Advertisement

ಎಂಜಿನಿಯರಿಂಗ್‌ ಕೋರ್ಸ್‌ಗೆ ಇನ್ನು ಕಷ್ಟ ಕಾಲ

12:55 PM Dec 13, 2017 | |

ನವದೆಹಲಿ: ಕೆಲ ವರ್ಷಗಳ ಹಿಂದೆ ದೇಶದ ಪ್ರತಿಯೊಂದು ಮನೆಯಲ್ಲಿಯೂ ಎಂಜಿನಿಯರಿಂಗ್‌ ಮಾಡುತ್ತಿದ್ದಾನೆ ಎಂದರೆ ಗೌರವದಿಂದ ನೋಡುವ ದಿನಗಳಿದ್ದವು. ಆದರೆ ಉದ್ಯೋಗ ಕ್ಷೇತ್ರ, ಪರಿಣತರಲ್ಲದ ಪ್ರಾಧ್ಯಾಪಕರು, ಉತ್ತಮ ಮೂಲ ಸೌಕರ್ಯಗಳಿಲ್ಲದ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ದೇಶದಲ್ಲಿ ಬಿ.ಇ ಮತ್ತು ಬಿ.ಟೆಕ್‌ ಕೋರ್ಸ್‌ಗಳನ್ನು ಕೇಳುವವರಿಲ್ಲದಂತಾಗಿದೆ.

Advertisement

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಕೆಲ ಕಾಲೇಜುಗಳನ್ನು ಮುಚ್ಚುವ ಬಗ್ಗೆ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಚಿಂತನೆ ನಡೆಸುತ್ತಿದೆ. ಇಷ್ಟು ಮಾತ್ರವಲ್ಲ  ಇನ್ಫರ್ಮೇಷನ್‌ ಟೆಕ್ನಾಲಜಿ, ಇಲೆಕ್ಟ್ರಿಕಲ್‌ ಆ್ಯಂಡ್‌ ಇಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಸೈನ್ಸ್‌, ಮೆಕ್ಯಾನಿಕಲ್‌ ಮತ್ತು ಸಿವಿಲ್‌ ಕೋರ್ಸ್‌ಗಳನ್ನು ಬೋಧಿಸುವುದನ್ನೇ ಕೆಲವು ಎಂಜಿನಿಯರಿಂಗ್‌ ಕಾಲೇಜುಗಳು ಕೈಬಿಟ್ಟಿವೆ.

ಈ ಬಗ್ಗೆ “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ದೇಶಾದ್ಯಂತ ಇರುವ 3,291 ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ 15.5 ಲಕ್ಷ ಬಿ.ಇ ಮತ್ತು ಬಿ.ಟೆಕ್‌ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಪೈಕಿ 2016-17ನೇ ಸಾಲಿನಲ್ಲಿ ಶೇ.51 ಸೀಟುಗಳು ಭರ್ತಿಯಾಗದೇ ಉಳಿದಿದ್ದವು. ಗುರುಗಾಂವ್‌ನಲ್ಲಿರುವ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಾಲ್ಕು ವರ್ಷಗಳಿಂದ ಇನ್ಫರ್ಮೇಷನ್‌ ಟೆಕ್ನಾಲಜಿ, ಇಲೆಕ್ಟ್ರಿಕಲ್‌ ಆ್ಯಂಡ್‌ ಇಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಸೈನ್ಸ್‌,

 ಮೆಕ್ಯಾನಿಕಲ್‌ ಮತ್ತು ಸಿವಿಲ್‌ ವಿಭಾಗಗಳಿಗೆ ಯಾರೊಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿರಲಿಲ್ಲ. ಹೀಗಾಗಿ 2015-16ನೇ ಸಾಲಿನಲ್ಲಿ ಎಲ್ಲ ಪ್ರಾಧ್ಯಾಪಕರನ್ನೂ ಕರ್ತವ್ಯದಿಂದ ಬಿಡುಗಡೆ ಮಾಡಬೇಕಾಯಿತು ಎಂದು ಕಾಲೇಜಿನ ಆಡಳಿತ ಮಂಡಳಿ ಸದಸ್ಯರೊಬ್ಬರು ಹೇಳಿಕೊಂಡಿದ್ದಾರೆ. 
ಕಳೆದ ವರ್ಷ ಸುಮಾರು 8 ಲಕ್ಷ ಮಂದಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಪದವೀಧರರಾಗಿದ್ದರು.

ಅವರ ಪೈಕಿ ಶೇ.40 ಮಂದಿಗೆ ಮಾತ್ರ ಕ್ಯಾಂಪಸ್‌ ಆಯ್ಕೆ ಮೂಲಕ ಕೆಲಸ ಸಿಕ್ಕಿತ್ತು. ಇದು ಎಂಜಿನಿಯರಿಂಗ್‌ ಕತೆಯಲ್ಲ. ಎಂಬಿಎ, ಫಾರ್ಮಸಿ, ಎಂಸಿಎ, ಆರ್ಕಿಟೆಕ್ಚರ್‌, ಟೌನ್‌ ಪ್ಲಾನಿಂಗ್‌, ಹೊಟೇಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳ ಕತೆಯೂ ಇದೇ ಆಗಿದೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಕೈಗಾರಿಕಾ ಕ್ಷೇತ್ರ ಮತ್ತು ಪಠ್ಯ ಕ್ರಮಕ್ಕೆ ಸಂಬಂಧವೇ ಇಲ್ಲ ಹೀಗೆ ಹತ್ತು ಹಲವು ಕೊರತೆಗಳನ್ನು ಅದು ಕಂಡುಕೊಂಡಿದೆ. 

Advertisement

ದೇಶದ ಹತ್ತು ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಉ.ಪ್ರ., ತೆಲಂಗಾಣ, ಕರ್ನಾಟಕ, ಮಧ್ಯಪ್ರದೇಶ, ಗುಜರಾತ್‌, ಕೇರಳ ಮತ್ತು ಹರ್ಯಾಣಗಳು ಒಟ್ಟು ಎಂಜಿನಿಯರಿಂಗ್‌ ಸೀಟುಗಳ ಶೇ.80ನ್ನು ಪ್ರತಿನಿಧಿಸುತ್ತವೆ. ಜತೆಗೆ ಭರ್ತಿಯಾಗದೇ ಉಳಿದಿರುವ ಶೇ.80 ಸೀಟುಗಳ ಪ್ರತಿನಿಧಿ ರಾಜ್ಯಗಳೂ ಆಗಿವೆ ಎನ್ನುವುದು ಗಮನಾರ್ಹ. ಹತ್ತು ರಾಜ್ಯಗಳ ಪೈಕಿ ಭರ್ತಿಯಾಗದೆ ಉಳಿದಿರುವ ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿ ಹರ್ಯಾಣವಿದ್ದರೆ, ಕರ್ನಾಟಕ ಕೊನೆಯ ಸ್ಥಾನದಲ್ಲಿದೆ.

ಅಖೀಲ ಭಾರತ ಮಟ್ಟದಲ್ಲಿ ಶೇ.80ರಷ್ಟು ಸೀಟುಗಳ ಪ್ರವೇಶಾತಿ (2016-17)
ರಾಜ್ಯ          ಖಾಲಿ ಸೀಟುಗಳು                ಒಟ್ಟು ಸೀಟುಗಳು
ಹರ್ಯಾಣ-         ಶೇ.74                      – 58,551
ಉತ್ತರ ಪ್ರದೇಶ- ಶೇ.65- 1,42,972
ಮಧ್ಯಪ್ರದೇಶ- ಶೇ.58- 98,247
ಆಂಧ್ರಪ್ರದೇಶ- ಶೇ.49- 1,72,746
ತಮಿಳುನಾಡು- ಶೇ.48- 2,79,397
ತೆಲಂಗಾಣ- ಶೇ.47- 1,40,318
ಗುಜರಾತ್‌- ಶೇ.46- 69,221
ಮಹಾರಾಷ್ಟ್ರ- ಶೇ.44- 1,55,277
ಕೇರಳ- ಶೇ.42- 62,458
ಕರ್ನಾಟಕ- ಶೇ.26- 1,00,565

ಎಐಸಿಟಿಯಿಂದ ಮುಚ್ಚುವ ಆದೇಶದ ನಿರೀಕ್ಷೆಯಲ್ಲಿರುವ ಕಾಲೇಜುಗಳು-153
ರಾಜ್ಯ                                    ಕಾಲೇಜುಗಳ ಸಂಖ್ಯೆ
ಮಹಾರಾಷ್ಟ್ರ                                  26
ಆಂಧ್ರಪ್ರದೇಶ                                 19
ಹರ್ಯಾಣ                                     17
ಒಡಿಶಾ                                           17
ತೆಲಂಗಾಣ                                      16
ಉತ್ತರ ಪ್ರದೇಶ                                   11
ಪಂಜಾಬ್‌                                        10
ತಮಿಳುನಾಡು                                    10
ರಾಜಸ್ಥಾನ                                         06
ಮಧ್ಯಪ್ರದೇಶ                                      05
ಪಶ್ಚಿಮ ಬಂಗಾಳ                                 04
ಹಿಮಾಚಲ ಪ್ರದೇಶ                             03
ಕರ್ನಾಟಕ                                        03
ಕೇರಳ                                             03
ಉತ್ತರಾಖಂಡ                                    02
ಛತ್ತೀಸ್‌ಗಡ                                       01

ಐದು ಜನಪ್ರಿಯವಲ್ಲದ ಕೋರ್ಸ್‌ಗಳು
2012-13 ರಿಂದ 2016-17ನೇ ಸಾಲಿನ ವರೆಗೆ ಎಂಜಿನಿಯರಿಂಗ್‌ ಕಾಲೇಜುಗಳು ಕೈಬಿಟ್ಟ ಕೋರ್ಸ್‌ಗಳು
770- ಇನ್ಫರ್ಮೇಷನ್‌ ಟೆಕ್ನಾಲಜಿ 
665- ಇಲೆಕ್ಟ್ರಿಕಲ್‌ ಆ್ಯಂಡ್‌ ಇಲೆಕ್ಟ್ರಾನಿಕ್ಸ್‌
234-ಕಂಪ್ಯೂಟರ್‌ ಸೈನ್ಸ್‌
185- ಮೆಕ್ಯಾನಿಕಲ್‌ 
139- ಸಿವಿಲ್‌
ಇನ್ಫರ್ಮೇಷನ್‌ ಟೆಕ್ನಾಲಜಿ ವಿಷಯವನ್ನು ಕೈಬಿಟ್ಟ ಕಾಲೇಜುಗಳ ಪೈಕಿ ತೆಲಂಗಾಣ (157), ತಮಿಳುನಾಡು (104), ಆಂಧ್ರಪ್ರದೇಶ (128)

Advertisement

Udayavani is now on Telegram. Click here to join our channel and stay updated with the latest news.

Next