Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯಪುರದ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ, ಜೆಡಿಎಸ್ ನಾಯಕರು ನನಗೆ ಅವಕಾಶ ನೀಡಿದ್ದು, ಮತದಾರರ ಕೃಪೆಯಿಂದ ಶಾಸಕನಾಗಿದ್ದೇನೆ. ಶಾಸಕತ್ವದ ಅವಧಿ ಮುಗಿದ ಮೇಲೆ, ಚುನವಣೆ ಸಂದರ್ಭದಲ್ಲಿ ರಾಜಕೀಯ ಭವಿಷ್ಯದ ಬಗ್ಗೆ ಯೋಚಿಸುತ್ತೇನೆ. ಮುಂದಿನದು ಹಣೆಬರಹದಲ್ಲಿ ಇದ್ದಂತೆ ಆಗಲಿದೆ ಎಂದರು.
Related Articles
Advertisement
ಬಿಜೆಪಿ ಸರ್ಕಾರ ಅನುದಾನ ಹಿಂಪಡೆದ ಕುರಿತು ಅವರದೇ ಪಕ್ಷದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರೇ ಸಾರ್ವಜನಿಕವಾಗಿ ಹೇಳಿದ್ದರು. ಆನಂತರ ಸದರಿ ಅನುದಾನ ಬಂದರೂ ನನ್ನ ಕ್ಷೇತ್ರದ ವಾರ್ಡ್‍ಗಳ ಅಭಿವೃದ್ಧಿಗೆ ಸೂಕ್ತ ಅನುದಾನ ನೀಡುತ್ತಿಲ್ಲ. ನಗರದ ರೈಲ್ವೇ ನಿಲ್ದಾಣದಿಂದ ಐತಿಹಾಸಿಕ ಗೋಲಗುಂಬಜ ಸ್ಮಾರಕದ ಮುಂದಿನ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ 1.40 ಕೋಟಿ ರೂ. ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆದರೂ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ದೂರಿದರು.
ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯದಂತೆ ಬಿಜೆಪಿ ಕುತಂತ್ರ ಮಾಡುತ್ತಿದೆ. ಪರಿಣಾಮ ಆಡಳಿತ ಮಂಡಳಿ ಅವಧಿ ಮುಗಿದು ಮೂರು ವರ್ಷ ಕಳೆದರೂ ಇನ್ನೂ ಚುನಾವಣೆಗೆ ಮುಂದಾಗಿಲ್ಲ. ಜನರ ಸಂಕಷ್ಟ ಹೇಳಿಕೊಂಡರೂ ಕಣ್ಣು-ಕಿವಿ ಇಲ್ಲದ ಮಹಾನಗರ ಪಾಲಿಕೆ ಕನಿಷ್ಠ ಸ್ಪಂದನೆಯನ್ನೂ ಮಾಡುತ್ತಿಲ್ಲ ಎಂದು ಹರಿಹಾಯ್ದರು.
ಇನ್ನು ಕ್ಷೇತ್ರದ ಸಮಸ್ಯೆ ಬಗ್ಗೆ ಸದನದಲ್ಲಿ ಚರ್ಚೆ ನಡೆಸೋಣ ಎಂದರೆ ಆಡಳಿತ ಪಕ್ಷ ಕಾಟಾಚಾರಕ್ಕೆ ನಡೆಸಿದ ಅಧಿವೇಶನದಲ್ಲಿ ಜನರ ಭಾವನೆಗೆ ಸ್ಪಂದನೆ ಸಿಗುವ ಚರ್ಚೆಗೆ ಅವಕಾಶ ಸಿಗಲೇ ಇಲ್ಲ. ಡಬಲ್ ಎಂಜಿನ್ ಸರಕಾರದಲ್ಲಿ ಅಭಿವೃದ್ಧಿಗೆ ನಿರೀಕ್ಷೆ ಮೀರಿ ವೇಗ ಸಿಗಲಿದೆ ಎಂದಿದ್ದ ಬಿಜೆಪಿಯ ಆಡಳಿತದ ವೇಗ ಇದೇ ಏನು ಎಂದು ವ್ಯಂಗ್ಯವಾಡಿದರು.