Advertisement

15 ಗ್ರಾಮಗಳಲ್ಲಿ ಮುಕ್ತಿ ಧಾಮಗಳೇ ಇಲ್ಲ!

03:22 PM Jan 04, 2020 | Team Udayavani |

ನರಗುಂದ: ಮರಣ ಹೊಂದಿದ ವ್ಯಕ್ತಿಗೆ ಮುಕ್ತಿ ನೀಡಲು ಊರಿಗೊಂದು ಸ್ಮಶಾನ ಬೇಕು. ಇದಕ್ಕೆ “ಮುಕ್ತಿಧಾಮ’ ಎಂತಲೂ ಕರೆಯುತ್ತೇವೆ. ಆದರೆ ನರಗುಂದ ತಾಲೂಕಿನ 15 ಗ್ರಾಮಗಳಲ್ಲಿ ಸ್ಮಶಾನಗಳೇ ಇಲ್ಲ! ಹೀಗಾಗಿ ಆಯಾ ಗ್ರಾಮಗಳಲ್ಲಿ ಅಂತ್ಯಕ್ರಿಯೆಗೆ ಸಂಕಷ್ಟ ಸಹಜವಾಗಿದೆ.

Advertisement

ಜೀವಿತಾವಧಿಯಲ್ಲಿ ಏನೆಲ್ಲ ಸೌಕರ್ಯ ಕೊಡುವ ಸರಕಾರ ಊರಿಗೊಂದು ಮುಕ್ತಿಧಾಮ ನಿರ್ಮಿಸಿ ಜೀವ ತ್ಯಜಿಸಿದ ವ್ಯಕ್ತಿಗಳಿಗೆ ಮುಕ್ತಿಗಾಗಿ ಮೂಲ ಸೌಲಭ್ಯ ಒದಗಿಸಲು ಹಿಂದೇಟು ಹಾಕುತ್ತಿದೆ. ತಾಲೂಕಿನ ಕೆಲ ಗ್ರಾಮಗಳಲ್ಲಿ ಸ್ಮಶಾನಗಳಿಲ್ಲದೇ ಯಾರಾದರೂ ತೀರಿದಾಗ ಖಾಸಗಿ ಜಮೀನಿನಲ್ಲೋ ಅಥವಾ ರಸ್ತೆ, ಹಳ್ಳ-ಕೊಳ್ಳಗಳ ದಂಡೆಯಲ್ಲಿ ಅಂತ್ಯಕ್ರಿಯೆ ಮಾಡುವುದು ನಡೆದು ಕೊಂಡುಬಂದಿದ್ದು ವಿಪರ್ಯಾಸ.

ತಾಲೂಕಿನ ಬನಹಟ್ಟಿ ಗ್ರಾಪಂನ ಬನಹಟ್ಟಿ ಸ್ಮಶಾನ ಅಭಿವೃದ್ಧಿಪಡಿಸಲಾಗಿದೆ. ಮೂಗನೂರ ಗ್ರಾಮದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆನಕನಕೊಪ್ಪ ಗ್ರಾಪಂನ ಬೆನಕನಕೊಪ್ಪದಲ್ಲಿ 2, ಸಂಕಧಾಳ, ಭೈರನಹಟ್ಟಿ ಗ್ರಾಪಂನ ಭೈರನಹಟ್ಟಿ, ಮದಗುಣಕಿ, ಚಿಕ್ಕನರಗುಂದ, ಹದಲಿ, ಸುರಕೋಡ, ಕಣಕಿಕೊಪ್ಪ ಗ್ರಾಪಂನ ಕಣಕಿಕೊಪ್ಪ, ಶಿದ್ದಾಪೂರ, ಗುರ್ಲಕಟ್ಟಿ ಗ್ರಾಮಗಳಲ್ಲಿ ಸ್ಮಶಾನಗಳಿವೆ.

ಗ್ರಾಪಂ ವ್ಯಾಪ್ತಿಯಲ್ಲೇ ಇಲ್ಲ: ಹಿರೇಕೊಪ್ಪ ಗ್ರಾಪಂನ ಹಿರೇಕೊಪ್ಪ, ಅರಿಷಿಣಗೋಡಿ, ಕುರುಗೋವಿನಕೊಪ್ಪ, ವಾಸನ ಗ್ರಾಪಂನ ವಾಸನ, ಬೆಳ್ಳೇರಿ, ಲಖಮಾಪುರ ಸೇರಿ ಎರಡೂ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಸ್ಮಶಾನಗಳೇ ಇಲ್ಲ. ಸ್ಮಶಾನ ನಿರ್ಮಾಣಕ್ಕೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಕೂಡ ಬಂದಿಲ್ಲ ಎಂದು ಹೇಳಲಾಗಿದೆ. ಕೊಣ್ಣೂರ ಗ್ರಾಪಂನ ಕೊಣ್ಣೂರಲ್ಲಿ ಎರಡಿದ್ದು, ಬೂದಿಹಾಳ ಗ್ರಾಮದಲ್ಲಿ ಸ್ಮಶಾನವಿಲ್ಲ.

ರಡ್ಡೇರನಾಗನೂರ ಗ್ರಾಪಂನ ರಡ್ಡೇರನಾಗನೂರ ಹೊರತುಪಡಿಸಿ ಖಾನಾಪುರ, ಗಂಗಾಪುರ, ಹುಣಸೀಕಟ್ಟಿ ಗ್ರಾಪಂನ ಹುಣಸೀಕಟ್ಟಿ, ಜಗಾಪುರ ಗ್ರಾಮಗಳಲ್ಲಿ ಸ್ಮಶಾನಗಳಿಲ್ಲ. ಶಿರೋಳ ಗ್ರಾಪಂನ ಶಿರೋಳದಲ್ಲಿ ಎರಡಿದ್ದು, ಕಪ್ಪಲಿ, ಕಲ್ಲಾಪುರ ಗ್ರಾಮಗಳಲ್ಲಿ ಸ್ಮಶಾನಗಳಿಲ್ಲ. ಕಲಕೇರಿ, ಕಪ್ಪಲಿ ಗ್ರಾಮಗಳ ಖಾಸಗಿ ಜಾಗೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

Advertisement

ನರಗುಂದ ತಾಲೂಕಿನ 33 ಹಳ್ಳಿಗಳ ಪೈಕಿ 18 ಗ್ರಾಪಂಗಳಲ್ಲಿ ಸ್ಮಶಾನಗಳಿದ್ದು, ಉಳಿದ 15 ಗ್ರಾಮಗಳಲ್ಲಿ ಮುಕ್ತಿಧಾಮಗಳ ಅಗತ್ಯವಿದೆ.

ತಾಪಂನಿಂದ ಸ್ಮಶಾನ ಅಭಿವೃದ್ಧಿ ಗುರಿ: ತಾಲೂಕು ಪಂಚಾಯತ್‌ ನರೇಗಾ ಯೋಜನೆಯಡಿ ಚಿಕ್ಕನರಗುಂದ, ಕಣಕಿಕೊಪ್ಪ, ಶಿರೋಳ ಸ್ಮಶಾನ ಅಭಿವೃದ್ಧಿಪಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಬನಹಟ್ಟಿ, ಹಿರೇಕೊಪ್ಪ, ಕೊಣ್ಣೂರಿನ 2 ಸೇರಿ 4 ಸ್ಮಶಾನ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.

ಸ್ಮಶಾನಗಳಿಗೆ ಪ್ರಸ್ತಾವನೆ ಸಲ್ಲಿಕೆ :  ತಾಲೂಕಿನ 15 ಗ್ರಾಮಗಳಲ್ಲಿ ಸ್ಮಶಾನಗಳಿಲ್ಲ. ಎಲ್ಲ ಗ್ರಾಮಗಳಿಂದ ಪ್ರಸ್ತಾವನೆ ತರಿಸಿಕೊಂಡು ಜಿಲ್ಲಾಧಿಕಾರಿಗಳಿಗೆ ಕಳಿಸಲಾಗಿದೆ. ಆರೇಳು ಗ್ರಾಮಗಳಲ್ಲಿ ಸರಕಾರಿ ಜಾಗೆ ಇಲ್ಲದ ಕಾರಣ ಖಾಸಗಿ ಜಮೀನು ಖರೀದಿಗೆ ಚಿಂತಿಸಲಾಗಿದೆ. ಸರಕಾರಿ ದರ, ರೈತರ ಬೇಡಿಕೆಯಲ್ಲಿ ವ್ಯತ್ಯಾಸದಿಂದ ವಿಳಂಬವಾಗುತ್ತಿದೆ. ಗ್ರಾಮಕ್ಕೆ ಸಮೀಪ ಜಾಗ ಇರಬೇಕಾದ್ದರಿಂದ ತೊಂದರೆಗಳಿವೆ. ಜಿಲ್ಲಾ ಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಶೀಘ್ರ ಸ್ಮಶಾನಗಳ ತೊಂದರೆ ನಿವಾರಿಸಲಾಗುವುದು. –ಎ.ಎಚ್‌. ಮಹೇಂದ್ರ, ತಹಶೀಲ್ದಾರ್‌ 

 

-ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next