ಮೈಸೂರು: ಶೈಕ್ಷಣಿಕವಾಗಿ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಕರ್ನಾಟಕವು ಇದೀಗ ದೂರ ಶಿಕ್ಷಣದಲ್ಲೂ ಆಮೂಲಾಗ್ರ ಬದಲಾವಣೆಗಳನ್ನು ತಂದಿದ್ದು, ಇನ್ನು ಮುಂದೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮೂಲಕವೇ ದೂರ ಶಿಕ್ಷಣವನ್ನು ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.
ಅಶ್ವತ್ಥನಾರಾಯಣ ಹೇಳಿದರು.
ಮುಕ್ತ ವಿಶ್ವವಿದ್ಯಾಲಯದ ಭೌತಿಕ ತರಗತಿಗಳ ಆರಂಭಕ್ಕೆ ವರ್ಚುವಲ್ ವೇದಿಕೆ ಮೂಲಕ ಬೆಂಗಳೂರಿ ನಿಂದಲೇ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಆನ್‌ಲೈನ್ ಹಾಗೂ ದೂರ ಶಿಕ್ಷಣ ವ್ಯವಸ್ಥೆಗೆ ಹೆಚ್ಚೆಚ್ಚು ಬೇಡಿಕೆ ಬರಲಿದೆ. ಬದಲಾವಣೆ ಹಾಗೂ ವಿದ್ಯಾರ್ಥಿಗಳ ಅಪೇಕ್ಷೆ ಮೇರೆಗೆ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಈ ಹಿನ್ನೆಲೆಯಲ್ಲಿ ಮೈಸೂರು ಮುಕ್ತ ವಿಶ್ವವಿದ್ಯಾಲಯಕ್ಕೆ ಇನ್ನಷ್ಟು ಶಕ್ತಿ ತುಂಬಲಾಗುವುದು. ತಾಂತ್ರಿಕವಾಗಿ ವಿವಿಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು.
ಸಹಕಾರ: ಈಗಾಗಲೇ ದೂರಶಿಕ್ಷಣವನ್ನು ಮೈಸೂರು ಮುಕ್ತ ವಿಶ್ವವಿದ್ಯಾಲಯ ಮಾತ್ರ ನೀಡಬೇಕು ಎಂಬ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಶಿಕ್ಷಣ ಕಾಟಾ ಚಾರಕ್ಕಲ್ಲ, ಗಂಭೀರವಾಗಿ ಕಲಿಯಬೇಕು. ಯಾವ ಉದ್ದೇಶಕ್ಕಾಗಿ ಈ ವಿವಿ ಸ್ಥಾಪನೆಯಾಗಿತ್ತೋ ಅದೇ ದಿಕ್ಕಿನಲ್ಲಿ ಮುನ್ನಡೆಸಲಾಗುವುದು. ಅದಕ್ಕಾಗಿ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಅವರು ಜ್ಯೋತಿಷ್ಯ ಕಲಿಯುತ್ತಿರಬೇಕು: ವ್ಯಂಗ್ಯವಾಡಿದ ಸಚಿವ ಸೋಮಶೇಖರ್
ತಂತ್ರಜ್ಞಾನ ಬಳಸಿ: ಕೋವಿಡ್ ಬಂದ ಮೇಲೆ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಅನೇಕ ಬದಲಾವಣೆ ಗಳು ಆಗಿವೆ. ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲಿದ್ದರೂ ಕಲಿಯುವ ವ್ಯವಸ್ಥೆ ಜನಪ್ರಿಯವಾಗುತ್ತಿದೆ. ಅದಕ್ಕೆ ಪೂರಕವಾಗಿ ಈಗಾಗಲೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸುಗಳ ಮೂಲಕವಾದರೂ
ಕಲಿಯಬಹುದು ಅಥವಾ ಆಫ್ಲೈನ್ ತರಗತಿಗಳ ಮೂಲಕವಾದರೂ ಕಲಿಯಬಹುದು. ಯಾವುದೇ ಆದರೂ ವಿದ್ಯಾರ್ಥಿಯ ಹಾಜರಾತಿ ಮಾತ್ರ ಕಡ್ಡಾಯ ಎಂದು ಹೇಳಿದರು.
ಈ ವೇಳೆ ಮುಕ್ತ ವಿವಿ ಕುಲಪತಿ ಡಾ.ವಿದ್ಯಾಶಂಕರ್, ಕುಲಸಚಿವ ಡಾ.ಲಿಂಗರಾಜ ಗಾಂಧಿ, ಮೌಲ್ಯಮಾಪನ ಕುಲಸಚಿವ ಅಶೋಕ ಕಾಂಬ್ಳೆ ಸೇರಿದಂತೆ ವಿವಿಯ ಉನ್ನತ ಅಧಿಕಾರಿಗಳು ಇದ್ದರು.