Advertisement

ತಾಲೂಕು ಕೇಂದ್ರ ಬೈಂದೂರಿನಲ್ಲಿ ತಹಶೀಲ್ದಾರರೇ ಇಲ್ಲ!

10:09 PM Jan 15, 2021 | Team Udayavani |

 

Advertisement

ಬೈಂದೂರು:  ತಾಲೂಕು ಘೋಷಣೆಯಾಗಿ ಎರಡು ವರ್ಷಗಳೇ ಕಳೆದಿವೆ. ಆದರೆ ತಾಲೂಕು ಕೇಂದ್ರಕ್ಕೆ ಅವಶ್ಯವಾದ ಯೋಜನೆಗಳು ಮಾತ್ರ ಇನ್ನೂ ಅನುಷ್ಠಾನಗೊಂಡಿಲ್ಲ. ತಹಶೀಲ್ದಾರರ ಹುದ್ದೆಯೂ ಖಾಲಿಯಾಗಿ 2 ತಿಂಗಳುಗಳು ಕಳೆದಿದೆ. ಇದರಿಂದ ಆಡಳಿತ ವ್ಯವಸ್ಥೆ ಲಗಾಮು ತಪ್ಪುವಂತಾಗಿದೆ.

15 ಗ್ರಾಮ ಪಂಚಾಯತ್‌ ಹಾಗೂ 1 ಪಟ್ಟಣ ವ್ಯಾಪ್ತಿ ಹೊಂದಿರುವ ಬೈಂದೂರಿನ ಅಭಿವೃದ್ಧಿಗೆ ರಾಜ್ಯ ಸರಕಾರ ಭರಪೂರ ಅನುದಾನ ಘೋಷಿಸಿದೆ. ಬಹುಮುಖ್ಯ ಯೋಜನೆಗಳು ಸಾಕಾರಗೊಳ್ಳುವ ನಿರೀಕ್ಷೆಯಲ್ಲಿದೆ. ಆದರೆ ಅತ್ಯವಶ್ಯಕವಾದ ಕಂದಾಯ ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಕೊರತೆ ಆಡಳಿತ ವ್ಯವಸ್ಥೆಗೆ ಹಿನ್ನಡೆಯಾಗುತ್ತಿದೆ.

ಹೊಸ ತಾಲೂಕಿನಲ್ಲಿ ತಹಶೀಲ್ದಾರರು ಇಲ್ಲದಿರುವುದರಿಂದ ನಿತ್ಯ ದೂರದ ಗ್ರಾಮೀಣ ಭಾಗದಿಂದ ಬರುವ ಜನರು ಪ್ರತಿದಿನ ಕೆಲಸ ಬಿಟ್ಟು ಅಲೆಯಬೇಕಾಗಿದೆ.

ಹೆಚ್ಚುವರಿ ಜವಾಬ್ದಾರಿ :

Advertisement

ಅತ್ಯಧಿಕ ಗ್ರಾಮೀಣ ಪ್ರದೇಶಗಳಿರುವ ಈ ಭಾಗದಲ್ಲಿ ಖಾಯಂ ತಹಶೀಲ್ದಾರರ ಆವಶ್ಯಕತೆಯಿದ್ದು ಪ್ರಸ್ತುತ ಬ್ರಹ್ಮಾವರದ ತಹಶೀಲ್ದಾರರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ವಾರಕ್ಕೆ 2 ದಿನ ಬೈಂದೂರಿ ನಲ್ಲಿ ಕಡತಗಳ ವಿಲೇವಾರಿಯಾಗುತ್ತದೆ. ಕಾಲೇಜುಗಳು ಆರಂಭವಾದ ಹಿನ್ನೆಲೆ ಯಲ್ಲಿ ಮತ್ತು ಉದ್ಯೋಗಾವಕಾಶದ ಅರ್ಜಿಗಳಿಗೆ  ತಹಶೀಲ್ದಾರರ ಸಹಿ ಆವಶ್ಯಕವಾಗಿರುವುದರಿಂದ ಬೈಂದೂರಿ ನಲ್ಲಿ ತಹಶೀಲ್ದಾರರ ಕೊರತೆ ಅನೇಕ ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿದೆ.

ಗುದ್ದಲಿ ಪೂಜೆಯ ನಿರೀಕ್ಷೆ :

ಬೈಂದೂರಿನ ಬಹುಮುಖ್ಯ ಬೇಡಿಕೆಯಾದ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸರಕಾರ 10 ಕೋ.ರೂ. ಅನುದಾನ ಮಂಜೂರಾತಿ ನೀಡಿದೆ. ಇದಕ್ಕೆ ಅಧಿಕೃತ ಗುದ್ದಲಿ ಪೂಜೆ ಕೆಲಸ ಇನ್ನೂ ಆಗಿಲ್ಲ. ಸದ್ಯ  ಮಟ್ಟಿಗೆ ಆಹಾರ, ಸಮಾಜ ಕಲ್ಯಾಣ, ತೋಟಗಾರಿಕೆ, ತಸ್ತೀಕ್‌, ಕಸ್ಟಮ್ಸ್‌ ಮುಂತಾದ ಸೇವೆಗಳಿಗೆ ಕುಂದಾಪುರಕ್ಕೆ ತೆರಳಬೇಕಿದೆ. ಹೀಗಾಗಿ ನೋಂದಣಿ, ಖಜಾನೆ ಸೇರಿದಂತೆ ಎಲ್ಲ ಸೇವೆ ಒಂದೆಡೆ ದೊರೆಯಬೇಕಾದರೆ ಮಿನಿ ವಿಧಾನಸೌಧ ತುರ್ತಾಗಿ ನಿರ್ಮಾಣಗೊಂಡು ಕಾರ್ಯಾ ಚರಿಸುವುದು ಅಗತ್ಯವಾಗಿದೆ.

ಸರಕಾರ ಒಟ್ಟು 35 ಹೊಸ ತಹಶೀಲ್ದಾರರ ನೇಮಕ ಮಾಡಲಾಗಿದೆ.ಸದ್ಯದಲ್ಲೆ ಬೈಂದೂರಿಗೆ ಖಾಯಂ ತಹಶೀಲ್ದಾರರ ನೇಮಕವಾಗಲಿದೆ.ಗ್ರಾಮ ಪಂಚಾಯತ್‌ ಚುನಾವಣೆ ಕಾರಣ ವಿಳಂಬವಾಗಿರುವ ಮಿನಿ ವಿಧಾನಸೌಧ ಗುದ್ದಲಿ ಪೂಜೆಯನ್ನು ಶೀಘ್ರ  ನಡೆಸಲಾಗುತ್ತದೆ. ಬಿ.ಎಂ. ಸುಕುಮಾರ್‌ ಶೆಟ್ಟಿ, ಶಾಸಕರು

ತಹಶೀಲ್ದಾರರ ಅಧೀಕೃತ ನೇಮಕ ಸರಕಾರದ ಅಧಿಕಾರವಾಗಿದೆ. ಪ್ರಸ್ತುತ ಬ್ರಹ್ಮಾವರದ ಜತೆಗೆ ಬೈಂದೂರು ಹೆಚ್ಚುವರಿ ಜವಾಬ್ದಾರಿ ದೊರೆತಿದೆ.ಜನರಿಗೆ ಸಮಸ್ಯೆಯಾಗದಂತೆ ಸಮರ್ಪಕ ಸೇವೆ ನೀಡಲಾಗುತ್ತಿದೆ ಹಾಗೂ ಕಡತಗಳ ವಿಲೇವಾರಿ ಶೀಘ್ರ ನಡೆಯುತ್ತಿದೆ.

ಕಿರಣ ಗೌರಯ್ಯ, ತಹಶೀಲ್ದಾರರು

 

ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.