Advertisement

ಒಬ್ಬರೇ ಅಧಿಕಾರಿಗೆ ಹಲವು ಕಾರ್ಯಭಾರ

05:06 PM Dec 02, 2018 | Team Udayavani |

ಹುಬ್ಬಳ್ಳಿ: ಎರಡು ಪ್ರಾದೇಶಿಕ ಸಾರಿಗೆ ಕಚೇರಿ, ಎರಡು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ, ನಾಲ್ಕು ಉಪ ಸಾರಿಗೆ ಅಧಿಕಾರಿಗಳ ಕಾರ್ಯಭಾರ. ಇಷ್ಟೆಲ್ಲಾ ಹುದ್ದೆ ನಿಭಾಯಿಸುತ್ತಿರುವುದು ಒಬ್ಬರೇ ಅಧಿಕಾರಿ ಎಂದರೆ ನಂಬಲೇಬೇಕು! ಎರಡು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಉಸ್ತುವಾರಿ, ನಾಲ್ಕು ಉಪ ಸಾರಿಗೆ ಅಧಿಕಾರಿಗಳ ಕಾರ್ಯಭಾರ. ಮೇಲಾಗಿ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಆಯೋಜಿಸುವ ಶಿಬಿರಗಳು, ಜಿಲ್ಲಾಮಟ್ಟದ ಸಾರಿಗೆ ಇಲಾಖೆಗೆ ಸಂಬಂಧಿಸಿದ ಸಭೆಗಳು ಹೀಗೆ ಹಲವಾರು ಕಾರ್ಯಭಾರ ಹೊತ್ತಿದ್ದಾರೆ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ಕವಲಿ.

Advertisement

ಒಂದು ಪ್ರಾದೇಶಿಕ ಕಚೇರಿ ಇರುವ ಕಾರಣಕ್ಕೆ ಕಾರ್ಯಭಾರ ಹಾಗೂ ಜನರಿಗೆ ಸಾಕಷ್ಟು ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಹುಬ್ಬಳ್ಳಿ ಪೂರ್ವ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಆರಂಭಿಸಿ ಅಪ್ಪಯ್ಯ ನಾಲತ್ವಾಡಮಠ ಅವರನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನಾಗಿ ಸರಕಾರ ನಿಯೋಜಿಸಿತ್ತು. ಆದರೆ ಇವರು ಇಲ್ಲಿ ಬಹಳ ದಿನ ಉಳಿಯಲಿಲ್ಲ. ಇವರ ವರ್ಗಾವಣೆ ನಂತರ ಈ ಕಚೇರಿಯ ಕಾರ್ಯಭಾರವನ್ನು ಧಾರವಾಡದ ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೊರಳಿಗೆ ಹಾಕಲಾಯಿತು. ಇದು ಸರಕಾರದ ನಿರ್ಲಕ್ಷವೋ ಅಥವಾ ಪ್ರಭಾವಿಗಳ ಕೈವಾಡವೋ ಅಥವಾ ಎಲ್ಲಾ ಹುದ್ದೆಗಳನ್ನು ಒಬ್ಬರೇ ನಿಭಾಯಿಸಬಲ್ಲರು ಎಂಬ ವಿಶ್ವಾಸವೋ ಗೊತ್ತಿಲ್ಲ.

ಆಗುತ್ತಿಲ್ಲ ಕೆಲಸಗಳು: ಪ್ರತಿಯೊಂದು ಕಾರ್ಯಕ್ಕೂ ಆರ್‌ಟಿಒ ಹಾಗೂ ಎಆರ್‌ಟಿಒ ಅಗತ್ಯವಾಗಿದೆ. ಇತ್ತೀಚೆಗೆ ಸಾರಿಗೆ ಕಚೇರಿಗಳು ಕಂಪ್ಯೂಟರೀಕರಣಗೊಂಡ ನಂತರ ಪ್ರತಿಯೊಬ್ಬ ಅಧಿಕಾರಿ ಬಯೋಮೆಟ್ರಿಕ್‌ ಮೂಲಕ ಲಾಗಿನ್‌ ಆಗಿ ಪರವಾನಗಿ ಸೇರಿದಂತೆ ಇತ್ಯಾದಿ ಕಾರ್ಯ ನಿರ್ವಹಿಸಬೇಕು. ಹೀಗಾಗಿ ಒಬ್ಬರೇ ಅಧಿಕಾರಿ ಎರಡೂ ಕಚೇರಿಗಳಿಗೆ ನಿತ್ಯವೂ ಆಗಮಿಸಬೇಕಿದೆ. ಓರ್ವ ಅಧಿಕಾರಿ ಆರು ಕಾರ್ಯಗಳನ್ನು ನಿಭಾಯಿಸುವುದು ವಾಸ್ತವದಲ್ಲಿ ಅಸಾಧ್ಯವಾಗದಿರುವುದರಿಂದ ಚಾಲನಾ ಪರವಾನಗಿಯಿಂದ ಹಿಡಿದು ಪ್ರತಿಯೊಂದು ಕಾರ್ಯಗಳು ವಿಳಂಬವಾಗುತ್ತಿವೆ. ನಿಗದಿತ ಸಮಯಕ್ಕಿಂತ ವಾರಗಟ್ಟಲೇ ಕಾಯುವ ಪರಿಸ್ಥಿತಿ ಎದುರಾಗಿದೆ ಎಂಬುದು ಸಾರ್ವಜನಿಕರ ಆರೋಪ.

ಹೆಸರಿಗೆ ಎರಡು ಕಚೇರಿ: ಜಿಲ್ಲೆಯಲ್ಲಿ ಹೆಸರಿಗೆ ಮಾತ್ರ ಎರಡು ಪ್ರಾದೇಶಿಕ ಕಚೇರಿಗಳಿವೆ. ಆದರೆ ಜನರಿಗೆ ದೊರೆಯಬೇಕಾದ ಸೇವೆಗಳಿಗೆ ವಾರಗಟ್ಟಲೇ ಕಾಯಬೇಕಿದೆ. ಕೇಂದ್ರ ಸರಕಾರ ಇತ್ತೀಚೆಗೆ ಶೇ.25 ಲೋಡಿಂಗ್‌ ಸಾಮರ್ಥ್ಯ ಹೆಚ್ಚಿಸಿದ್ದು, ಇದಕ್ಕೆ ಪೂರಕವಾದ ಪರವಾನಗಿಯನ್ನು ಪ್ರಾದೇಶಿಕ ಸಾರಿಗೆ ಆಯುಕ್ತರು ನೀಡಬೇಕು. ಆದರೆ ಸಕಾಲಕ್ಕೆ ಪರವಾನಗಿ ದೊರೆಯದ ಕಾರಣಕ್ಕೆ ಲಾರಿ ಮಾಲೀಕರು ರೋಸಿ ಹೋಗಿದ್ದಾರೆ. ಪರವಾನಗಿ ನೀಡಲು ವಿಳಂಬವಾಗುತ್ತಿರುವ ಕಾರಣ ಕೆಲವೊಮ್ಮೆ ಲೋಡ್‌ ಮಾಡಿದ ವಾಹನಗಳನ್ನು ಕಚೇರಿ ಮುಂದೆ ವಾರಗಟ್ಟಲೇ ನಿಲ್ಲಸಬೇಕಾಗಿದೆ. ಆಲ್‌ ಇಂಡಿಯಾ ಪರ್ಮೀಟ್‌ ಸಕಾಲಕ್ಕೆ ದೊರೆಯುತ್ತಿಲ್ಲ ಎನ್ನುವುದು ಲಾರಿ ಮಾಲೀಕರ ಅಳಲು. ಅಧಿಕಾರಿಗಳ ಕೊರತೆಯಿಂದ ಸಕಾಲಕ್ಕೆ ಕಾರ್ಯಗಳು ಆಗುತ್ತಿಲ್ಲ. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳಿಂದ ಹಿಡಿದು ಸಾರಿಗೆ ಸಚಿವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. 

ಪರವಾನಗಿಗೆ ಮಾತ್ರ ಸೀಮಿತ 
ಸಾರಿಗೆ ಇಲಾಖೆಯಿಂದ ಅಧಿಕಾರಿಗಳ ಹುದ್ದೆಗಳಷ್ಟೇ ಅಲ್ಲ. ಕೆಳಹಂತದ ಹುದ್ದೆಗಳು ಸಾಕಷ್ಟು ಪ್ರಮಾಣದಲ್ಲಿ ಖಾಲಿಯಿವೆ. ಹೀಗಾಗಿಯೇ ಕಚೇರಿ ಗುಮಾಸ್ತ ಮಾಡುವ ಬಹುತೇಕ ಕೆಲಸಗಳನ್ನು ಏಜೆಂಟರೇ ಮಾಡುತ್ತಾರೆ. ಸಿಬ್ಬಂದಿ ಕೊರತೆಯಿಂದ ಸಾರಿಗೆ ಇಲಾಖೆ ಎನ್ನುವುದು ಕೇವಲ ಪರವಾನಗಿ ನೀಡುವ ಕಚೇರಿಯಾಗಿ ಮಾರ್ಪಟ್ಟಿದೆ. ರಸ್ತೆಗಳಿದು ಮಾಡಬೇಕಾದ ಕಾರ್ಯಗಳಾವುವೂ ಸಾರಿಗೆ ಇಲಾಖೆಯಿಂದ ಆಗುತ್ತಿಲ್ಲ. ಇವರ ಕೆಲಸಗಳನ್ನು ಸಂಚಾರಿ ಪೊಲೀಸರೇ ನಿರ್ವಹಿಸುತ್ತಿರುವುದು ವಿಪರ್ಯಾಸ. 

Advertisement

ಹೆಚ್ಚಿದೆ ಕೆಲಸದೊತ್ತಡ 
ಪ್ರಾದೇಶಿಕ ಸಾರಿಗೆ ಅಧಿಕಾರಿ ಹುದ್ದೆ ಕಾರ್ಯ ವ್ಯಾಪ್ತಿ ದೊಡ್ಡದಿದೆ. ರಜಿಸ್ಟರಿಂಗ್‌ ಪ್ರಾಧಿಕಾರ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕಾರ್ಯದರ್ಶಿ, ತೆರಿಗೆ ಪ್ರಾಧಿಕಾರ, ಪರವಾನಗಿ ಪ್ರಾಧಿಕಾರ, ಚಾಲನಾ ತರಬೇತಿ ಶಾಲೆಗಳಿಗೆ ಪರವಾನಗಿ, ಅಂತಾರಾಷ್ಟ್ರೀಯ ಚಾಲನಾ ಪರವಾನಗಿ ಸೇರಿದಂತೆ ಹಲವು ಕಾರ್ಯಗಳನ್ನು ನಿಭಾಯಿಸಬೇಕು. ಅಪಘಾತವಾದ ವಾಹನಗಳನ್ನು ಆರ್‌ಟಿಒ ಹಾಗೂ ಎಆರ್‌ಟಿಒ ಪರಿಶೀಲಿಸಬೇಕು. ಸಾರಿಗೆ ಇಲಾಖೆಗೆ ಸಂಬಂಧಿಸಿದ ಸಭೆಗಳಿಗೆ ಹಾಜರಾಗಬೇಕು. ಕುಂದಗೋಳ, ನವಲಗುಂದ ಹಾಗೂ ಕಲಘಟಗಿ ತಾಲೂಕು ಕೇಂದ್ರಗಳಲ್ಲಿ ಸಾರಿಗೆ ಇಲಾಖೆಯಿಂದ ಶಿಬಿರಗಳನ್ನು ನಡೆಸಬೇಕು. ಉಪ ಸಾರಿಗೆ ಆಯುಕ್ತ ಮೇಲ್ಮನವಿ ಪ್ರಾಧಿಕಾರ, ಪರಿಶೀಲನೆ ಹಾಗೂ ಸಂಬಂಧಿಸಿದ ವಿಭಾಗದ ಬಿಲ್‌ಗ‌ಳನ್ನು ಅಂಗೀಕರಿಸುವುದು ಸೇರಿದಂತೆ ಇತರೆ ಕಾರ್ಯಭಾರವಿದೆ. ಇವೆಲ್ಲವನ್ನು ಓರ್ವ ಅಧಿಕಾರಿ ಸಕಾಲದಲ್ಲಿ ನಿರ್ವಹಿಸಿ ಜನರಿಗೆ ಸೂಕ್ತ ಸೇವೆ ನೀಡಲು ಸಾಧ್ಯವೇ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

ಆಡಳಿತಾತ್ಮಕವಾಗಿ ಸರಕಾರ ಹೆಚ್ಚುವರಿ ನೀಡಿರುವ ಹೊಣೆಗಾರಿಕೆಯನ್ನು ಒಬ್ಬ ಅಧಿಕಾರಿಯಾಗಿ ನಿಭಾಯಿಸುತ್ತಿದ್ದೇವೆ. ಈ ವಿಚಾರದಲ್ಲಿ ಏನೇ ಕೇಳುವುದಿದ್ದರೂ ಸರಕಾರವನ್ನು ಕೇಳಿ. ವೈಯಕ್ತಿಕವಾಗಿ ನನಗೆ ತೊಂದರೆಯಾಗುತ್ತಿದ್ದರೂ ಜನರಿಗೆ ಯಾವುದೇ ಸಮಸ್ಯೆಯಾಗದಂತೆ, ಇಲಾಖೆಯಿಂದ ದೊರೆಯುವ ಯಾವುದೇ ಸೇವೆ ವಿಳಂಬವಾಗದಂತೆ ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇನೆ. 
 ರವೀಂದ್ರ ಕವಲಿ,ಉಪ ಸಾರಿಗೆ ಆಯುಕ್ತ
 ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ

ನಮ್ಮ ಸಂಘದ ಸದಸ್ಯರಿಂದ ಹಿಡಿದು ಸಾಮಾನ್ಯ ಜನರಿಗೆ ಸಕಾಲದಲ್ಲಿ ಸರಕಾರಿ ಶುಲ್ಕದಲ್ಲಿ ಸೇವೆ ಸಾರಿಗೆ ಇಲಾಖೆಯಿಂದ ಸಿಗುತ್ತಿಲ್ಲ. ಇದನ್ನು ನಿರೀಕ್ಷೆ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿಯಲ್ಲಿ ಅಧಿಕಾರಿಗಳ ಹುದ್ದೆಗಳನ್ನೇ ತುಂಬಿಲ್ಲ. ಎರಡು ಕಚೇರಿಯನ್ನು ಒಬ್ಬ ಅಧಿಕಾರಿ ನಿಭಾಯಿಸಲು ಸಾಧ್ಯವಿಲ್ಲ. ಎಲ್ಲರ ಬಳಿಯೂ ನಮ್ಮ ಸಮಸ್ಯೆ ಹೇಳಿಕೊಂಡಿದ್ದೇವೆ. ಪ್ರತಿಭಟನೆಯೇ ಅಂತಿಮ ಎನ್ನುವಂತಾಗಿದೆ.
 ಗೈಬುಸಾಬ ಹೊನ್ಯಾಳ,
ಅಧ್ಯಕ್ಷ, ಉ-ಕ ಲಾರಿ ಮಾಲೀಕರ ಸಂಘ

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next