ಮುಧೋಳ: ನಗರಕ್ಕೆ ಹೊಂದಿಕೊಂಡಿರುವ ಗುಡದಿನ್ನಿ ಪುನರ್ವಸತಿ ಕೇಂದ್ರದಲ್ಲಿರುವ ಬಾಪೂಜಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಗಳು ಸುಸಜ್ಜಿತ ರೀತಿಯಲ್ಲಿದ್ದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಶಾಲೆ ಅನೈತಿಕ ಚಟುವಟಿಕೆ ತಾಣವಾಗಿ ಪರಿಣಮಿಸಿವೆ. ಪುನರ್ವಸತಿ ಕೇಂದ್ರದಿಂದ ಶಿಕ್ಷಣ ಇಲಾಖೆಗೆ ಹಸ್ತಾಂತರಗೊಳ್ಳದ ಕಾರಣ ಕಟ್ಟಡ ಸೂಕ್ತ ನಿರ್ವಹಣೆಗೆ ಸಾಧ್ಯವಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಈ ಕಟ್ಟಡದಲ್ಲಿ ಹಲವು ವರ್ಷಗಳ ಹಿಂದೆ ಖಾಸಗಿಯವರು ಶಿಕ್ಷಣ ಸಂಸ್ಥೆ ನಡೆಸುವುದರ ಮೂಲಕ ಮಕ್ಕಳಿಗೆ ವಿದ್ಯಾರ್ಜನೆ ಮಾಡುತ್ತಿದ್ದರು. ಆಗ ಶಾಲೆ ಸೂಕ್ತ ರೀತಿಯಲ್ಲಿ ಬಳಕೆಯಾಗುತ್ತಿತ್ತು. ಬಳಿಕಖಾಸಗಿಯವರು ತಮ್ಮ ಸ್ವಂತ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರಿಸಿದ ಬಳಿಕ ಈ ಶಾಲೆಗೆ ಅನಾಥಪ್ರಜ್ಞೆ ಕಾಡುತ್ತಿದೆ. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಶಾಲಾ ಕಟ್ಟಡವನ್ನು ಬಳಸಿಕೊಂಡರೆ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ.
ವಿಶಾಲ ಆಟದ ಮೈದಾನ: ಎಷ್ಟೋ ಶಾಲೆಗಳಿಗೆ ಕೊಠಡಿಗಳ ಜತೆಯಲ್ಲಿ ಆಟದ ಮೈದಾನದ ಕೊರತೆಯೂ ಕಾಡುತ್ತಿರುತ್ತದೆ. ಇದರಿಂದ ಮಕ್ಕಳ ಆಟೋಟಕ್ಕೆ ಹೆಚ್ಚು ಅಡೆತಡೆಯುಂಟಾಗುತ್ತಿರುತ್ತದೆ. ಆದರೆಈಶಾಲೆಗೆ ವಿಶಾಲವಾದ ಆಟದ ಮೈದಾನದೊಂದಿಗೆ ಸುತ್ತಲೂ ಕಾಂಪೌಂಡ್‌ನ ಇದೆ. ಇಂತಹ ವಾತಾವರಣದಲ್ಲಿ ಮಕ್ಕಳ ದೈಹಿಕ ಶಿಕ್ಷಣಕ್ಕೂ ಹೆಚ್ಚು ಅನುಕೂಲವಾಗಲಿದೆ.
ನೀರಿಗಾಗಿ ಶಾಲೆ ಆವರಣದಲ್ಲಿಯೇ ಎರಡು ಟ್ಯಾಂಕ್ ಗಳಿವೆ. ಮೂಲಸೌಲಭ್ಯ ಹೊಂದಿರುವಈಕಟ್ಟಡವನ್ನು ಇನ್ನಾದರೂ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.
ಅನೈತಿಕ ಚಟುವಟಿಕೆಯ ತಾಣ: ಸದ್ಯ ಸುಸಜ್ಜಿತ ಕಟ್ಟಡವಿದ್ದರೂ ಸಹ ಸೂಕ್ತ ರಕ್ಷಣೆಯಿಲ್ಲ. ಇದರಿಂದಾಗಿ ಶಾಲಾ ಆವರಣದಲ್ಲಿ ಕುಡುಕರು, ಪುಂಡಪೋಕರಿಗಳ ಹಾವಳಿ ಹೆಚ್ಚಾಗಿದೆ. ಸಂಜೆಯಾದರೆ ಶಾಲಾ ಆವರಣ ಅನೈತಿಕ ಚಟುವಟಿಕೆ ತಾಣವನ್ನಾಗಿಸಿಕೊಂಡಿದ್ದಾರೆ.
ಶಾಲೆ ಸುಪರ್ದಿಗೆ-ಭರವಸೆ: ಅಲ್ಲಿನ ಶಾಲೆ ಸುಸಜ್ಜಿತವಾಗಿದ್ದು, ನಮ್ಮ ಗಮನಕ್ಕೆ ಬಂದಿಲ್ಲ. ಇನ್ನು ಮುಂದೆ ಶಾಲೆಯನ್ನು ನಮ್ಮ ಇಲಾಖೆಯಡಿ ಸೇರಿಸಿಕೊಳ್ಳಲು ಪ್ರಯತ್ನಿಸಿ ಕಟ್ಟಡವನ್ನು ಸೂಕ್ತ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.
ನಾನು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದೇನೆ. ಶಾಲೆಯ ಬಗ್ಗೆ ಪರಿಶೀಲಿಸಿ ಶೀಘ್ರಕ್ರಮ ಕೈಗೊಳ್ಳುತ್ತೇನೆ.
ಎ.ಕೆ. ಬಸಣ್ಣವರ,ಕ್ಷೇತ್ರ
ಶಿಕ್ಷಣಾಧಿಕಾರಿ, ಮುಧೋಳ
–ಗೋವಿಂದಪ್ಪ ತಳವಾರ