ಬೆಂಗಳೂರು: ರೈತರ ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ನಿರ್ಧಾರ ಹೇಳುತ್ತಿಲ್ಲ ಎಂಬ ಟೀಕೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, “ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ನಮ್ಮ ಪಕ್ಷಕ್ಕೆ ಪೂರ್ಣ ಬಹುಮತ ಸಿಕ್ಕಿದೆಯೇ’ ಎಂದು ಪ್ರಶ್ನಿಸಿದ್ದಾರೆ.
ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ರೈತರ
ಸಾಲ ಮನ್ನಾ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿಲ್ಲ. ಸಮ್ಮಿಶ್ರ ಸರ್ಕಾರವಾಗಿದ್ದರಿಂದ ಸ್ವಲ್ಪ ಸಮಯಾ
ವಕಾಶ ಕೇಳಿದ್ದಾರಷ್ಟೆ ಎಂದು ತಿಳಿಸಿದರು.
ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಅದನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿತ್ತು. ಆದರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾದರೂ ಜೆಡಿಎಸ್‌ಗೆ ಬಹುಮತ ಇಲ್ಲ. ಕಾಂಗ್ರೆಸ್ ಜತೆಗಿನ ಸಮ್ಮಿಶ್ರ ಸರ್ಕಾರದಲ್ಲಿ ಪಕ್ಷದ 37 ಶಾಸಕರನ್ನು ಇಟ್ಟುಕೊಂಡು ಸಾಲ ಮನ್ನಾ ಸಾಧ್ಯವೇ? ಈ ಕುರಿತು ಸಮನ್ವಯ ಸಮಿತಿಯಲ್ಲಿ ಚರ್ಚೆಯಾಗಬೇಕು. ನಂತರ ನಿರ್ಧಾರ ಕೈಗೊಳ್ಳಬೇಕು ಎಂದರು.
ಜೆಡಿಎಸ್-ಕಾಂಗ್ರೆಸ್ ಸರ್ಕಾರ ಐದು ವರ್ಷ ಉತ್ತಮ ಆಡಳಿತ ನೀಡಬೇಕು. ಅದಕ್ಕಾಗಿ ಭಿನ್ನಾಭಿಪ್ರಾಯ ಬಾರದಂತೆ
ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮನ್ವಯ ಸಮಿತಿ ರಚಿಸಲಾಗುತ್ತಿದ್ದು, ಅದು ಎಲ್ಲವನ್ನೂ ನಿರ್ವಹಣೆ ಮಾಡುತ್ತದೆ.ಸಮನ್ವಯ ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇರುತ್ತಾರೆ ಎಂದರು.