Advertisement

BJP ಪರ ಅಲೆ ಇದ್ದು, ನನ್ನ ಪುನರಾಯ್ಕೆ ನಿಶ್ಚಿತ: ಅಣ್ಣಾಸಾಹೇಬ ಜೊಲ್ಲೆ

09:27 PM Apr 14, 2024 | Vishnudas Patil |

ವಿಜಯಪುರ : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಅಲೆ ಇದ್ದು, ಚಿಕ್ಕೋಡಿ ಕ್ಷೇತ್ರದಲ್ಲೂ ಒಳ್ಳೆಯ ವಾತಾವರಣವಿದ್ದು ನನ್ನ ಪುನರಾಯ್ಕೆಯೂ ಖಚಿತ ಎಂದು ಹಾಲಿ ಸಂಸದ, ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಭಾನುವಾರ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಒಂದು ದಶದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ದೇಶದ ಜನ ಗಮನಿಸಿದ್ದಾರೆ‌. ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲೂ ದೃತಿಗೆಡದೇ ಮಾಡಿರುವ ಕೆಲಸಗಳು ಮತ್ತೊಮ್ಮೆ ಮೋದಿ ನೇತೃತ್ವದಲ್ಲೇ ಬಿಜೆಪಿ ಸರ್ಕಾರ ರಚನೆಗೆ ಸಹಕಾರಿ ಆಗಲಿವೆ ಎಂದು ವಿವರಿಸಿದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಲಿರುವ ತಮ್ಮ ಮಗಳನ್ನು ಗೆಲ್ಲಿಸಲು ಓಡಾಡುತ್ತಿದ್ದಾರೆ. ತಮ್ಮವರನ್ನು ಗೆಲ್ಲಿಸಲು ಪರಿಶ್ರಮ ಪಡುವುದು, ಓಡಾಡುವುದು
ಸ್ವಾಭಾವಿಕ ಹಾಗೂ ಸಹಜ ಎಂದರು.

ಕ್ಷೇತ್ರದಲ್ಲಿ ಉತ್ತಮ ಪಾಟೀಲ ಹಾಗೂ ಸತೀಶ ಜಾರಕಿಹೊಳಿ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಅವರು, ಈ ಇಬ್ಬರ ಮಧ್ಯದ ಹೊಂದಾಣಿಕೆಯಿಂದ ನನ್ನ ಗೆಲುವಿಗೆ ಯಾವುದೇ ಸಮಸ್ಯೆ ಆಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜಕೀಯದಲ್ಲಿ ಇಬ್ಬರು ಆಕಡೆ ಹೋಗೋದು ಈಕಡೆ ಬರೋದು ಸಾಮಾನ್ಯವಾಗಿದೆ. ಉತ್ತಮ ಪಾಟೀಲ ಈಗಾಗಲೇ ನಮ್ಮ ವಿರೋಧಿ ಪಾಳಯದಲ್ಲೇ ಇದ್ದಾರೆ. ಉತ್ತಮ ಅವರಿಂದ ನನಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ. ಅವರು ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿರುವುದು ನನಗಂತೂ ಯಾವುದೇ ಪರಿಣಾಮ ಬೀರದು ಎಂದರು.

Advertisement

ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ನಮಗೆ ಹೆಚ್ಚಿನ ಮತಗಳ ಮುನ್ನಡೆ ಸಿಗಲಿದೆ. ವಿರೋಧಿಗಳಿಗಿಂತ ನಾವು ಹೆಚ್ಚು ರಣತಂತ್ರ ರೂಪಿಸುತ್ತಿದ್ದೇವೆ. ಹೇಗೆ, ಏನು ಎಂದೆಲ್ಲ ಈಗಲೇ ಹೇಳುವುದಿಲ್ಲ‌ ಎಂದರು.

ಕಾಂಗ್ರೆಸ್ ಪಕ್ಷದವರಿಗೆ ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಗಳೇ ಸಿಗದ ಕಾರಣ ಸಚಿವರು ತಮ್ಮ ಮಕ್ಕಳು, ಕುಟುಂಬದವರನ್ನು ಕಣಕ್ಕಿಳಿಸಿದ್ದಾರೆ. ಸಚಿವರು ಒತ್ತಾಯದಿಂದ ತಮ್ಮ ಮಕ್ಕಳನ್ನು ಚುನಾವಣ ಕಣಕ್ಕೆ ಇಳಿಸಿದ್ದಾರೆ ಎನಿಸುತ್ತಿದೆ ಎಂದು ಕುಟುಕಿದರು.

ಇಷ್ಟಕ್ಕೂ ಕಾಂಗ್ರೆಸ್ ಪಕ್ಷದವರು ಸಚಿವರ ಮಕ್ಕಳನ್ನೇ ಏಕೆ ಕಣಕ್ಕೆ ಇಳಿಸಿದ್ದಾರೆ ಎಂಬುದನ್ನು ಮುಖ್ಯಮಂತ್ರಿ ಸಿದ್ಧರಾಮ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಕೇಳಿ ಎಂದು ಕೆಣಕಿದರು.

ಚಿಕ್ಕೋಡಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಹಾಗೂ ಸಂಸದನಾಗಿ ನಾನು ಮಾಡಿರುವ ಕೆಲಸಗಳು ನನ್ನನ್ನು ಪುನರಾಯ್ಕೆ ಮಾಡುವಲ್ಲಿ ನೆರವಿಗೆ ಬರಲಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next