹೇಳುತ್ತಿದ್ದ ಕುಮಾರಸ್ವಾಮಿ, ಈಗ ಮಾತು ಬದಲಿಸುತ್ತಿರುವಂತೆ ಕಾಣುತ್ತಿದೆ. ರೈತರ ಸಾಲ ಮನ್ನಾ ಮಾಡಲು ಯಾವುದೇ ಕಾರಣ ಹೇಳದೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ನೂತನ ಮುಖ್ಯಮಂತ್ರಿಯವರು ರೈತ ಸಮುದಾಯದ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದು ಎಚ್ಚರಿಸಿದರು.