Advertisement
ಒಂದು ಗಂಟೆಗೂ ಹೆಚ್ಚು ತಡವಾಗಿ ಸಭೆ ಪ್ರಾರಂಭವಾಗುತ್ತಿದ್ದಂತೆ ಹೊಸಕೆರೆ ಕ್ಷೇತ್ರದ ಪಕ್ಷೇತರ ಸದಸ್ಯ ತೇಜಸ್ವಿ ಪಟೇಲ್, ಈಚೆಗೆ ಕಡತ ವಿಲೇವಾರಿಯಲ್ಲಿ ಸಾಕಷ್ಟು ವಿಳಂಬ ಆಗುತ್ತಿದೆ ಎಂಬುದು ಯಾವ ಕಾರಣಕ್ಕೆ ಎಂಬುದೇ ತಿಳಿಯದಂತಾಗಿದೆ. ಕಡತ ವಿಲೇವಾರಿ ವಿಳಂಬದ ಪರಿಣಾಮ ವಿವಿಧ ಇಲಾಖೆಯಲ್ಲಿನ ಅನುದಾನ ಸರ್ಕಾರಕ್ಕೆ ವಾಪಸ್ ಆಗಿದೆ. ಒಂದೊಂದು ಕಡತ ವಿಲೇವಾರಿಗೆ ಸಮಯ ನಿಗದಿಪಡಿಸಿ ಸಕಾಲ… ಮಾದರಿಯಲ್ಲಿ ಜಿಲ್ಲಾ ಪಂಚಾಯತ್‌ಗೆ ಅನ್ವಯ ಆಗುವಂತೆ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.
Related Articles
Advertisement
ಬಿಜೆಪಿ ಸದಸ್ಯೆ ಕೆ.ವಿ. ಶಾಂತಕುಮಾರಿ, ಕುಡಿಯುವ ನೀರಿನ ಸಮಸ್ಯೆ ವಿಚಾರ ಪ್ರಸ್ತಾಪಿಸಿದಾಗ ಮತ್ತೆ ಕಡತ ವಿಲೇವಾರಿ ವಿಳಂಬದ ವಿಚಾರ ಪ್ರಸ್ತಾಪಿಸಿದ ಅಧ್ಯಕ್ಷೆ ಶೈಲಜಾ ಬಸವರಾಜ್, ಚುನಾವಣಾ ಸಂದರ್ಭದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವ ಸ್ಥಳಗಳಲ್ಲಿ ತುರ್ತಾಗಿ ಕೊರೆಸಿದ ಕೊಳವೆಬಾವಿಗಳ ಕಡತಕ್ಕೆ ಈವರೆಗೆ ಸಿಇಒ ಸಹಿ ಮಾಡದೇ ಇರುವ ಕಾರಣಕ್ಕೆ ಬಿಲ್ ಆಗಿಲ್ಲ. ಹಳೆಯ ಬಿಲ್ ಆಗದೆ, ಹೊಸದಾಗಿ ಬೋರ್ ಕೊರೆಯಲಿಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಯಾವ ಕಾರಣಕ್ಕೆ ಕಡತಕ್ಕೆ ಸಹಿ ಹಾಕಿಲ್ಲ ಎಂಬುದನ್ನು ಸಭೆಗೆ ತಿಳಿಸಬೇಕು ಎಂದರು.
ತುರ್ತು ಸಂದರ್ಭದಲ್ಲಿ ಕೊರೆಯಲಾದ ಕೊಳವೆಬಾವಿಗಳನ್ನು ಕ್ರಿಯಾಯೋಜನೆಯಲ್ಲಿ ಸೇರಿಸಿಕೊಡಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇಗೆ ಸೂಚಿಸಿದ್ದೇನೆ. 621 ಕೊಳವೆಬಾವಿ ಬಿಲ್ಗಳ ಕಡತಕ್ಕೆ ಸಹಿ ಮಾಡಿದ್ದೇನೆ. ಈಗಲೇ ಕಡತ ತಂದಲ್ಲಿ ಸಹಿ ಮಾಡುತ್ತೇನೆ ಎಂದು ಸಿಇಒ ಎಚ್. ಬಸವರಾಜೇಂದ್ರ ತಿಳಿಸಿದರು.
ಮೇ. 15 ರಂದೇ ಕ್ರಿಯಾಯೋಜನೆ ಜೊತೆಯಾಗಿಯೇ ಕಡತ ಸಲ್ಲಿಸಿರುವುದಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇ ಎಚ್.ಎನ್. ರಾಜು ಮಾಹಿತಿ ನೀಡುತ್ತಿದ್ದಂತೆ ಉಪಾಧ್ಯಕ್ಷ ಸುರೇಂದ್ರನಾಯ್ಕ, ಕೆ.ಎಚ್. ಓಬಳೇಶಪ್ಪ ಎಲ್ಲರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಥಮ ಆದ್ಯತೆಯಲ್ಲಿ ಚುನಾವಣಾ ಸಂದರ್ಭದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವ ಸ್ಥಳಗಳಲ್ಲಿ ತುರ್ತಾಗಿ ಕೊರೆಸಿದ ಕೊಳವೆಬಾವಿಗಳ ಬಿಲ್ ಪಾವತಿಗೆ ಸಿಇಒ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸಂಬಂಧಿತ ಕಡತಗಳಿಗೆ ಸಹಿ ಮಾಡಬೇಕು. ಅಷ್ಟಕ್ಕೂ ಕೊಳವೆಬಾವಿ ಕೊರೆಸಿಯೇ ಇಲ್ಲ ಎಂಬ ಅನುಮಾನ ಇದ್ದರೆ ಸ್ಥಳ ಪರಿಶೀಲನೆ ಮಾಡಿಯೇ ಸಹಿ ಮಾಡಿ… ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಸೂಚಿಸಿದರು. ಅಂತಿಮವಾಗಿ ಕಡತಕ್ಕೆ ಸಹಿ ಮಾಡುವುದಾಗಿ ಸಿಇಒ ಎಚ್. ಬಸವರಾಜೇಂದ್ರ ತಿಳಿಸಿದರು.
ಹಾಸ್ಟೆಲ್ಗಳ ಬೋಗಸ್ ಬಿಲ್ ವ್ಯವಹಾರ: ಕಳೆದ 5 ವರ್ಷದಿಂದ ಕೆಲವಾರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅನುದಾನಿತ ಶಿಕ್ಷಣ ಮತ್ತು ಖಾಸಗಿ ಸಂಸ್ಥೆ(ಹಾಸ್ಟೆಲ್) ಬೋಗಸ್ ಬಿಲ್ ಪಡೆಯುತ್ತಿವೆ ಎಂಬ ವಿಚಾರವನ್ನು ಆನಗೋಡು ಕ್ಷೇತ್ರದ ಕಾಂಗ್ರೆಸ್ ಸದಸ್ಯ ಕೆ.ಎಸ್. ಬಸವರಾಜ್ ಸೋಮವಾರ ಜಿಪಂ ಸಾಮಾನ್ಯ ಸಭೆಯಲ್ಲಿ ಬೆಳಕಿಗೆ ತಂದರು.
ದಾವಣಗೆರೆ ನಗರದಲ್ಲಿ 6 ಅನುದಾನಿತ ಹಾಸ್ಟೆಲ್ಗಳಿವೆ. ಅವುಗಳಲ್ಲಿ ಕೆಲವು ಬಹಳ ಚೆನ್ನಾಗಿ ನಡೆಯುತ್ತಿವೆ. ಕೆಲವು ಹಾಸ್ಟೆಲ್ಗಳಲ್ಲಿ ಬರೀ ಟ್ರಂಕ್ ವ್ಯವಹಾರ…. ಮಾತ್ರ ನಡೆಯುತ್ತಿದೆ. ಆ ಹಾಸ್ಟೆಲ್ಗಳ ದಾಖಲೆಯಲ್ಲಿ 100 ವಿದ್ಯಾರ್ಥಿಗಳು ಇರುತ್ತಾರೆ. ಆದರೆ, ಆ ಹಾಸ್ಟೆಲ್ಗಳಲ್ಲಿ ಅಷ್ಟು ಸಂಖ್ಯೆಯ ವಿದ್ಯಾರ್ಥಿಗಳೇ ಇರುವುದಿಲ್ಲ. ಸಮಾಜ ಕಲ್ಯಾಣ ಇಲಾಖೆ ಮತ್ತು ಬಿಸಿಯೂಟ ಯೋಜನೆಯಡಿ ಎಲ್ಲಾ ವಿದ್ಯಾರ್ಥಿಗಳ ಹೆಸರಲ್ಲಿ ಅಕ್ಕಿ ಎಲ್ಲಾ ಅಗತ್ಯ ವಸ್ತು ಪಡೆದುಕೊಳ್ಳಲಾಗುತ್ತಿದೆ ಎಂದು ದೂರಿದರು.
ಏನಾದರೂ ಹಾಸ್ಟೆಲ್ಗಳಿಗೆ ಭೇಟಿ ನೀಡಿದರೆ ಬರೀ ಟ್ರಂಕ್ ಮಾತ್ರವೇ ಇರುತ್ತವೆ. ವಿದ್ಯಾರ್ಥಿಗಳು ಎಲ್ಲಿ ಎಂದು ಕೇಳಿದರೆ ಏನಾದರೂ ಒಂದು ಕಾರಣ ಹೇಳುತ್ತಾರೆ. ಈಗ ಪ್ರತಿ ವಿದ್ಯಾರ್ಥಿಗೆ ಮಾಸಿಕ 1,100 ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ತಿಂಗಳಿಗೆ 11 ಲಕ್ಷ ಬಿಡುಗಡೆ ಆಗುತ್ತಿದೆ. ಅಷ್ಟೊಂದು ಹಣ ಬೋಗಸ್ ಬಿಲ್ ಮೂಲಕ ಪಡೆದುಕೊಳ್ಳಲಾಗುತ್ತಿದೆ. 5 ವರ್ಷದಿಂದ ಬಿಡುಗಡೆ ಆಗಿರುವುದು, ವಿದ್ಯಾರ್ಥಿಗಳ ನಿಖರ ಮಾಹಿತಿ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ನನ್ನ ಆರೋಪ ನಿಜ. ಬೇಕಾದರೆ ಈ ಕ್ಷಣವೇ ಆ ಹಾಸ್ಟೆಲ್ಗಳಿಗೆ ಭೇಟಿ ನೀಡಿ, ಪರಿಶೀಲಿಸಿ. ಆದರೆ, ಭೇಟಿಗೆ ಹೋಗುವ ಮುನ್ನ ಯಾವುದೇ ಅಧಿಕಾರಿಗಳಿಗೂ ಮಾಹಿತಿ ನೀಡಬೇಡಿ. ನೀವು ಹೇಳಿ ಹಾಸ್ಟೆಲ್ಗೆ ಹೋಗುವ ಹೊತ್ತಿಗೆ ಟ್ರಂಕ್ ಲೆಕ್ಕಾಚಾರ… ಸರಿ ಮಾಡಲಾಗಿರುತ್ತದೆ. ತಂಡಗಳ ರಚಿಸಿ, ಪರಿಶೀಲನೆ ನಡೆಸಿ, ಸರ್ಕಾರದ ಹಣ ಉಳಿಸಿ ಎಂದು ಒತ್ತಾಯಿಸಿದರು.
ಸದಸ್ಯರು ಹೇಳುತ್ತಿರುವುದು ನಿಜ. ಅದು ನನ್ನ ಅನುಭವಕ್ಕೂ ಬಂದಿದೆ. ತಂಡಗಳಲ್ಲಿ ಸಂಬಂಧಿತ ಹಾಸ್ಟೆಲ್ಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಚ್. ಬಸವರಾಜೇಂದ್ರ ತಿಳಿಸಿದರು.
ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡ, ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವಂತೆ ಶಾಸಕ ಎಸ್.ಎ. ರವೀಂದ್ರನಾಥ್ ಸೂಚಿಸಿದರು. ದಾವಣಗೆರೆಯಲ್ಲಿನ ಹಾಸ್ಟೆಲ್ಗಳಿಗೆ ದೂಡಾದಿಂದ ನಿವೇಶನ ದೊರೆತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶಿವಾನಂದ್ ಕಂಬಾರ್ ತಿಳಿಸಿದರು.
ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹಾಸ್ಟೆಲ್ಗಳ ವಿದ್ಯಾರ್ಥಿಗಳು ಎಲ್ಲಿ ಇರುತ್ತಾರೋ ಅಲ್ಲಿಗೆ ತಿಂಡಿ, ಊಟ ಸರಬರಾಜುಗೆ ವ್ಯವಸ್ಥೆ ಮಾಡಬೇಕು ಎಂದು ಎಚ್. ಬಸವರಾಜೇಂದ್ರ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶಿವಾನಂದ್ ಕಂಬಾರ್‌ಗೆ ಸೂಚಿಸಿದರು.
ಕಾಡಿದ ಕೋರಂ ಕೊರತೆ: ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಗೆ ಪ್ರಾರಂಭದಲ್ಲಿ ಕೋರಂ ಕೊರತೆ ಕಾಡಿತು. ಬೆಳಗ್ಗೆ 11ಕ್ಕೆ ಪ್ರಾರಂಭವಾಗಬೇಕಿದ್ದ ಸಭೆಗೆ ಅಗತ್ಯ ಸದಸ್ಯರು ಭಾಗವಹಿಸದ ಕಾರಣ ಕೋರಂ…ಗಾಗಿ ಒಂದು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು. 1 ಗಂಟೆಯಾದರೂ 47 ಸದಸ್ಯರ ಪೈಕಿ 24 ಸದಸ್ಯರೂ ಸಭೆಯಲ್ಲಿ ಇರಲಿಲ್ಲ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಸಹ ಕೋರಂ… ಭರ್ತಿಗೆ ಕಾಯ್ದರು. ಅಧ್ಯಕ್ಷೆಶೈಲಜಾ ಬಸವರಾಜ್, ಉಪಾಧ್ಯಕ್ಷ ಸುರೇಂದ್ರನಾಯ್ಕ ಫೋನ್ ಮೂಲಕ ಸದಸ್ಯರಿಗೆ ಕರೆ ಮಾಡಿದರು. ಕೆಲ ಸದಸ್ಯರು ಸಭೆಗೆ ಬರುವ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ಸಭೆ ಪ್ರಾರಂಭವಾಯಿತು.
ಮೊಳಗಿದ ಘೋಷಣೆ: ಬಿಜೆಪಿ ಸದಸ್ಯ ಎಂ.ಆರ್. ಮಹೇಶ್, ಕೇಂದ್ರ ಸರ್ಕಾರ 370ನೇ ವಿಧಿ ರದ್ದುಪಡಿಸಿದ್ದು, ರಾಜ್ಯ ಸರ್ಕಾರ ಟಿಪ್ಪು ಜಯಂತಿ ರದ್ದುಪಡಿಸಿದ್ದನ್ನು ಸ್ವಾಗತಿಸುವುದಾಗಿ ಹೇಳುತ್ತಿದ್ದಂತೆ, ಜಿಪಂನಲ್ಲಿ ರಾಜಕೀಯ ವಿಚಾರ ಪ್ರಸ್ತಾಪಿಸಬಾರದು ಎಂದು ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದು ದೇಶಕ್ಕೆ ಬೇಕಾದ ವಿಚಾರ… ಎಂದು ಮಹೇಶ್ ಸಮರ್ಥಿಸಿಕೊಂಡರು. ಒಂದು ಹಂತದಲ್ಲಿ ಇದು ಸಭೆಗೆ ಸಂಬಂಧಿಸದ ವಿಷಯ ಎಂದು ಅಧ್ಯಕ್ಷೆ ಶೈಲಜಾ ಬಸವರಾಜ್ ಹೇಳಿದರು. ಅದಕ್ಕೆ ಆಕ್ಷೇಪ ವ್ಯಕಪಡಿಸಿದ ಮಹೇಶ್, ಇದು ದೇಶಕ್ಕೆ ಸಂಬಂಧಿಸಿದ ವಿಚಾರ. ಯಾಕೆ ಪ್ರಸ್ತಾಪಿಸಬಾದರು. ದೇಶ ಮೊದಲು ಎಂದು ಮತ್ತೆ ಭಾರತ್ ಮಾತಾ ಕೀ ಜೈ… ಎಂದು ಘೋಷಣೆ ಕೂಗಿದರು.
ಸರ್ಕಾರಕ್ಕೆ ಪ್ರಸ್ತಾವನೆ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಅಡಕೆ ತೋಟಗಳ ಅಭಿವೃದ್ಧಿಗೆ ವೈಯಕ್ತಿಕವಾಗಿ ನೀಡಲಾಗುವ 2 ಲಕ್ಷ ಅನುದಾನವನ್ನು ಒಂದು ವರ್ಷಕ್ಕೆ ಮಾತ್ರವೇ ಸೀಮಿತಗೊಳಿಸುವ ಬದಲಿಗೆ ನಿರಂತರವಾಗಿ ಮಂಜೂರಾತಿಗೆ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಉಪಾಧ್ಯಕ್ಷ ಸುರೇಂದ್ರನಾಯ್ಕ ಒತ್ತಾಯಿಸಿದರು. ಸಾಕಷ್ಟು ಚರ್ಚೆಯ ನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಾಮಾನ್ಯ ಸಭೆ ನಿರ್ಧರಿಸಿತು.
ಅಧಿಕಾರಿ ರಕ್ಷಣೆಗೆ ಒತ್ತಾಯ: ಕಾನೂನು ವ್ಯಾಪ್ತಿಯೊಳಗೆ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿಯ ರಕ್ಷಣೆಗೆ ಜಿಲ್ಲಾ ಪಂಚಾಯತ್ ಮುಂದಾಗಬೇಕು ಎಂದು ಸದಸ್ಯರು ಒತ್ತಾಯಿಸಿದರು. ಇಂತಹ ಪ್ರಕರಣಗಳಿಂದ ಅಧಿಕಾರಿಗಳು ಕೆಲಸ ಮಾಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣ ಆಗಬಹುದು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯ ವಿರುದ್ಧವೇ ಆರೋಪ ಬಂದರೂ ಬರಬಹುದು. ಮಂದೆ ಇಂತಹ ಪರಿಸ್ಥಿತಿ ನಿರ್ಮಾಣ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಪ್ರಕರಣ ಇತ್ಯರ್ಥ ಆಗುವ ತನಕ ದೂರು ನೀಡಿರುವ ಮಹಿಳಾ ಸಿಬ್ಬಂದಿ ಕಚೇರಿಗೆ ಬರುವುದನ್ನು ನಿರ್ಬಂಧಿಸಬೇಕು ಎಂದು ಪಕ್ಷಾತೀತವಾಗಿ ಸದಸ್ಯರು ಒತ್ತಾಯಿಸಿದರು.