ಕಾರ್ಕಳ ತಾಲೂಕಿನ ಅಜೆಕಾರು ಹೊಬಳಿ ಮಟ್ಟದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಕಳೆದ 21 ವರ್ಷಗಳಿಂದ ಪೂರ್ಣಕಾಲಿಕ ಪಶು ವೈದ್ಯಾಧಿಕಾರಿಗಳೇ ಇಲ್ಲ.
Advertisement
1990ರಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರವಾಗಿ ಪ್ರಾರಂಭವಾದ ಆಸ್ಪತ್ರೆ ಅನಂತರ 2000ನೇ ಸಾಲಿನಲ್ಲಿ ಪಶು ಚಿಕಿತ್ಸಾಲಯವಾಗಿ ಮೇಲ್ದರ್ಜೆಗೇರಿತು. ಆದರೆ ಈ ಸಂದರ್ಭ ಪಶು ವೈದ್ಯಾಧಿಕಾರಿಯಾಗಿದ್ದವರು ಅನಾರೋಗ್ಯದ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡ ಅನಂತರ ಈ ಪಶು ಆಸ್ಪತ್ರೆಗೆ ನೇಮಕಾತಿಯಾಗಿಲ್ಲ.
Related Articles
Advertisement
ಈ ಭಾಗದ ಜನತೆ ತಮ್ಮ ರಾಸುಗಳು ಸೇರಿದಂತೆ ಸಾಕು ಪ್ರಾಣಿಗಳಿಗೆ ಆರೋಗ್ಯ ಸಮಸ್ಯೆಯಾದಾಗ ಸಂಕಷ್ಟ ಪಡಬೇಕಾಗಿದೆ. ಅಲ್ಲದೆ ತುರ್ತು ಚಿಕಿತ್ಸೆ ಸಿಗದೆ ಪ್ರಾಣಿಗಳು ಸಾವನ್ನಪ್ಪಿ ಹೈನುಗಾರರು ನಷ್ಟ ಅನುಭವಿಸ ಬೇಕಾಗಿದೆ. ಈ ಆಸ್ಪತ್ರೆ ವ್ಯಾಪ್ತಿಯ ಹೈನುಗಾರರು ವೈದ್ಯರ ನೇಮಕ ಮಾಡುವಂತೆ ಕಳೆದ ಹಲವಾರು ವರ್ಷಗಳಿಂದ ಗ್ರಾಮ ಸಭೆಗಳಲ್ಲಿ ನಿರ್ಣಯ ಮಾಡಿ ಕಳುಹಿಸಿದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ.
ಕಾರ್ಕಳ ತಾ|ನಲ್ಲಿ ಸುಮಾರು 54 ಸಾವಿರ ಜಾನು ವಾರುಗಳಿವೆ. ಒಂದು ವೈದ್ಯರಿಗೆ ಸುಮಾರು 4- 5 ಪಂ. ವ್ಯಾಪ್ತಿ ಇರುವುದರಿಂದ ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ಕಷ್ಟ ಸಾಧ್ಯವಾಗಿದೆ.ಗ್ರಾಮೀಣ ಭಾಗದಲ್ಲಿ ಹೈನುಗಾರರು ಹೆಚ್ಚಾಗುತ್ತಿರುವುದರಿಂದ ಶೀಘ್ರ ಪಶು ವೈದ್ಯರ ನೇಮಕ ನಡೆಯ ಬೇಕಾಗಿದೆ ಎಂದು ಸ್ಥಳೀಯರು ಆಗ್ರ ಹಿಸಿದ್ದಾರೆ. ಅಜೆಕಾರು ಮಾತ್ರವಲ್ಲದೆ ಕಾರ್ಕಳ ತಾಲೂಕಿನ ಬಜಗೋಳಿ, ನಿಟ್ಟೆ, ಪಳ್ಳಿ, ಕಲ್ಯಾ, ಬೈಲೂರು, ಬೋಳ, ಬೆಳ್ಮಣ್, ಸಾಣೂರು, ಇರ್ವತ್ತೂರು, ಹೊಸ್ಮಾರ್, ಮಾಳ, ನಕ್ರೆ, ಮುಂಡ್ಕೂರು ಪಶು ಚಿಕಿತ್ಸಾ ಕೇಂದ್ರಗಳಲ್ಲಿಯೂ ಸಿಬಂದಿ ಕೊರತೆ ಇದೆ. ಹೆಬ್ರಿ ತಾಲೂಕಿನ ಮುನಿಯಾಲು, ಶಿವಪುರ, ಮುದ್ರಾಡಿ, ಕಬ್ಬಿನಾಲೆ, ನಾಡಾ³ಲು ಕೇಂದ್ರಗಳಲ್ಲಿಯೂ ಸಿಬಂದಿ ಕೊರತೆ ಇದೆ. ತಾಲೂಕು ಪಶು ಆಸ್ಪತ್ರೆ ಸಹಿತ ಗ್ರಾಮೀಣ ಭಾಗದ ಪ್ರಾಥಮಿಕ ಪಶು ಆಸ್ಪತ್ರೆಗಳಲ್ಲಿ ಒಟ್ಟು 57 ಹುದ್ದೆಗಳಿದ್ದು ಇದರಲ್ಲಿ ಕೇವಲ 12 ಹುದ್ದೆಗಳಲ್ಲಿ ಮಾತ್ರ ಅಧಿಕಾರಿಗಳು, ಸಿಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 45 ಹುದ್ದೆಗಳು ಕಾರ್ಕಳ ತಾಲೂಕಿನ ಪಶು ಆಸ್ಪತ್ರೆಗಳಲ್ಲಿ ಖಾಲಿಯಾಗಿ ಉಳಿದಿವೆೆ. ತಾಲೂಕಿನ ಕಾರ್ಯ ನಿರ್ವಹಿಸುತ್ತಿರುವ ಕೇವಲ 12 ಅಧಿಕಾರಿಗಳು ಮತ್ತು ಸಿಬಂದಿ ಎಲ್ಲ 57 ಹುದ್ದೆಗಳ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಹೈನುಗಾರರಿಗೆ ಸಂಕಷ್ಟ
ಪಶು ಆಸ್ಪತ್ರೆಗಳಲ್ಲಿ ಖಾಯಂ ವೈದ್ಯರು ಇಲ್ಲದೆ ಇರುವುದರಿಂದ ಹೈನುಗಾರಿಗೆ ಸಂಕಷ್ಟ ಆಗುತ್ತದೆ. ಹೈನುಗಾರರ ಹಿತ ದೃಷ್ಟಿಯಿಂದ ಅಜೆಕಾರು ಪಶು ವೈದ್ಯಕೀಯ ಆಸ್ಪತ್ರೆಗೆ ಖಾಯಂ ವೈದ್ಯರ ಸಹಿತ ಪೂರ್ಣ ಪ್ರಮಾಣದ ಸಿಬಂದಿ ನೇಮಕ ತ್ವರಿತವಾಗಿ ನಡೆಯಬೇಕಾಗಿದೆ.
– ಹರೀಶ್ ಶೆಟ್ಟಿ, ಕಾರ್ಯದರ್ಶಿ ಹಾಲು ಉತ್ಪಾದಕರ ಸಂಘ ಶಿರ್ಲಾಲು ಪಶು ವೈದ್ಯರ ಕೊರತೆ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶು ವೈದ್ಯಕೀಯ ವ್ಯಾಸಂಗ ಮಾಡುವವರ ಸಂಖ್ಯೆ ಕಡಿಮೆ ಇದೆ. ನೇಮಕಾತಿ ಸಂದರ್ಭ ಇತರ ಜಿಲ್ಲೆಯವರೇ ಹೆಚ್ಚಾಗಿ ನೇಮಕಗೊಳ್ಳುವುದರಿಂದ ಅವರು ಕೆಲವು ಸಮಯದಲ್ಲಿಯೇ ವರ್ಗಾವಣೆ ಪಡೆಯುತ್ತಾರೆ. ಇದರಿಂದಾಗಿ ದ.ಕ., ಉಡುಪಿ ಜಿಲ್ಲೆಯಲ್ಲಿ ಪಶು ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆ ಆಗುತ್ತಿದೆ. ಈ ನಿಟ್ಟಿನಲ್ಲಿ ಸ್ಥಳೀಯರು ಹೆಚ್ಚಾಗಿ ಪಶು ವೈದ್ಯಕೀಯ ವ್ಯಾಸಂಗ ಮಾಡಿದಲ್ಲಿ ಈ ಸಮಸ್ಯೆ ಇರದು.
– ಡಾ| ಶಂಕರ್ ಶೆಟ್ಟಿ, ಉಪ ನಿರ್ದೇಶಕರು ಪಶು ಸಂಗೋಪನ ಇಲಾಖೆ ಉಡುಪಿ -ಜಗದೀಶ್ ರಾವ್ ಅಂಡಾರು