ಹುಬ್ಬಳ್ಳಿ: ಅಖೀಲ ಕರ್ನಾಟಕ ವೀರಶೈವ ಆದಿಬಣಜಿಗ ಸಮಾಜ ಕಲ್ಯಾಣ ಸಮಿತಿಯಿಂದ ಯಾವುದೇ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿಲ್ಲ. ಸಮಾಜದ ಮುಖಂಡ ಆರ್.ವಿ. ಶಂಕರಗೌಡರು ಸುಳ್ಳು ಪ್ರಚಾರ ಮಾಡುವ ಮೂಲಕ ಸಮಾಜದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಸಂಘದ ರಾಜ್ಯಾಧ್ಯಕ್ಷ ಸದಾಶಿವ ಕಾರಡಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಖೀಲ ಕರ್ನಾಟಕ ವೀರಶೈವ ಆದಿಬಣಜಿಗ ಸಮಾಜ ಕಲ್ಯಾಣ ಸಮಿತಿ 1998ಧಿ-99ನೇ ಸಾಲಿನಲ್ಲಿಯೇ ನೋಂದಣಿಯಾದ ಸಮಿತಿ ಆಗಿದೆ. ಈ ಹಿಂದೆ ಸಮಾಜದ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ದಿವಟರ ಅವರ ನಿಧನಾನಂತರ ಹಂಗಾಮಿ ಅಧ್ಯಕ್ಷರನ್ನಾಗಿ ಆರ್.ವಿ. ಶಂಕರಗೌಡರ ಅವರನ್ನು ಆಯ್ಕೆ ಮಾಡಲಾಗಿತ್ತು.
ಆದರೆ, ಸಮಾಜದವರ ವಿರೋಧ ವ್ಯಕ್ತವಾಗಿದ್ದರಿಂದ ಅವರನ್ನು ವಜಾಗೊಳಿಸಿ, ಎಲ್ಲರ ಸಮ್ಮುಖದಲ್ಲಿ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದನ್ನು ಒಪ್ಪದ ಆರ್.ವಿ. ಶಂಕರಗೌಡರ ಅವರು ತಾವೇ ಅಧ್ಯಕ್ಷರೆಂಬಂತೆ ಸಮಾಜ ಬಾಂಧವರಲ್ಲಿ ತಪ್ಪು ಸುದ್ದಿ ಹಬ್ಬಿಸುತ್ತಾ, ಸಮಾವೇಶ ಮಾಡುತ್ತೇವೆ ಎಂದು ಹಣ ಸಂಗ್ರಹಣೆ ಮಾಡುತ್ತಿದ್ದಾರೆ.
ಇದರಿಂದ ಸಮಾಜ ಬಾಂಧವರಲ್ಲಿ ತಪ್ಪು ಸಂದೇಶ ರವಾನೆಯಾಗುತ್ತಿದ್ದು ಈ ಕುರಿತು ಹಲವು ಬಾರಿ ಶಂಕರಗೌಡರಿಗೆ ತಿಳಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಶಂಕರಗೌಡರು ಏ. 23ರಂದು ಕೂಡಲಸಂಗಮದಲ್ಲಿ ಅಖೀಲ ಕರ್ನಾಟಕ ವೀರಶೈವ ಆದಿಬಣಜಿಗ ಸಮಾಜ ಕಲ್ಯಾಣ ಇಲಾಖೆಯಿಂದ ಸಮಾವೇಶ ಮಾಡಲಾಗುತ್ತಿದೆ ಎಂದು ಹೇಳಿಕೊಂಡು ಹಣ ಸಂಗ್ರಹಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆರ್.ವಿ. ಶಂಕರಗೌಡರು ಸ್ವ ಪ್ರತಿಷ್ಠೆಗಾಗಿ ಸಮಾಜದ ದಿಕ್ಕುತಪ್ಪಿಸುವ ಕಾರ್ಯ ಕೈ ಬಿಡಬೇಕು ಎಂದು ಸಮಿತಿಯ ಎಲ್ಲ ಪದಾಧಿಕಾರಿಗಳು ಒತ್ತಾಯ ಮಾಡಿದ್ದಾಗಿ ಅವರು ತಿಳಿಸಿದರು. ಸಮಿತಿ ಪದಾಧಿಕಾರಿಗಳಾದ ಗಂಗಪ್ಪ ಉಳ್ಳಾಗಡ್ಡಿ, ಗುರುಸಿದ್ದಪ್ಪ ಹವಾಲ್ದಾರ, ಕಲ್ಲಪ್ಪ ಚಿಂಚಲಿ, ರಾಜು ಗುಡಿ, ಬಸವರಾಜ ಪೀರಣ್ಣವರ, ರುದ್ರಪ್ಪ ಉಳ್ಳಾಗಡ್ಡಿ, ಮಂಜು ರೆಡ್ಡಿಗೌಡ್ರ ಇನ್ನಿತರರು ಇದ್ದರು.