Advertisement

ಗಾಂಧೀಜಿಯ ಅಧ್ಯಯನಕ್ಕೆ ವಿದ್ಯಾರ್ಥಿಗಳೇ ಇಲ್ಲ

06:00 AM Oct 02, 2018 | |

ಬೆಂಗಳೂರು: ಅಹಿಂಸಾ ಮಾರ್ಗದಲ್ಲಿ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಮಹಾತ್ಮ ಗಾಂಧೀಜಿಯವರ ಬಗ್ಗೆ ಅಧ್ಯಯನ ಮಾಡಲು ಡಿಪ್ಲೊಮಾ ಕೋರ್ಸ್‌ಗೆ ವಿದ್ಯಾರ್ಥಿಗಳೇ ಇಲ್ಲ!

Advertisement

ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ದುಸ್ಥಿತಿ ಇದು. ವಿಶ್ವವೇ ಗಾಂಧೀಜಿಯವರ 150ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಕೇಂದ್ರವು ಗಾಂಧೀಜಿಯವರ ಜೀವನ ಚರಿತ್ರೆ ತಿಳಿಸಲು ಗಾಂಧಿ ಅಧ್ಯಯನ ಎಂಬ ವಿಷಯದಲ್ಲಿ ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ ನೀಡುತ್ತಾ ಬಂದಿದೆ. ಪ್ರಸಕ್ತ ಸಾಲಿನಲ್ಲಿ ಈ ಕೋರ್ಸ್‌ಗೆ ಒಂದೇ ಒಂದು ಅರ್ಜಿ ಬಂದಿಲ್ಲ. ವಿದ್ಯಾರ್ಥಿಗಳು ಇಲ್ಲದೇ ಇರುವುದರಿಂದ ಕೋರ್ಸ್‌ ಮುಚ್ಚುವ ಸ್ಥಿತಿಗೆ ತಲುಪಿಸಿದೆ.

ಮಾಜಿ ರಾಷ್ಟ್ರಪತಿ ಡಾ.ಸರ್ವಪಳ್ಳಿ ರಾಧಾಕೃಷ್ಣನ್‌ ಅವರು 1965 ಡಿಸೆಂಬರ್‌ 8ರಂದು ಬೆಂಗಳೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಗಾಂಧಿ ಭವನದ ಹೆಸರಿನಲ್ಲಿ ಈ ಕಟ್ಟಡವು 1969ರ ಅಕ್ಟೋಬರ್‌ 2ರಂದು ವಿದ್ಯಾರ್ಥಿಗಳ ಉನ್ನತ ಸಂಶೋಧನೆಗೆ ಸಿದ್ಧವಾಗಿತ್ತು. ಅಧ್ಯಯನ ಕೇಂದ್ರದ ಗ್ರಂಥಾಲಯದಲ್ಲಿ ಎರಡು ಸಾವಿರಕ್ಕೂ ಅಧಿಕ ಪುಸ್ತಕವಿದೆ. ಈ ಕೇಂದ್ರದ ಮೂಲಕವೇ ವಿವಿ ವ್ಯಾಪ್ತಿಯ ಸ್ನಾತಕೋತ್ತರ ಕಾಲೇಜುಗಳಿಗೆ ಗಾಂಧೀಜಿಯವರ ಜೀವನ, ಸಾಧನೆ, ಹೋರಾಟ, ತತ್ವ, ಆದರ್ಶದ ಕುರಿತು ಪಠ್ಯಕ್ರಮ ಆಧಾರಿತವಾಗಿ ಕೋರ್ಸ್‌ಗಳನ್ನು ನೀಡುತ್ತದೆ.

ಗಾಂಧೀಜಿಯವರ ಜೀವನ ಹಾಗೂ ಸಮಕಾಲೀನ ಅನ್ವಯತೆ ಕುರಿತು ಉಪನ್ಯಾಸ ಕಾರ್ಯಕ್ರಮ, ಸೆಮಿನಾರ್‌, ಕಾರ್ಯಾಗಾರ ಹಾಗೂ ತರಬೇತಿ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳುತ್ತಾ ಬರುತ್ತಿದೆ. ಸಂಶೋಧನಾ ಪ್ರಬಂಧಗಳ ಮಂಡನೆಗೂ ಕೇಂದ್ರದಿಂದ ಉತ್ತೇಜನ ನೀಡಲಾಗುತ್ತಿದೆ. ಗಾಂಧಿ ತತ್ವ ಪ್ರಸಾರಕ್ಕೆ ಬೇಕಾದ ಪುಸ್ತಕಗಳನ್ನು ಹೊತರುತ್ತಿದೆ.

ಇದರ ಜತೆಗೆ ಕಳೆದ 15 ವರ್ಷದಿಂದ ಗಾಂಧಿ ಅಧ್ಯಯನ ಕೇಂದ್ರದಿಂದಲೇ ನೇರವಾಗಿ ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ ನೀಡಲಾಗುತ್ತಿದೆ. ಸರಾಸರಿ 20 ಇನ್‌ಟೇಕ್‌(ಪ್ರವೇಶಾತಿ) ಹೊಂದಿರುವ ಗಾಂಧಿ ಅಧ್ಯಯನ ಕೋರ್ಸ್‌ಗೆ ಈ ವರ್ಷ ಒಂದೇ ಒಂದು ಅರ್ಜಿ ಕೂಡ ಬಂದಿಲ್ಲ. ಹೀಗಾಗಿ ಕೇಂದ್ರದಲ್ಲಿ ಈ ಕೋರ್ಸ್‌ ಮುಚ್ಚಲು ಚಿಂತನೆ ನಡೆಸಿದ್ದಾರೆ.

Advertisement

ಇದೊಂದು ಡಿಪ್ಲೊಮಾ ಕೋರ್ಸ್‌, ಉದ್ಯೋಗಾವಕಾಶ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸದೇ ಇರಬಹುದು. ಹೀಗಾಗಿ ಬೆಂವಿವಿ ದೂರ ಶಿಕ್ಷಣದ ಮೂಲಕ ಗಾಂಧಿ ಅಧ್ಯಯನ ಡಿಪ್ಲೊಮಾ ಕೋರ್ಸ್‌ ಮುಂದುವರಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಬೆಂವಿವಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಳೆದ 15 ವರ್ಷಗಳಲ್ಲಿ ಅನೇಕ ವಿದ್ಯಾರ್ಥಿಗಳು ಗಾಂಧೀಜಿಯರ ಜೀವನ, ಸಾಧನೆ ಹಾಗೂ ಹೋರಾಟದ ಅನೇಕ ವಿಚಾರಗಳು ಡಿಪ್ಲೊಮಾ ಕೋರ್ಸ್‌ ಮೂಲಕ ತಿಳಿದುಕೊಂಡಿದ್ದಾರೆ. ಅಧ್ಯಯನ ಕೇಂದ್ರದಿಂದಲೇ ಪಠ್ಯಕ್ರಮ ಸಿದ್ಧಪಡಿಸಲಾಗುತಿತ್ತು. ದಾಖಲಾಗಿರುವ ವಿದ್ಯಾರ್ಥಿಗಳಿಗೆ ವಿಷಯಾಧಾರಿತವಾಗಿ ಯಾವುದೇ ಕೊರತೆ ಇಲ್ಲದಂತೆ ನೋಡಿಕೊಳ್ಳುತ್ತಿದ್ದೇವೆ. ಇದೇ ಮೊದಲ ಬಾರಿಗೆ ಒಂದೇ ಒಂದು ಅರ್ಜಿ ಬಂದಿಲ್ಲ. ಹೀಗಾಗಿ ಡಿಪ್ಲೊಮಾ ಕೋರ್ಸ್‌ ನಡೆಸುವುದು ಕಷ್ಟ ಎಂದು ವಿವರಿಸಿದರು.

ಅಧ್ಯಯನ ಕೇಂದ್ರದಿಂದಲೇ ನೇರವಾಗಿ ನೀಡುವ ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ಗೆ ಯಾವುದೇ ಅರ್ಜಿ ಬಂದಿಲ್ಲ. ಆದರೆ, ಬೆಂಗಳೂರು ವಿವಿ ವ್ಯಾಪ್ತಿಯ ಸ್ನಾತಕೋತ್ತರ ಕಾಲೇಜುಗಳಲ್ಲಿ ಗಾಂಧೀಜಿಯವರ ಜೀವನಾಧಾರಿತ ಕೋರ್ಸ್‌ಗಳು ನಡೆಯುತ್ತಿದೆ. ಅಲ್ಲಿ ವಿದ್ಯಾರ್ಥಿಗಳ ದಾಖಲಾತಿಯೂ ಚೆನ್ನಾಗಿದೆ. 
– ಡಾ.ನಟರಾಜ್‌ ಹುಳಿಯಾರ, ನಿರ್ದೇಶಕ, ಗಾಂಧಿ ಅಧ್ಯಯನ ಕೇಂದ್ರ ಬೆಂವಿವಿ

Advertisement

Udayavani is now on Telegram. Click here to join our channel and stay updated with the latest news.

Next