Advertisement

ಇದೇ ರೀತಿ ಆಡಿದರೆ ಗೆಲ್ಲಲು ಸಾಧ್ಯವೇ ಇಲ್ಲ: ಕೊಹ್ಲಿ

10:16 AM Apr 18, 2017 | Team Udayavani |

ಬೆಂಗಳೂರು: “ನಾವು ಶೀಘ್ರವೇ ಗೆಲುವಿನ ಸೂತ್ರವೊಂದನ್ನು ರೂಪಿಸಬೇಕು. ಏಕೆಂದರೆ, ನಾವು ಅತ್ಯಂತ ಕೆಟ್ಟದಾಗಿ ಆಡುತ್ತಿದ್ದೇವೆ. ಇದೇ ರೀತಿಯ ಆಟ ಮುಂದುವರಿಸಿದರೆ ನಮಗೆ ಗೆಲ್ಲಲು ಖಂಡಿತ ಸಾಧ್ಯವಿಲ್ಲ…’ ಎಂದು ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ತೀವ್ರ ಹತಾಶೆಯಿಂದ ಹೇಳಿದ್ದಾರೆ. ರವಿವಾರ ರಾತ್ರಿ ಪುಣೆ ವಿರುದ್ಧ, ತವರಿನಂಗಳದಲ್ಲೇ 161 ರನ್ನುಗಳ ಸಾಮಾನ್ಯ ಮೊತ್ತವನ್ನು ಹಿಂದಿಕ್ಕಲು ವಿಫ‌ಲಗೊಂಡ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

Advertisement

“ಇದೇ ರೀತಿಯ ಆಟವನ್ನು ಮುಂದುವರಿಸಿದರೆ ಗೆಲುವಿನ ಆರ್ಹತೆಯಾಗಲಿ, ಯೋಗ್ಯತೆಯಾಗಲಿ ನಮಗಿಲ್ಲವಾಗುತ್ತದೆ. ಮುಂಬೈ ವಿರುದ್ಧದ ಹಿಂದಿನ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿಯೂ ಸೋತೆವು. ಇಂದು ಪುಣೆ ಎದುರು ಕೈಯಾರೆ ಪಂದ್ಯವನ್ನು ಕಳೆದುಕೊಂಡೆವು. ಮನೆಯಂಗಳ ಎಂದು ಕೈ ತೊಳೆದು ಕೊಂಡು ನೆಮ್ಮದಿಯಿಂದ ಇರಲು ಸಾಧ್ಯ ವಿಲ್ಲ. ಇಂಥ ಟೂರ್ನಿಗಳಲ್ಲಿ ಯಾವತ್ತೂ ತವರಿನ ಪಂದ್ಯಗಳಲ್ಲಿ ಗೆಲ್ಲುವುದು ಅಗತ್ಯ…’ ಎಂಬುದಾಗಿ ಕೊಹ್ಲಿ ಹೇಳಿದರು.

ಬೆಂಗಳೂರು ಮತ್ತು ಪುಣೆ ಒಂದೇ ದೋಣಿಯ ತಂಡಗಳೆಂಬಂತೆ ಈ ಪಂದ್ಯವನ್ನು ಆಡಲಿಳಿದಿದ್ದವು. ಬೆಂಗಳೂರಿಗೆ ಇದು ತವರಿನ ಪಂದ್ಯವಾದ್ದರಿಂದ ಗೆಲ್ಲುವ ನೆಚ್ಚಿನ ತಂಡವೂ ಆಗಿತ್ತು. ಆದರೆ ಕೊನೆಯಲ್ಲಿ ಎದುರಾದದ್ದು 27 ರನ್ನುಗಳ ಆಘಾತ! ಇದು 5 ಪಂದ್ಯಗಳಲ್ಲಿ ಆರ್‌ಸಿಬಿ ಅನುಭವಿಸಿದ 4ನೇ ಸೋಲು. ಸದ್ಯ ಅಂಕಪಟ್ಟಿಯಲ್ಲಿ ಬೆಂಗಳೂರಿಗೆ ಕೊನೆಯಿಂದ ಮೊದಲ ಸ್ಥಾನ!

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪುಣೆ ಯಿಂದ ಗಳಿಸಲು ಸಾಧ್ಯವಾದದ್ದು 8ಕ್ಕೆ 161 ರನ್‌ ಮಾತ್ರ. ಕೊಹ್ಲಿ, ಎಬಿಡಿ, ಜಾಧವ್‌, ವಾಟ್ಸನ್‌, ಮನ್‌ದೀಪ್‌, ಬಿನ್ನಿ ಅವರನ್ನೊಳಗೊಂಡ ತಂಡಕ್ಕೆ ಇದೊಂದು ಸವಾಲಿನ ಮೊತ್ತವೇ ಆಗಿರಲಿಲ್ಲ. ಆದರೆ ಆರ್‌ಸಿಬಿಗೆ ಇದು ಮರೀಚಿಕೆಯೇ ಆಗುಳಿಯಿತು. 9ಕ್ಕೆ 134 ರನ್‌ ಮಾತ್ರ ಗಳಿಸಿದ ಆರ್‌ಸಿಬಿ, ಬೆಂಗಳೂರಿನ ಅಭಿಮಾನಿಗಳನ್ನು ಮತ್ತೂಮ್ಮೆ ನಿರಾಸೆಗೊಳಿಸಿತು.

ಇಲ್ಲಿ ಪರಿಸ್ಥಿತಿಗಲೆಲ್ಲವೂ ಆರ್‌ಸಿಬಿ ಪರವಾಗಿಯೇ ಇದ್ದವು. ಪುಣೆ ಈವರೆಗೆ ಮೊದಲು ಬ್ಯಾಟಿಂಗ್‌ ಮಾಡಿದ ವೇಳೆ ಜಯ ಸಾಧಿಸಿರಲಿಲ್ಲ, 161ರಷ್ಟು ಸಣ್ಣ ಮೊತ್ತವನ್ನು ಬೆಂಗಳೂರಿನಲ್ಲಿ ಈವರೆಗೆ ಹೊರಗಿನ ಯಾವ ತಂಡವೂ ಉಳಿಸಿಕೊಂಡ ದಾಖಲೆ ಇರಲಿಲ್ಲ. ಇದಕ್ಕೂ ಮಿಗಿಲಾಗಿ, ಪುಣೆಯ ಎರಡೂ ಫ್ರಾಂಚೈಸಿಗಳ ತಂಡಗಳು ಈವರೆಗೆ ಆರ್‌ಸಿಬಿ ವಿರುದ್ಧ ಗೆಲುವು ಸಾಧಿಸಿರಲಿಲ್ಲ. ಆದರೆ ರವಿವಾರ ಈ ಎಲ್ಲ ವೈಫ‌ಲ್ಯಗಳನ್ನು ಪುಣೆ ಒಂದೇ ಏಟಿಗೆ ಹೊಡೆದೋಡಿಸಿತು!

Advertisement

ಆಟಗಾರರಿಗೆ ಎಚ್ಚರಿಕೆ
ಈ ಸಂದರ್ಭದಲ್ಲಿ ವಿರಾಟ್‌ ಕೊಹ್ಲಿ ತನ್ನ ತಂಡಕ್ಕೆ ಇನ್ನೊಂದು ಎಚ್ಚರಿಕೆ ನೀಡುತ್ತ, ಫ್ರಾಂಚೈಸಿ ಹಾಗೂ ಅಭಿಮಾನಿಗಳ ನಿರೀಕ್ಷೆಯನ್ನು ಯಾವ ಕಾರಣಕ್ಕೂ ಹುಸಿಗೊಳಿಸದಿರಿ ಎಂದರು.

“ಕಳೆದ ವರ್ಷ ನಾಕೌಟ್‌ ಹಂತಕ್ಕೆ ಆಯ್ಕೆಯಾಗಲು ನಾವು ಕೊನೆಯ ನಾಲ್ಕೂ ಪಂದ್ಯಗಳನ್ನು ಗೆಲ್ಲ ಬೇಕಾದ ಒತ್ತಡದಲ್ಲಿದ್ದೆವು. ಇದರಲ್ಲೇನೋ ಯಶಸ್ಸು ಸಾಧಿಸಿದೆವು. ಆದರೆ ಪ್ರತಿ ಸಲವೂ ಇಂಥ ಮ್ಯಾಜಿಕ್‌ ನಡೆಯುವುದಿಲ್ಲ. ನೀವು ವೃತ್ತಿಪರ ಕ್ರಿಕೆಟಿಗರು. ಒಂದು ಫ್ರಾಂಚೈಸಿ ಪರ, ಸಾವಿರಾರು ಅಭಿಮಾನಿ ಗಳ ಸಮ್ಮುಖದಲ್ಲಿ ಆಡುವಾಗ ಅವರ ನಿರೀಕ್ಷೆ ಗಳನ್ನು ಸಾದ್ಯವಾದಷ್ಟು ಮಟ್ಟಿಗೆ ಪೂರ್ತಿಗೊಳಿಸಲು ಮುಂದಾಗಬೇಕು. ತಂಡದ ಆಟಗಾರರೆಲ್ಲ ಜವಾಬ್ದಾರಿ ಯನ್ನರಿತು ಆಡುತ್ತಾರೆ, ಸಕಾರಾತ್ಮಕ ಫ‌ಲಿತಾಂಶಗಳನ್ನು ದಾಖಲಿಸುತ್ತಾರೆ ಎಂಬ ನಂಬಿಕೆಯಲ್ಲಿರೋಣ…’ ಎಂಬುದಾಗಿ ಕೊಹ್ಲಿ ಹೇಳಿದರು.

ಪುಣೆ ವಿರುದ್ಧ ಆರ್‌ಸಿಬಿಯ ಯಾವ ಆಟಗಾರನೂ ಮೂವತ್ತರ ಗಡಿ ಮುಟ್ಟಲಿಲ್ಲ. 29 ರನ್‌ ಮಾಡಿದ ಡಿ ವಿಲಿಯರ್ ಅವರದೇ ಸರ್ವಾಧಿಕ ಗಳಿಕೆ. ಕೊಹ್ಲಿ 28, ಬಿನ್ನಿ ಮತ್ತು ಜಾಧವ್‌ ತಲಾ 18 ರನ್‌ ಮಾಡಿದರು. ಬೆನ್‌ ಸ್ಟ್ರೂಕ್ಸ್‌ ಮತ್ತು ಶಾದೂìಲ್‌ ಠಾಕೂರ್‌ ತಲಾ 3 ವಿಕೆಟ್‌ ಉಡಾಯಿಸಿದರು.

ಸಂಕ್ಷಿಪ್ತ ಸ್ಕೋರ್‌: ಪುಣೆ-8 ವಿಕೆಟಿಗೆ 161. ಆರ್‌ಸಿಬಿ-9 ವಿಕೆಟಿಗೆ 134 (ಡಿ ವಿಲಿಯರ್ 29, ಕೊಹ್ಲಿ 28, ಜಾಧವ್‌ 18, ಬಿನ್ನಿ 18, ವಾಟ್ಸನ್‌ 14, ಸ್ಟೋಕ್ಸ್‌ 18ಕ್ಕೆ 3, ಠಾಕೂರ್‌ 35ಕ್ಕೆ 3, ಉನದ್ಕತ್‌ 25ಕ್ಕೆ 2, ತಾಹಿರ್‌ 27ಕ್ಕೆ 1). ಪಂದ್ಯಶ್ರೇಷ್ಠ: ಬೆನ್‌ ಸ್ಟೋಕ್ಸ್‌.

ಎಕ್ಸ್‌ಟ್ರಾ ಇನ್ನಿಂಗ್ಸ್‌
ಪಂದ್ಯ   17   ಆರ್‌ಸಿಬಿ-ಪುಣೆ

ಆರ್‌ಸಿಬಿ ವಿರುದ್ಧ ಆಡಿದ 8 ಪಂದ್ಯಗಳಲ್ಲಿ ಪುಣೆ ಫ್ರಾಂಚೈಸಿ ತಂಡ ಮೊದಲ ಗೆಲುವು ಸಾಧಿಸಿತು. ಇದಕ್ಕೂ ಮುನ್ನ ಪುಣೆ ವಾರಿಯರ್ 5 ಪಂದ್ಯಗಳನ್ನು ಸೋತಿತ್ತು. ಕಳೆದ ವರ್ಷ ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ಎರಡೂ ಪಂದ್ಯಗಳಲ್ಲಿ ಎಡವಿತ್ತು.

ಪುಣೆ ಮೊದಲ ಬಾರಿಗೆ ಫ‌ಸ್ಟ್‌ ಬ್ಯಾಟಿಂಗ್‌ ಮಾಡಿದ ವೇಳೆ ಜಯ ಸಾಧಿಸಿತು. ಇದಕ್ಕೂ ಮುಂಚೆ ಮೊದಲು ಬ್ಯಾಟಿಂಗ್‌ ಮಾಡಿದ ಎಲ್ಲ 9 ಪಂದ್ಯಗಳಲ್ಲೂ ಸೋಲನುಭವಿಸಿತ್ತು.

ಆರ್‌ಸಿಬಿ 9 ಸಲ ಸತತ 3 ಹಾಗೂ ಅದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಸೋಲನುಭವಿಸಿತು. ಒಮ್ಮೆ ಸತತ 4, ಇನ್ನೊಮ್ಮೆ ಸತತ 5 ಪಂದ್ಯಗಳಲ್ಲಿ ಎಡವಿದ ದಾಖಲೆಯೂ ಇದರಲ್ಲಿ ಸೇರಿದೆ.

ಈ ಪಂದ್ಯದಲ್ಲಿ ಅತೀ ಹೆಚ್ಚು 9 ಆಟಗಾರರು ಬೌಲ್ಡ್‌ ಔಟಾದರು. ಇದರೊಂದಿಗೆ ಐಪಿಎಲ್‌ ದಾಖಲೆ ಸಮಗೊಂಡಿತು. 2015ರ ಆರ್‌ಸಿಬಿ- ಪಂಜಾಬ್‌ ನಡುವಿನ ಪಂದ್ಯದಲ್ಲೂ 9 ಬೌಲ್ಡ್‌ ಸಂಭವಿಸಿತ್ತು.

ಮನ್‌ದೀಪ್‌ ಸಿಂಗ್‌ 9 ಸೊನ್ನೆ ಸುತ್ತಿ 4ನೇ ಸ್ಥಾನದಲ್ಲಿ ಕಾಣಿಸಿಕೊಂಡರು. ಉಳಿದವರೆಂದರೆ ಹರ್ಭಜನ್‌ ಸಿಂಗ್‌, ಗೌತಮ್‌ ಗಂಭೀರ್‌ (ತಲಾ 12); ಪೀಯೂಷ್‌ ಚಾವ್ಲಾ,  ಮನೀಷ್‌ ಪಾಂಡೆ, ಪಾರ್ಥಿವ್‌ ಪಟೇಲ್‌ (ತಲಾ 11); ಅಮಿತ್‌ ಮಿಶ್ರಾ (10).

ಅಜಿಂಕ್ಯ ರಹಾನೆ 100ನೇ ಐಪಿಎಲ್‌ ಪಂದ್ಯದ ಜತೆಗೆ 150ನೇ ಟಿ-20 ಪಂದ್ಯವಾಡಿದರು.

ರಹಾನೆ ಟಿ-20ಯಲ್ಲಿ 400 ಬೌಂಡರಿ ಬಾರಿಸಿದ ಸಾಧನೆಗೈದರು (403 ಬೌಂಡರಿ).

ಪುಣೆ 161 ರನ್‌ ಗಳಿಸಿಯೂ ಗೆದ್ದು ಬಂದಿತು. ಇದರೊಂದಿಗೆ ಆರ್‌ಸಿಬಿ ವಿರುದ್ಧ ಬೆಂಗಳೂರಿನಲ್ಲಿ ಕನಿಷ್ಠ ಮೊತ್ತವನ್ನು ಉಳಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾಯಿತು. ಇದಕ್ಕೂ ಮುನ್ನ 2012ರಲ್ಲಿ ಪಂಜಾಬ್‌ 8ಕ್ಕೆ 165 ರನ್‌ ಗಳಿಸಿ ಪಂದ್ಯವನ್ನು ಜಯಿಸಿದ್ದು ದಾಖಲೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next