Advertisement

‘ಚುಟುಕು ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ’

12:57 AM Jun 09, 2019 | sudhir |

ಕಡಬ : ಚುಟುಕು ಎನ್ನುವುದು ಕೇವಲವಾಗಿ ಕಾಣುವ ವಿಚಾರವಲ್ಲ. ಚುಟುಕಿಗೆ ಮಹತ್ವದ ಸ್ಥಾನವಿದೆ. ಸಮಾಜದ ಅಂಕು ಡೊಂಕನ್ನು ಸರಿಪಡಿಸುವ ಮಾಧ್ಯಮವಾಗಿ ಚುಟುಕು ಸಾಹಿತ್ಯ ಬೆಳೆದುಬಂದಿದೆ ಎಂದು ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ನುಡಿದರು.

Advertisement

ಅವರು ಶನಿವಾರ ಕಡಬದ ಸರಕಾರಿ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಜರಗಿದ ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಕಡಬ ಘಟಕದ ಪದಗ್ರಹಣ ಮತ್ತು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ವೇದ, ಉಪನಿಷತ್ತು, ರಾಮಾಯಣ, ಮಹಾಭಾರತದಂತಹ ಪುರಾಣಗಳಲ್ಲಿಯೂ ಚುಟುಕು ಸಾಹಿತ್ಯ ಮೇಳೈಸಿದೆ. ಸ್ವಾತಂತ್ರ್ಯ ಹೋರಾಟ ಸಹಿತ ದೇಶ- ವಿದೇಶದ ಹಲವು ಕ್ರಾಂತಿ, ಆಂದೋಲನಗಳಲ್ಲಿಯೂ ಚುಟುಕು ಘೋಷಣೆಗಳು ಚಳವಳಿಗೆ ಶಕ್ತಿ ತುಂಬಿವೆ. ಚುಟುಕು ಎನ್ನುವುದು ಮನುಷ್ಯ ಜೀವನಕ್ಕೆ ಅತೀ ಹತ್ತಿರವಾದುದು. ಕೆಲವೇ ಶಬ್ದಗಳಲ್ಲಿ ವಿಶಾಲಾರ್ಥವನ್ನು ನೀಡುವ ಸಾಹಿತ್ಯ ಶೈಲಿಯೇ ಚುಟುಕು. ಅದು ಸಮಾಜದ ಅಂಕು ಡೊಂಕನ್ನು ತಿದ್ದುವ ಮಾತಿನ ಕುಣಿಕೆಯಂತಿದೆ ಎಂದು ವಿಶ್ಲೇಷಿಸಿದರು.

ಮಂಗಳೂರು ವಳಚ್ಚಿಲ್ನ ಶ್ರೀನಿವಾಸ ಎಂಜಿನಿಯರಿಂಗ್‌ ಕಾಲೇಜಿನ ಸಂದರ್ಶಕ ಪ್ರಾಧ್ಯಾಪಕ, ಚುಟುಕು ಸಾಹಿತ್ಯ ಪರಿಷತ್ತಿನ ಕಡಬ ಘಟಕದ ಗೌರವಾಧ್ಯಕ್ಷ ಜಯಾನಂದ ಪೆರಾಜೆ ಆಶಯ ಭಾಷಣ ಮಾಡಿದರು. ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತಾರಾನಾಥ ಬೋಳಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಿನುಗುವ ನಕ್ಷತ್ರ

ಮುಖ್ಯ ಅತಿಥಿಯಾಗಿದ್ದ ಕೇಂದ್ರೀಯ ಚುಟುಕು ಸಾಹಿತ್ಯ ಪರಿಷತ್ತಿನ ಸಂಚಾಲಕ ಡಾ| ಎಂ.ಜಿ.ಆರ್‌. ಅರಸ್‌ ಮಾತನಾಡಿ, ಚುಟುಕುಗಳು ಸಾಹಿತ್ಯ ಕ್ಷೇತ್ರದ ಮಿನುಗುವ ನಕ್ಷತ್ರಗಳು. ಚುಟುಕು ಎನ್ನುವುದು ಸಾಹಿತ್ಯ ಬದುಕಿಗೆ ಲಾಲಿತ್ಯ ನೀಡುವ ಮಾಧ್ಯಮವಾಗಿದೆ. ಚುಟುಕು ಬರೆಯಲು ಯಾವುದೇ ಪದವಿಯ ಅಗತ್ಯವೂ ಇಲ್ಲ, ಸಾಹಿತಿ ಎನ್ನುವ ಹಣೆಪಟ್ಟಿಯೂ ಬೇಡ. ನಮ್ಮ ಮನಸ್ಸಿನಲ್ಲಿ ಮೂಡುವ ಆಲೋಚನೆಗಳನ್ನು ಪ್ರಾಸಬದ್ಧವಾಗಿ ಮತ್ತು ಸರಳವಾಗಿ ಹೊರಸೂಸುವ ಸಾಹಿತ್ಯವೇ ಚುಟುಕು ಸಾಹಿತ್ಯ ಎಂದು ಅವರು ಅಭಿಪ್ರಾಯಪಟ್ಟರು.
Advertisement

Udayavani is now on Telegram. Click here to join our channel and stay updated with the latest news.

Next