Advertisement
ತಾಯ್ನಾಡಿಗೆ ಮರಳಲು ಆಯೇಶಾ ಶತ ಪ್ರಯತ್ನರಾಮನಗರ: 3 ತಿಂಗಳ ಹಿಂದೆ ವೈದ್ಯಕೀಯ ಶಿಕ್ಷಣ ಪಡೆಯಲೆಂದು ಉಕ್ರೇನ್‌ಗೆ ತೆರಳಿದ್ದ ರಾಮನಗರದ ವಿದ್ಯಾರ್ಥಿನಿ ಆಯೇಶಾ ಭಾರತಕ್ಕೆ ಮರಳಲು ಪ್ರಯತ್ನ ನಡೆಸುತ್ತಿದ್ದು, ಸದ್ಯ ಆಕೆ ಸ್ಲೋವಾಕಿಯಾ ರಾಷ್ಟ್ರದ ಗಡಿಯಲ್ಲಿರುವುದಾಗಿ ಆಕೆಯ ತಂದೆ ಕೌಸರ್ ಪಾಷಾ ತಿಳಿಸಿದ್ದಾರೆ.
ನವೀನ್ ಸಾವಿನಿಂದ ಆತಂಕ ಇಮ್ಮಡಿಗೊಳಿಸಿದೆ. ಆದರೆ ತಮ್ಮ ಮಗಳು ಬುಧವಾರ ಕರೆ ಮಾಡಿ, ತಾನು ಸುರಕ್ಷಿತವಾಗಿರುವುದಾಗಿ ಸ್ಲೋವಾಕಿಯಾ ಗಡಿ ತಲುಪುತ್ತಿರುವುದಾಗಿ, ಅಲ್ಲಿ ಈಗಾಗಲೇ ಸುಮಾರು 800ಕ್ಕೂ ಹೆಚ್ಚು ಮಂದಿ ಭಾರತೀಯರಿದ್ದು, ಆದ್ಯತೆ ಮೇರೆಗೆ ವಿಮಾನ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತಿದ್ದಾರೆ ಎಂದು ತಿಳಿಸಿದ್ದಾಳೆ ಎಂದು ಕೌಸರ್ ಪಾಷಾ ಹೇಳಿದರು.
Related Articles
ಬೆಳಗಾವಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಬೆಳಗಾವಿ ಜಿಲ್ಲೆಯ 17 ವಿದ್ಯಾರ್ಥಿಗಳು ಸಿಲುಕಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರುವ ಪ್ರಯತ್ನ ಕೇಂದ್ರ ಸರಕಾರ ನಡೆಸಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
Advertisement
ಸುದ್ದಿಗಾರರೊಂದಿಗೆ ಮಾತನಾಡಿ, ಒಟ್ಟು 19 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು. ಅದರಲ್ಲಿ ಇಬ್ಬರನ್ನು ಕರೆದುಕೊಂಡು ಬರಲಾಗಿದೆ. ಇನ್ನುಳಿದ 17 ವಿದ್ಯಾರ್ಥಿಗಳ ಕರೆತರುವ ಪ್ರಯತ್ನ ನಡೆದಿದೆ. ಈ ಬಗ್ಗೆ ರಾಯಭಾರಿ ಕಚೇರಿಯವರು ಪ್ರಯತ್ನ ನಡೆಸಿದ್ದಾರೆ. ಬೆಳಗಾವಿ ವಿದ್ಯಾರ್ಥಿಗಳನ್ನು ಕರೆತರುವ ಸಲುವಾಗಿ ಹಾಗೂ ಅವರೊಂದಿಗೆ ಸಮನ್ವಯತೆ ಸಾಧಿಸಲು ಪ್ರವೀಣ ಬಾಗೇವಾಡಿ ಹಾಗೂ ರವಿ ಕರಲಿಂಗನ್ನವರ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
ಕಿವ್‌ದಿಂದ ಪೋಲೆಂಡ್ ಗಡಿಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳುಕರ್ನಾಟಕ ಮೂಲದ 14 ಜನರ ತಂಡ ಖಾರ್ಕಿವ್ ವಿಶ್ವವಿದ್ಯಾಲಯದಿಂದ ಮಂಗಳವಾರ ಪ್ರಯಾಣ ಬೆಳೆಸಿದ್ದು, ಪೋಲೆಂಡ್ ಗಡಿವರೆಗೆ ಬರುತ್ತಿರುವ ಬಗ್ಗೆ ಮಗಳು ಅಮೋಘಾ ಮಾಹಿತಿ ನೀಡಿದ್ದಾಳೆ ಎಂದು ಅಮೋಘಾ ಅವರ ತಂದೆ ಧನಂಜಯ ಚೌಗಲಾ ತಿಳಿಸಿದರು. ನಮ್ಮನ್ನು ತಾಯ್ನಾಡಿಗೆ ಬೇಗ ಕರೆಸಿಕೊಳ್ಳಿ
ಬೀಳಗಿ: ರಷ್ಯಾದ ಪಾಸ್ಕೊ ವಿಶ್ವವಿದ್ಯಾನಿಲಯದಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿರುವ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಮುಂಡಗನೂರ ಗ್ರಾಮದ ಪರಶುರಾಮ ಲಕ್ಕಪ್ಪ ಪಾಟೀಲ, ತಮ್ಮನ್ನು ಬೇಗ ತಾಯ್ನಾಡಿಗೆ ಕರೆಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. “ಉದಯವಾಣಿ’ ಜತೆ ವಾಟ್ಸ್‌ಆ್ಯಪ್ ಕರೆ ಮೂಲಕ ಮಾತನಾಡಿದ ಅವರು, ಇಲ್ಲಿವರೆಗೂ ರಷ್ಯಾದಲ್ಲಿ ಓದುತ್ತಿರುವ ನಮಗೆ ಯಾವುದೇ ತೊಂದರೆ ಇರಲಿಲ್ಲ. ಆದರೀಗ ಉಕ್ರೇನ್ ದಾಳಿ ಮಾಡಿದರೆ ನಮ್ಮ ಜೀವಕ್ಕೆ ಆಪತ್ತು ಇದೆ. ನಾವು ಯುದ್ಧ ನಡೆದ ಗಡಿಯಿಂದ 23 ಕಿಮೀ ದೂರದಲ್ಲಿರುವ ಇಸ್ತೋನಿಯಾ ಲೆತಿವಾ ಗಡಿಭಾಗದಲ್ಲಿ ಇದ್ದೇವೆ. ಈಗಾಗಲೇ ನಮ್ಮ ಮೊಬೈಲ್ ಸಿಗ್ನಲ್ ತೆಗೆದಿದ್ದು, ವಾಟ್ಸ್‌ಆ್ಯಪ್‌ನಿಂದ ಕರೆ ಮಾಡಲು ಮಾತ್ರ ಸಾಧ್ಯವಾಗುತ್ತಿದೆ. ಎಟಿಎಂ ಬಂದ್ ಆಗಿದ್ದು ದುಡ್ಡಿಗಾಗಿ ಪರದಾಡುವಂತಾಗಿದೆ. ತಾಯ್ನಾಡಿಗೆ ಬರಲು ವಿಮಾನ ಟಿಕೆಟ್ ಬುಕಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮಗೆಲ್ಲ ಭಯವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ರಾಜ್ಯದ ಒಟ್ಟು 23 ವಿದ್ಯಾರ್ಥಿಗಳಿದ್ದೇವೆ. ನಮ್ಮನ್ನು ತಾಯ್ನಾಡಿಗೆ ಬೇಗನೆ ಕರೆಸಿಕೊಳ್ಳಿ. ಉಕ್ರೇನ್‌ನಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಪರಿಸ್ಥಿತಿ ನಮಗಾಗದಂತೆ ಮುಂಜಾಗ್ರತೆ ವಹಿಸಿ ಎಂದು ಸಚಿವ ಮುರುಗೇಶ ನಿರಾಣಿ ಮತ್ತು ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಕೇಳಿಕೊಂಡರು. ಜನಪ್ರತಿನಿಧಿಗಳ ಮನೆಗೆ ಹೆತ್ತವರ ಅಲೆದಾಟ
ವಿಜಯಪುರ: ಉಕ್ರೇನ್‌ನಲ್ಲಿ ರಷ್ಯಾ ಸಿಡಿಸಿದ ಫಿರಂಗಿಗೆ ಹಾವೇರಿ ಜಿಲ್ಲೆಯ ನವೀನ್ ಬಲಿಯಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ. ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳ ಪಾಲಕರು ಇದೀಗ ಜಿಲ್ಲೆಯ ಜನಪ್ರತಿನಿಧಿಗಳು, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಹಂತಕ್ಕೆ ಆತಂಕ ಮನೆ ಮಾಡಿದೆ. ರಾಣಿಬೆನ್ನೂರು ತಾಲೂಕಿನ ಚಳಗೇರಿಯ ನವೀನ್ ಜತೆ ಕೋಣೆಯಲ್ಲಿದ್ದ ವಿಜಯಪುರ ಜಿಲ್ಲೆಯ ಅಮನ್ ಮಮದಾಪುರ ಹಾಗೂ ಅವರ ಕಿರಿಯ ಸಹಪಾಠಿ ವಿವಿಧಾ ಮಲ್ಲಿಕಾರ್ಜುನಮಠ ಮನೆಯಲ್ಲೂ ಆತಂಕ ಮನೆ ಮಾಡಿದೆ. ಜಿಲ್ಲೆಯ ಸುಮಾರು 20ಕ್ಕೂ ಹೆಚ್ಚು ಮಕ್ಕಳು ಉಕ್ರೇನ್‌ನಲ್ಲಿ ಸಿಲುಕಿದ್ದರೂ ಕೇಂದ್ರದ ಮಾಜಿ ಸಚಿವರಾಗಿರುವ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಈವರೆಗೂ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪಾಲಕರು ಹರಿಹಾಯ್ದಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ವಿವಿಧಾ ಅವರ ತಂದೆ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ನನ್ನ ಮಗಳು ವಿವಿಧಾ ಜತೆ ನಮ್ಮ ಕುಟುಂಬ ನಿರಂತರ ಸಂಪರ್ಕದಲ್ಲಿದೆ. ವೀಡಿಯೋ ಕರೆ ಮಾಡಿ ಉಕ್ರೇನ್-ರಷ್ಯಾ ಯುದ್ಧದ ಭಯಾನಕತೆಯ ದರ್ಶನ ಮಾಡಿಸಿದ್ದಾಳೆ. ನಮ್ಮೊಂದಿಗೆ ಮಗಳು ಮಾತನಾಡುವಾಗಲೇ ಬಾಂಬ್, ರಾಕೆಟ್ ದಾಳಿ ಆಗುವುದನ್ನು ಕಂಡಿದ್ದೇನೆ. ಹೀಗಾಗಿ ರಾಜ್ಯ-ಕೇಂದ್ರ ಸರಕಾರ ಇನ್ನೂ ವಿಳಂಬ ಮಾಡದೆ ತುರ್ತಾಗಿ ಭಾರತೀಯ ಎಲ್ಲ ವಿದ್ಯಾರ್ಥಿಗಳನ್ನು ಕರೆ ತರಲು ಮುಂದಾಗಬೇಕು ಎಂದು ಆಗ್ರಹಿಸಿದ್ಧಾರೆ. ಹಾಸನದ 6 ವಿದ್ಯಾರ್ಥಿಗಳ ಪರದಾಟ
ಹಾಸನ: ಉಕ್ರೇನ್‌ನಲ್ಲಿ ಸಿಲುಕಿದ್ದ ಹಾಸನ ಜಿಲ್ಲೆಯ 13 ವಿದ್ಯಾರ್ಥಿಗಳ ಪೈಕಿ 7 ವಿದ್ಯಾರ್ಥಿಗಳು ಸುರಕ್ಷಿತವಾಗಿ ವಾಪಸಾಗಿದ್ದಾರೆ. ಇನ್ನೂ 6 ವಿದ್ಯಾರ್ಥಿಗಳು ಉಕ್ರೇನ್‌ನ ವಿವಿಧ ನಗರಗಳಲ್ಲಿ ಸಿಲುಕಿದ್ದು, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ತೀವ್ರಗೊಳ್ಳುತ್ತಿರುವುದರಿಂದ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ವಾಪಸ್ ಕರೆತರುವಂತೆ ಸರಕಾರದ ಮೇಲೆ ತೀವ್ರ ಒತ್ತಡ ಹೇರಲಾರಂಭಿಸಿದ್ದಾರೆ. ಉಕ್ರೇನ್‌ನಲ್ಲಿದ್ದ ವಿದ್ಯಾರ್ಥಿಗಳ ವಿವರವನ್ನು ಜಿಲ್ಲಾಡಳಿತ ಸಂಗ್ರಹಿಸಿದ್ದು ಈವರೆಗೂ ಮಾಹಿತಿ ಲಭ್ಯವಾಗಿರುವ 13 ವಿದ್ಯಾರ್ಥಿಗಳ ಪೈಕಿ ಐವರನ್ನು ಈಗಾಗಲೇ ಜಿಲ್ಲೆಗೆ ವಾಪಸ್ ಕರೆತರಲಾಗಿದೆ. ಇನ್ನಿಬ್ಬರು ದಿಲ್ಲಿಗೆ ವಾಪಸಾಗಿದ್ದು, ಗುರುವಾರ ತಮ್ಮ ಮನೆಗಳಿಗೆ ಹಿಂದಿರುಗಲಿದ್ದಾರೆ. ಇನ್ನೂ 5 ಜನ ಖಾರ್ಕಿವ್ ಹಾಗೂ ಸುನಿ ನಗರಗಳಲ್ಲಿ ಸುರಕ್ಷಿತವಾಗಿದ್ದಾರೆ. ಇನ್ನೊಬ್ಬರ ಮಾಹಿತಿ ಲಭ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಮಾಹಿತಿ ನೀಡಿದರು. ಕಾಲ್ನಡಿಗೆಯಲ್ಲೇ ಗಡಿ ತಲುಪಿದೆ
ನೆಲಮಂಗಲ: ಉಕ್ರೇನ್‌ನಿಂದ ತಾಲೂಕಿನ ಹೊನ್ನಗಂಗಯ್ಯನ ಪಾಳ್ಯದ ನಿವಾಸಿ ಭಾವನಾ ಸುರಕ್ಷಿತವಾಗಿ ತವರಿಗೆ ಆಗಮಿಸಿದ್ದು, ಪೋಷಕರು, ಸಂಬಂಧಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಉಕ್ರೇನ್‌ನ ವಿನಿಸ್ಟಾ ವಿವಿಯಲ್ಲಿ 4ನೇ ವರ್ಷದ ಎಂಬಿಬಿಎಸ್ ಶಿಕ್ಷಣ ಪಡೆಯುತ್ತಿದ್ದ ಭಾವನಾ ವಿನಿಸ್ಟಾದಿಂದ 10 ಕಿ.ಮೀ. ಕಾಲ್ನಡಿಗೆಯ ಮೂಲಕ ಗಡಿ ತಲುಪಿ ಅನಂತರ ಬಸ್ ಮೂಲಕ ರೊಮೇನಿಯಾ ತಲುಪಿದ್ದು, ಕೇಂದ್ರ ಸರಕಾರದ ಸಹಕಾರದೊಂದಿಗೆ ಏರ್‌ಲಿಫ್ಟ್ ಮೂಲಕ ದಿಲ್ಲಿಗೆ ಬಂದಿದ್ದಾರೆ. ಬುಧವಾರ ಮಧ್ಯಾಹ್ನ 1 ಗಂಟೆಗೆ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ನಂತರ ನೆಲಮಂಗಲ ತಾಲೂಕಿನ ಹೊನ್ನಗಂಗಯ್ಯನಪಾಳ್ಯದ ತಮ್ಮ ನಿವಾಸಕ್ಕೆ ಆಗಮಿಸಿದರು. ಗಡಿ ದಾಟಲು ಬಿಡುತ್ತಿರಲಿಲ್ಲ
ಯುದ್ಧ ಆರಂಭವಾದ ನಂತರ ಒಂದೇ ಕಡೆ ಇರುವ ಸ್ಥಿತಿ ಎದುರಾದರೂ ಭಯವಿರಲಿಲ್ಲ. ಆದರೆ ದಿನೇ ದಿನೆ ಸಮಸ್ಯೆಗಳು ಎದುರಾಯಿತು. ಭಯದಿಂದಲೇ ವಿನಿಸ್ಟಾದಿಂದ ಬಸ್‌ನಲ್ಲಿ ಬಂದೆವು. ಆದರೆ ಗಡಿ ಸಮೀಪಿಸುತ್ತಿದ್ದಂತೆ ವಾಹನ ಸೌಲಭ್ಯವಿರಲಿಲ್ಲ. 10 ಕಿ.ಮೀ. ಕಾಲ್ನಡಿಗೆಯಲ್ಲಿ ಲೆಗೇಜ್ ತೆಗೆದುಕೊಂಡು ಹರಸಾಹಸ ಪಟ್ಟು ಗಡಿ ತಲುಪಿದೆವು. ಗಡಿಯಲ್ಲಿ ಬಹಳಷ್ಟು ಸಮಸ್ಯೆ ಎದುರಾಯಿತು. ಸಾವಿರಾರು ಜನರು ಜಮಾಯಿಸಿದ ಪರಿಣಾಮ ಯೋಧರು ಗಡಿದಾಟಲು ಬಿಡುತ್ತಿರಲಿಲ್ಲ. ಎಂದು ತಿಳಿಸಿದರು.