Advertisement

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

10:26 AM Apr 30, 2024 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ದಿನೇ ದಿನೆ ಬಿಸಿಲಿನ ಹೊಡೆತ ಜೋರಾಗುತ್ತಿದ್ದು, ಜನರು ಬಿಸಿಲ ಧಗೆಯಿಂದ ಬಳಲುವಂತಾಗಿದೆ.

Advertisement

ಬಿಸಿಲಿನ ಝಳಕ್ಕೆ ಹೆದರಿ ಕೆಲವರು ಮನೆಯಿಂದ ಹೊರಬರುವುದಕ್ಕೆ ಹೆದರುತ್ತಿದ್ದಾರೆ. ಹೀಗಾಗಿಯೇ ಸಿಲಿಕಾನ್‌ ಸಿಟಿ ಬೆಂಗಳೂರು ಈಗ ಬಿಸಿಲೂರು ಆಗಿದೆ. ಈ ಮಧ್ಯೆ, ಸೋಮವಾರ ಬೆಂಗಳೂರು ಸಿಟಿಯಲ್ಲಿ 38.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಮಧ್ಯಾಹ್ನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 38.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಬೆಂಗಳೂರು ಎಚ್‌ ಎಎಲ್‌ ವಿಮಾನ ನಿಲ್ದಾಣದಲ್ಲಿ 37.5 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿತ್ತು. ಜತೆಗೆ ಹೆಬ್ಟಾಳದ ಜಿಕೆವಿಕೆಯಲ್ಲಿ 37.0 ತಾಪಮಾನ ದಾಖಲಾಗಿತ್ತು ಎಂದು ರಾಜ್ಯ ಹವಾಮಾನ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ, ಸಂಜೆ ಹೊತ್ತಿಗೆ ತಾಪಮಾನ ತುಸು ಕಡಿಮೆ ಆಯಿತು. ಸಂಜೆ 5.30ರ ಹೊತ್ತಿಗೆ ಬೆಂಗಳೂರು ಸಿಟಿ ಪ್ರದೇಶದಲ್ಲಿ 37.8 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿತ್ತು. ಬೆಂಗಳೂರು ಅಂತಾರಾಷ್ಟ್ರಿಯ ವಿಮಾನ ವಿಲ್ದಾಣದಲ್ಲಿ 38.0, ಎಚ್‌.ಎ.ಎಲ್‌. ವಿಮಾನ ನಿಲ್ದಾಣದಲ್ಲಿ 37.2 ಡಿಗ್ರಿ ಸೆಲ್ಸಿಯಸ್‌ ಉಷ್ಟಾಂಶ ದಾಖಲಾಗಿತ್ತು. ಬೆಂಗಳೂರು ನಗರ ಮತ್ತು ಸುತ್ತಮುತ್ತ ಸ್ಥಳೀಯ ಮುನ್ಸೂಚನೆಯಂಂತೆ ಮುಂದಿನ 24 ಗಂಟೆಗಳ ಕಾಲ ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ ಯಿಂದ 23 ಡಿಗ್ರಿ ಸೆಲ್ಸಿಯಸ್‌ ವರೆಗೆ ಇರುವ ಸಾಧ್ಯತೆ ಇದೆ. ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ನಗರದಲ್ಲಿ ಮುಖ್ಯವಾಗಿ ಶುಭ್ರ ಆಕಾಶವಿರಲಿದೆ ಎಂದು ವಿಜ್ಞಾನಿ ಹಾಗೂ ಬೆಂಗಳೂರು ಹವಾಮಾನ ಕೇಂದ್ರದ ಮುಖ್ಯಸ್ಥ ಡಾ.ಎಂ.ರಾಜವೇಲ್‌ ತಿಳಿಸಿದ್ದಾರೆ.

ಸಿಲಿಕಾನ್‌ ಸಿಟಿಯಲ್ಲಿ ಬಿಸಿಲಿನ ಬೇಗೆಯಿಂದ ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರಲು ಅಂಜುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಮಧ್ಯಾಹ್ನದ ವೇಳೆ ಬಸ್‌ ಸಂಚಾರ ಕೂಡ ಕಡಿಮೆ ಆಗಿದೆ. ವಿಪರೀತ ಬಿಸಿಲಿನಿಂದಾಗಿ ಮಾರುಕಟ್ಟೆ ಸೇರಿದಂತೆ ಮತ್ತಿತರರ ಪ್ರದೇಶದಲ್ಲಿ ಜನರು ಕಡಿಮೆಯಿರಲಿದೆ.

ಬಿಸಿಲ ಬೇಗೆಯಿಂದ ದೂರವಿರಲು ಸಲಹೆ:

Advertisement

 ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ರವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ.

 ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಿರಿ.

 ಸಾಧ್ಯವಾದಷ್ಟು ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಿ.

 ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ, ಟೋಪಿ, ಬೂಟುಗಳು ಅಥವಾ ಚಪ್ಪಲ್‌ಗ‌ಳನ್ನು ಬಳಸಿ.

 ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್‌, ಚಹಾ, ಕಾಫಿ, ಕಾರ್ಬೋ ನೇಟೆಡ್‌ ತಂಪು ಪಾನೀಯಗಳನ್ನು ತಪ್ಪಿಸಿ.

 ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ, ತೋರಣಿ (ಅಕ್ಕಿ ನೀರು), ನಿಂಬೆ ನೀರು, ಮಜ್ಜಿಗೆ ಬಳಸಿ

 ಸನ್‌ಸ್ಟ್ರೋಕ್‌ನಿಂದ ಪೀಡಿತ ವ್ಯಕ್ತಿಯನ್ನು ಒದ್ದೆ ಬಟ್ಟೆಯಿಂದ ಒರೆಸಿ.

Advertisement

Udayavani is now on Telegram. Click here to join our channel and stay updated with the latest news.

Next