ಕೊಪ್ಪಳ: ಕಳಪೆ ಬೀಜ ಮಾರಾಟದ ದೊಡ್ಡ ಜಾಲವೇ ಇದೆ. ಈಗಾಗಲೆ 15 ಕೋಟಿ ರೂ.ನಷ್ಟು ಮೌಲ್ಯದ ಕಳಪೆ ಬೀಜದ ಜಾಲದ ಮೇಲೆ ದಾಳಿ ನಡೆಸಿದ್ದೇವೆ. ಇನ್ನೂ ಜಾಲ ಬೇಧಿ ಸುವುದು ಇದೆ. ಹಿಂದೆ ಯಾರೂ ಈ ಬಗ್ಗೆ ನಿಗಾ ವಹಿಸಿರಲಿಲ್ಲ. ನಾನು ಸಚಿವನಾದ ಬಳಿಕ ಹೆಚ್ಚು ಕಾಳಜಿ ವಹಿಸಿದ್ದೇನೆ. ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳಪೆ ಬೀಜ ಮಾರಾಟದ ಬಗ್ಗೆ ಹಿಂದೆ ಯಾರೂ ಪತ್ತೆ ಹಚ್ಚಿರಲಿಲ್ಲ. ನಾವೇ ಪತ್ತೆ ಹಚ್ಚಿ ದಾಳಿ ಮಾಡುತ್ತಿದ್ದೇವೆ. ರಾಯಚೂರು, ಬೀದರ್, ಹಾವೇರಿ ಸೇರಿ ಇತರೆ ಭಾಗದಲ್ಲೂ ದಾಳಿ ಮಾಡಲಾಗಿದೆ. ರೈತರು ಬಿತ್ತನೆ ಸಂದರ್ಭದಲ್ಲಿ ಕಳಪೆ ಬೀಜ ಮಾರಾಟವಾಗಿ ಅವರಿಗೆ ಅನ್ಯಾಯವಾಗಬಾರದೆಂದು ಕಾಳಜಿ ವಹಿಸಿದ್ದೇವೆ. ಬೀಜ, ಗೊಬ್ಬರ ಹಾಗೂ ಔಷಧ ಯಾವುದೇ ಅವಧಿ ಮುಗಿದಿದ್ದರೂ ದಾಳಿ ನಡೆಸಿ ಅಂಥವರ ಮೇಲೆ ಕ್ರಮ ಕೈಗೊಳ್ಳುವಂತೆ ಅಧಿ ಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಕಳಪೆ ಬೀಜ ಮಾರಾಟ ಮಾಡಿದವರ ಮೇಲೆ ಕೇಸ್ ಮಾಡಿದ್ದೇವೆ. ಸೀಡ್ಸ್ ಕಾಯ್ದೆ, ಐಪಿಸಿ ನಿಯಮಾವಳಿ ಪ್ರಕಾರ ಕ್ರಮ ಕೈಗೊಂಡಿದ್ದೇವೆ. ಕೆಲವು ಬೀಜಗಳನ್ನು ಪ್ರಯೋಗಾಲಯಕ್ಕೆ ಕಳಿಸಿದ್ದೇವೆ. ಕೆಲವರು ಇದನ್ನು ಪ್ರಶ್ನಿಸಿ ಕೋರ್ಟಿಗೆ ಹೋಗಿದ್ದು ಇನ್ನೂ ಕೋರ್ಟ್‌ನಲ್ಲಿ ಪ್ರಕಣರ ನಡೆಯುತ್ತಿದೆ. ಕಳಪೆ ಬೀಜ, ಗೊಬ್ಬರ ಮಾರಾಟ ಮಾಡಿದರೆ ನಿಮ್ಮ ಕಥೆಯನ್ನೇ ಮುಗಿಸುತ್ತೇವೆ. ನಾವು ಯಾವುದೇ ಒತ್ತಡ, ತಂತ್ರ ಯಂತ್ರಗಳಿಗೆ ಮಣಿಯುವುದಿಲ್ಲ. ನಿಮ್ಮನ್ನು ಮುಗಿಸುತ್ತೇವೆ ಎಂದು ಕಳಪೆ ಜಾಲದ ಕುಳಗಳಿಗೆ ಸಚಿವರು ಖಡಕ್ಕಾಗಿ ಎಚ್ಚರಿಕೆ ನೀಡಿದರು.
ರೈತರಿಗೆ ಒಳ್ಳೆಯದಾಗಲೆಂದು ನಾನು ಈ ಕೆಲಸ ಮಾಡುತ್ತಿದ್ದೇವೆ. ಕೆಲವೊಂದು ಒತ್ತಡಗಳು ನಮಗೂ ಬಂದಿವೆ. ಅವುಗಳನ್ನು ಹೇಳಿದ್ದೇನೆ. ಒತ್ತಡಕ್ಕೆ ಮಣಿದರೆ ತಾಯಿನೇ ಮಗುವಿಗೆ ವಿಷ ಕುಡಿಸಿದಂತೆ. ಯಾವುದೇ ಒತ್ತಡಕ್ಕೆ ಮಣಿಯಬಾರದು ಎಂದರಲ್ಲದೇ, ಹಿಂದೆ ಈ ಜಾಲ ಭೇದಿಸದೇ ಇರುವ ಬಗ್ಗೆ ನನಗೆ ಗೊತ್ತಿಲ್ಲ. ಇನ್ನೂ ಸರ್ಕಾರವು ಬೆಂಬಲ ಬೆಲೆಯಡಿ ತೊಗರಿ ಹಾಗೂ ಕಡಲೆ ಖರೀದಿ ಮಾಡಿದ್ದು, ಸ್ವಲ್ಪ ಹಣವು ಸರ್ಕಾರದಿಂದ ರೈತರಿಗೆ ಬಿಡುಗಡೆಯಾಗಿದೆ. ಇನ್ನೂ ಸ್ವಲ್ಪ ಹಣ ಬಿಡುಗಡೆಯಾಗಲಿದೆ ಎಂದರು.
ಎಚ್.ವಿಶ್ವನಾಥ ಅವರಿಗೆ ಟಿಕೆಟ್ ಸಿಗುತ್ತೆ ಎನ್ನುವ ವಿಶ್ವಾಸವಿತ್ತು. ಆದರೆ ಇಬ್ಬರಿಗೆ ಪಕ್ಷ ಟಿಕೆಟ್ ನೀಡಿದೆ. ಇನ್ನು ನಾಲ್ಕೈದು ಸ್ಥಾನಗಳು ಖಾಲಿಯಿವೆ. ಮುಂದಿನ ದಿನದಲ್ಲಿ ಅವರಿಗೆ ಸ್ಥಾನಮಾನ ಸಿಗಲಿದೆ ಎಂದರು.