ಪುತ್ತೂರು: ರಾಜ್ಯದಲ್ಲಿ 60 ಕೋಟಿ ಮೀನು ಮರಿಗಳಿಗೆ ಬೇಡಿಕೆ ಇದ್ದು, 40 ಕೋಟಿ ಮಾತ್ರ ಪೂರೈಕೆ ಮಾಡಲು ಸಾಧ್ಯವಾಗಿದೆ. ಮೀನು ಕೃಷಿಗೆ ಸಾಕಷ್ಟು ಬೇಡಿಕೆ ಇದೆ. ಕೃಷಿಕರು ಇನ್ನಷ್ಟು ಸ್ಮಾರ್ಟ್ ಆಗುವ ಅಗತ್ಯವಿದೆ ಎಂದು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಿವಕುಮಾರ್ ಮಗದ್ ಹೇಳಿದರು. ಜಿಲ್ಲಾ ಮಟ್ಟದ ಮೀನು ಕೃಷಿ ದಿನಾಚರಣೆ ಅಂಗವಾಗಿ ಪುತ್ತೂರು ಎಪಿಎಂಸಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಅವರ ಕುರಿಯದ ಮನೆಯಲ್ಲಿ, ಮೀನು ಕೃಷಿಗೆ ಚಾಲನೆ ನೀಡಿ ಮಾಹಿತಿಯಯಿತ್ತರು.
ಕೃಷಿ ಕ್ಷೇತ್ರದಲ್ಲೂ ಪೈಪೋಟಿ ಇದೆ. ಒಂದೇ ಕೃಷಿಯನ್ನು ಅನುಸರಿಸುವ ಮನೋಭಾವ ಕೈಬಿಡಬೇಕು. ಮುಖ್ಯ ಕೃಷಿಯ ಜತೆಗೆ ಉಪ ಉತ್ಪನ್ನಗಳನ್ನು ಬೆಳೆಸಬೇಕು ಎಂದು ಹಿಂದಿನಿಂದಲೇ ಹೇಳಲಾಗುತ್ತಿತ್ತು. ಇದಕ್ಕೆ ಹೊಸ ಸೇರ್ಪಡೆಯಾಗಿ ಮೀನು ಕೃಷಿಯನ್ನು ಮಾಡಬಹುದು. ತಮ್ಮ ನಷ್ಟವನ್ನು ಸರಿದೂಗಿಸಲು ಮೀನು ಕೃಷಿಯನ್ನು ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕೃಷಿಕರು ಮೀನು ಕೃಷಿಯತ್ತ ಒಲವು ತೋರಿಸಬೇಕು ಎಂದರು.
ಮಾರುಕಟ್ಟೆಯಲ್ಲಿ ಮೀನಿಗೆ ಭಾರೀ ಬೇಡಿಕೆ ಇದೆ. ಆದರೆ ಸಮುದ್ರದಲ್ಲಿ ಸಿಗುವ ಮೀನಿನಂತೆ, ಸಿಹಿನೀರಿನ ಮೀನಿಗೂ ಬೇಡಿಕೆ ಇದೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಮನೆಯ ಬಾವಿ, ಕೆರೆಗಳಲ್ಲಿ ಮೀನನ್ನು ಬೆಳೆಸಬಹುದು. ಕೃಷಿ ಜತೆಗೆ ಕೋಳಿ, ಹಂದಿ, ಮೀನು ಮೊದಲಾದ ಸಾಕಣೆಯನ್ನು ಮಾಡಲಾಗುತ್ತಿದೆ. ಈ ದಾರಿ ಕಂಡುಕೊಂಡ ಕೃಷಿಕರು ಲಾಭ ಪಡೆಯುತ್ತಿದ್ದಾರೆ. ಒಂದೇ ಕೃಷಿಯನ್ನು ನಂಬಿಕೊಂಡು ಇರುವವರು ಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ. ಇದೇ ಸಾಲಿಗೆ ಮೀನನ್ನು ಸೇರಿಸಿಕೊಂಡರೆ, ಇನ್ನಷ್ಟು ಲಾಭ ಪಡೆಯಬಹುದು. ಇದರ ನಿರ್ವಹಣೆಗೂ ಹೆಚ್ಚು ಸಮಯವನ್ನು ಮೀಸಲಿಡುವ ಅಗತ್ಯವಿಲ್ಲ ಎಂದು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೀನು ಸಾಕಾಣಿಕೆ ಜಿಲ್ಲೆಯ ಜನರಿಗೆ ಹೊಸದೇನಲ್ಲ. ಆದರೆ ಸಿಹಿ ನೀರಿನಲ್ಲಿ ಮೀನು ಬೆಳೆಸುವುದು ಹೊಸ ವಿಚಾರವೇ. ಈ ನಿಟ್ಟಿನಲ್ಲಿ ಕೃಷಿಕರು ಗಮನ ಹರಿಸಬೇಕು. ಜಿಲ್ಲೆಯಲ್ಲಿ ನೀಲಿ ಕ್ರಾಂತಿ ಆಗುವ ರೀತಿಯಲ್ಲಿ ಕೆಲಸ ಮಾಡಬೇಕು. ಇದಕ್ಕೆ ಬೇಕಾದ ಮಾಹಿತಿ, ಸರಕಾರದ ಸೌಲಭ್ಯವನ್ನು ಪಡೆದುಕೊಂಡು, ಸ್ವಾವಲಂಬಿಗಳಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಕರಾವಳಿ ಭಾಗದ ಬಹುತೇಕ ಕಡೆಗಳಲ್ಲಿ ಕೆರೆ ಇದೆ. ಇಂತಹ ಕೆರೆ, ಬಾವಿಯಲ್ಲಿ ಮೀನು ಸಾಕುವ ಮೂಲಕ ಕೃಷಿಯನ್ನು ಉತ್ತಮ ಲಾಭ ಪಡೆಯಬಹುದು ಎನ್ನುವುದನ್ನು ಅಧಿಕಾರಿಗಳು ಮಾಹಿತಿ ನೀಡಬೇಕಾಗಿದೆ ಎಂದು ಹೇಳಿದರು.
ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಜಿ.ಪಂ. ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಕೋಸ್ಟಲ್ ಅಕ್ವೇರಿಯಂ ಮಾಲಕ ಸುಜಿತ್ ಕುಮಾರ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ತಾ.ಪಂ. ಇಒ ಜಗದೀಶ್, ಮಂಗಳೂರು ಮೀನುಗಾರಿಕಾ ಇಲಾಖೆಯ ಡಾ| ಸುಶ್ಮಿತಾ, ಸಹಾಯಕ ಮೀನು ಇಲಾಖಾ ಅಧಿ ಕಾರಿ ಮಂಜುಳಾ ಶೆಣೈ, ಮೀನುಗಾರಿಕಾ ವಿಷಯ ತಜ್ಞ ಗಣೇಶ್ ಉಪಸ್ಥಿತರಿದ್ದರು. ಮೀನುಗಾರಿಕಾ ಇಲಾಖೆ ಸಹಾಯಕ ಅಧಿ ಕಾರಿ ದಿವ್ಯಾ ಸ್ವಾಗತಿಸಿ, ಮೇಲ್ವಿಚಾರಕ ಬಸವರಾಜ್ ವಂದಿಸಿದರು.
ಲಾಭದಾಯಕ ಕೃಷಿ
ಪ್ರತಿದಿನ 11.6 ಮಿಲಿಯನ್ ಟನ್ ಮೀನು ದೇಶಕ್ಕೆ ಅಗತ್ಯವಿದೆ. ಇದರಲ್ಲಿ 7.4 ಮಿಲಿಯನ್ ಟನ್ ಮಾತ್ರ ಸಿಹಿನೀರಿನಲ್ಲಿ ಬೆಳೆಸಿದ ಮೀನು ಬಳಕೆ ಆಗುತ್ತಿದೆ. ರಾಜ್ಯದಲ್ಲೇ 60 ಕೋಟಿ ಮೀನು ಮರಿಗಳ ಬೇಡಿಕೆ ಇದ್ದು, 40 ಕೋಟಿ ಮಾತ್ರ ಉತ್ಪಾದನೆ ಸಾಧ್ಯವಾಗಿದೆ. ಉಳಿದ 20 ಕೋಟಿಯಷ್ಟು ಇನ್ನೂ ಕೊರತೆಯಾಗಿಯೇ ಉಳಿದಿದೆ. ಈ ನಿಟ್ಟಿನಲ್ಲಿ ಮೀನು ಕೃಷಿ ಲಾಭದಾಯಕ. ಮೀನು ಸಾಕಾಣಿಕೆ ಮೂಲಕ ಲಾಭ ಪಡೆದುಕೊಳ್ಳಲು ಅವಕಾಶವಿದೆ. ಬಹುತೇಕರಿಗೆ ಈ ವಿಚಾರ ಗೊತ್ತಿಲ್ಲದೇ ಇರುವುದರಿಂದ, ಒಲವು ಕಡಿಮೆಯಾಗಿದೆಯಷ್ಟೇ ಎಂದು ಶಿವಕುಮಾರ್ ಮಗದ್ ವಿವರಿಸಿದರು.