ಸಿರುಗುಪ್ಪ: ಹೂವಿನಲ್ಲಿನ ವಾಸನೆಯು ನಮ್ಮ ಮೂಗಿನ ಮೂಲಕ ಅನುಭವಕ್ಕೆ ಬರುತ್ತದೆ. ಆದರೆ ನಮಗೆ ಕಾಣುವುದಿಲ್ಲ. ಅದರಂತೆ ಬ್ರಹ್ಮಾಂಡವನ್ನು ಸೃಷ್ಟಿಸಿದವನನ್ನು ಬ್ರಹ್ಮಾಂಡದ ಪ್ರತಿಯೊಂದು ಸೃಷ್ಟಿಯ ಕಣದಲ್ಲಿಯೂ ಇದ್ದು, ನಡೆಸುತ್ತಿರುವವನು ಕೂಡ ಭಗವಂತನೆ ಆಗಿದ್ದಾನೆ ಎಂದು ಮಂತ್ರಾಲಯದ ವಿದ್ಯಾಪೀಠದ ಅಧ್ಯಾಪಕ ಶ್ರೀಉಡುಪಿ ಕ್ರಿಷ್ಣಚಾರ್ ಅಭಿಪ್ರಾಯಪಟ್ಟರು.
ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದ ಸಮಾರೊಪದಲ್ಲಿ ಪ್ರವಚನ ನೀಡಿದ ಅವರು, ಕಲಿಯುಗದಲ್ಲಿ ದೇವರನ್ನು ಕಂಡವರಿಲ್ಲ. ದೇವರಿದ್ದಾನೆ ಎನ್ನುವುದನ್ನು ನಂಬುವುದಾದರೂ ಹೇಗೆ ಎನ್ನುವ ಪ್ರಶ್ನೆಯನ್ನು ಹಾಕಿಕೊಂಡು ಗುರುಗಳು, ದಾಸಶ್ರೇಷ್ಠರು, ಯತಿವರ್ಯರು, ಪಂಡಿತರು, ಪಾಮರರು ಹೊರಟಿದ್ದು, ಈ ಪ್ರಶ್ನೆಯು ಎಲ್ಲರನ್ನೂ ಕಾಡುತ್ತಿದೆ ಎಂದರು.
ಆದರೆ ನಮಗೆ ಕಾಣದೇ ಅನುಭವಕ್ಕೆ ಬರುವ ಮೂಲಕ ಅವನ ಇರುವಿಕೆ ಸತ್ಯವೆಂದು ಗೋಚರವಾಗುತ್ತಿದೆ. ನಮ್ಮ ದೇಹದ ಮೇಲೆ ನಮ್ಮ ಮನಸ್ಸಿನ ಮೇಲೆ ನಮಗೆ ನಿಯಂತ್ರಣವಿಲ್ಲ. ಕಣ್ಣುಗಳಲ್ಲಿ ಸೂರ್ಯಚಂದ್ರರು, ಕಿವಿಗಳಲ್ಲಿ ವಿದ್ಯಾ ದೇವತೆಗಳು, ನಾಲಿಗೆಯಲ್ಲಿ ವರುಣಾ ದೇವರು, ಉಸಿರಾಟದಲ್ಲಿ ವಾಯುದೇವರು ಸೇರಿದಂತೆ ಮಾನವನ ಎಲ್ಲ ಅಂಗಳಲ್ಲಿಯು ದೇವತೆಗಳು ನೆಲೆಸಿದ್ದಾರೆ ಎಂದು ತಿಳಿಸಿದರು.
ಭಗವಂತನು ಅತಿ ದೊಡ್ಡವನು, ಅತಿಸೂಕ್ಷ್ಮನು, ಅತ್ಯಂತ ತೇಜೋಮಯನು ಆಗಿರುವುದರಿಂದ ನಮಗೆ ಭಗವಂತನನ್ನು ನೋಡಲು ತೇಜೋಮಯವಾದ ಕಣ್ಣುಗಳ ಅವಶ್ಯಕತೆ ಇದ್ದು, ಇವುಗಳನ್ನು ಅತ್ಯಂತ ಕಠಿಣ ಸಾಧನೆಯಿಂದ ಮಾತ್ರ ಪಡೆಯಬಹುದಾಗಿದೆ. ಆಗ ಮಾತ್ರ ಭಗವಂತನನ್ನು ಕಾಣಲು ಸಾಧ್ಯವಾಗುತ್ತದೆ. ಎಲ್ಲರಲ್ಲಿಯೂ ಅಂತರ್ಗತನಾಗಿ, ಸರ್ವವ್ಯಾಪಿಯಾಗಿ ಭಗವಂತನು ನೆಲೆಸಿದ್ದು, ಎಲ್ಲರಲ್ಲಿಯೂ ಭಗವಂತನ ಸ್ವರೂಪ ಎಂದು ಕಾಣಬೇಕು ಎಂದು ತಿಳಿಸಿದರು. ಅರ್ಯವೈಶ್ಯ ಮಂಡಳಿ ತಾಲೂಕು ಅಧ್ಯಕ್ಷ ಎಚ್. ಜೆ.ಹನುಮಂತಯ್ಯಶೆಟ್ಟಿ ಮತ್ತು ಪದಾಧಿಕಾರಿಗಳು, ಭಕ್ತರು ಇದ್ದರು.
ಚಂಡಿಕಾ ಹೋಮ
ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಬುಧವಾರ ರಾಜಪುರೋಹಿತ ಶ್ರೀನಿವಾಸಚಾರ್ಯ ನೇತೃತ್ವದ ಪುರೋಹಿತರಿಂದ ಹಾಗೂ ಆರ್ಯವೈಶ್ಯ ಮಂಡಳಿ ವತಿಯಿಂದ ಚಂಡಿಕಾ ಹೋಮ ಹಾಗೂ ಪೂರ್ಣಾಹುತಿ ಕಾರ್ಯಕ್ರಮ ನಡೆಯಿತು. ಹೋಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಶ್ರೀವಾಸವಿ ಮಾತೆಗೆ ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಆರ್ಯವೈಶ್ಯ ಮಂಡಳಿ ತಾಲೂಕು ಅಧ್ಯಕ್ಷ
ಚ್.ಜೆ.ಹನುಮಂತಯ್ಯಶೆಟ್ಟಿ ಮತ್ತು ಪದಾಧಿಕಾರಿಗಳು, ಭಕ್ತರು ಭಾಗವಹಿಸಿದ್ದರು.