Advertisement

Health Service ಕರಾವಳಿಯ 127 ಪಿಎಚ್‌ಸಿಗಳಲ್ಲಿ 24 ತಾಸು ಆರೋಗ್ಯ ಸೇವೆಯಿಲ್ಲ !

01:41 AM Aug 15, 2023 | Team Udayavani |

ಪುತ್ತೂರು: ಅನಾರೋಗ್ಯ ಎಂದು ಸಂಜೆಯ ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿದರೆ ಅಲ್ಲಿ ಚಿಕಿತ್ಸೆಯ ಬದಲು ಬಾಗಿಲಿಗೆ ಜಡಿದ ಬೀಗ ನಿಮ್ಮನ್ನು ಸ್ವಾಗತಿಸುತ್ತದೆ. ಇದು ಕರಾವಳಿಯ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ಗಳಲ್ಲಿ ಸಾಮಾನ್ಯ.

Advertisement

ಕರಾವಳಿಯಲ್ಲಿ ಉಡುಪಿ ಜಿಲ್ಲೆಯ ಶಂಕರ ನಾರಾಯಣ ಪಿಎಚ್‌ಸಿ ಬಿಟ್ಟರೆ ಉಳಿದ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನದ 24 ತಾಸು ಸೇವೆ ಇಲ್ಲ.

ಸಂಜೆ ತನಕ ಸೇವೆ
ಗ್ರಾಮೀಣ ಜನತೆಗೆ ದಿನದ 24 ತಾಸು ಹಳ್ಳಿಗಳಲ್ಲೇ ಉನ್ನತ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು ಅನ್ನುವ ಸರಕಾರಗಳ ಉದ್ದೇಶ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ದ. ಕ. ಜಿಲ್ಲೆಯಲ್ಲಿ 66 ಪಿಎಚ್‌ಸಿಗಳಿದ್ದು, ಒಂದರಲ್ಲೂ 24 ತಾಸು ಸೇವೆ ಇಲ್ಲ. ಉಡುಪಿ ಜಿಲ್ಲೆಯ 62ರಲ್ಲಿ ಒಂದು ಕೇಂದ್ರದಲ್ಲಿ ಮಾತ್ರ 24 ತಾಸು ಸೇವೆ ಲಭ್ಯ. ಹಾಗಾಗಿ ಎರಡೂ ಜಿಲ್ಲೆಗಳ ಒಟ್ಟು 127 ಪಿಎಚ್‌ಸಿಗಳು ಬೆಳಗ್ಗೆ 9ರಿಂದ ಸಂಜೆ 4.30 ತನಕ ಮಾತ್ರ ತೆರೆದಿರುತ್ತವೆ. ಅರ್ಧ ತಾಸು ವಿರಾಮಕ್ಕೆಂದು ಮೀಸಲಿಟ್ಟರೆ ದಿನಕ್ಕೆ 7 ಗಂಟೆಯ ಸೇವೆ ಮಾತ್ರ.

ಅನಾರೋಗ್ಯ ಕಾಡಿದರೆ
ತಾಲೂಕು ಆಸ್ಪತ್ರೆಯೇ ಗತಿ
ಸಂಜೆ 4.30ರ ಬಳಿಕ ಅನಾರೋಗ್ಯ ಕಾಡಿತೆಂದರೆ ಸಮುದಾಯ ಆರೋಗ್ಯ ಕೇಂದ್ರ ಅಥವಾ ತಾಲೂಕು ಆಸ್ಪತ್ರೆಗೇ ತೆರಳಬೇಕು. ಪಿಎಚ್‌ಸಿ ಇದ್ದರೂ ಪ್ರಯೋಜನವಿಲ್ಲ. ಆದರೆ ಹೆಚ್ಚಿನವರಿಗೆ ಬಹುದೂರದ ತಾಲೂಕು ಕೇಂದ್ರಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದು ಕಷ್ಟ. ಅದರಲ್ಲೂ ತುರ್ತು ಸಂದರ್ಭದಲ್ಲಿ ತೀರಾ ಕಷ್ಟ. ಜತೆಗೆ ತಾಲೂಕಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು ತಲಾ ಒಂದು ಇದ್ದು, ಇಡೀ ತಾಲೂಕಿನ ಅಗತ್ಯಗಳಿಗೆ ಸ್ಪಂದಿಸುವಷ್ಟು ಸುಸಜ್ಜಿತವೂ ಆಗದಿರುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಹೇಳಿಕಗಷ್ಟೇ ಸೀಮಿತ
ಪಿಎಚ್‌ಸಿಗಳಲ್ಲಿ ದಿನದ 24 ತಾಸು ಹಾಗೂ ವಾರದ ಏಳು ದಿನವೂ ಕಾರ್ಯ ನಿರ್ವಹಣೆ, ಮಹಿಳಾ ವೈದ್ಯರು, ಆಯುಷ್‌ ವೈದ್ಯರು, ಹಾಸಿಗೆಗಳ ಸಾಮರ್ಥ್ಯ ಹೆಚ್ಚಳ, ಪ್ರತ್ಯೇಕ ಸಣ್ಣ ಶಸ್ತ್ರಚಿಕಿತ್ಸಾ ಕೊಠಡಿ, ತುರ್ತು ಚಿಕಿತ್ಸಾ ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಾಥಮಿಕ ಹಂತದ ಪ್ರಯೋಗಾಲಯ ಇತ್ಯಾದಿ ಸೌಲಭ್ಯ ಒದಗಿಸುವ ಸರಕಾರದ ಪ್ರಸ್ತಾವನೆ ಇನ್ನೂ ಜಾರಿಯಾಗಿಲ್ಲ. ಕಳೆದ ಸರಕಾರದ ಅವಧಿಯಲ್ಲಿ ಈ ಬಗ್ಗೆ ಚರ್ಚೆಗಳಾಗಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಆದಷ್ಟು ಬೇಗ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ತಾಸು ಸೇವೆ ಸಿಗಬೇಕೆಂಬುದು ಜನರ ಆಗ್ರಹ.

Advertisement

ಪಿಎಚ್‌ಸಿಗಳಲ್ಲಿ ಇತ್ತು 24 ತಾಸು ಸೇವೆ!
ಏಳೆಂಟು ವರ್ಷಗಳ ಹಿಂದೆ ತಾಲೂಕಿನ ಕೆಲವು ಪಿಎಚ್‌ಸಿಗಳಲ್ಲಿ 24 ತಾಸು ಸೇವೆ ಇತ್ತು. ಹೆರಿಗೆ ಮತ್ತಿತರ ವಿಭಾಗಗಳಲ್ಲಿ ಒಳರೋಗಿ ಸೇವೆ ದೊರೆಯುತ್ತಿತ್ತು. ಕ್ರಮೇಣ ಸಿಬಂದಿ ಕೊರತೆ, ಮೂಲ ಸೌಕರ್ಯಗಳ ಕೊರತೆಯಿಂದ ಸ್ಥಗಿತಗೊಂಡಿದೆ. ಈಗಿನ ವ್ಯವಸ್ಥೆಯಲ್ಲಿ ಬೆಳಗ್ಗೆ ಒಳರೋಗಿಗಳಾಗಿ ದಾಖಲಾದರೂ ಸಂಜೆಗೆ ಬೇರೆ ಆಸ್ಪತ್ರೆಗೆ ಸ್ಥಳಾಂತರ ಆಗಬೇಕು. ಹಾಗೆಂದು ಬೇರೆ ಆಸ್ಪತ್ರೆಗೆ ತೆರಳಲು ಪಿಎಚ್‌ಸಿಗಳಲ್ಲಿ ಯಾವ ವಾಹನ ಸೌಕರ್ಯವೂ ಇಲ್ಲದ ಕಾರಣ ಖಾಸಗಿ ಆ್ಯಂಬುಲೆನ್ಸ್‌, ವಾಹನ ಅಥವಾ 108 ಅನ್ನೇ ಅವಲಂಬಿಸಬೇಕಿದೆ.

ಉಡುಪಿ ಜಿಲ್ಲೆಯ ಶಂಕರನಾರಾಯಣ ಪಿಎಚ್‌ಸಿಯಲ್ಲಿ 24 ತಾಸು ಸೇವೆ ಇದೆ. ಉಳಿದ ಕಡೆಗಳಲ್ಲಿ ಇಲ್ಲ. 24 ತಾಸು ಸೇವೆ ನೀಡಬೇಕಾದರೆ ಅಂತಹ ಪಿಎಚ್‌ಸಿಗಳಲ್ಲಿ ಶಿಫ್ಟ್‌ ಆಧಾರಿತ ಸಿಬಂದಿ, ವೈದ್ಯರನ್ನು ನಿಯೋಜಿಸಬೇಕಾದೀತು.
-ಡಾ| ನಾಗಭೂಷಣ ಉಡುಪ
ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ ಜಿಲ್ಲೆ

ದ.ಕ. ಜಿಲ್ಲೆಯ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 24 ತಾಸು ಸೇವೆ ವ್ಯವಸ್ಥೆ ಇಲ್ಲ. ಕೆಲವು ವರ್ಷಗಳ ಹಿಂದೆ ಇತ್ತಾದರೂ ಈಗ ಸ್ಥಗಿತವಾಗಿದೆ. ಸಮುದಾಯ, ತಾಲೂಕು ಆಸ್ಪತ್ರೆಗಳಲ್ಲಿ 24 ತಾಸು ಸೇವೆ ನೀಡಲಾಗುತ್ತಿದೆ.
-ಡಾ| ಕಿಶೋರ್‌ ಕುಮಾರ್‌
ಜಿಲ್ಲಾ ಆರೋಗ್ಯಾಧಿಕಾರಿ, ದ.ಕ. ಜಿಲ್ಲೆ

ಪಿಎಚ್‌ಸಿಗಳಲ್ಲಿ 24 ತಾಸು ಸೇವೆ ಸಿಗದಿರುವ ವಿಷಯ ಗಮನಕ್ಕೆ ಬಂದಿದೆ. ಇಲ್ಲಿ ಕಾರ್ಯನಿರ್ವಹಣೆಗೆ ಹೆಚ್ಚುವರಿ
ಸಿಬಂದಿ ಅಗತ್ಯ ಇದೆ. ಈಗಿರುವ ಸಿಬಂದಿ ವ್ಯವಸ್ಥೆಯಲ್ಲಿ ಅವಧಿ ವಿಸ್ತರಣೆ ಕಷ್ಟ. ಈ ಬಗ್ಗೆ ಪರಿಶೀಲಿಸಲಾಗುವುದು.
-ದಿನೇಶ್‌ ಗುಂಡೂರಾವ್‌
ಸಚಿವರು, ರಾಜ್ಯ ಆರೋಗ್ಯ ಮತ್ತು
ಕಲ್ಯಾಣ ಇಲಾಖೆ

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next