ಗೋಕುಲಾಷ್ಟಮಿ, ಶ್ರೀಕೃಷ್ಣಾಷ್ಟಮಿ, ಶ್ರೀಕೃಷ್ಣಜನ್ಮಾಷ್ಟಮಿ, ಜಯಂತಿ ಎಂದರೆ ತಟ್ಟನೆ ನೆನಪಾಗುವುದೇ ಉಡುಪಿ. ಆಚಾರ್ಯ ಮಧ್ವರು ಕಡೆಗೋಲು ಕೃಷ್ಣನನ್ನು ಪ್ರತಿಷ್ಠಾಪಿಸಿದಂದಿನಿಂದ ಪುಟ್ಟ ಬಾಲಕೃಷ್ಣನ ಜನ್ಮಾಷ್ಟಮಿ 13ನೆಯ ಶತಮಾನದಿಂದಲೂ ಅನಾಚೂನವಾಗಿ ವೈಭವದಿಂದ ನಡೆಯುತ್ತಿರುವುದು ಸರ್ವವಿಧಿತ. ಜನ್ಮಾಷ್ಟಮಿ ಕೇವಲ ಶ್ರೀಕೃಷ್ಣ ಪೂಜೆ, ಅರ್ಘ್ಯಕ್ಕೆ ಸೀಮಿತವಾಗಿರದೆ ಅನೇಕ ಧಾರ್ಮಿಕ, ಸಾಂಸ್ಕೃತಿಕ ವಿಧಿವಿಧಾನಗಳು, ಉತ್ಸವಗಳು, ಶ್ರೀಕೃಷ್ಣ ಭಕ್ತರ ಭಾಗೇದಾರಿಕೆಯಿಂದ ವರ್ಷದಿಂದ ವರ್ಷಕ್ಕೆ ರಂಗೇರತೊಡಗಿದವು. ಅದರಲ್ಲೊಂದು ಸಡಗರವೇ ಹುಲಿವೇಷದ ಅಬ್ಬರ.
ಸತ್ಯಸಂದ ಪಿಲಿ!
ಪಲಿಮಾರು ಮಠದ ಯತಿಪರಂಪರೆಯಲ್ಲಿ ಇಪ್ಪತ್ತಮೂರನೆಯವರು ಶ್ರೀರಘು ಪ್ರವೀರ ತೀರ್ಥರು. ಇವರ ಪವಾಡಗಳು ಅನೇಕ. ಅದರಲ್ಲೊಂದು “ಹುಲಿಕೊಂದ ಸ್ವಾಮಿಗಳು” ಎಂದೇ ಕರೆಯಲ್ಪಡುತ್ತಿದ್ದುದರ ಹಿಂದೆ ಒಂದು ಕಥೆಯಿದೆ. ಪರ್ಯಾಯದ ಸಂದರ್ಭ. ಮಠದ ಪಂಚಾಮೃತ ಅಭಿಷೇಕಕ್ಕೆ ಹಾಲು ನೀಡುತ್ತಿದ್ದ ನರ್ಮದೆ ಎಂಬ ಹಸುವನ್ನು ಹುಲಿ ಕೊಂದಿತ್ತು. ಸ್ವಾಮಿಗಳು ಪ್ರೀತಿಯ ದನ ಸಾವನ್ನಪ್ಪಿದ್ದು ಅವರ ವ್ಯಥೆಗೆ ಕಾರಣವಾಯಿತು. ಪೂಜೆಗೂ ಏಳದೆ ಸ್ವಾಮಿಗಳು ಧ್ಯಾನಸ್ಥರಾಗಿ ಕುಳಿತರು. ಕೊನೆಗೂ ಹುಲಿ ಶ್ರೀಕೃಷ್ಣಮಠದ ಮುಖ್ಯದ್ವಾರದ ಬಳಿ ಬಂದು ಪ್ರಾಣತ್ಯಾಗ ಮಾಡಿತು.
ಅಂದಿನಿಂದ ಅವರ ಹೆಸರಿಗೆ “ಪಿಲಿಕೆರ್ತಿ ಸ್ವಾಮುಳು”(ಹುಲಿಕೊಂದ ಸ್ವಾಮಿಗಳು) ಎಂಬ ವಿಶೇಷ ನಾಮ ಸೇರಿತು. ಪ್ರಾಯಃ ಅಂದಿನಿಂದ ಶ್ರೀಕೃಷ್ಣಾಷ್ಟಮಿಯಂದು ಸತ್ಯಸಂದ ಹುಲಿಯ ಮತ್ತು ಶ್ರೀಕೃಷ್ಣನ ಪ್ರೀತಿಗಾಗಿ ಹುಲಿ ವೇಷ ಹಾಕುವ ಪದ್ಧತಿ 18ನೇ ಶತಮಾನದಿಂದ ಆರಂಭವಾಗಿರಬೇಕೆಂದು ಒಂದು ಅಭಿಪ್ರಾಯ.
ಇವರು ವೃಂಧವನಸ್ಥರಾದುರು ಉಡುಪಿಯಲ್ಲಿ, ಕ್ರಿ.ಶ.1795ರಲ್ಲಿ, ಇದಕ್ಕೆ ಪೂರಕ ಎಂಬಂತೆ ಇನ್ನೊಂದು ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ್ದಾರೆ ಮುಂಬಯಿಯ ಬಿ.ಆರ್.ರಾಯರು.
ಅದು 1906ರ ಪಲಿಮಾರು ಪರ್ಯಾಯ ಕಾಲ. ಶ್ರೀರಘುರತ್ನ ತೀರ್ಥರ ಬಳಿಕ ಬಂದ ಶ್ರೀರಘುಪ್ರಿಯತೀರ್ಥರ ಪರ್ಯಾಯವಿದ್ದಿರಬೇಕು. ಉಡುಪಿಯಲ್ಲಿ ಶ್ರೀಕೃಷ್ಣಾಷ್ಟಮಿಯ ಸಡಗರ. ಮರುದಿನದ ವಿಟ್ಲಪಿಂಡಿಯ ಉತ್ಸವ ನಿಗದಿತ ಮಧ್ಯಾಹ್ನ ಮೂರುವರೆ ಗಂಟೆ ಎಂದಿದ್ದರೂ, ಸಮಯ ನಾಲ್ಕೂವರೆಯಾದರೂ ಉತ್ಸವ ಆರಂಭದ ಯಾವ ಲಕ್ಷಣಗಳೂ ಕಾಣಲಿಲ್ಲ. ನೆರದ ಜನಸ್ತೋಮಕ್ಕೆ ಆತಂಕ, ಎಲ್ಲೆಲ್ಲೂ ಗುಸುಗುಸು ಚರ್ಚೆ. ಅಷ್ಟರಲ್ಲಿ ಹುಲಿಯಾರ್ಭಟದ ಸದ್ದು, ಜತೆಯಾಗಿ ತಾಸೆ ಬಡಿತದ ಶಬ್ದದೊಂದಿಗೆ ಕೊನೆಗೂ ಉತ್ಸವ ಆರಂಭವಾಯಿತು.
ಕೃಷ್ಣ ಮೂರುತಿಯನ್ನು ಹೊತ್ತ ರಥದೆದುರು ಕುಣಿಯುತ್ತಾ ಹಾರುತ್ತಾ ಸಾಗುವ ಎತ್ತರದ ಹುಲಿ! ಅಂದು, ಮರಕಾಲು ಹುಲಿಯ ನೃತ್ಯ ಸೇವೆ ಕೃಷ್ಣನಿಗೆ! ನೆರದ ಜನರು ಹೌಹಾರಿ, ಅಚ್ಚರಿ, ಗಾಬರಿಯಿಂದ ಅದನ್ನೇ ನೋಡುತ್ತಿದ್ದರು. ಅದುವರೆಗೆ ಎಲ್ಲೂ ನೋಡಿರದ ಮರಕಾಲಿನ ಹುಲಿಯ ಕಸರತ್ತು! ಅಂದಿನಿಂದ ವಿಟ್ಲಪಿಂಡಿಗೆ ಮೊಟ್ಟ ಮೊದಲ ಆಕರ್ಷಣೆಯಾಗಿ ಮರಕಾಲು ಪಿಲಿ,(ಮರಕಾಲು ಹುಲಿ) ಇತಿಹಾಸದ ಪುಟ ಸೇರಿತು.
ಮರಕಾಲು ಪಿಲಿಯ ಚೊಚ್ಚಲ ವೇಷಧಾರಿ ಉಡುಪಿ ಪಣಿಯಾಡಿಯ ಶ್ರೀನಾರಾಯಣ ವೈಲಾಯರು. ಅವರಿಗೆ ಪ್ರೇರಣೆ ಪರ್ಯಾಯ ಪೀಠಾಧೀಶರಾಗಿದ್ದ ಶ್ರೀರಘುಪ್ರಿಯತೀರ್ಥರು. ಉಡುಪಿ, ಪೆರ್ಡೂರು, ಕೊಯ್ತಾರಯ ಶ್ರೀಗೋಪಾಲಕೃಷ್ಣ ಮಠದ ಬಳಿ ಮೂಡುಜಡ್ಡು ನಡುಮನೆಯಲ್ಲಿ ವೈಲಾಯ ಕುಟುಂಬಿಕರ ವಾಸವಿತ್ತು. ಪೆರ್ಡೂರಿನ ದೇವಸ್ಥಾನ ಮತ್ತು ವೈಲಾಯರ ಕುಟುಂಬಕ್ಕೂ ನಂಟಿತ್ತು. ರಾಮಪ್ಪ, ಶಂಕರನಾರಾಯಣ ಮತ್ತು ವೆಂಕಟ್ರಾಯ ವೈಲಾಯ ಸಹೋದರರು.
ವೆಂಕಟ್ರಾಯ ವೈಲಾಯರ ಮಗನೇ ನಾರಾಯಣ ವೈಲಾಯ. 1882ರಲ್ಲಿ ಜನನ. ಕ್ರಮೇಣ ವಾಸ್ತವ್ಯ ಉಡುಪಿಗೆ ಸ್ಥಳಾಂತರ. ತಂದೆಯ ಯೋಗ. ಬಳಿಕ 12 ವರ್ಷ ಕಾಶಿ ವಾರಣಾಸಿಯಲ್ಲಿ ವಾಸ. ಅಲ್ಲಿ ಕುಸ್ತಿವಿದ್ಯೆ ಮತ್ತು ಮರಕಾಲಿನ ವಿದ್ಯೆಯನ್ನೂ ಕಲಿತರು. 1905ರಲ್ಲಿ ಮರಳಿ ಉಡುಪಿಯ ಪಣಿಯಾಡಿಗೆ ಬಂದು ನೆಲೆಸಿದರು. ಆ ಸಮಯದಲ್ಲಿ ಸ್ವತಃ ಕುಸ್ತಿಪಟುವಾಗಿದ್ದ ಪಲಿಮಾರು ಮಠದ ಶ್ರೀ ರಘು ತೀರ್ಥರಿಗೆ ವೈಲಾಯರ ಸಂಪರ್ಕವಾಯಿತು. ನೀನು ಕಲಿತ ಈ ಅಪೂರ್ವ ವಿದ್ಯೆಯನ್ನು ಶ್ರೀಕೃಷ್ಣನಿಗೆ ಸಮರ್ಪಿಸು. ಅಷ್ಟಮಿಯಂದು ಮರಕಾಲಿನ ಹುಲಿ ವೇಷ ಮಾಡು ಎಂದು ಮಂತ್ರಾಕ್ಷತೆಯಿತ್ತು ಹರಸಿದರಂತೆ.
ಆವೇಶಕ್ಕೊಳಗಾದ ವೈಲಾಯರು! ಶ್ರೀಕೃಷ್ಣಗರ್ಭಗುಡಿ ಮುಂಭಾಗದ ಚಂದ್ರಶಾಲೆಯಲ್ಲೊಂದು ಪವಾಡ ನಡೆಯಿತು. ಹುಲಿವೇಷಧಾರಿ ವೈಲಾಯರು ದೇವರಿಗೆ ನಮಸ್ಕರಿಸಿ ಏಳುವಾಗ ಆವೇಶಭರಿತರಾದರು. ಆಗ ಮಣ್ಣಿನ ನೆಲದಲ್ಲಿ ಹುಲಿಯುಗುರಿನಂತಿರುವ ದೊಡ್ಡ ಹೆಜ್ಜೆಗುರುತ ಮೂಡಿತಂತೆ. ಹುಲಿವೇಷಧಾರಿ ವೈಲಾಯರು ಅಲ್ಲಿ ನೆರೆದಿದ್ದ ಜನರ ಮೇಲೆರಗಿದ ಸುದ್ದಿ ಸ್ವಾಮಿಗಳ ಕಿವಿಗೆ ಬಿತ್ತು. ಅಲ್ಲಿಗೆ ಧಾವಿಸಿದ ಸ್ವಾಮಿಗಳು ದೇವರ ತೀರ್ಥ ಪ್ರೋಕ್ಷಣೆಗೈದು ಪ್ರಸಾದವನ್ನಿತ್ತು ಎದೆ ಮತ್ತು ಹೊಟ್ಟೆ ಭಾಗದಲ್ಲಿ ಧರಿಸಿದ್ದ ಕೃಷ್ಣಮುಖ್ಯಪ್ರಾಣರ ಚಿತ್ರ ಮತ್ತು ಹುಲಿಚಿತ್ರವನ್ನು ಅಳಿಸಿಹಾಕುವಂತೆ ಸೂಚನೆಯಿತ್ತು ಬರಿಯ ಹುಲಿಪಟ್ಟೆಯ ಚಿತ್ರವನ್ನಷ್ಟೇ ಉಳಿಸಿಕೊಳ್ಳಲು ಆದೇಶಿಸಿದರಂತೆ.
ಅಂದಿನ ಉತ್ಸವ ತಡವಾಗಿ ಆರಂಭವಾದರೂ ವೈಲಾಯರ ಮರಕಾಲಿನ ಹುಲಿಯಿಂದಾಗಿ ಕಳೆಗಟ್ಟಿತು. ಜಟ್ಟಿ ಕುಸ್ತಿಪಟು ವೈಲಾಯರದ್ದು ಆಜಾನುಬಾಹು ಶರೀರ. ಮುಡಿ ಅಕ್ಕಿಯನ್ನು ಬಾಯಲ್ಲಿ ಕಚ್ಚುತ್ತಲೆ, ಒಂದೊಂದು ಮುಡಿಯನ್ನು ಕೈಯಲ್ಲಿ ಹಿಡಿದು ಮರಕಾಲು ಹುಲಿ ಕುಣಿತವನ್ನು ಲೀಲಾಜಾಲವಾಗಿ ಮಾಡುತ್ತಿದ್ದರಂತೆ. ನೀರು ತುಂಬಿದ ಕೊಡ, ಹುಲಿಮರಿವೇಷಧಾರಿಗಳನ್ನು ಹಲ್ಲಿನಿಂದ ಕಚ್ಚಿಹಿಡಿದೆತ್ತುತ್ತಿದ್ದರಂತೆ.
ಬಳಿಕ ಪ್ರತಿ ಪರ್ಯಾಯದ ಅಷ್ಟಮಿ ಉತ್ಸವಗಳಂದು ವೈಲಾಯರ ಮರಕಾಲು ಹುಲಿ ಕುಣಿತದ ಸೇವೆ ನಡೆಯುತ್ತಿತ್ತು. ಅಂದು ತಮಗೆ ದೊರೆತ ಎಲ್ಲ ಸಂಭಾವನೆ ಹಣವನ್ನು ಇತರ ವೇಷಧಾರಿಗಳ ಕೈಗಿತ್ತು ಬರಿಗೈಯಲ್ಲಿ ಮನೆಗೆ ತೆರಳುತ್ತಿದ್ದರು ವೈಲಾಯರು. “ಪಿಲಿ ವೈಲಾಯರು” ಎಂದೇ ಅವರನ್ನು ಜನ ಕರೆಯುತ್ತಿದ್ದರು. ಅವರಿಂದ ಮರಕಾಲು ವಿದ್ಯೆಯನ್ನು ಕಲಿತವರಲ್ಲಿ ಚಂದು, ಚೂವನವರೂ ಮತ್ತು ಕುಸ್ತಿಯಲ್ಲಿ ಉಡುಪಿಯ ಪೀರ್ ಸಾಹೇಬರೂ, ಹಿರೇಮಾಣಿ (ಹೆಜಮಾಡಿ ಗೋಪಾಲಕೃಷ್ಣ) ಪ್ರಸಿದ್ಧರು>
(ಮಾಹಿತಿ ಮತ್ತು ಸಹಕಾರು: ಶ್ರೀ ಬಿ.ರಮಾನಂದ ರಾಯರು, ಮುಂಬೈ, ಶ್ರೀಸುಬ್ರಹ್ಮಣ್ಯ ವೈಲಾಯ ಮತ್ತು ಶ್ರೀ ಸುಧಾಕರ ಆಚಾರ್ಯ ಉಡುಪಿ)
*ಜಲಂಚಾರು ರಘುಪತಿ ತಂತ್ರಿ, ಉಡುಪಿ