Advertisement

ಲಾಠಿ ಹಿಡಿಯುವ ಖಾಕಿಧಾರಿಗಳ ಒಳಗೂ ಒಬ್ಬ ಕವಿ ಇರುವ!

11:35 AM Nov 29, 2017 | |

ಬೆಂಗಳೂರು: ಅದೊಂದು ಅಪರೂಪದ ಕವಿಗೋಷ್ಠಿ. ಕಾನೂನು ಸುವ್ಯವಸ್ಥೆ ಪಾಲನೆ ಮಾಡುವ ಖಾಕಿಧಾರಿಗಳೇ ಗೋಷ್ಠಿಯ ಆಯೋಜಕರು ಹಾಗೂ ಕವನ ವಾಚಕರು. ಪ್ರತಿ ನಿತ್ಯ ತಾವು ನೋಡುವ ರಸ್ತೆ ಅಪಘಾತ, ಸಾವು-ನೋವು, ನಗರದ ಕತ್ತಲೆ ಸಾಮ್ರಾಜ್ಯ, ಹೀಗೆ ವೃತ್ತಿ ಜೀವನದ ಸಮಷ್ಠಿಗಳೇ ಅಲ್ಲಿ ರೂಪಕಗಳಾಗಿ ಹೊರಹೊಮ್ಮಿದವು.

Advertisement

ಕೆಲ ಕಿರಿಯ ಪೊಲೀಸ್‌ ಸಿಬ್ಬಂದಿಗೆ ಇಲಾಖೆಯೊಳಗಿನ ವೈಫ‌ಲ್ಯಗಳೇ ಕವನದ ಸಾಲುಗಳಾಗಿದ್ದವು. ಆ ಮೊನಚಾದ ಸಾಲುಗಳಿಗೂ ಉನ್ನತ ಅಧಿಕಾರಿಗಳು ಚಪ್ಪಾಳೆ ಮೂಲಕ ಬೆನ್ನುತಟ್ಟಿದರು. ಹಿರಿಯ ಅಧಿಕಾರಿಗಳಿಂದ ಹಿಡಿದು ಕಾನ್‌ಸ್ಟೆಬಲ್‌ವರೆಗಿನ 30ಕ್ಕೂ ಹೆಚ್ಚು ಪೊಲೀಸರು ಒಂದೇ ವೇದಿಕೆಯಲ್ಲಿ ಒಂದಕ್ಕಿಂತ ಮತ್ತೂಂದು ಉತ್ತಮವಾಗಿರುವ ಕವನಗಳ ವಾಚಿಸಿದರು.  

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಪೊಲೀಸ್‌ ಸಾಹಿತ್ಯ ವೇದಿಕೆ ವತಿಯಿಂದ ಸಂಯುಕ್ತವಾಗಿ “ಪೊಲೀಸ್‌ ಸಾಹಿತ್ಯ ಸಂಭ್ರಮ’ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಡೆದ ಗೋಷ್ಠಿಯ ಆರಂಭದಲ್ಲಿ ಜಂಟಿ ಪೊಲೀಸ್‌ ಆಯುಕ್ತ ಡಾ.ಡಿ.ಸಿ.ರಾಜಪ್ಪ, “ಭಯೋತ್ಪಾದಕ ಎಲ್ಲಿ ಹುಟ್ಟಿದೆ ನೀನು? ನಿನ್ನಾರು ಹೆತ್ತವರು? ಮಾತಾಡು ಮೌನ ಮುರಿದು,

ಈ ಜಗದ ಶಾಂತಿಯು ನಿನಗಿಂತ ಹಿರಿದು…’ ಎಂದು ಕೇಳಿದರೆ, ಸಂಚಾರ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಜಿ.ಎ. ಜಗದೀಶ್‌, “ಗುಲಬಿಯ ಕುರಿತು ನಾ ಹೇಗೆ ಬರೆಯಲಿ ಕವನ? ರಸ್ತೆಯಲ್ಲಿ ಚೆಲ್ಲಿದೆ ರಕ್ತ, ನೀಲಿ ಶಾಯಿ, ಕೆಂಪಾಗಿ ಹೆಪ್ಪುಗಟ್ಟಿದೆ, ರಸ್ತೆ ಅಪಘಾತಗಳ ಆಕ್ರಂದನ ಮುಗಿಲು ಮುಟ್ಟಿದೆ…’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. 

ಮತ್ತೂಬ್ಬ ಪೊಲೀಸ್‌ ಅಧಿಕಾರಿ, “ಕಣ್ಣಿಗೆ ಎಣ್ಣೆ ಹಾಕಿ, ನೂರು ಪುಸ್ತಕ ಮಥಿಸಿ, ರಾತ್ರಿ ಕಾವಲು ಕಾದರೇನು? ಒಬ್ಬ ಗಾಂಧಿ ನನ್ನ ಜೇಬಲ್ಲಿಲ್ಲದಕ್ಕ ಯಾವ ಹುದ್ದೆ ದೊರಕಿತು?’ ಎಂದು ಆಕ್ರೋಶ ಹೊರಹಾಕಿದರೆ, ನಗರ ಸಶಸ್ತ್ರ ದಳ ದಕ್ಷಿಣದ ಎಪಿಸಿ ಎಂ. ಅಮರೇಶ್‌, “ನಾನೆಮದರೆ ಅಧಿಕಾರ, ಅಹಂಕಾರ, ದೌರ್ಜನ್ಯ, ದಬ್ಟಾಳಿಕೆ, ಸ್ವಾರ್ಥ, ಮೋಸ…’ ಎಂದು ತಮ್ಮ ಸುತ್ತಲಿನ ವ್ಯವಸ್ಥೆ ಬಣ್ಣಿಸಿದರೆ, ಮಡಿಕೇರಿಯ ಹೆಡ್‌ ಕಾನ್‌ಸ್ಟೆಬಲ್‌ ತೀರ್ಥಾನಂದ, “ಥೂ ತೆಗೆದಿಡಿ ನಿಮ್ಮ ಮುಖವಾಡವ ಜನಸೇವಕರೆನ್ನುವ ಹೊರಬಣ್ಣವ…’ ಎಂದು ಆಕ್ರೋಶ ಹೊರ ಹಾಕಿದರು.

Advertisement

ಮೈಸೂರಿನ ಪೊಲೀಸ್‌ ತರಬೇತಿ ಶಾಲೆಯ ಡಾ.ಧರಣೀದೇವಿ ಮಾಲಗತ್ತಿ, ಹಬ್ಬದ ಸಡಗರ ಊರು ತುಂಬಾ ಸಂಭ್ರಮದ ಎಳೆಯೂ ಇಲ್ಲಿಲ್ಲ, ಗುನ್ನೆಯ ಬೆನ್ನು ಹತ್ತಿ ಇರುಳೆಲ್ಲ ಜಾರಿತಲ್ಲ…’ ಎಂದು ದೀಪಾವಳಿ ಆಚರಿಸಲಾದ ಖಾಕಿಧಾರಿಗಳ ಅಸಹಾಯಕತೆ ವಿವರಿಸಿದರು. 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಮಾತನಾಡಿ, ಸಾಹಿತ್ಯ ಲೋಕ ಎಲ್ಲರನ್ನೂ ಅಪ್ಪಿಕೊಳ್ಳುವ ಗುಣ ಹೊಂದಿದೆ. ಹಾಗಾಗಿಯೇ ಸಾಹಿತ್ಯಿಕ ಮನಸ್ಸು ಯಾವುದೇ ಕ್ಷೇತ್ರದಲ್ಲಿದ್ದರೂ ಹೆಚ್ಚು ಸೃಜನಶೀಲತೆ ಕಂಡುಕೊಂಡು, ಸಮಾಜದ ಜತೆಗೆ ಸೌಹಾರ್ದವಾಗಿ ಬೆಳೆಯುತ್ತಾ ಹೋಗುತ್ತದೆ. ಪೊಲೀಸ್‌ ಇಲಾಖೆಯೂ ಇದರಿಂದ ಹೊರತಲ್ಲ ಎಂದರು. 

ಕವಿಗಳಾದ ಡಾ.ಎಸ್‌.ಎಸ್‌. ವೆಂಕಟೇಶಮೂರ್ತಿ, ಚಂದ್ರಶೇಖರ ತಾಳ್ಯ, ಪೊಲೀಸ್‌ ಮಹಾನಿರ್ದೇಶಕ (ಆಂತರಿಕ ಭದ್ರತೆ) ಪ್ರವೀಣ್‌ ಸೂದ್‌, ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ “ಸಮವಸ್ತ್ರದೊಳಗೊಂದು ಸುತ್ತು’ ಕವನ ಸಂಕಲನ ಸಂಪುಟ-4 ಲೋಕಾರ್ಪಣೆಗೊಂಡಿತು. 

ಇದಕ್ಕೂ ಮುನ್ನ ಮಾತನಾಡಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಪೊಲೀಸರು ಒತ್ತಡದಲ್ಲಿದ್ದರೂ ಕನ್ನಡಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಡಾ.ಅಜಯಕುಮಾರ್‌ ಸಿಂಹ, ಪಿ.ಎಸ್‌. ರಾಮಾನುಜಂ ಇಂತಹ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಆದರೆ, ಮತ್ತೂಂದೆಡೆ ಕನ್ನಡಿಗರೇ ತಮ್ಮ ಮಕ್ಕಳಿಗೆ ಕನ್ನಡ ಕಲಿಸುವುದಿಲ್ಲ. ಹೀಗಾದರೆ, ಕನ್ನಡ ಸಾಹಿತ್ಯವನ್ನು ಮುಂದಿನ ಪೀಳಿಗೆ ತಿಳಿಯಲು ಹೇಗೆ ಸಾಧ್ಯ ಎಂದು ಕೇಳಿದರು.  

ಕಾಲೇಜು ಮುಗಿಸಿಕೊಂಡು ಪೊಲೀಸ್‌ ಸಮವಸ್ತ್ರ ಧರಿಸಿ ಇಲ್ಲಿಗೆ (ಕರ್ನಾಟಕಕ್ಕೆ) ಬಂದಾಗ, ಕನ್ನಡ ಬರುತ್ತಿರಲಿಲ್ಲ. ಹಸಿವಾಗಿದ್ದರೂ ಊಟ ಬೇಕು ಎಂದು ಹೇಳುವುದು ಕಷ್ಟವಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಒಂದು ಆಮಂತ್ರಣ ಪತ್ರಿಕೆಯಲ್ಲಿದ್ದ ಸಾಹಿತಿ ಡಾ.ಯು.ಆರ್‌. ಅನಂತಮೂರ್ತಿ ಅವರು ಬರೆದ ಸಾಲುಗಳು ನನ್ನ ಜೀವನಕ್ಕೆ ಪ್ರೇರಣೆಯಾದವು. ನಂತರದಲ್ಲಿ ಅನೇಕ ದಿನಗಳು ಆ ಸಾಲುಗಳು ನನ್ನ ಮೇಜಿನ ಮೇಲಿದ್ದವು.

“ಗಿಡ ಒಣಗಿದ್ದರೂ ಅದರೊಳಗೆ ಜೀವ ಇರುತ್ತದೆ. ಮಳೆ ಬಂದಾಗ, ಅದು ಮತ್ತೆ ಚಿಗುರುತ್ತದೆ. ಹೂವು-ಹಣ್ಣು ಕೊಡುತ್ತದೆ. ಇದೇ ರೀತಿ ಜೀವನವೂ ಕೂಡ’ ಎಂದು ಇತ್ತು ಭಾವುಕರಾದ ನೀಲಮಣಿ ಎನ್‌. ರಾಜು, ಈ ಸಾಲುಗಳನ್ನು ನಾನು ನಂತರದಲ್ಲಿ ಹಿಂದಿಗೂ ಭಾಷಾಂತರಿಸಿದೆ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌. ರಾಜು ಅವರು ತಮ್ಮ ವೃತ್ತಿ ಜೀವನದ ಆರಂಭದ ದಿನಗಳನ್ನು ಮೆಲುಕು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next