ನಿನ್ನ ನೋಡಿದರೆ ಖುಷಿಯಾಗಂತೂ ಇದ್ದೀಯಾ ಅನ್ನಿಸ್ತು. ಮಾತಾಡಿಸುವ ಧೈರ್ಯವಾಗದಿದ್ದುದೇ ಒಳ್ಳೆದಾಯ್ತು… ಎಲ್ಲಾದರೂ ಇರು, ಚೆನ್ನಾಗಿರು… ಮನಸ್ಸಿಗೆ ತುಂಬಾ ಬೇಜಾರಾದಾಗ, ನೋವಾದಾಗ ಈಗಲೂ ನೀನೇ ಮೊದಲು ನೆನಪಾಗ್ತಿಯ..
ಗೆಳೆಯಾ….
ಈಗಷ್ಟೇ ನಿನ್ನನ್ನು ನೋಡಿದೆ. ಅದೇ ಹಳೆಯ ಪುಳಕವೊಂದು ಮೈ ತುಂಬಾ ಹರಿದಂತಾಯಿತು. ಮಾತನಾಡಿಸಬೇಕೆಂಬ ಉಮ್ಮೇದಿ ಉಕ್ಕಿತು. ಆದರೆ ಎದೆಯೊಳಗೆ ಯಾಕೋ ಧೈರ್ಯವೇ ಮೂಡಲಿಲ್ಲ. ನೋಡಿಯೂ ನೋಡದಂತೆ ಉಳಿದುಬಿಟ್ಟೆ. ತಪ್ಪೆಲ್ಲಾ ನನ್ನದೇ ಕಣೋ. ನಿನ್ನೆಡೆಗೆ ಆಗಾಧ ಸೆಳತವಿತ್ತು. ಆಳವಾದ ಒಲವಿತ್ತು . ಅಪಾರವಾದ ಆಕರ್ಷಣೆಯಿತ್ತು. ಇದೆಲ್ಲವನ್ನೂ ಮೀರಿ ನನ್ನೊಳಗೊಂದು ವಾಸ್ತವತೆಯ ಧೋರಣೆಯಿತ್ತು.
ಪ್ರೀತಿಯೊಂದರಿಂದಲೇ ಹೊಟ್ಟೆ ತುಂಬಿಸಿಕೊಳ್ಳಲು ಆಗುವುದಿಲ್ಲವಲ್ಲ; ನೀನೋ ಯಾವಾಗ ನೋಡಿದರೂ, ಕೆಲಸ ಬದಲಿಸುತ್ತಲೇ ಇದ್ದೆ. ಎಲ್ಲಿಯೂ ಎರಡು ತಿಂಗಳು ತುಂಬಿಸುತ್ತಲೇ ಇರಲಿಲ್ಲ. ಆಗಲೇ ಏನೋ ತಕರಾರು, ಎಂಥದ್ದೋ ಕಿರಿಕ್ಕು. ಎಲ್ಲರೂ ಬದುಕುವ ರೀತಿಯಲ್ಲಿ ನೀನು ಬದುಕಲು ಹೋದವನೇ ಅಲ್ಲ. ಏನೋ ಸಿದ್ಧಾಂತ, ಮತ್ತೆಂಥದೋ ಬದ್ಧತೆ, ಮಣ್ಣು ಮಸಿ ಮಹತ್ವಾಕಾಂಕ್ಷೆ.. ಥುತ್, ಬರೀ ಇಂಥವೇ ಹೇಳುತ್ತಿದ್ದೆ. ಆಗೆಲ್ಲಾ ನಿನ್ನ ಮುಖಕ್ಕೆ ಬಾರಿಸಿ ಬಿಡಬೇಕೆನಿಸುತ್ತಿತ್ತು. ಆದರೆ ಇರುವಿನ ಅರಿವನ್ನೇ ಮರೆತವನಂತೆ, ನನ್ನ ಕಣ್ಣಲ್ಲಿ ಕಣ್ಣಿಟ್ಟು ಅದೆಷ್ಟು ಹೊತ್ತು ಮೌನವಾಗಿ ನೋಡುತ್ತಾ ಕುಳಿತು ಬಿಡುತ್ತಿದ್ದೆ? ಯಾಕೋ ನಿನ್ನ ಕಂಗಳ ಆ ತಂಪಿನಿಂದ ಆಚೆ ಬರಲು ಮನಸೇ ಆಗುತ್ತಿರಲ್ಲಿಲ್ಲ. ಅದೆಷ್ಟು ಒಲವು ತುಂಬಿ ತುಳುಕುತ್ತಿತ್ತೋ ನಿನ್ನ ಕಂಗಳಲ್ಲಿ. ನಮಗೇ ಅರಿವಿರದಂತೆ ಕಣ್ಣಲ್ಲಿ ತೆಳುವಾದ ಕಂಬನಿಯ ತೆರೆಯೊಂದು ಆವರಿಸಿಕೊಂಡು , ಒಬ್ಬರಿಗೊಬ್ಬರು ಕಾಣದಷ್ಟು ಕಣ್ಣು ಮಂಜು ಮಂಜಾದಾಗ, ಒಬ್ಬರು ಮತ್ತೂಬ್ಬರ ಕಣ್ಣೊರೆಸಿ, ನಿರೀಕ್ಷೆಯ ಪಾತ್ರೆಯ ತುಂಬಾ, ಖುಷಿಯನ್ನು ಕುಡಿದವರಂತೆ ಸಂಭ್ರಕ್ಕೀಡಾಗುತ್ತಿದ್ದೆವು.
ಆದರೆ, ಬದುಕು ಎಲ್ಲೋ ಹಳಿ ತಪ್ಪಿತು. ನೀನು ಬದಲಾಗಲೇ ಇಲ್ಲ. ಮನೆಯಲ್ಲಿ ನನ್ನ ಮದುವೆಯ ಮಾತುಕತೆ ಜೋರಾಗಿತ್ತು. ನೀನು ಕಳೆದುಹೋಗುತ್ತಿಯೆಂಬುದು ಖಾತ್ರಿಯಾಯಿತು. ವಾಸ್ತವವನ್ನು ಎಷ್ಟೇ ಅರ್ಥ ಮಾಡಿಸಲು ಪ್ರಯತ್ನಿಸಿದರೂ, ಇನ್ನು ಸ್ವಲ್ಪ ದಿನ ಕಾಯೋಣ. ನಂಗೂ ಒಳ್ಳೆ ಟೈಂ ಬರುತ್ತೆ ಅನ್ನುತ್ತಲೇ ಇದ್ದೆ. ನನ್ನ ಸಹನೆಯೂ ಮೀರಿತ್ತು . ಪರಿಸ್ಥಿಯೂ ಕೈ ಮೀರಿತ್ತು…
ಅವತ್ತು ನಿನ್ನ ನನ್ನ ಭೇಟಿಯ ಕೊನೆಯ ದಿನ . ನಂಗಿನ್ನೂ ಚೆನ್ನಾಗಿ ನೆನಪಿದೆ. ಮದುವೆ ನಿಶ್ಚಯವಾಗಿದ್ದನ್ನು ನಿಂಗೆ ಹೇಳಿದೆ. ಹುಡುಗ ಶ್ರೀಮಂತ. ಒಳ್ಳೆಯ ಬಿಸ್ನೆಸ್ ಇದೆ. ಅಪ್ಪ ಅಮ್ಮ ತುಂಬಾ ಖುಷಿಯಲ್ಲಿದ್ದಾರೆ. ಈ ಸಂಬಂಧ ನಿರಾಕರಿಸೋಕೆ ನಂಗೆ ಯಾವ ದಾರಿಯೂ ಕಾಣ್ತಾ ಇಲ್ಲ ಅಂದಿದ್ದೆ. ನನ್ನ ಮಾತು ಕೇಳಿದ ತಕ್ಷಣ, ಮೋಸಗಾತಿ ಅಂತ ನೀನು ಕೂಗಾಡಿದ್ದೆ. ನಂತರ, ನನ್ನ ಬಿಟ್ಟೋಗ್ಬೇಡಾ ಅಂತ ಮಗುವಿನಂತೆ ಬಿಕ್ಕಳಿಸಿದ್ದೆ. ಕೊನೆಗೆ, ಇಲ್ಲ. ನಂಗೆ ನಿನ್ನೊಂದಿಗೆ ಬಾಳ್ಳೋ ಯೋಗ್ಯತೆ ಇಲ್ಲ. ನಿಮ್ಮ ಅಪ್ಪ ಅಮ್ಮ ನೋಡಿದ ಹುಡುಗನೇ ನಿಂಗೆ ಸರಿಯಾದ ಜೋಡಿ ಎಂದು ಹೇಳಿ, ನನ್ನ ಕೈ ಕುಲುಕಿ ತಿರುಗಿ ನೋಡದೆ ಹೊರಟು ಹೋಗಿದ್ದೆ ನೀನು. ನೀ ಹೋಗುವುದನ್ನೇ ಸುಮ್ಮನೆ ನೋಡುತ್ತಾ ಕುಳಿತು ಬಿಟ್ಟೆ ಅವತ್ತು. ಸರಿ ತಪ್ಪುಗಳ ಬಗ್ಗೆ ಯಾವ ನಿರ್ಧಾರಕ್ಕೂ ಬರಲಾಗದೇ, ಅಂತರಾಳದಲ್ಲಿ ಕುಸಿದುಹೋಗಿದ್ದೆ.
ಅದೆಷ್ಟು ವರ್ಷವಾಗಿತ್ತು ನಿನ್ನ ನೋಡಿ. ಈಗಲೂ ಹಾಗೇ ಇದ್ದೀಯಾ. ಕುರುಚಲು ಗಡ್ಡ, ತುಂಟ ನೋಟ, ಅದೇ ಮಾಸದ ನಗೆ, ಬದುಕಿನೆಡೆಗೆ ಒಂದು ನಿರ್ಲಕ್ಷ್ಯದ ನೋಟ. ನಿನ್ನ ನೋಡಿದರೆ ಖುಷಿಯಾಗಂತೂ ಇದ್ದೀಯಾ ಅನ್ನಿಸ್ತು. ಮಾತಾಡಿಸುವ ಧೈರ್ಯವಾಗದಿದ್ದುದೇ ಒಳ್ಳೆದಾಯ್ತು.. ಎಲ್ಲಾದರೂ ಇರು, ಚೆನ್ನಾಗಿರು… ಮನಸ್ಸಿಗೆ ತುಂಬಾ ಬೇಜಾರಾದಾಗ, ನೋವಾದಾಗ ಈಗಲೂ ನೀನೇ ಮೊದಲು ನೆನಪಾಗ್ತಿಯ.. ಆ ನೆನಪಲ್ಲೇ ಒಂದು ಸಾಂತ್ವನವಿದೆ. ಈ ಬದುಕಿಗೆ ಅಷ್ಟೇ ಸಾಕು ಕಣೋ…
ದೂರಾದ ಗೆಳತಿ
ಅಮ್ಮು ಮಲ್ಲಿಗೆಹಳ್ಳಿ