Advertisement

ಗಡಿಭಾಗದ ಅನುದಾನಿತ ಶಾಲೆಯಲ್ಲಿ ಶಿಕ್ಷಕರೇ ಇಲ್ಲ

09:50 AM Apr 08, 2022 | Team Udayavani |

ಸುಳ್ಯಪದವು: ಕೆಲವು ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆ ಎದುರಾಗುವುದು ಸಾಮಾನ್ಯ. ಆದರೆ ಈ ಶಾಲೆಯಲ್ಲಿ ಪರಿಸ್ಥಿತಿ ತದ್ವಿರುದ್ಧ. ಇಲ್ಲಿ ವಿದ್ಯಾರ್ಥಿಗಳಿದ್ದರೂ ಶಿಕ್ಷಕರಿಲ್ಲ. ಸರಕಾರದ ಬೋಧಕರು ಇಲ್ಲದೇ ಚಟುವಟಿಕೆಗಳನ್ನು ನಡೆಸುತ್ತಿರುವ ವಿಶೇಷ ಶಾಲೆ ಕೇರಳ ಕರ್ನಾಟಕ ಗಡಿಭಾಗದಲ್ಲಿದೆ. ಅದುವೇ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಸುಳ್ಯಪದವು ಶ್ರೀ ಬಾಲಸುಬ್ರಹ್ಮಣ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ.

Advertisement

ಶಾಲೆಯಿಂದ 100 ಮೀ. ದೂರದಲ್ಲಿದೆ ಕೇರಳ-ಕರ್ನಾಟಕ ಗಡಿ. ಇಲ್ಲಿನ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುತ್ತಿದ್ದಾರೆ. 1ರಿಂದ 7 ತರಗತಿವರೆಗೆ 162 ವಿದ್ಯಾರ್ಥಿಗಳಿದ್ದಾರೆ. 4 ಗೌರವ ಶಿಕ್ಷಕರು ಸೇವೆಯಲ್ಲಿದ್ದಾರೆ. ಶಿಕ್ಷಣ ಇಲಾಖೆ ಪ್ರಕಾರ 30 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರಂತೆ 5 ಶಿಕ್ಷಕರು ಇರಬೇಕು. ಆದರೆ 2ತಿಂಗಳ ಹಿಂದೆ ಪ್ರಭಾರ ಮುಖ್ಯ ಶಿಕ್ಷಕರು ನಿವೃತ್ತಿ ಹೊಂದಿದ ಅನಂತರ ಇದು ಶೂನ್ಯ ಶಿಕ್ಷಕರ ಶಾಲೆಯಾಗಿದೆ. ಆದರೂ ಆಡಳಿತ ಮಂಡಳಿ ಶಾಲೆ ಉಳಿಸಲು ದಿಟ್ಟ ನಿರ್ಧಾರದಿಂದ ಗೌರವ ಶಿಕ್ಷಕರನ್ನು ನೇಮಿಸಿ ಶಾಲೆ ಚಟುವಟಿಕೆ ನಡೆಯುತ್ತಿದೆ. ಆರ್ಥಿಕ ಹೊರೆ ಆಡಳಿತ ಮಂಡಳಿಗೆ ತಲೆನೋವಾಗಿದೆ.

ಸುಸಜ್ಜಿತ ಶಾಲೆ

ಸುವರ್ಣ ಮಹೋತ್ಸವವನ್ನು ಆಚರಿಸಿದ ಶಾಲೆ ಇದು. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶದಲ್ಲಿ ಉನ್ನತ ಹುದ್ದೆಯನ್ನು ಆಲಂಕರಿಸಿದ್ದಾರೆ. ಕಂಪ್ಯೂಟರ್‌ ಶಿಕ್ಷಣ, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಅಕ್ಷರದಾಸೋಹ, ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಆಟದ ಮೈದಾನ, ವ್ಯಾಯಾಮ ಶಾಲೆ, ವಾಚನಾಲಯ, ವಿಜ್ಞಾನ, ಸಮಾಜ ವಿಷಯಗಳ ಪರಿಕರಗಳು, ಸ್ಕೌಟ್ಸ್‌, ಗೈಡ್ಸ್‌, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹದಿಂದ ಇಲ್ಲಿನ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಉತ್ಸುಕತೆ ಇದ್ದರೂ ಶಿಕ್ಷಣ ಇಲಾಖೆ ಮತ್ತು ಸರಕಾರ ಗಡಿಭಾಗದ ಶಾಲೆಯನ್ನು ಕಡೆಗಣಿಸುತ್ತಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಶಾಸಕರಿಂದ ಪ್ರಸ್ತಾವ

Advertisement

ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲಿ ಸರಕಾರಿ ಶಾಲೆಗೆ ಯಾವ ರೀತಿಯಲ್ಲಿ ಶಿಕ್ಷಕರ ನೇಮಕಾತಿ ಆಗುತ್ತದೆಯೋ ಅದೇ ರೀತಿಯಲ್ಲಿ ಅನುದಾನಿತ ಶಾಲೆಗೆ ಶಿಕ್ಷಕರನ್ನು ನೇಮಕಾತಿ ಮಾಡುವಂತೆ ಪುತ್ತೂರು ಶಾಸಕ ಸಂಜೀವ ಮಠಂದೂರು ಸದನದ ಗಮನ ಸೆಳೆಯುವ ವಿಷಯವನ್ನು ಮಂಡಿಸಿದ್ದರು. ಅದಕ್ಕೆ ಶಿಕ್ಷಣ ಸಚಿವ ನಾಗೇಶ್‌, ಮುಖ್ಯಮಂತ್ರಿ ಜತೆ ಚರ್ಚಿಸಿ ಶಿಕ್ಷಕರ ನೇಮಕದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದರು.

ಅಧಿಕಾರಿಗಳ ಜತೆ ಮಾತುಕತೆ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಗ್ಗೆ ಶಾಸಕ ಸಂಜೀವ ಮಠಂದೂರು ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದಿದ್ದಾರೆ. ಶಾಲೆಯೊಂದರ ಹೆಚ್ಚುವರಿ ಶಿಕ್ಷಕರನ್ನು ಈ ಶಾಲೆಗೆ ನಿಯೋಜನೆ ಮಾಡಿದ್ದಾರೆ ಎಂಬ ಮಾಹಿತಿ ಇದೆ. ನಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಮುಂದಿನ ವಾರ ಮಂಗಳೂರು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಜತೆ ಮಾತುಕತೆ ನಡೆಸಲಾಗುವುದು.  ಎಚ್‌.ಡಿ.ಶಿವರಾಂ ಅಧ್ಯಕ್ಷರು, ಶಾಲಾ ಆಡಳಿತ ಮಂಡಳಿ ಸುಳ್ಯಪದವು

ಕೂಡಲೇ ನೇಮಕ ಮಾಡಿ ಸರಕಾರದ ಯೋಜನೆ ಗಳು ಹಲವು ಇದೆ. ಗಡಿಭಾಗದ ಶಾಲೆಯಲ್ಲಿ ಎಲ್ಲ ವ್ಯವಸ್ಥೆ ಸರಿಯಿದೆ. ಸರಕಾರ, ಶಿಕ್ಷಣ ಇಲಾಖೆ ಶಿಕ್ಷಕರನ್ನು ಈ ಶಾಲೆಗೆ ನೀಡಬೇಕು. ನೆರೆಯ ಕೇರಳದಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. ಕೂಡಲೇ ಶಿಕ್ಷಕರನ್ನು ನೇಮಕ ಮಾಡಬೇಕು.

ರಾಜೇಶ್‌ ಎಂ., ಶಾಲೆಯ ವಿದ್ಯಾರ್ಥಿ ಪಾಲಕರು.

Advertisement

Udayavani is now on Telegram. Click here to join our channel and stay updated with the latest news.

Next