Advertisement

ಬಿಸಿಎಂ ವಸತಿ ಕಾಲೇಜುಗಳಲ್ಲಿ ಶೈಕ್ಷಣಿಕ ಪ್ರಗತಿ ಇಲ್ಲ

09:11 AM Nov 18, 2017 | Team Udayavani |

ಸುವರ್ಣಸೌಧ: ಹಿಂದುಳಿದ ವರ್ಗಗಳ ವಸತಿ ಕಾಲೇಜುಗಳಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ನಿಲಯ ಪಾಲಕರ
ಬೇಜವಾಬ್ದಾರಿತನ ಮತ್ತು ಇಚ್ಛಾಶಕ್ತಿಯ ಕೊರತೆಯಿಂದಾಗಿ ಉತ್ತಮ ಮಟ್ಟದ ಶೈಕ್ಷಣಿಕ ಪ್ರಗತಿ ಸಾಧಿಸಿಲ್ಲ ಎಂದು ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ತಿಳಿಸಿದೆ.

Advertisement

ಶುಕ್ರವಾರ ಸಮಿತಿಯ ಅಧ್ಯಕ್ಷ ಜೆ.ಆರ್‌. ಲೋಬೋ ವಿಧಾನಸಭೆಯಲ್ಲಿ ಮಂಡಿಸಿದ 9ನೇ ವರದಿಯಲ್ಲಿ ಈ ಮಾಹಿತಿ ಇದೆ. ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ಇತ್ತೀಚೆಗೆ ರಾಜ್ಯದ ಹಲವಾರು ಜಿಲ್ಲೆಗಳಿಗೆ ಭೇಟಿ ನೀಡಿ ಆಯಾ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಚರ್ಚಿ ಸಿದ ಸಂದರ್ಭದಲ್ಲಿ ಹೆಚ್ಚಿನ ವಸತಿ ಶಾಲೆಗಳು ಎಸ್‌ಎಸ್‌ಎಲ್‌ ಸಿ/ಪಿಯುಸಿ ಫಲಿತಾಂಶದಲ್ಲಿ ಪ್ರಗತಿ ಸಾಧಿಸಿಲ್ಲ. ಇದಕ್ಕೆ ಜಿಲ್ಲಾ ಮಟ್ಟದಲ್ಲಿ ಕ್ರೈಸ್‌ ಸಂಸ್ಥೆಯ ಆಡಳಿತ ಕಚೇರಿ ಇಲ್ಲದಿರುವುದು ಕಾರಣ ಎಂದು ಅಭಿಪ್ರಾಯಪಟ್ಟಿದೆ.

ಪ್ರತಿ ಬಾರಿ ಶೈಕ್ಷಣಿಕ ವರ್ಷ ಪ್ರಾರಂಭವಾದ 3-4 ತಿಂಗಳ ನಂತರ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಗಿದೆ. 2015-16ನೇ ಸಾಲಿನ ಸಮವಸ್ತ್ರ 2016-17ನೇ ಸಾಲಿನ ಆಗಸ್ಟ್‌ನಲ್ಲಿ ವಿತರಿಸಲಾಗಿದೆ. ಹಲವು ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಮತ್ತು ನೋಟ್‌ ಪುಸ್ತಕಗಳ ವಿತರಣೆಯಲ್ಲೂ ವಿಳಂಬವಾಗಿದೆ ಎಂದು ಸಮಿತಿ ಅಸಮಾಧಾನ ಪಡಿಸಿದೆ. ಜತೆಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭದಲ್ಲೇ ಪಠ್ಯಪುಸ್ತಕ, ನೋಟ್‌ಬುಕ್‌, ಸಮವಸ್ತ್ರ ಕೊಡಲು ಶಿಫಾರಸು ಮಾಡಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ವಹಿಸಿರುವ ವಸತಿ ಶಾಲೆ/ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಬಹುತೇಕ ಎಲ್ಲ ಕಾರ್ಯಗಳನ್ನು ಯೋಜನಾ ಸಮಾಲೋಚಕರು ನಿರ್ವಹಿಸುತ್ತಿರುವುದರಿಂದ ಸಂಸ್ಥೆಯ ಅಧಿಕಾರಿಗಳು ಯೋಜನಾ ಸಮಾಲೋಚಕ ಸಂಸ್ಥೆಗಳ ಮೇಲೆ ಪರಿಪೂರ್ಣ ಹಿಡಿತ ಸಾಧಿಸಲು ಸಾಧ್ಯವಾಗದಿರುವುದನ್ನು ಸಮಿತಿ ವರದಿಯಲ್ಲಿ ಹೇಳಿದೆ.
ಕ್ರೈಸ್‌ ಸಂಸ್ಥೆ ನಿರ್ವಹಿಸಬೇಕಿದ್ದ ಕಾರ್ಯಗಳನ್ನು ಯೋಜನಾ ಸಮಾಲೋಚಕ ಸಂಸ್ಥೆಗಳ ಮೂಲಕ ಕೈಗೊಳ್ಳುತ್ತಿರುವುದರಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಸ್ತಿತ್ವದ ಅಗತ್ಯ ಕಂಡು ಬರುವುದಿಲ್ಲ ಎಂದು ಸಮಿತಿ ಭಾವಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆದಾಯಮಿತಿ ರದ್ದು ಪಡಿಸಲು ಶಿಫಾರಸು
ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌, ವಿದ್ಯಾರ್ಥಿವೇತನ ಹಾಗೂ ಶುಲ್ಕದಲ್ಲಿ ರಿಯಾಯಿತಿ ನೀಡಲು ಕುಟುಂಬದ ವಾರ್ಷಿಕ ವರಮಾನ 2.5 ಲಕ್ಷ ರೂ. ಮಿತಿಯನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ವಿಧಾನಮಮಂಡಲ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ. ವಿಧಾನಸಭೆಯಲ್ಲಿ ಸಮಿತಿ ಅಧ್ಯಕ್ಷ ಕೆ.ಶಿವಮೂರ್ತಿ ಶುಕ್ರವಾರ ವರದಿ ಮಂಡಿಸಿದ್ದಾರೆ. ಆದಾಯ ಮಿತಿಯಿಂದ ಕೆಲವು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಿರುವುದಿಲ್ಲ. ಹೀಗಾಗಿ, ಎಲ್ಲ ವಿದ್ಯಾರ್ಥಿಗಳಿಗೂ ಯೋಜನೆ ತಲುಪುವಂತಾಗಬೇಕು ಎಂದು ವರದಿ ಹೇಳಿದೆ. ವಿದೇಶಿ ವಿವಿಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಆಯ್ಕೆಯಾಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಆದಾಯ ಮಿತಿ 6 ಲಕ್ಷ ರೂ.ನಿಂದ 12 ಲಕ್ಷ ರೂ.ಗೆ ನಿಗದಿಪಡಿಸಲು ಕ್ರಮ ಕೈಗೊಳ್ಳಲು ಸಮಿತಿ ಶಿಫಾರಸು ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next