Advertisement

ನಗರದಲ್ಲಿ ಹೆಚ್ಚುತ್ತಿದೆ ವೈರಾಣು ಜ್ವರ 

11:24 AM Jun 27, 2017 | Team Udayavani |

ಬೆಂಗಳೂರು: ಡೆಂಘೀ, ಮೆಲೇರಿಯಾ, ಎಚ್‌1ಎನ್‌1 ಹಾಗೂ ಚಿಕುನ್‌ಗುನ್ಯಾದ ಬಗ್ಗೆ ಸ್ವಯಂ ಎಚ್ಚರ ವಹಿಸದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ನಗರದ ಆಸ್ಪತ್ರೆಗಳಲ್ಲಿ ಕಳೆದ 15-20ದಿನಗಳಲ್ಲಿ ಜ್ವರದಿಂದ ಆಸ್ಪತ್ರೆ ಸೇರುವ ರೋಗಿಗಳ ಸಂಖ್ಯೆಯ ಪ್ರಮಾಣದಲ್ಲಿ ಶೇ.30ರಿಂದ 40ರಷ್ಟು ಏರಿಕೆಯಾಗಿದೆ.

Advertisement

ಅದರಲ್ಲೂ ಡೆಂಘೀ, ಚಿಕನ್‌ಗುನ್ಯಾ ಹಾಗೂ ಮಲೇರಿಯಾ ಪ್ರಕರಣವೇ ಹೆಚ್ಚಿದೆ. ನಗರದ ಕೆ.ಸಿ.ಜನರಲ್‌ ಆಸ್ಪತ್ರೆ, ಬೌರಿಂಗ್‌ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಪ್ರಮುಖ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಜ್ವರದಿಂದ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ದಿನೇದಿನೆ ಗಣನೀಯವಾಗಿ ಏರಿಕೆಯಾಗುತ್ತಿದೆ.

ಬೌರಿಂಗ್‌ ಆಸ್ಪತ್ರೆಯಲ್ಲಿ ಕಳೆದ ತಿಂಗಳಿಗೆ ಹೋಲಿಸಿದರೆ ಶೇ.40ರಷ್ಟು ಪ್ರಮಾಣದಲ್ಲಿ ಜ್ವರ ಬಾಧಿತ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲೂ ಇದೇ ಪ್ರಮಾಣದಲ್ಲಿ ಜ್ವರ ಬಾಧಿತ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಜ್ವರ ಭಾಧಿತರಲ್ಲಿ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಸೇರಿದ್ದಾರೆ.

ಮುನ್ನೆಚ್ಚರಿಕೆ ಹೇಗೆ?: ಜ್ವರ ಅಥವಾ ಜ್ವರಕ್ಕೆ ಸಂಬಂಧಿಸಿದ ಲಕ್ಷಣಗಳು ಗಮನಕ್ಕೆ ಬಂದ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ವಯಸ್ಸಿನ ಮಿತಿ ಇಲ್ಲದೇ ರೋಗ ಹರಡುತ್ತದೆ.

ಹೀಗಾಗಿ ರಕ್ತ ಪರೀಕ್ಷೆಯ ನಂತರ ತೆಗೆದುಕೊಳ್ಳಬೇಕಾದ ಚಿಕಿತ್ಸೆಯನ್ನು ಕೂಡಲೇ ಆರಂಭಿಸಿ, ವೈದ್ಯರು ಸೂಚಿಸುವ ಔಷಧವನ್ನು ನಿಗದಿಯಂತೆ ತೆಗೆದಿಕೊಳ್ಳಬೇಕು. ಜ್ವರ ಕಡಿಮೆಯಾಗಿದೆ ಎಂದು ಔಷಧ ತೆಗೆದುಕೊಳ್ಳುವುದನ್ನು ನಿಲ್ಲಿಸಬಾರದು. ಇದರಿಂದ ಪುನಃ ವೈರಸ್‌ ನಮ್ಮ ಶರೀರವನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಪಿ.ಎಲ್‌.ನಟರಾಜ್‌ ಮಾಹಿತಿ ನೀಡಿದರು.

Advertisement

ಮಳೆ ನೀರು ಒಂದೇ ಕಡೆ ನಿಲ್ಲದಂತೆ ನೋಡಿಕೊಳ್ಳಬೇಕು. ಎಳನೀರ ಚಿಪ್ಪು, ಟಯರ್‌ಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಮಾಸ್ಕ್ಗಳನ್ನು ಉಪಯೋಗಿಸಬೇಕು. ನೀರಿನ ತೊಟ್ಟಿಯನ್ನು ವಾರಕೊಮ್ಮೆಯಾದರೂ ಸ್ವತ್ಛ ಮಾಡಬೇಕು. ಸೊಳ್ಳೆ ಅಧಿಕ ಇರುವುದು ಕಂಡ ಬಂದರೆ, ಸ್ಥಳೀಯ ಆರೋಗ್ಯಾಧಿಕಾರಿಗೆ ಅಥವಾ ನಗರದಲ್ಲಿ ಹೆಲ್ತ್‌ ಇನ್‌ಪೆಕ್ಟರ್‌ಗೆ ಮಾಹಿತಿ ನೀಡಿ ಫಾಗಿಂಗ್‌ ಮಾಡಿಸಬೇಕು.

ಮನೆಯ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆ ನಿವಾರಕಗಳು, ಸೊಳ್ಳೆ ಪರದೆ, ಮೆಶ್‌ ಮತ್ತು ಮನೆಯಿಂದ ಹೊರಗೆ ಇರುವ ಸಂದರ್ಭದಲ್ಲಿ ಉದ್ದ ತೋಳಿನ ಬಟ್ಟೆ, ಸಾಕ್ಸ್‌ಗಳನ್ನು ಧರಿಸುವ ಮೂಲಕ ಸಾರ್ವಜನಿಕರು ಸ್ವಯಂ ಜಾಗೃತರಾಗಬೇಕು ಎಂದು ಹೇಳಿದರು. ಇಲಾಖೆಯಿಂದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಬೇಡಿಕೆಯಷ್ಟು ಔಷಧ ಪೂರೈಕೆ ಮಾಡುತ್ತಿದ್ದೇವೆ.

ತುರ್ತು ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಆರೋಗ್ಯ ರಕ್ಷಣಾ ಸಮಿತಿಯ ಅನುಮತಿ ಪಡೆದ ಅಗತ್ಯ ಅನುದಾನ ಬಳಸಿಕೊಳ್ಳಲು ಸೂಚನೆ ನೀಡಿದ್ದೇವೆ. ಡೆಂಘೀ, ಮಲೇರಿಯಾ ಹಾಗೂ ಚಿಕನ್‌ಗುನ್ಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸರ್ಕಾರ ಮತ್ತು ಇಲಾಖೆ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳುತ್ತಿದೆ ಎಂದರು.

ಡೆಂಘೀ ಗುಣಲಕ್ಷಣ: ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಎರಡರಿಂದ ಐದು ದಿನದೊಳಗೆ ಜ್ವರ ತೀವ್ರವಾಗುತ್ತದೆ. ರಕ್ತದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುತ್ತದೆ. ಬಾಯಿ ಮತ್ತು ಮೂಗಿನಲ್ಲಿ ಸಣ್ಣ ಪ್ರಮಾಣದ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ಹೊಟ್ಟೆ ನೋವು, ವಾಂತಿ, ಹೃದಯ, ಶ್ವಾಸಕೋಶ ಮತ್ತು ಯಕೃತ್ತಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದರ ಜತೆಗೆ ಗಂಭೀರ ಸ್ವರೂಪದ ನಿರ್ಜಲೀಕರಣವಾಗುತ್ತದೆ. ಚಿಕಿತ್ಸೆ ಆರಂಭಿಸದಿದ್ದರೆ ಡೆಂಘೀ ಹೆಮರಾಜಿಕ್‌ ಜ್ವರದ ಸ್ವರೂಪಕ್ಕೆ ತಿರುಗಿ ಮಾರಣಾಂತಿಕವಾಗುತ್ತದೆ.

ಚಿಕನ್‌ಗುನ್ಯಾ ಲಕ್ಷಣ: ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಎರಡರಿಂದ ಐದು ದಿನದೊಳಗೆ ಜ್ವರ ತೀವ್ರವಾಗುತ್ತದೆ. ತರುವಾಯ ಕೈಕಾಲುಗಳ ಕೀಲುಗಳನ್ನು ಬಾಧಿಸುವ ವಿಸ್ತೃತ ಕೀಲು ನೋವು ಕಾಣಿಸಿಕೊಳ್ಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next