Advertisement

ಇನ್ನೆರಡು ಕ್ಷೇತ್ರ ಚುನಾವಣೆಗೆ ಮೈತ್ರಿ ಇಲ್ಲ:ಡಾ. ಪರಮೇಶ್ವರ್‌

06:00 AM May 21, 2018 | |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸರ್ಕಾರ ರಚನೆ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ ಜಯನಗರ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಚುನಾವಣೆಯಲ್ಲೂ ಎರಡೂ ಪಕ್ಷಗಳ ನಡುವೆ ಮೈತ್ರಿಯಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.

Advertisement

ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್‌, “ಅಂತಹ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜರಾಜೇಶ್ವರಿ ನಗರದಲ್ಲಿ ಈಗಾಗಲೇ ಕಾಂಗ್ರೆಸ್‌ ತನ್ನ ಅಭ್ಯರ್ಥಿ ಹೆಸರು ಪ್ರಕಟಗೊಳಿಸಿದೆ. 

ಚುನಾವಣಾ ಪ್ರಕ್ರಿಯೆಯೂ ಪೂರ್ಣಗೊಂಡು, ಮತದಾನ ಮಾತ್ರ ಬಾಕಿ ಇದೆ. ಎರಡೂ ಪಕ್ಷಗಳ ಅಭ್ಯರ್ಥಿಗಳು ಅಲ್ಲಿ ಕಣದಲ್ಲಿದ್ದಾರೆ. ಹೀಗಾಗಿ, ಈ ಹಂತದಲ್ಲಿ ಮೈತ್ರಿ ಮಾತು ಉದ್ಭವಿಸುವುದೇ ಇಲ್ಲ ಎಂದು ಹೇಳಿದರು. ಈ ಮಧ್ಯೆ ಎಚ್‌.ಡಿ. ಕುಮಾರಸ್ವಾಮಿ ಸಹ ಮಾತನಾಡಿ, ಎರಡೂ ಕ್ಷೇತ್ರಗಳಲ್ಲಿ ಮೈತ್ರಿ ಬಗ್ಗೆ ತೀರ್ಮಾನ ಆಗಿಲ್ಲ ಎಂದಿದ್ದಾರೆ.
ಜಯನಗರದಲ್ಲಿಯೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿದ್ದು, ಬಿಜೆಪಿ ಅಭ್ಯರ್ಥಿ ಘೋಷಿಸುವುದು ಮಾತ್ರ ಬಾಕಿಯಿದೆ. ಹೀಗಾಗಿ, ಮೈತ್ರಿ ಕಷ್ಟ ಎಂಬುದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ವಾದವಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬಿಜೆಪಿ ವಿರುದ್ಧ ಸರ್ಕಾರ ರಚನೆಯಲ್ಲಿ ಒಂದಾಗಿದ್ದರೂ ಜಯನಗರ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಚುನಾವಣೆಯಲ್ಲಿ “ಫ್ರೆಂಡ್ಲಿ’ ಫೈಟ್‌ ನಡೆಯಬಹುದು ಎಂದು ಹೇಳಲಾಗಿದೆ.

ಈ ಮಧ್ಯೆ, ಹಾಲಿ ಶಾಸಕರಾಗಿದ್ದ ಬಿ.ಎನ್‌.ವಿಜಯಕುಮಾರ್‌ ನಿಧನದಿಂದ ತೆರವಾಗಿರುವ ಜಯನಗರದಲ್ಲಿ ಅವರ ಸಹೋದರ ಪ್ರಹ್ಲಾದ್‌ ಬಾಬು ಅವರನ್ನೇ ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಗಂಭೀರ ಚಿಂತನೆ ನಡೆಸಿದೆ. ಜತೆಗೆ ಮಾಜಿ ಮೇಯರ್‌ ಎಸ್‌.ಕೆ. ನಟರಾಜ್‌, ತೇಜಸ್ವಿ ಸೂರ್ಯ ಹಾಗೂ ಕೇಂದ್ರ ಸಚಿವ ಅನಂತಕುಮಾರ್‌ ಪತ್ನಿ ತೇಜಸ್ವಿನಿ ಅನಂತಕುಮಾರ್‌ ಅವರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಒತ್ತಾಯವಿದೆ. ಆದರೆ, ಅನಂತಕುಮಾರ್‌ ಇದಕ್ಕೆ ಒಪ್ಪುವರೇ ಎಂಬ ಪ್ರಶ್ನೆಯೂ ಇದೆ.

ರಾಜರಾಜೇಶ್ವರಿ ನಗರ ಚುನಾವಣಾ ಉಸ್ತುವಾರಿ ಬಿಜೆಪಿಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ವಹಿಸಿದ್ದರೆ, ಜಯನಗರ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ಅನಂತಕುಮಾರ್‌ ಅವರಿಗೆ ವಹಿಸಲಾಗಿದೆ.

Advertisement

ನಂಬರ್‌ ಗೇಮ್‌ಗೆ ಸಹಕಾರಿ
ಬೆಂಗಳೂರು ವ್ಯಾಪ್ತಿಯ 28 ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್‌ 13, ಬಿಜೆಪಿ 11 ಹಾಗೂ ಜೆಡಿಎಸ್‌ 2 ಸ್ಥಾನ ಪಡೆದಿದೆ. 2013ರ ಚುನಾವಣಾ ಫ‌ಲಿತಾಂಶಕ್ಕೆ ಹೋಲಿಸಿದರೆ ಕಾಂಗ್ರೆಸ್‌ ಕಳೆದ ಬಾರಿ ಗಳಿಸಿದ್ದ 13 ಸ್ಥಾನಗಳನ್ನು ಈಗಾಗಲೇ ಪಡೆದುಕೊಂಡಿದೆ. ಜೆಡಿಎಸ್‌ ಹಾಗೂ ಬಿಜೆಪಿ ತಲಾ ಒಂದು ಸ್ಥಾನ ಕಳೆದುಕೊಂಡಿವೆ. ಇದೀಗ ಎರಡು ಕ್ಷೇತ್ರಗಳಿಗೆ ಸದ್ಯದಲ್ಲೇ ಮತದಾನ ನಡೆಯಲಿದೆ. ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿ ಪೈಕಿ ಯಾರು ಗೆದ್ದರೂ ಮೈತ್ರಿ ಸರ್ಕಾರದ ಸದಸ್ಯರ ಸಂಖ್ಯೆ ಹೆಚ್ಚಲಿದೆ. ಬಿಜೆಪಿ ಗೆಲ್ಲುವ ಸಂಖ್ಯೆಗೆ ಅನುಗುಣವಾಗಿ ಸಂಖ್ಯಾಬಲ ಹೆಚ್ಚಾಗಲಿದೆ. ಹಾಗಾಗಿ ರಾಜಧಾನಿಯ ಎರಡು ಕ್ಷೇತ್ರಗಳಲ್ಲಿ ಜೂನ್‌ ಮಧ್ಯಭಾಗದವರೆಗೆ ಚುನಾವಣಾ ಗುಂಗು ಇರಲಿದೆ. ಈ ಎರಡೂ ಕ್ಷೇತ್ರಗಳಲ್ಲಿ ಜಯ ಸಾಧಿಸಿ ತನ್ನ ಸಂಖ್ಯೆ ವೃದ್ಧಿಸಿಕೊಳ್ಳಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಹಾಗೂ ಬಿಜೆಪಿ ಸಹ ಎಲ್ಲ ರೀತಿಯ ತಂತ್ರಗಳನ್ನೂ ಅನುಸರಿಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next