ಚಿಂಚೋಳಿ: ತಾಲೂಕಿನಲ್ಲಿ ಕಳೆದ ವರ್ಷ 2021ರ ಜುಲೈ 17ರಂದು ತುಂಬಿ ಹರಿಯುತ್ತಿದ್ದ ಮುಲ್ಲಾಮಾರಿ ನದಿಯ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದ ಪೋತಂಗಲ್ ಗ್ರಾಮದ ಬಡ ರೈತ ಪ್ರಹ್ಲಾದ ದಶರಥ (30) ಎಂಬಾತನ ಶವ ಇನ್ನೂ ಪತ್ತೆಯಾಗಿಲ್ಲ. ಸರ್ಕಾರದಿಂದಲೂ ಯಾವುದೇ ಪರಿಹಾರವೂ ದೊರಕಿಲ್ಲ. ಇದರಿಂದ ಕುಟುಂಬಸ್ಥರು ಕಣ್ಣೀರಿನಲ್ಲಿ ಕಾಲ ಕಳೆಯುವಂತಾಗಿದೆ.
ಪ್ರಹ್ಲಾದ ತನ್ನ ಉಪಜೀವನಕ್ಕಾಗಿ ಕೆಲಸ-ಕಾರ್ಯ ಮಾಡಿಕೊಂಡು ಬರಲು ತೆಲಂಗಾಣ ರಾಜ್ಯದ ಬಶೀರಾಬಾದ್ ನಗರಕ್ಕೆ ಹೋಗಿ ಮರಳಿ ತನ್ನ ಹೊಲದಲ್ಲಿದ್ದ ಎತ್ತುಗಳೊಂದಿಗೆ ನದಿ ದಾಟಿಕೊಂಡು ಮನೆಗೆ ಬರುತ್ತಿದ್ದಾಗ ನಡು ನೀರಿನಲ್ಲಿ ಕಾಲು ಜಾರಿ ಕೊಚ್ಚಿ ಹೋಗಿದ್ದಾನೆ. ಪ್ರಹ್ಲಾದನ ಶವ ಪತ್ತೆಗೆ ಎಸ್ ಡಿಆರ್‌ಎಫ್ ತಂಡ, ಅಗ್ನಿಶಾಮಕ ದಳ, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಗ್ರಾಮದಲ್ಲಿ ಬಿಡಾರ ಹೂಡಿ ಶೋಧ ಕಾರ್ಯ ನಡೆಸಿದ್ದರು. ಶವ ಸಿಗದ ಕಾರಣ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಆನಂತರ ಸರ್ಕಾರದಿಂದ ಯಾವುದೇ ಪರಿಹಾರವೂ ದೊರಕಿಲ್ಲ.
ಪ್ರಹ್ಲಾದ ದಶರಥನ ತಂದೆ-ತಾಯಿಗೆ ನಾಲ್ವರು ಪುತ್ರಿಯರು, ಇಬ್ಬರು ಪುತ್ರರು. ಎರಡನೇ ಮಗ ರಘುನಾಥ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟು ಐದು ವರ್ಷಗಳೇ ಕಳೆದಿವೆ. ಇಬ್ಬರು ತಂಗಿಯರ ಮದುವೆಯೂ ಆಗಿಲ್ಲ. ಮೃತನ ಪತ್ನಿ ಮಂಜುಳಾ ತನ್ನೆರಡು ವರ್ಷದ ಮಗನೊಂದಿಗೆ ಜೀವನ ಕಳೆಯುವುದೇ ಕಷ್ಟವಾಗಿದೆ. ಈಗ ಪ್ರಹ್ಲಾದನ ತಂಗಿಯ ಮದುವೆ ನಿಶ್ಚಯವಾಗಿದೆ. ಕುಟುಂಬಕ್ಕೆ ಖರ್ಚಿನ ಚಿಂತೆ ಕಾಡುತ್ತಿದೆ. ದುಡಿದು ತಂದು ಕುಟುಂಬ ನಡೆಸುತ್ತಿದ್ದ ಮಕ್ಕಳನ್ನು ಕಳೆದುಕೊಂಡ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡದೇ ನಿರ್ಲಕ್ಷ್ಯ ತೋರುತ್ತಿದೆ ಎಂದು ಮೃತನ ಅಳಿಯ ಸಂತೋಷ ಪೋತಂಗಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಘಟನಾ ಸ್ಥಳಕ್ಕೆ ಬಂದು ಪರಿಸ್ಥಿತಿ ವೀಕ್ಷಿಸಿ ವೈಯಕ್ತಿಕ ಪರಿಹಾರ ನೀಡಿದ್ದಾರೆ. ಕಂದಾಯ ಅಧಿಕಾರಿಗಳು ಪರಿಶೀಲಿಸಿ 11 ತಿಂಗಳು ಕಳೆದರೂ ಸರ್ಕಾರದಿಂದ ಯಾವುದೇ ಪರಿಹಾರ ದೊರಕಿಲ್ಲ. ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು.
–ವೆಂಕಟರೆಡ್ಡಿ ಪಾಟೀಲ, ಗ್ರಾಪಂ ಅಧ್ಯಕ್ಷ, ಜಟ್ಟೂರ
-ಶಾಮರಾವ ಚಿಂಚೋಳಿ