ಹೊಸಪೇಟೆ: ವಿಜಯನಗರ ಜಿಲ್ಲಾಡಳಿತ ಪ್ರವಾಸಿಗರಿಗೆ ಹಂಪಿ ಪ್ರವೇಶ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಹಂಪಿ ತುಂಗಭದ್ರಾ ನದಿಯಲ್ಲಿ ಮಕರ ಸಂಕ್ರಾಂತಿ ಪುಣ್ಯ ಸ್ನಾನದಿಂದ ಭಕ್ತರು ವಂಚಿತರಾಗಿದ್ದಾರೆ.
ಹೌದು! ಪ್ರತಿವರ್ಷ ಮಕರ ಸಂಕ್ರಾಂತಿ ಸಂಭ್ರಮದ ನಡುವೆಯೂ ಹಂಪಿ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡುವ ಭಾಗ್ಯವನ್ನು ಈ ಬಾರಿ ಕೋವಿಡ್ ಕಿತ್ತಕೊಂಡಿದ್ದು ವಿರೂಪಾಕ್ಷನ ಭಕ್ತರು ಕೋವಿಡ್ ಹಿಡಿಶಾಪ ಹಾಕುವಂತಾಗಿದೆ.
ಪ್ರತಿವರ್ಷ ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ತುಂಗಭದ್ರಾ ನದಿಯಲ್ಲಿ ಪುಣ್ಯ-ಸ್ನಾನ ಮುಗಿಸಿಕೊಂಡು ವಿರೂಪಾಕ್ಷನ ದರ್ಶನ ಪಡೆಯುತ್ತಿದ್ದ ಭಕ್ತರಿಗೆ ಈ ವರ್ಷ ನಿರಸಭಾವ ಮೂಡಿದೆ.
ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಿದ್ದ ವಿಶ್ವ ಪರಂಪರೆ ತಾಣ ಹಂಪಿ ಇದೀಗ ಪ್ರವಾಸಿಗರಿಲ್ಲದೇ ಭಣಗುಡುತ್ತಿದೆ. ಪ್ರತಿ ವರ್ಷ ಮಕರ ಸಂಕ್ರಾಂತಿ ದಿನದಲ್ಲಿ ಸಹಸ್ರಾರು ಸಂಖ್ಯೆಯ ಯಾರ್ತಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ತುಂಗಭದ್ರಾ ನದಿ ತೀರ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ನದಿ ತೀರದಲ್ಲಿ ಪೊಲೀಸ್ ಹಾಗೂ ಹೋಂ ಗಾರ್ಡ್ ಸಿಬ್ಬಂದಿ ಬಿಟ್ಟರೆ ಮತ್ಯಾರೂ ಕಂಡು ಬರಲ್ಲಿಲ್ಲ.
ಸಂಕ್ರಾಂತಿ ಹಬ್ಬದ ದಿನದಲ್ಲಿ ಹಂಪಿಗೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರಿಂದ ಆದಾಯ ನೀರಿಕ್ಷೆ ಇಟ್ಟುಕೊಂಡಿದ್ದ, ಸಣ್ಣ-ಪುಟ್ಟ ವ್ಯಾಪಾರಸ್ಥರು, ಹೋಟೆಲ್, ರೆಸ್ಟಾರ್ಟ್ ಭಾರಿ ಹೊಡೆತ ಬಿದ್ದಿದೆ. ಹೂ-ಹಣ್ಣು ವ್ಯಾಪಾರಿಗಳು, ಆಟೋ ಚಾಲಕರು ಹಾಗೂ ಗೈಡ್‌ಗಳು ಪ್ರವಾಸಿಗರ ಆಗಮನಕ್ಕೆ ಬ್ರೇಕ್ ಬಿದ್ದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.