ಇತ್ತೀಚೆಗಷ್ಟೇ ಬಿಡುಗಡೆಯಾದ “ಗೋಸಿ ಗ್ಯಾಂಗ್’ ಚಿತ್ರ ನಿರ್ದೇಶಿಸಿದ್ದ ರಾಜು ದೇವಸಂದ್ರ ಈಗ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಅದಕ್ಕೆ “ಕತ್ಲು ಕಾನ್’ ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರದಲ್ಲಿ ಮೂವರು ಹುಡುಗರು ಅವರಿಗೆ ಮೂವರು ಹುಡುಗಿಯರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. “ಮೈ ಆಟೋಗ್ರಾಫ್’ ಮಾಡಿದ್ದ ಸಂಜೀವ್ ಈ ಚಿತ್ರದ ಮೂವರು ನಾಯಕರಲ್ಲೊಬ್ಬರು.
ಉಳಿದಂತೆ ಚಿತ್ರದಲ್ಲಿ ಕಿರಣ್, ಲಾಲು, ಸಿಂಧುರಾವ್, ರೇಷ್ಮಾ, ಸಿಂಚನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಕತ್ಲು ಕಾನ್’ ಅಂದರೆ, ಕತ್ತಲ ಕಾಡು ಎನ್ನುವ ನಿರ್ದೇಶಕ ರಾಜು ದೇವಸಂದ್ರ. ಹಳೆಗನ್ನಡ ಪದ ಇದಾಗಿದ್ದು, ಆಡುಭಾಷೆಯ ಪದವನ್ನೇ ಚಿತ್ರಕ್ಕೆ ಶೀರ್ಷಿಕೆಯನ್ನಾಗಿಸಲಾಗಿದೆ. ಚಿತ್ರದ ಶೀರ್ಷಿಕೆ ಹೇಳುವಂತೆ, ಇದೊಂದು ಕಾಡಿನ ಕಥೆ.
ಕಥೆ ಬಗ್ಗೆ ಹೇಳುವ ನಿರ್ದೇಶಕರು, ಒಂದು ಕಾಡು. ಅದಕ್ಕೆ ಕತ್ಲುಕಾನ್ ಎಂಬ ಹೆಸರು. ಅಲ್ಲಿಗೆ ಹೋದವರ್ಯಾರೂ ಹಿಂದಿರುಗಿ ಬರುವುದಿಲ್ಲ ಎಂಬ ಮಾತು ಇರುತ್ತದೆ. ಅಂತಹ ಕಾಡಿಗೆ ಮೂವರು ಹುಡುಗ, ಹುಡುಗಿಯರು ಹೋಗುತ್ತಾರೆ. ಅವರು ಕಾಡಿಗೆ ಹೋಗುವ ದಾರಿ ಮಧ್ಯೆಯೇ ಅವರನ್ನು ಒಂದು ಗ್ಯಾಂಗ್ ಹಿಂಬಾಲಿಸಿಕೊಂಡು ಹೋಗುತ್ತದೆ.
ಕಾಡಿನ ಒಳಗೆ ಆ ಯುವಕರು ಹೋಗುತ್ತಿದ್ದಂತೆಯೇ, ಅಲ್ಲೊಂದು ಮಾಫಿಯಾ ಬೆಳಕಿಗೆ ಬರುತ್ತದೆ. ಒಂದು ಗ್ಯಾಂಗ್ ಕಾಡಿನಲ್ಲಿರುವ ಶ್ರೀಗಂಧ ಮರಗಳನ್ನು ಕಡಿದು ಸಾಗಿಸುತ್ತಿರುತ್ತದೆ. ಆ ದಂಧೆಗೆ ಅರಣ್ಯ ಅಧಿಕಾರಿಯೊಬ್ಬ ಕೈ ಜೋಡಿಸಿ, ಗ್ಯಾಂಗ್‌ಗೆ ಸಹಕಾರ ನೀಡುತ್ತಿರುತ್ತಾನೆ. ಕಾಡಿಗೆ ಹೋದವರನ್ನೆಲ್ಲಾ ಆ ಗ್ಯಾಂಗ್ ಕೊಲೆ ಮಾಡಿ, ಕಾಡಲ್ಲಿ ಯಾರೂ ಹೋಗುವಂತಿಲ್ಲ.
ಹೋದವರು ಸಾಯುತ್ತಾರೆ. ಅಲ್ಲೇನೋ ವಿಚಿತ್ರವಾದದ್ದು ಇದೆ ಎಂದು ಭಯ ಹುಟ್ಟಿಸಿರುತ್ತಾರೆ. ಕಾಡಿಗೆ ಹೋಗುವ ಯುವಕರು ಆ ಗ್ಯಾಂಗ್ ಅನ್ನು ಹೇಗೆ ಮಟ್ಟ ಹಾಕುತ್ತಾರೆ ಎಂಬುದೇ ಸಸ್ಪೆನ್ಸ್. ಚಿತ್ರದಲ್ಲೊಂದು ವಿಶೇಷ ಪಾತ್ರವಿದೆ. ಅದು ಆ ಯುವಕರಿಗೆ ಪ್ರೋತ್ಸಾಹ ನೀಡುವ ಪೊಲೀಸ್ ಅಧಿಕಾರಿ ಪಾತ್ರ.
ಇನ್ನು, ಚಿತ್ರವನ್ನು ಮುತ್ತತ್ತಿ, ದಾಂಡೇಲಿ ಕಾಡಲ್ಲಿ ಚಿತ್ರೀಕರಿಸಲಾಗುವುದು ಎಂಬುದು ನಿರ್ದೇಶಕರ ಮಾತು. ಚಿತ್ರದಲ್ಲಿ ಕುತೂಹಲ ಅಂಶಗಳು ಹೆಚ್ಚಾಗಿರುವುದರಿಂದ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗ್ರಾಫಿಕ್ಸ್ ಬಳಸಲು ನಿರ್ದೇಶಕರು ತೀರ್ಮಾನಿಸಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯೂ ನಿರ್ದೇಶಕರದ್ದೇ. ಮಹಮ್ಮದ್ ನಿಯಾಜ್‌ವುದ್ದೀನ್ ಚಿತ್ರದ ನಿರ್ಮಾಪಕರು.
ಇವರಿಗೆ ಇದು ಮೊದಲ ಚಿತ್ರ. ಚಿತ್ರಕ್ಕೆ ರಮೇಶ್ ಕೊಯಿರ ಛಾಯಾಗ್ರಹಣ ಮಾಡಿದರೆ, ಆರವ್ ರಿಷಿಕ್ ಸಂಗೀತವಿದೆ. ಸುಮಾರು 20 ದಿನಗಳ ಕಾಲ ಮುತ್ತತ್ತಿ, ದಾಂಡೇಲಿ ಕಾಡಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಶಿವುಮಂಜು, ಮೈಕೆಲ್ ಮಧು, ಮಿಮಿಕ್ರಿ ರಾಜಗೋಪಾಲ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಮಾ.28 ಕ್ಕೆ ಚಿತ್ರದ ಮುಹೂರ್ತ ನೆರವೇರಲಿದ್ದು, ಚಿತ್ರೀಕರಣ ಶುರುವಾಗಲಿದೆ.