Advertisement

ಸಂವಿಧಾನ ಅನುಷ್ಠಾನದಲ್ಲೇ ದೋಷವಿದೆ

01:02 AM Jul 22, 2019 | Lakshmi GovindaRaj |

ಬೆಂಗಳೂರು: ಸಂವಿಧಾನದಲ್ಲಿ ಯಾವುದೇ ದೋಷವಿಲ್ಲ ಬದಲಾಗಿ ಅದನ್ನು ಅನುಷ್ಠಾನ ಮಾಡುವವರಲ್ಲೇ ದೋಷವಿದ್ದು, ಅವರಿಂದಲೇ ಸಮಸ್ಯೆ ಉಂಟಾಗುತ್ತಿದೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ತಿಳಿಸಿದರು. ಕರ್ನಾಟಕ ವರ್ಕರ್ ಯೂನಿಯನ್‌ ವತಿಯಿಂದ ಕಬ್ಬನ್‌ ಉದ್ಯಾನದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ “ಭಾರತ ಸಂವಿಧಾನ ಕಿರು ಪರಿಚಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಶಾಂತಿ, ಸಮಾನತೆ, ಜಾತ್ಯತೀತತೆಯಂತಹ ಮೂಲ ಅಂಶಗಳಿಂದ ರಚನೆಯಾಗಿರುವ ಭಾರತ ಸಂವಿಧಾನದಲ್ಲಿ ಯಾವುದೇ ದೋಷವಿಲ್ಲ. ವಿದೇಶಿಗರ ಆಳ್ವಿಕೆಯಿಂದ ಹೊರಬಂದ ಭಾರತವನ್ನು ಇಂದು ವಿಶ್ವವೇ ಗುರಿತಿಸುವಂತೆ ಬೆಳೆಸಿರುವುದು 1950ರಲ್ಲಿ ಜಾರಿಗೆ ತಂದ ಇದೇ ಸಂವಿಧಾನ. ಆದರೆ, ಇತ್ತೀಚಿನ ದಿನಗಳಲ್ಲಿ ಸಂವಿಧಾನ ವಿರೋಧಿ ಧ್ವನಿ ಕೇಳಿಬರುತ್ತಿದೆ.

ಇದಕ್ಕೆ ಪ್ರಮುಖ ಕಾರಣ ಸಂವಿಧಾನ ಅನುಷ್ಠಾನಕ್ಕೆ ತರುವಲ್ಲಿ ಆಗುತ್ತಿರುವ ಸಮಸ್ಯೆ. ಸಂವಿಧಾನ ಅನುಷ್ಠಾನದ ಅಧಿಕಾರ ಹೊಂದಿರುವ ಜನಪ್ರತಿನಿಧಿಗಳಲ್ಲಿ ದೋಷವಿದೆ. ಯೋಗ್ಯರಲ್ಲದವರನ್ನು ಆಯ್ಕೆ ಮಾಡಿ ಕಳಿಸಿದಾಗ ಇಂತಹ ಸಮಸ್ಯೆ ಬರುತ್ತವೆ. ಮೊದಲು ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.

ಬೇರೊಂದಕ್ಕೆ ಅವಕಾಶವಿಲ್ಲ: ಭಾರತ ಸಂವಿಧಾನ ತಿದ್ದುಪಡಿಗೆ ಅವಕಾಶವಿದೆಯೇ ಹೊರತು ಅದಕ್ಕೆ ಪರ್ಯಾವಾಗಿ ಬೇರೊಂದು ಸಂವಿಧಾನ ತರುವುದಕ್ಕೆ ಅವಕಾಶವಿಲ್ಲ. ಇನ್ನು ತಿದ್ದುಪಡಿ ಕೂಡ ಸಂವಿಧಾನದ ಮೂಲ ತತ್ವ, ಆಶಯಗಳಿಗೆ ಧಕ್ಕೆ ತರುವಂತಿರಬಾರದು. ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಮಿಕ ಹಾಗೂ ಮಾಲೀಕ ಎಲ್ಲರೂ ಒಂದೇ. ಕಾನೂನು, ಭದ್ರತೆ, ನಿಯಮಗಳು ಕೂಡ ಒಂದೇ ಆಗಿವೆ. ಇಂತಹ ಸಮಾನತೆಯನ್ನು ಸಹಿಸಿಕೊಳ್ಳದ ಮನಸ್ಥತಿಯವರು ಸಂವಿಧಾನ ಬದಲಿಸುವ ಮಾತನಾಡುತ್ತಿದ್ದಾರೆ ಎಂದರು.

ಕಾಯ್ದೆಯನ್ನೇ ತಲೆಕೆಳಗಾಗಿಸುತ್ತಿದ್ದಾರೆ: 80ರ ದಶಕದಲ್ಲಿ ಬಟ್ಟೆ ಬದಲಿಸಿದಂತೆ ರಾಜಕಾರಣಿಗಳು ದಿನಕ್ಕೊಂದು ಪಕ್ಷ ಬದಲಿಸುತ್ತಿದ್ದರು. ಅದನ್ನು ಅತೋಟಿಗೆ ತರಲು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಆದರೆ, ಇಂದು ಆ ಕಾಯ್ದೆಯನ್ನೇ ತಲೆಕೆಳಗಾಗಿಸುವಂತೆ “ಆಪರೇಷನ್‌’ಗಳು ನಡೆಯುತ್ತಿವೆ. ಆಡಳಿತಶಾಹಿ ಮನಸ್ಥಿತಿಯ ಜನಪ್ರತಿನಿಧಿಗಳು ಈ ಮೂಲಕ ಕಾನೂನನ್ನು ಮೀರಿ ಚಟುವಟಿಕೆ ನಡೆಸುತ್ತಿದ್ದಾರೆ. ಹೀಗಾಗಿ, ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಎಚ್ಚರ ವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ವರ್ಕರ್ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಇ.ಕೆ.ಎನ್‌.ರಾಜಾ, ಸಲಹೆಗಾರ ರಾಮಮೂರ್ತಿ ಉಪಸ್ಥಿತರಿದ್ದರು.

Advertisement

ಸಮಾಜದಲ್ಲಿ ಗುಲಾಮಗಿರಿ ಮುಂದುವರಿಸಲು ಇಚ್ಛಿಸುತ್ತಿರುವ ಆಡಳಿತಶಾಹಿ ಮನಸ್ಥಿತಿಗೆ ಸಂವಿಧಾನ ಬೇಡವಾಗಿದೆ. ಹೀಗಾಗಿ, ಸಂವಿಧಾನ ಸುಡುವುದು, ಧಿಕ್ಕರಿಸುವುದು, ಬದಲಾಯಿಸುವ ಮಾತನಾಡುತ್ತಿದ್ದಾರೆ. ಅಂತಹ ದೇಶ ವಿರೋಧಿ ದನಿಗಳ ವಿರುದ್ಧ ಸಂವಿಧಾನ ಅರಿತ ಪ್ರಬುದ್ಧರು ಹೋರಾಡಬೇಕಿದೆ.
-ನಾಗಮೋಹನ್‌ ದಾಸ್‌, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next