ಬೆಂಗಳೂರು: ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಜತೆ ಸಭೆ ನಡೆಸಿದ ಹಿನ್ನೆಲೆಯಲ್ಲಿ ಕೆಪಿಸಿಸಿಯಿಂದ ಮಾಜಿ ಸಚಿವ ಚೆಲುವರಾಯಸ್ವಾಮಿ ಸೇರಿದಂತೆ ಮಾಜಿ ಶಾಸಕರಿಗೆ ಕೆಪಿಸಿಸಿ ಬುಲಾವ್ ನೀಡಿ ಸ್ಪಷ್ಟನೆ ಪಡೆದಿದೆ. ಜತೆಗೆ, ಯಾರ ವಿರುದ್ಧವೂ ಕ್ರಮ ಕೈಗೊಳ್ಳುವ ಪ್ರಶ್ನೆ ಇಲ್ಲ ಎಂದೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಗೆ ಸಚಿವ ಜಮೀರ್ ಅಹಮದ್ ಜತೆ ಆಗಮಿಸಿದ ಚೆಲುವರಾಯಸ್ವಾಮಿ, ರಮೇಶ್ ಬಂಡಿ ಸಿದ್ದೇಗೌಡ, ನರೇಂದ್ರಸ್ವಾಮಿ, ಕೆ.ಬಿ.ಚಂದ್ರಶೇಖರ್ ಅವರು, ಲೋಕಸಭೆ ಚುನಾವಣೆಗೂ ಸುಮಲತಾ ಅವರ ಜತೆ ಊಟ ಮಾಡಿದ್ದಕ್ಕೂ ಸಂಬಂಧವಿಲ್ಲ. ನಾವಾಗಿಯೇ ಅವರನ್ನು ಭೇಟಿ ಆಗಿಲ್ಲ. ಇಂಡವಾಳು ಸಚ್ಚಿದಾನಂದ ಅವರು ಹುಟ್ಟುಹಬ್ಬ ಪ್ರಯುಕ್ತ ಆಯೋಜಿಸಿದ್ದ ಔತಣಕೂಟದಲ್ಲಿ ನಾವೂ ಪಾಲ್ಗೊಂಡಿದ್ದೆವು, ಸುಮಲತಾ ಅವರೂ ಪಾಲ್ಗೊಂಡಿದ್ದರು ಎಂದು ಸಮಜಾಯಿಷಿ ನೀಡಿದರು.
ಮೊದಲಿನಿಂದಲೂ ನಾವು ಜೆಡಿಎಸ್‌ನಿಂದ ದೂರವೇ ಉಳಿದಿದ್ದೇವೆ. ಅದನ್ನು ನಿಮ್ಮ ಗಮನಕ್ಕೂ ತಂದಿದ್ದೇವೆ. ಏನು ಸಮಸ್ಯೆ ಆಗಿತ್ತು ಎಂಬುದನ್ನೂ ತಿಳಿಸಿದ್ದೇವೆ. ನಾವೇನೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಮೊದಲಿನಿಂದಲೂ ಅಂತರ ಕಾಯ್ದುಕೊಂಡಿದ್ದೇವು, ಅದನ್ನೇ ಮುಂದುವರಿಸಿದ್ದೇವೆ. ಮಂಡ್ಯದಲ್ಲಿ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಬೆಳೆಸಲು ಆಗುತ್ತಾ? ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ನಾವೇ ಉತ್ತರ ಕೊಡಬೇಕಲ್ಲವೇ ಎಂದು ಪ್ರಶ್ನಿಸಿದರು ಎಂದು ಹೇಳಲಾಗಿದೆ. ಆದರೆ, ದಿನೇಶ್ ಅವರು, ಆದರೂ ಇಂತಹ ಸಂದರ್ಭದಲ್ಲಿ ಸುಮಲತಾ ಅವರ ಜತೆಕಾಣಿಸಿಕೊಂಡಿದ್ದು ಗೊಂದಲಗಳಿಗೆ ಕಾರಣವಾಗಿದೆ. ಹೀಗಾಗಿ, ಸ್ಪಷ್ಟನೆ ನೀಡಲು ಹೇಳಿದ್ದಕ್ಕೆ ಮೌಖಿಕವಾಗಿ ಸ್ಪಷ್ಟನೆ ನೀಡಿದರು.
ಮತ್ತೂಂದು ಮೂಲಗಳ ಪ್ರಕಾರ, ಸುಮಲತಾ ಜತೆ ಸಭೆ ವಿಚಾರವನ್ನು ಜೆಡಿಎಸ್ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡಿರುವುದರಿಂದ ಪ್ರಕರಣ ಗಂಭೀರವಾಗಬಹುದು ಎಂದು ಮಾಜಿ ಶಾಸಕರನ್ನು ಕರೆಸಿ ಸ್ಪಷ್ಟನೆ ‘ಶಾಸ್ತ್ರ’ ಮುಗಿಸಲಾಯಿತು. ದಿನೇಶ್ ಗುಂಡೂರಾವ್ ಅವರು ಸಹ ಯಾರ ವಿರುದ್ಧವೂ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿರುವುದರಿಂದ ಸದ್ಯಕ್ಕೆ ವಿಚಾರ ಅಲ್ಲಿಗೆ ಕೈ ಬಿಡಲಾಗಿದೆ ಎಂದು ಹೇಳಲಾಗಿದೆ.
ದೂರ ಉಳಿದಿದ್ದೇವೆ: ದಿನೇಶ್ ಗುಂಡೂರಾವ್ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಚೆಲುವರಾಯಸ್ವಾಮಿ, ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ್ದೆವು. ಆಡೕಯೋ ರಿಲೀಸ್ ವಿಚಾರ ಸಂಬಂಧ ಚರ್ಚೆ ನಡೆಸಿದೆವು. ಏನು ಮಾಹಿತಿ ಹೇಳಬೇಕೋ ಅದನ್ನು ಅವರಿಗೆ ತಿಳಿಸಿದ್ದೇವೆ. ನಮ್ಮದು ರಾಷ್ಟ್ರೀಯ ಪಕ್ಷ, ಏನು ಮಾಡಬೆಕು ಅನ್ನೋದು ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಯಾವ ವಿಚಾರ ಹೇಗೆ ಹ್ಯಾಂಡಲ್ ಮಾಡಬೇಕು ಎಂಬುದು ಪಕ್ಷದ ನಾಯಕರಿಗೆ ಗೊತ್ತಿದೆ. ಅವರ ತೀರ್ಮಾನಕ್ಕೆ ನಾವೆಲ್ಲವೂ ಬದ್ಧ ಎಂದು ಹೇಳಿದರು.
ಈಗ್ಯಾಕೆ ವಿಡಿಯೋ ಬಿಡುಗಡೆ ಮಾಡಿಸಲಾಗಿದೆ ಅನ್ನೋದು ಗೊತ್ತಿಲ್ಲ, ಊಟ ಮಾಡಿರುವುದಕ್ಕೆ ಇಷ್ಟೇಕೆ ಮಹತ್ವ ಬಂತು ಅನ್ನೋದು ತಿಳಿಯುತ್ತಿಲ್ಲ.ನಾವು ಸುಮಲತಾ ಪರ ಕೆಲಸ ಮಾಡಿಲ್ಲ, ಅಂತರ ಕಾಯ್ದುಕೊಂಡಿದ್ದೇವೆ. ಮೈತ್ರಿ ಅಭ್ಯರ್ಥಿ ವಿಚಾರದಲ್ಲೂ ಮೌನ ವಹಿಸಿದ್ದೆವು ಎಂದು ತಿಳಿಸಿದರು. ಮಂಡ್ಯದಲ್ಲಿ ಪರಿಸ್ಥಿತಿ ಮಿತಿ ಮೀರಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಹೇಳಿದ್ದರು. ಅವರು ಸುಮ್ಮನಿದ್ದಾರೆ, ಆದರೆ, ಯಾರೋ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಹೇಳಿದರು. ನಿಖೀಲ್ ಸೋತರೆ ಚೆಲುವರಾಯಸ್ವಾಮಿ ತಂಡ ಕಾರಣ ಎಂಬ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿ, ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಅದು ಮಂಡ್ಯ ಜನರ ತೀರ್ಮಾನ. ನಾನು ಸೇರಿದಂತೆ ನರೇಂದ್ರಸ್ವಾಮಿ ಸಹಿತ ಯಾರೂ ಎಲ್ಲೂ ಪ್ರಚಾರವೇ ಮಾಡಿಲ್ಲ. ಅವರ ಸೋಲಿಗೆ ನಾವು ಕಾರಣ ಅಂದರೆ ಸರಿಯಾ? ನಮ್ಮನ್ನೇ ಅಸೆಂಬ್ಲಿ ಚುನಾವಣೆಯಲ್ಲಿ ಸೋಲಿಸಿದ್ದಾರೆ. ನಾವು ಯಾರನ್ನಾದರೂ ಗೆಲ್ಲಿಸಲು ಸಾಧ್ಯವಾ? ಮಂಡ್ಯದಲ್ಲಿ ಯಾರು ಸೋತರೂ, ಗೆದ್ದರೂ ಜನರ ತೀರ್ಮಾನ ಎಂದು ಹೇಳಿದರು.