Advertisement
ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವದಲ್ಲಿ ಭಾನುವಾರ ಅವರು ಸಮಾರೋಪ ಭಾಷಣ ಮಾಡಿದರು. ಘೋಷಣಾ ಸಾಹಿತ್ಯದ ಗದ್ದಲದ ನಡುವೆ ಶುದ್ಧ ಸಾಹಿತ್ಯ ಯಾವುದು ಅನ್ನುವುದು ಜನರಿಗೆ ಗೊತ್ತಾಗಿಲ್ಲ.
Related Articles
Advertisement
ಪ್ರಗತಿಪರ ಸಾಹಿತ್ಯ: ಭಾರತದಲ್ಲಿ ಮುಲ್ಕ್ರಾಜ್ ಆನಂದ್, ಪ್ರಗತಿಪರ ಸಾಹಿತ್ಯ ಅಂತಾ ಶುರು ಮಾಡಿದರು. ಕನ್ನಡದಲ್ಲಿ ಆನಕೃ, ತರಾಸು, ನಿರಂಜನ ಕಟ್ಟಿàಮನಿ ಶುರು ಮಾಡಿದರು. ಆ.ನ.ಕೃಷ್ಣರಾಯರು ಪ್ರಗತಿಪರ ಸಾಹಿತ್ಯವನ್ನೂ ಬರೆಯುತ್ತಿದ್ದರು. ಶೃಂಗೇರಿ ಮಠಕ್ಕೂ ಹೋಗುತ್ತಿದ್ದರು. ತರಾಸು ಅವರು ಮನೆಯಲ್ಲಿ ಹೋಮ-ಹವನ ಮಾಡಿಸುತ್ತಿದ್ದರು ಎಂದು ಹೇಳಿದರು.
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಇಷ್ಟ: ರಸ, ಧ್ವನಿ ಮತ್ತು ಔಚಿತ್ಯ ಸಾಹಿತ್ಯದ ಮೂಲ ನಿಕಶಗಳು. ಧ್ವನಿ ಮತ್ತು ಔಚಿತ್ಯಗಳು ಸಾಹಿತ್ಯದಲ್ಲಿ ರಸವನ್ನು ಸೃಷ್ಟಿ ಮಾಡುತ್ತವೆ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ನನಗಿಷ್ಟ. ಹೀಗಾಗಿ ಖ್ಯಾತನಾಮರ ಒಬ್ಬೊಬ್ಬರ ಸಂಗೀತ ಕಛೇರಿಗಳನ್ನು 20-25 ಬಾರಿ ಕೇಳಿದ್ದೇನೆ. ಸಂಗೀತದಿಂದ ರಸ, ಧ್ವನಿ ಮತ್ತು ಔಚಿತ್ಯ ಬಂತು. ಆದರೆ, ಇಂಗ್ಲಿಷ್‌ನಲ್ಲಿ ಎಮೋಷನ್‌ಗೆ ಬೇರೆ ಶಬ್ದ ಇಲ್ಲದ್ದರಿಂದ ಹೇಳುತ್ತಾರೆ.
ಭಾವ ಪಕ್ವವಾದಾಗ ಸಾಹಿತ್ಯದಲ್ಲಿ ರಸ ಬರುತ್ತದೆ. ಸಾಹಿತ್ಯ ಮೀಮಾಂಸೆಯ ಮೊಟ್ಟ ಮೊದಲ ಗುರು ಭರತ, ಅವನು ಬರೆದಿದ್ದು ನಾಟ್ಯಶಾಸ್ತ್ರ, ಸಾಹಿತ್ಯದಲ್ಲಿ ಮಾತ್ರವಲ್ಲ, ಲಲಿತಕಲೆಯಲ್ಲೂ ರಸ ಇದೆ. ಇದು ಪರಂಪರೆಯಿಂದ ಬಂದದ್ದು. ಕಾದಂಬರಿ, ಮಹಾಕೃತಿಗಳು ಸಮುದ್ರ ಇದ್ದ ಹಾಗೆ. ಭೂಮಿ ಒಂದೇ ಸಮ ಇರಲ್ಲ. ಬೆಟ್ಟ-ತಗ್ಗು ಇರುತ್ತದೆ. ಹಾಗೆಯೇ ಸಾಹಿತ್ಯದಲ್ಲಿ ಎಲ್ಲವೂ ರಸ ಸ್ಥಾನವಾಗಿರಲ್ಲ. ರಸ ಸ್ಥಾನ ಅಲ್ಲಲ್ಲಿ ಬರುತ್ತವೆ. ರಸ ಸ್ಥಾನ ಕಟ್ಟಿಕೊಡುವ ಕಡೆ ಭಾವ ಇರುತ್ತೆ ಎಂದರು.
ಸಾಕ್ಷಿ ಮೆಟಾಫಿಸಿಕಲ್ ನಾವೆಲ್, ಅಲ್ಲಿನ ಪಾತ್ರಗಳು ಯಾವ ರೀತಿ ಬಂದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮ್ಮ ದೇಶದ ಪುರುಷಾರ್ಥ ಗೊತ್ತಿರಬೇಕು. ಭೈರಪ್ಪ ಈ ವಯಸ್ಸಲ್ಲಿ ಸೆಕ್ಸ್ ಬರೆದಿದ್ದಾರೆ ಎಂದರೆ, ಅವರಿಗೆ ಏನೂ ಅರ್ಥವಾಗಿಲ್ಲ ಅಂತಾಯ್ತು ಎಂದು ಹೇಳಿದರು.
ಒಪ್ಪಿಕೊಳ್ಳದಿದ್ದರೆ ಗುಂಪನಿಂದ ವಜಾ: ಕರ್ನಾಟಕದಲ್ಲಿರುವಷ್ಟು ಚಳವಳಿ ಸಾಹಿತ್ಯ ದೇಶದ ಇನ್ಯಾವ ರಾಜ್ಯಗಳಲ್ಲೂ ಕಾಣ ಸಿಗಲ್ಲ. ಪ್ರಗತಿಪರ, ಬಂಡಾಯ, ದಲಿತ, ಸ್ತ್ರೀವಾದ ಚಳವಳಿಗಳ ಸಾಹಿತ್ಯದಲ್ಲಿ ಅವರಿಗೆ ತಕ್ಕನಾಗಿ ಬರೆದರೆ ಸಾಹಿತಿ ಎಂದು ಒಪ್ಪಿಕೊಳ್ಳುತ್ತಾರೆ, ಇಲ್ಲವಾದರೆ ಅವರ ಗುಂಪಿನಿಂದ ವಜಾ ಮಾಡುತ್ತಾರೆ. ಚಳವಳಿಗಾರರು ತಮ್ಮ ಸಾಹಿತ್ಯದ ಮೂಲಕ ಸಮಾಜದ ಉದ್ಧಾರ ಮಾಡುತ್ತಿದ್ದೇವೆ ಎಂದು ಕೊಳ್ಳುತ್ತಾರೆ.
ಆದರೆ, ಸಾಹಿತ್ಯದಿಂದ ಸಮಾಜವನ್ನು ಉದ್ಧಾರ ಮಾಡಿಬಿಡುತ್ತೇನೆ ಎಂಬ ಭ್ರಮೆಯಲ್ಲಿ ನಾನಿಲ್ಲ. ಸಮಾಜದೊಳಗೆ ಅನ್ಯಾಯವನ್ನು ಅನುಭವಿಸುತ್ತಲೇ ಇದ್ದೇವೆ, ಅದಕ್ಕೆ ಕಾದಂಬರಿ ಯಾಕೆ ಓದಬೇಕು. ಕಾದಂಬರಿಗಳನ್ನು ವಿದ್ಯಾವಂತರೆ ಓದುವುದು, ಅವರಿಗೆ ಈ ಅನ್ಯಾಯಗಳು ಗೊತ್ತಿರುತ್ತವೆ, ಆದರೂ ವಿದ್ಯಾವಂತರೇನು ಹೋಗಿ ಓಟ್ ಮಾಡಲ್ಲ. ನಮ್ಮ ವಿಶ್ವವಿದ್ಯಾಲಯಗಳಲ್ಲಿರುವ ಪ್ರಾಧ್ಯಾಪಕರು ಸಾಹಿತ್ಯದ ಹೆಸರಲ್ಲಿ ಚಳವಳಿಗಳನ್ನೇ ಹೇಳುತ್ತಿದ್ದಾರೆ ಎಂದು ಎಸ್.ಎಲ್.ಭೈರಪ್ಪ ಹೇಳಿದರು.
ಯಾವುದಕ್ಕೂ ಪ್ರತಿಕ್ರಿಯಿಸದೆ ನಾನು ಬರೆದುಕೊಂಡು ಬಂದೆ: ನಾನು ತತ್ವಶಾಸ್ತ್ರ, ಈಸ್ಥಿಟಿಕ್ಸ್ ಸೌಂದರ್ಯ-ಕಲಾ ಮೀಮಾಂಸೆ ಒಳಗೆ ಸಾಹಿತ್ಯ ಮೀಮಾಂಸೆ ಓದಿದ್ದರಿಂದ ಯಾವುದಕ್ಕೂ ಪ್ರತಿಕ್ರಿಯೆ ಕೊಡದೆ ಬರೆಯಬೇಕು ಎಂದು ಬರೆದುಕೊಂಡು ಬಂದೆ. ಒಂದೊಂದು ಕಾದಂಬರಿ ಬರೆಯುವಾಗಲೂ ಮನಸ್ಸಿನಲ್ಲಿ ಕಾನ್ಸೆಫ್ಟ್ ಗಟ್ಟಿಯಾಗುತ್ತಿತ್ತು. ನಾನೇಕೆ ಬರೆಯುತ್ತೇನೆ ಎಂಬ ಲೇಖನ, ಪರ್ವ, ಮಂದ್ರ ಕಾದಂಬರಿಗಳನ್ನು ಬರೆದಿದ್ದು ತೃಪ್ತಿಕೊಟ್ಟಿದೆ.
ಉಳಿದಿದ್ದೆಲ್ಲಾ ಅಲ್ಲಿ-ಇಲ್ಲಿ ತಿಳಿದು ಬರೆದಿದ್ದು, ಅವಕ್ಕೆ ಮೌಲ್ಯ ಇದೆ ಎಂದು ಅನಿಸಲ್ಲ. ಇಷ್ಟನ್ನು ಬಿಟ್ಟು ನನಗೆ ಹೊಸದಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಹೇಳಬೇಕಾದ್ದು ಕಾದಂಬರಿಯಾಗಿ ಬರಬೇಕು. ದಾಟು ಕಾದಂಬರಿ ಭಾರತದಲ್ಲಿನ ಜಾತಿ ಪದ್ಧತಿಯನ್ನು ಹೇಳುತ್ತೆ. ಅದೇ ಕಾದಂಬರಿಯ ಗಟ್ಟಿತನ. ಹಳ್ಳಿಯಲ್ಲಿ ಹುಟ್ಟಿ-ಬೆಳೆದು, ನನ್ನ ಭಾಗದ ಎಲ್ಲಾ ಹಳ್ಳಿ ಸುತ್ತಿ ಜಾತಿ ಪದ್ಧತಿ ನೋಡಿದ್ದೆ. ಶಾಸ್ತ್ರ, ನಂಬಿಕೆಗಳೇನು ಎಂಬುದು ಚಿಕ್ಕ ವಯಸ್ಸಿನಲ್ಲೇ ಗೊತ್ತಾಗುತ್ತಿತ್ತು.
ಮದುವೆ ಶಾಸ್ತ್ರ, ಸತ್ತರೆ ಏನು ಮಾಡುತ್ತಾರೆ ಎಂಬುದು ನನಗೆ 8ನೇ ವಯಸ್ಸಿಗೇ ಗೊತ್ತಿತ್ತು. ಜೊತೆಗೆ ಉತ್ತರ ಭಾರತದಲ್ಲಿ ಉಳಿದು ಅಧ್ಯಯನ ಮಾಡಿದ್ದೆ, ಸಮಾಜಶಾಸ್ತ್ರ ಓದಿದ್ದೆ, ಹೀಗಾಗಿ ಜಾತಿ ವ್ಯವಸ್ಥೆ ಕುರಿತು ದಾಟು ಕಾದಂಬರಿ ಬರೆದೆ. 1973ರಲ್ಲಿ ನಾನು ಬರೆದ ದಾಟು ಕಾದಂಬರಿಯನ್ನು ಸರಿಗಟ್ಟುವ ಮತ್ತೂಂದು ಕಾದಂಬರಿ ಬಂದಿಲ್ಲ ಎಂದು ಎಸ್.ಎಲ್.ಭೈರಪ್ಪ ತಿಳಿಸಿದರು.