Advertisement

ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ ಖಾಸಗಿ ಬಸ್‌ ಸಂಚಾರ ; ಜೂನ್‌ 2ರ ತುಮಕೂರು ಸಭೆ ನಂತರ ತೀರ್ಮಾನ

12:45 PM May 24, 2020 | mahesh |

ದಾವಣಗೆರೆ: ತುಮಕೂರಲ್ಲಿ ಜೂನ್‌ 2ರಂದು ನಡೆಯಲಿರುವ ಎಲ್ಲಾ ಜಿಲ್ಲೆಗಳ ಖಾಸಗಿ ಬಸ್‌ ಮಾಲೀಕರ ಸಂಘದ ಪದಾಧಿಕಾರಿಗಳ ಸಭೆ ನಂತರ ಬಸ್‌ಗಳ ಸಂಚಾರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ದಾವಣಗೆರೆ ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಮಂಜುನಾಥ್‌ ಎಸ್‌. ಕಮ್ಮತ್ತಹಳ್ಳಿ ಹೇಳಿದ್ದಾರೆ.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಆವರು, ಲಾಕ್‌ಡೌನ್‌ನಿಂದಾಗಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಈಗಾಗಿ ಎಲ್ಲಾ ಮಾಲಿಕರು
ಸಂಕಷ್ಟಕ್ಕೊಳಗಾಗಿದ್ದಾರೆ. ಹಾಗಾಗಿ ಸರ್ಕಾರ ಡಿಸೆಂಬರ್‌ 2020ರ ವರೆಗೆ ಬಸ್‌ ಟ್ಯಾಕ್ಸ್‌ ಮನ್ನಾ ಮಾಡಬೇಕಲ್ಲದೆ, 2021 ಮಾರ್ಚ್‌ ವರೆಗೆ ಶೇ. 50ರಷ್ಟು ತೆರಿಗೆ ಪಾವತಿಸಲು ಅನುವು ಮಾಡಬೇಕು ಮತ್ತು ಈಗ ಬಸ್‌ಗಳ ಸಂಚಾರಕ್ಕೆ ವಿಧಿಸಿರುವ ನಿಯಮಗಳನ್ನು ಸಡಿಲಗೊಳಿಸಬೇಕೆಂದು ಮನವಿ ಮಾಡಿದರು.

ಹಲವು ಮಾಲೀಕರು ಬಸ್‌ ಸಂಚಾರದಿಂದ ಸಿಗುವ ಆದಾಯದಿಂದಲೇ ಮನೆ ಬಾಡಿಗೆ ಕಟ್ಟಿ, ಜೀವನ ಸಾಗಿಸುತ್ತಿದ್ದಾರೆ. ಈಗ ಲಾಕ್‌ಡೌನ್‌ನಿಂದಾಗಿ ತೀವ್ರ
ಸಂಕಷ್ಟಕ್ಕೊಳಗಾಗಿದ್ದಾರೆ. ಖಾಸಗಿ ಬಸ್‌ ಮಾಲೀಕರ ಸಂಕಷ್ಟದ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ಮನವರಿಕೆ ಮಾಡಿಕೊಡಲಾಗಿದೆ. ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಬಗ್ಗೆ ಸ್ಪಂದಿಸುವ ವಿಶ್ವಾಸವಿದೆ. ಸರ್ಕಾರದ ಪ್ರತಿಕ್ರಿಯೆ ನೋಡಿ, ತುಮಕೂರಲ್ಲಿ ನಡೆಯುಲಿರುವ ಖಾಸಗಿ ಬಸ್‌ ಮಾಲೀಕರ ಸಂಘದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು-ಕಾರ್ಯದರ್ಶಿಗಳ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಪ್ರಕಟಿಸಲಿದ್ದೇವೆ ಎಂದರು.

ಈಗ ಸರ್ಕಾರ ಬಸ್‌ ಸಂಚಾರಕ್ಕೆ ವಿಧಿಸಿರುವ ನಿಯಮದಿಂದ ನಮಗೆ ತೊಂದರೆ ಎದುರಾಗಲಿದೆ. ಖಾಸಗಿ ಬಸ್‌ಗಳು ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುವುದರಿಂದ ಸರ್ಕಾರದ ನಿಯಮ ಪಾಲಿಸುವುದು ಅಸಾಧ್ಯವಾಗಲಿದೆ. ಬಸ್‌ ನಲ್ಲಿ 24 ಮಂದಿ ಪ್ರಯಾಣಿಕರಿಗೆ ನಿಗದಿಪಡಿಸಿರುವುದಲ್ಲದೆ,
ವಯೋವೃದ್ಧರು, ಮಕ್ಕಳನ್ನು ಬಸ್‌ನಲ್ಲಿ ಕರೆ ತರಬಾರದು ಎಂಬ ನಿಯಮವನ್ನು ನಾವು ಗ್ರಾಮಾಂತರ ಪ್ರದೇಶದಲ್ಲಿ ಆ ನಿಯಮ ಪಾಲಿಸಲು ಮುಂದಾದಲ್ಲಿ ಬಸ್‌ ಸಂಚಾರವೇ ಬಂದ್‌ ಆಗಲಿದೆ. ಆದ್ದರಿಂದ ಸರ್ಕಾರ 24 ಸೀಟ್‌ಗಳಿಗೆ ಟ್ಯಾಕ್ಸ್‌ ನಿಗದಿಪಡಿಸಿ, ನಿಯಮವನ್ನು ಸಡಿಲಗೊಳಸಬೇಕೆಂದು ಕೋರಿದರು. ಬಸ್‌ಗಳ ಸಂಚಾರ ಸ್ಥಗಿತದಿಂದಾಗಿ ಮಾಲಿಕರ ಜತೆಗೆ ಕಂಡಕ್ಟರ್‌ ಹಾಗೂ ಚಾಲಕರು ಕೂಡ ಸಂಕಷ್ಟಕ್ಕೊಳಗಾಗಿದ್ದು, ಸರ್ಕಾರ ಬೇರೆ ಬೇರೆ ವಲಯದವರಿಗೆ ನೀಡಿದಂತೆ ನಮ್ಮ ಚಾಲಕ, ಕಂಡಕ್ಟರ್‌ಗಳಿಗೂ ತಲಾ 5,000 ರೂ. ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದರು.

ಸಂಘದ ಗೌರಾವಾಧ್ಯಕ್ಷ ಕೆ.ಎಸ್‌ ಮಲ್ಲೇಶಪ್ಪ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ಮಾರ್ಚ್‌ 24 ರಿಂದಲೂ ಜಿಲ್ಲಾ ಸಾರಿಗೆ ಪ್ರಾ ಧಿಕಾರದ ಆದೇಶದಂತೆ ಖಾಸಗಿ ಬಸ್‌ಗಳ ಸಂಪೂರ್ಣ ಸಂಚಾರ ನಿಲುಗಡೆ ಮಾಡಲಾಗಿದೆ. ನಾವು ಮೊದಲೇ ಟ್ಯಾಕ್ಸ್‌ ಪಾವತಿಸಿ, ಬಸ್‌ ಓಡಿಸಬೇಕಿದೆ. ಕೆಎಸ್‌ಆರ್‌ಟಿಸಿ
ಬಸ್‌ಗಳಿಗೆ ಸರ್ಕಾರವೇ ಟ್ಯಾಕ್ಸ್‌ ಕಟ್ಟುವುದರಿಂದ ಅವರಿಗೆ ಹೊರೆಯಾಗದು. ಕಳೆದ 2 ತಿಂಗಳಿನಿಂದಲೂ ಸಂಚಾರವಿಲ್ಲದೇ ಬಸ್‌ಗಳು ರಿಪೇರಿಗೆ ಬಂದಿವೆ. 1 ರಿಂದ ಒಂದೂವರೆ ಲಕ್ಷ ರೂ. ಗಳನ್ನು ರಿಪೇರಿಗೆ ವೆಚ್ಚ ಮಾಡಬೇಕಾಗಿದೆ. ಆದ್ದರಿಂದ ನಮಗೆ ತೆರಿಗೆ ಹೊರೆ ಕಡಿಮೆ ಸಮಾಡಬೇಕು ಎಂದು ಕೋರಿದರು. ಸಂಘದ ಕಾರ್ಯದರ್ಶಿ ಸತೀಶ್‌, ಖಜಾಂಚಿ ಮಹೇಶ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next