Advertisement

ಮತಿಗಳಲ್ಲಿ ಬೇಧವಿದೆ, ಮತಗಳಲ್ಲಿ ಅಲ್ಲ

11:25 AM Jul 30, 2017 | Team Udayavani |

ಬೆಂಗಳೂರು: ಯಾವುದೇ ಮತಗಳಲ್ಲಿ ಬೇಧ-ಭಾವಗಳಿಲ್ಲ. ಆದರೆ, ಅಲ್ಲಿರುವ ಕೆಲವರ ಮತಿಗಳಲ್ಲಿ (ಬುದ್ಧಿ) ಬೇಧ ಇರುವುದರಿಂದ ಮತಿಬೇಧ ಉಂಟಾಗುತ್ತಿದೆ ಎಂದು ಮೈಸೂರಿನ ಕೆ.ಆರ್‌.ನಗರ ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಶಂಕರ ಭಾರತೀ ಸ್ವಾಮೀಜಿ ಹೇಳಿದ್ದಾರೆ.

Advertisement

ನಗರದ ಚಾಮರಾಜಪೇಟೆಯಲ್ಲಿನ ಶೃಂಗೇರಿ ಶಿವಗಂಗಾಮಠದಲ್ಲಿ ಶನಿವಾರ ವೇದಾಂತಭಾರತೀ ಹಮ್ಮಿಕೊಂಡಿದ್ದ “ಮಾಧ್ಯಮ-ಅಧ್ಯಾತ್ಮ ಸಂವಾದ’ದಲ್ಲಿ ಅವರು ಮಾತನಾಡಿದರು.  ಮತಬೇಧ ಎನ್ನುವುದು ಮನುಷ್ಯನ ಸೃಷ್ಟಿಯೇ ಹೊರತು ಮತ, ಧರ್ಮಗಳ ಸೃಷ್ಟಿಯಲ್ಲ ಎಂದರು.

ಧರ್ಮ, ಅಧ್ಯಾತ್ಮ, ವಿಜ್ಞಾನ ಸೇರಿದಂತೆ ಸಮಾಜದ ಪ್ರತಿಯೊಂದು ಕ್ಷೇತ್ರಕ್ಕೂ ಒಂದು ಒಳ್ಳೆಯ ಮುಖವಿದ್ದರೆ, ಮತ್ತೂಂದು ಕಡೆ ಕೆಟ್ಟ ಮುಖವೂ ಇರುತ್ತದೆ. ಇದಕ್ಕೆ ಮಠಾಧೀಶರೂ ಹೊರತಲ್ಲ. ಹಾಗೆಂದು ಎಲ್ಲ ಮಠಾಧೀಶರೂ ಒಂದೇ ಎನ್ನುವುದು ಕೂಡ ಸರಿಯಲ್ಲ.

ಆದ್ದರಿಂದ ಋಣಾತ್ಮಕ ಅಂಶಗಳನ್ನೇ ಮುಂದಿಟ್ಟುಕೊಂಡು ಮಾತನಾಡುವ ಬದಲಿಗೆ, ಮಠಾಧೀಶರಾಗಿ ತಮ್ಮ ಪಾಡಿಗೆ ತಾವು ಸರಳವಾಗಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಪ್ರೋತ್ಸಾಹಿಸಬೇಕಾದ್ದು ಈಗ ತುರ್ತು ಅಗತ್ಯವಿದೆ ಎಂದು ಪತ್ರಕರ್ತರೊಬ್ಬರ ಪ್ರಶ್ನೆಯೊಂದಕ್ಕೆ ಸ್ವಾಮೀಜಿಯವರು ಪ್ರತಿಕ್ರಿಯಿಸಿದರು.

ಮತಗಳಿಗೆ ತಕರಾರಿಲ್ಲ: “ಅಧ್ಯಾತ್ಮ ಒಂದೇ ಎಂದಾಗ ಮತಗಳೂ ಒಂದೇ ಏಕಿಲ್ಲ’ ಎಂಬ ಪ್ರಶ್ನೆ ಸಂವಾದದಲ್ಲಿ ತೂರಿಬಂತು. ಇದಕ್ಕೆ ಉತ್ತರಿಸಿದ ಸ್ವಾಮೀಜಿ, ಮತಗಳು ಎಷ್ಟಿದ್ದರೂ ಅವೆಲ್ಲವುಗಳ ವಿಚಾರಧಾರೆ ಮತ್ತು ಗುರಿ ಒಂದೇ ಆಗಿದೆ. ಜೀವನದ ಅತ್ಯಂತ ಸಂತೃಪ್ತಿ ಸಿಗುವುದು ಅಧ್ಯಾತ್ಮದಿಂದ ಮಾತ್ರ. ಅದು ಯಾವ ಮತ-ಧರ್ಮದಿಂದಲಾದರೂ ಪಡೆಯಬಹುದು. ದಾರಿ ಬೇರೆ ಬೇರೆಯಾಗಿದ್ದರೂ ಅವುಗಳು ಸೇರುವ ಗುರಿ ಒಂದೇ ಆಗಿರುವುದರಿಂದ ಸಮಸ್ಯೆ ಇಲ್ಲ ಎಂದರು. 

Advertisement

ಅಧ್ಯಾತ್ಮ ಮತ್ತು ಧರ್ಮಾಚರಣೆ ಎರಡರ ನಡುವಿನ ವ್ಯತ್ಯಾಸದ ಬಗ್ಗೆ ಕೇಳಿದಾಗ, “ಅಧ್ಯಾತ್ಮದ ಗುರಿ ತಲುಪಲು ಧರ್ಮಾಚರಣೆ ಒಂದು ಮಾರ್ಗವಾಗಿದೆ. ಅಧ್ಯಾತ್ಮ ಅಳವಡಿಸಿಕೊಳ್ಳಲು ಧರ್ಮದ ಚೌಕಟ್ಟು ಸುಲಭಗೊಳಿಸುತ್ತದೆ’ ಎಂದರು. 

ಅಧ್ಯಾತ್ಮವನ್ನು ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, “ಜನ ಯಾವುದನ್ನು ಬೇಗ ಗ್ರಹಣ ಮಾಡುತ್ತಾರೋ, ಅದಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಆದ್ದರಿಂದ ಮಾಧ್ಯಮಗಳು ತಕ್ಕಮಟ್ಟಿಗಾದರೂ ಅಧ್ಯಾತ್ಮವನ್ನು ಹೇಳುವಂತಾಗಬೇಕು. ಸಾಧ್ಯವಾದರೆ ಸ್ವ-ಅನುಭವದ ಮೂಲಕ ಹೇಳುವಂತಾದರೆ, ಇನ್ನೂ ಉತ್ತಮ’ ಎಂದು ತಿಳಿಸಿದರು. 

ವಿಜ್ಞಾನ ಮತ್ತು ಅಧ್ಯಾತ್ಮ ಕುರಿತು ನಾರಾಯಣ ಹೃದಯಾಲಯದ ನಿರ್ದೇಶಕ ಮತ್ತು ನರವಿಜ್ಞಾನಿ ಡಾ.ತಿಮ್ಮಪ್ಪ ಹೆಗ್ಡೆ ಮಾತನಾಡಿದರು. 

ಹೊಟ್ಟೆಹೊರೆಯಲು ಜೋತಿಷ್ಯ: ಜೋತಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೋತಿಷ್ಯವು ಅಧ್ಯಾತ್ಮದಿಂದ ಸಂಪೂರ್ಣ ಬೇರೆಯಾದದ್ದು. ಉಪನಿಷತ್ತು ಮತ್ತು ಭಗವದ್ಗೀತೆಯಲ್ಲಿ ಜೋತಿಷ್ಯದ ಬಗ್ಗೆ ಹೇಳಿಯೇ ಇಲ್ಲ. ವೇದಶಾಸ್ತ್ರದಲ್ಲಿ ಕೇವಲ ಕಾಲನಿರ್ಣಯ ಎಂಬ ರೂಪದಲ್ಲಿ ಬಂದುಹೋಗುತ್ತದೆ.

ಈಗ ಕೆಲವರು ತಮ್ಮ ಕಷ್ಟಕಾರ್ಪಣ್ಯಗಳ ಪರಿಹಾರಕ್ಕಾಗಿ ಈ ಜೋತಿಷ್ಯದ ಮೊರೆಹೋಗುತ್ತಾರೆ. ಅದಕ್ಕೆ ಪ್ರತಿಯಾಗಿ ಪ್ರಾಮಾಣಿಕವಾಗಿ ಜೋತಿಷ್ಯ ಹೇಳುವವರೂ ಇದ್ದಾರೆ. ಆದರೆ, ಹಲವರು ಹೊಟ್ಟೆಹೊರೆಯಲು ಜೋತಿಷ್ಯಶಾಸ್ತ್ರ ಹೇಳುವವರೂ ಇದ್ದಾರೆ ಎಂದು ಸ್ಪಷ್ಟಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next