ಹುಮನಾಬಾದ: ಪಟ್ಟಣದ ಬಹುತೇಕ ಓಣಿಗಳ ಚರಂಡಿಗಳು ತ್ಯಾಜ್ಯದಿಂದ ತುಂಬಿದ್ದರೂ ಸ್ವತ್ಛಗೊಳಿಸುವವರು ಇಲ್ಲದೇ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆ ಗಮನಕ್ಕೆ ತಂದರೂ ಗಂಭೀರವಾಗಿ ಪರಿಗಣಿಸಿ, ಪರಿಹಾರ ಕೈಗೊಳ್ಳುವ ವಿಷಯದಲ್ಲಿ ಬೇಜವಾಬ್ದಾರಿ ಪ್ರದರ್ಶಿಸುತ್ತಿರುವ ಆಡಳಿತ ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆ ಕೇವಲ ನಗರದ ವಿವಿಧ ಬಡಾವಣೆಗಳಿಗೆ ಸೀಮಿತವಾಗಿದ್ದರೇ ಚಿಂತೆ ಇರಲಿಲ್ಲ. ಆದರೆ ಪುರಸಭೆ
ಪ್ರವೇಶದ ಮುಖ್ಯದ್ವಾರದ ಬಳಿಯೇ ಮಾಂಸ, ಕೊಳೆತ ತರಕಾರಿ ಒಳಗೊಂಡಂತೆ ವಿವಿಧ ತ್ಯಾಜ್ಯ ವಸ್ತಗಳನ್ನು ಬಿಸಾಡಲಾಗುತ್ತಿದೆ. ಹಾಗಾಗಿ ವಿವಿಧ ಕೆಸಗಳಿಗಾಗಿ ಅಲ್ಲಿಗೆ ಬರುವ ಸಾರ್ವಜನಿಕರನ್ನು ದುರ್ನಾತ ಆಹ್ವಾನಿಸುತ್ತಿದೆ. ನಿತ್ಯ ಅದರ ಪಕ್ಕದಿಂದಲೇ ಸಂಚರಿಸುವ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳ ಗಮನದಲ್ಲಿದ್ದರೂ ಅವರ ಕಣ್ಣಿದ್ದೂ ಕುರುಡರಂತೆ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರಿಗೆ ಬೇಸರ ಉಂಟುಮಾಡಿದೆ.
ಮುಖ್ಯಾಧಿಕಾರಿ ಒಳಗೊಂಡಂತೆ ಇತರೆ ಸಿಬ್ಬಂದಿ ಎಷ್ಟು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂಬುದಕ್ಕೆ ಪಟ್ಟಣದ ಹೌಸಿಂಗ್ ಬಡಾವಣೆ ಬಹುತೇಕ ಚರಂಡಿ ಗಬ್ಬೇರಿ ನಾರುತ್ತಿರುವುದೇ ಸಾಕ್ಷಿ. ಮತ್ತು ಆ ಬಡಾವಣೆಯಲ್ಲಿ ಸಚಿವ ರಾಜಶೇಖರ ಪಾಟೀಲ ಮತ್ತವರ ಸಹೋದರರು ನಡೆಸುವ ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆ ಆವರಣಗೋಡೆ ಪಕ್ಕದಲ್ಲಿ ಸಂಗ್ರಹಗೊಂಡ ತ್ಯಾಜ್ಯ ಅತ್ಯುತ್ತಮ ನಿದರ್ಶನ. ಇನ್ನೂ ನಗರದ ಹಳೆಯ ಅಡತ್ ಬಜಾರ್‌ನ ಬಹುತೇಕ ಕಡೆ ಚರಂಡಿಗಳು ಸ್ವತ್ಛತೆ ಇಲ್ಲದೇ ತುಂಬಿ ರಸ್ತೆಗೆ ಹರಿಯುತ್ತಿದ್ದರೂ ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ.
ಮೊಬೈಲ್ ಸ್ವಿಚ್ ಆಫ್: ತಮ್ಮ ವಿವಿಧ ಕೆಲಸಗಳಿಗಾಗಿ ಕಚೇರಿ ಬರುವ ಜನ, ತಮ್ಮ ಓಣಿಯಲ್ಲಿ ಇಂಥ ಸಮಸ್ಯೆ ಇದೆ
ಎಂದು ಹೇಳಿಕೊಳ್ಳಲು ಸಾರ್ವಜನಿಕರು ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಅವರ ಮೊಬೈಲ್‌ಗೆ ಕರೆ ಮಾಡಿದಾಗ ಕೆಲವು ಬಾರಿ ಸ್ವಿಚ್ ಆಫ್ ಎಂಬ ಪ್ರತಿಕ್ರಿಯೆ ಬರುತ್ತದೆ. ಇನ್ನೂ ಕೆಲವು ಬಾರಿ ರಿಂಗಣಿಸಿದರೂ ಕರೆ ಸ್ವೀಕರಿಸುತ್ತಿಲ್ಲ. ಇಥ ಅಧಿಕಾರಿಗಳ ವಿರುದ್ಧ ಜಿಲ್ಲಾ ಆಡಳಿತ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಶಿಕಾಂತ ಕೆ.ಭಗೋಜಿ