Advertisement

ಎಸಿಪಿ ರಿಯಾಲ್ಟಿ ದಂಧೆ ವಿಡಿಯೋ ಇದೆ

12:23 PM Sep 13, 2018 | Team Udayavani |

ಬೆಂಗಳೂರು: “ನಗರದ ಎಸಿಪಿಯೊಬ್ಬರು ರಿಯಲ್‌ ಎಸ್ಟೇಟ್‌ ದಂಧೆಯಲ್ಲಿ ಸಕ್ರಿಯವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಆ ಅಧಿಕಾರಿಯ ಆಡಿಯೋ ಮತ್ತು ವಿಡಿಯೋ ಕೂಡ ನನ್ನ ಬಳಿ ಇದೆ’. ಹೀಗೆ ಹೇಳಿರುವುದು ಸ್ವತಃ ಗೃಹಸಚಿವರಾಗಿರುವ ಡಾ.ಜಿ.ಪರಮೇಶ್ವರ್‌!

Advertisement

ಪೊಲೀಸ್‌ ಠಾಣೆಗಳು ರಿಯಲ್‌ ಎಸ್ಟೇಟ್‌ ಅಡ್ಡೆಗಳಾಗುತ್ತಿವೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟ ಬೆನ್ನಲ್ಲೇ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸಹಾಯಕ ಪೊಲೀಸ್‌ ಆಯುಕ್ತರು ಮತ್ತು ಮೇಲ್ಪಟ್ಟ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ರಿಯಾಲ್ಟಿ “ದಂಧೆ ವಿಡಿಯೋ’ದಲ್ಲಿರುವ ಅಧಿಕಾರಿ ಹೆಸರು ನಾನು ಹೇಳುವುದಿಲ್ಲ. ವೈಯಕ್ತಿಕವಾಗಿ ನಗರ ಪೊಲೀಸ್‌ ಆಯುಕ್ತರಿಗೆ ಮಾಹಿತಿ ನೀಡಿ ಕ್ರಮಕ್ಕೆ ಸೂಚಿಸುತ್ತೇನೆ,’ ಎಂದು ಡಿಸಿಎಂ ಎಚ್ಚರಿಕೆ
ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಜನ ಯಾರ ಬಳಿ ಹೋಗಬೇಕು?: ಪೊಲೀಸ್‌ ಅಧಿಕಾರಿಗಳೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ, ಸಾರ್ವಜನಿಕರು ನ್ಯಾಯ ಕೇಳಲು ಯಾರ ಬಳಿ ಹೋಗಬೇಕು ಎಂದು ಪ್ರಶ್ನಿಸಿದ ಸಚಿವರು, ರಿಯಲ್‌ ಎಸ್ಟೇಟ್‌ ವಂಚನೆ ಕುರಿತು ದೂರುಗಳು ಬಂದರೆ ಸ್ವೀಕರಿಸಬೇಕೆ ಹೊರತು ಮಧ್ಯವರ್ತಿಗಳಾಗಿ ಕೆಲಸ ಮಾಡಬಾರದು. ಒಂದು ವೇಳೆ ದಂಧೆಕೋರರ ಜತೆ ಕೈಜೋಡಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಲಾಗಿದೆ ಎಂದರು.

ವಿಶೇಷ ಕಾರ್ಯಾಚರಣೆ: ನಗರದಲ್ಲಿ ಬೀಟ್‌ ಸಿಬ್ಬಂದಿ ಸರಿಯಾಗಿ ಗಸ್ತು ತಿರುಗುತ್ತಿಲ್ಲ ಎಂಬ ಮಾಹಿತಿ ಸಂಗ್ರಹಿಸಿದ್ದೇನೆ. ಖುದ್ದು ನಾನೇ ಕೆಲವು ಕಡೆ ಖಾಸಗಿ ವಾಹನದಲ್ಲಿ ಸಂಚರಿಸುವಾಗ ಬೀಟ್‌ ಸಿಬ್ಬಂದಿ ಕಾಣುವುದೇ ಇಲ್ಲ. ಹೀಗಾಗಿ ನಗರದ ಎಲ್ಲ ಕಡೆ ಕಡ್ಡಾಯವಾಗಿ ಬೀಟ್‌ ಸಿಬ್ಬಂದಿ ಗಸ್ತು ತಿರುಗಲೇ ಬೇಕು. ಇನ್ಮುಂದೆ ಖಾಸಗಿಯಾಗಿ ವಾಹನದಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತೇನೆ. ಒಂದು ವೇಳೆ ಗಸ್ತು ಸಿಬ್ಬಂದಿ ಕಂಡು ಬಾರದಿದ್ದರೆ, ಈ ವಿಭಾಗದ
ಎಸಿಪಿ ವಿರುದ್ಧ ಕ್ರಮಕೈಗೊಳ್ಳುತ್ತೇನೆ ಎಂದು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

8 ಸಾವಿರ ರೌಡಿಶೀಟರ್‌ಗಳು: ನಗರದಲ್ಲಿ 8 ಸಾವಿರ ರೌಡಿಶೀಟರ್‌ಗಳಿರುವ ಮಾಹಿತಿಯಿದೆ. ಇವರಿಂದಲೇ ಕೊಲೆಗಳು ಹೆಚ್ಚಾಗುತ್ತಿವೆ ಎಂದು ಸಚಿವರು ಹೇಳಿದಾಗ ಪ್ರತಿಕ್ರಿಯಿಸಿದ ಎಸಿಪಿ ಒಬ್ಬರು ಶೇ.1ರಷ್ಟು ನಡೆಯಬಹುದು. ಹೊರತು ಪಡಿಸಿದರೆ ಆಕಸ್ಮಿಕವಾಗಿ ನಡೆಯುತ್ತವೆ ಎಂದು ಉತ್ತರಿಸಿದರು. ಇದಕ್ಕೆ ಅಸಮಧಾನಗೊಂಡ ಸಚಿವರು, ಹಾಗಾದರೆ ಇನ್ನುಳಿದ ಶೇ. 99ರಷ್ಟು ರೌಡಿಶೀಟರ್‌ಗಳ ಮೇಲೆ ಯಾಕೆ ರೌಡಿಪಟ್ಟಿ ತೆರೆಯಲಾಗಿದೆ. ಮೊದಲು ರೌಡಿಪಟ್ಟಿ ಪರಿಷ್ಕರಣೆ ನಡೆಸುವಂತೆ ಸೂಚಿಸಿದ್ದಾರೆ.

Advertisement

ಮಾದಕ ವಸ್ತು ಕುರಿತು ಶಾಲೆ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸಿರುವ ಬಗ್ಗೆ ಎಸಿಪಿಗಳಿಂದ ಸಚಿವರು ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಲ ಎಸಿಪಿಗಳು ಕಳೆದ 6 ತಿಂಗಳಲ್ಲಿ 3-4 ಕಾಲೇಜುಗಳಿಗೆ ಮಾತ್ರ ಭೇಟಿ ನೀಡಿದ್ದೇವೆ ಎಂದರು. ಪ್ರತಿ ಎಸಿಪಿ ವ್ಯಾಪ್ತಿಯಲ್ಲಿ ಕೇವಲ 10-15 ಶಾಲಾ, ಕಾಲೇಜುಗಳು ಮಾತ್ರ ಬರುತ್ತವೆ. 

ಅವುಗಳಿಗೂ ಭೇಟಿ ನೀಡದಿದ್ದರೆ ಬೇರೆ ಏನು ಕೆಲಸ ಮಾಡುತ್ತಿರಾ. ಸರ್ಕಾರ ಸೂಚಿಸಿದ ಕೆಲಸ ಮಾಡಲು ಸಾಧ್ಯವಿಲ್ಲ ಎಂದಾದರೆ ಹೇಗೆ ಎಂದು ಪರಮೇಶ್ವರ್‌ ಗರಂ ಆದರು. ಇನ್ನು ಎರಡು ತಿಂಗಳಲ್ಲಿ ಮಾದಕ ವಸ್ತು ಹಾಗೂ ಪೊಲೀಸ್‌ ಇಲಾಖೆ ಕಾರ್ಯವೈಖರಿ ಕುರಿತು ಆಯ ವಲಯದ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಆದೇಶಿಸಿದರು. 

ಪ್ರತಿಭಟನೆ ಸ್ಥಳಗಳ ಬದಲಾವಣೆ?
 ಸ್ವಾತಂತ್ರ್ಯ ಉದ್ಯಾನವನ ಹಾಗೂ ಪುರಭವನದ ಮುಂಭಾಗ ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತದೆ. ಹೀಗಾಗಿ ಈ ಸ್ಥಳಗಳನ್ನು ಬದಲಾಯಿಸುವ ಕುರಿತು ಡಿಸಿಎಂ ಚಿಂತನೆ ನಡೆಸುತ್ತಿದ್ದು, ಪರ್ಯಾಯ ಸ್ಥಳ ಸೂಚಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸ್ಥಳಗಳಲ್ಲಿ ಒಮ್ಮೆಲೇ ಸಾವಿರಾರು ಮಂದಿ ಸೇರುವುದರಿಂದ ಸಂಚಾರ ದಟ್ಟಣೆ ನಿರ್ವಹಣೆ ಕಷ್ಟ. ಹೀಗಾಗಿ ಬೇರೆ ಯಾವ ಜಾಗ ಸೂಕ್ತ ಎಂಬುದನ್ನು ನನ್ನ ಗಮನಕ್ಕೆ ತಂದರೆ, ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆ.

ಆಗ ಸ್ವಾತಂತ್ರ್ಯ ಉದ್ಯಾನವನ ಹಾಗೂ ಪುರಭವನದಲ್ಲಿ ಕಡಿಮೆ ಸಂಖ್ಯೆಯ ಪ್ರತಿಭಟನಾಕಾರರಿಗೆ ಮಾತ್ರ ಅವಕಾಶ
ನೀಡಬಹುದು ಎಂದು ಪೊಲೀಸರಿಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಅಹಿತಕರ ಘಟನೆಗೆ ಡಿಸಿಪಿ, ಎಸಿಪಿಗಳೇ ಹೊಣೆ
ಬೆಂಗಳೂರು: ಗೌರಿ, ಗಣೇಶ ಹಾಗೂ ಮೊಹರಂ ಹಬ್ಬಗಳಲ್ಲಿ ಅಹಿತಕರ ಘಟನೆಗಳು ಸಂಭವಿಸಿದರೆ ಆಯಾ ವಲಯ ಡಿಸಿಪಿ ಹಾಗೂ ಎಸಿಪಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಗೃಹ ಸಚಿವಜಿ.ಪರಮೇಶ್ವರ್‌ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ನಡೆದ ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ವ್ಯಾಪ್ತಿಯ ಸಹಾಯಕ ಪೊಲೀಸ್‌ ಆಯುಕ್ತರು ಮತ್ತು ಮೇಲ್ಪಟ್ಟ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬಕ್ಕೆ ಈಗಾಗಲೇ ಪೊಲೀಸ್‌ ಇಲಾಖೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ. ಗಣಪತಿ ಪ್ರತಿಷ್ಠಾಪನೆ
ಯಿಂದ ವಿಸರ್ಜನೆವರೆಗೂ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು.

ಗಣಪತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಹೆಚ್ಚು ಪೊಲೀಸ್‌ ಸಿಬ್ಬಂದಿ ನಿಯೋಜಿಸಬೇಕು. ಜತೆಗೆ ಈ ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದೇನೆ. ಆದಾಗ್ಯೂ ಕೋಮು ಸಂಘರ್ಷಗಳು ನಡೆದರೆ ಆಯಾ ವಲಯ
ಡಿಸಿಪಿ ಹಾಗೂ ಎಸಿಪಿಗಳನ್ನೇ ಹೊಣೆ ಮಾಡಲಾಗುವುದು ಎಂದರು. 

ಅಪರಾಧ ಸಂಖ್ಯೆ ಕಡಿಮೆ: ಕಳೆದ ವರ್ಷಕ್ಕೆ ಹೊಲಿಸಿದರೆ ನಗರದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ ಆಗಿದೆ. 14 ಮಂದಿ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ಮೂರು ಮಂದಿ ಮಾದಕ ವಸ್ತು ಮಾರಾಟಗಾರರು, ಇಬ್ಬರು ಸರಗಳ್ಳರಿದ್ದಾರೆ. ಆದರೂ ಡಿಸಿಪಿ, ಎಸಿಪಿಗಳು ರಾತ್ರಿ ಹೊತ್ತು ಗಸ್ತು ತಿರುಗಬೇಕು. ತಿಂಗಳಿಗೊಮ್ಮೆ ತಮ್ಮ ವಲಯಗಳ ಠಾಣೆಗಳಿಗೆ ಭೇಟಿ ಕೊಟ್ಟು, ಸಿಬ್ಬಂದಿ ಸಮಸ್ಯೆ ಆಲಿಸಿ, ಪರಿಹರಿಸಬೇಕು ಎಂದು ಹೇಳಿದರು.

ವಿದೇಶಿಗರ ಗಡಿಪಾರು: ನಗರದಲ್ಲಿ ಮಾದಕ ವಸ್ತು ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಈ ಬಗ್ಗೆ ಕ್ರಮಕ್ಕೆ ಸೂಚಿಸಲಾಗಿದೆ. ಕಳೆದ ವರ್ಷ 354 ಪ್ರಕರಣಗಳು ದಾಖಲಾಗಿದ್ದು, 591 ಕೆ.ಜಿ. ಮಾದಕ ವಸ್ತು ವಶಕ್ಕೆ
ಪಡೆಯಲಾಗಿತ್ತು. ಈ ವರ್ಷದ ಆಗಸ್ಟ್‌ ಅಂತ್ಯದವರೆಗೆ 169 ಪ್ರಕರಣ ದಾಖಲಾಗಿದ್ದು, 270 ಮಂದಿ ಭಾರತೀಯರು, 28 ವಿದೇಶಿಗರನ್ನು ಬಂಧಿಸಲಾಗಿದೆ. ಈ ಮಧ್ಯೆ ಅಕ್ರಮ ವಾಸ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವಿದೇಶಿಗರನ್ನು ಪತ್ತೆ ಹಚ್ಚಲು ಆದೇಶಿಸಿದ್ದು, ಸದ್ಯ 107 ಮಂದಿಯನ್ನು ಗಡಿಪಾರು ಮಾಡಲು ಕೇಂದ್ರ ಸರ್ಕಾರದ ಜತೆ
ಚರ್ಚಿಸಲಾಗಿದೆ ಎಂದು ಸಚಿವರು ಹೇಳಿದರು. 

ಪರೇಡ್‌ ಕಡ್ಡಾಯ ಪೊಲೀಸ್‌ ಸಿಬ್ಬಂದಿ ಸಮಸ್ಯೆ ಆಲಿಸಲು ಪ್ರತಿ ಶುಕ್ರವಾರ ಪರೇಡ್‌ ಮಾಡಲಾಗುತ್ತದೆ. ಕೆಲವೊಮ್ಮೆ
ಕಾರ್ಯದ ಒತ್ತಡದಲ್ಲಿ ಸಾಧ್ಯವಾಗುವುದಿಲ್ಲ. ಆದರೆ, ಇನ್ನುಮುಂದೆ ಎರಡು ವಾರಕ್ಕೊಮ್ಮೆ ಕಡ್ಡಾಯವಾಗಿ ಸಭೆ ನಡೆಸಿ ಸಿಬ್ಬಂದಿ ಸಮಸ್ಯೆ ಆಲಿಸಬೇಕು. ಸಾಧ್ಯವಾದರೆ, ಸ್ಥಳದಲ್ಲೇ ಪರಿಹಾರ ಸೂಚಿಸಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಗೃಹ ಸಚಿವ ಪರಮೇಶ್ವರ್‌ ಹೇಳಿದರು. ಹಾಗೇ ಸಿಬ್ಬಂದಿಗೆ ಮನೆ ವಿತರಿಸುವ ಸಂಬಂಧ ಮೂರು ಹಂತದಲ್ಲಿ 11 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ 2,472 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ.

ಸದ್ಯ 1,166 ಸಿಬ್ಬಂದಿಗೆ ಮನೆಗಳ ಹಸ್ತಾಂತರ ಮಾಡಿದ್ದು, 2 ಸಾವಿರ ಮನೆಗಳನ್ನು ಬಿಡಿಎಯಿಂದ ಖರೀದಿಸಿ ವಿತರಿಸಲಾಗುವುದೆಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next