Advertisement

ಪುಸ್ತಕಗಳಿವೆ ಕೊಳ್ಳುವವರಿಲ್ಲ, ಕಷ್ಟಗಳಿವೆ ಕೇಳುವವರಿಲ್ಲ!

09:05 AM Nov 25, 2017 | |

ಕನ್ನಡ ಪುಸ್ತಕಗಳನ್ನು ಕೊಳ್ಳುವವರಿಲ್ಲ ಎಂಬುದು ಆಗಾಗ್ಗೆ ಕೇಳಿಬರುವ ದೂರು. ಅದನ್ನು ನಿಜ ಮಾಡುವಂಥ ಸಂದರ್ಭಗಳು ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ದಿನವೇ ಮತ್ತೆ ಮತ್ತೆ ಕಾಣಿಸಿಕೊಂಡವು. ಇದುವರೆಗೂ ಸಾಹಿತ್ಯ ಸಮ್ಮೇಳನ ಎಂದರೆ ಮುನ್ನೂರು ಪುಸ್ತಕ ಮಳಿಗೆಗಳು ಇರುತ್ತಿದ್ದವು. ಆದರೆ ಈ ಬಾರಿ ಮೈಸೂರಿನಲ್ಲಿ ಐನೂರಕ್ಕೂ ಹೆಚ್ಚು ಪುಸ್ತಕ ಮಳಿಗೆ ಗಳನ್ನು ತೆರೆಯಲಾಗಿದೆ. ಎಲ್ಲ ಮಳಿಗೆಗಳೂ ಪುಸ್ತಕಗಳಿಂದ ತುಂಬಿಕೊಂಡಿವೆ. ಮೂವತ್ತೈದು ಪೈಸೆಗೆ ಒಂದು ಹಾಡು, 10 ರೂ.ಗೆ ಒಂದು ಪುಸ್ತಕ, ಶೇ. 50 ರಿಯಾಯಿತಿ, 400 ರೂ. ಮುಖಬೆಲೆಯ ಪುಸ್ತಕ ಕೇವಲ 150ರೂ.ಗೆ ಲಭ್ಯ…  ಎಂದೆಲ್ಲಾ ಗಿಮಿಕ್‌ ಮಾಡಲಾಗಿದೆ. ಆದರೂ, ಪುಸ್ತಕ ಖರೀದಿಯ ವಿಷಯದಲ್ಲಿ ಓದುಗರು ಧಾರಾಳಿಗಳಾಗಿಲ್ಲ.

Advertisement

ಮನೆಯೊಂದು, ಮೂರು ಬಾಗಿಲು: “ದಾಖಲೆ ಸಂಖ್ಯೆಯಲ್ಲಿ ಜನ ಬಂದರೂ ಪುಸ್ತಕಗಳು ಏಕೆ ಮಾರಾಟವಾಗುತ್ತಿಲ್ಲ’ ಎಂದು ಕೇಳಿದರೆ, ಮಾರಾಟಗಾರರೆಲ್ಲಾ ಒಕ್ಕೊರಲಿನಿಂದ ಮಳಿಗೆ ನಿರ್ಮಾಣದಲ್ಲಿ ಆಗಿರುವ ಲೋಪದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಾರೆ. ಸಾಮಾನ್ಯವಾಗಿ, ಸಾಹಿತ್ಯ ಸಮ್ಮೇಳನದಂಥ ಉತ್ಸವಗಳಲ್ಲಿ ಒಂದು ವಿಶಾಲ ಜಾಗದಲ್ಲಿ ಪುಸ್ತಕ ಮಳಿಗೆಗಳಿಗೆ ಜಾಗ ಒದಗಿಸಲಾಗುತ್ತದೆ. ಎಲ್ಲ ಮಳಿಗೆಗಳೂ ಒಂದೇ ಜಾಗದಲ್ಲಿ, ಐದಾರು ಸಾಲುಗಳಲ್ಲಿ ಇರುತ್ತವೆ. ಆದರೆ ಮೈಸೂರಿನಲ್ಲಿ ಹಾಗಾಗಿಲ್ಲ. ಸ್ಕೂಲಿನಲ್ಲಿ ಪ್ರತ್ಯೇಕ ಕೊಠಡಿಗಳಿರುತ್ತವಲ್ಲ; ಹಾಗೆ ಮೂರು ಪ್ರತ್ಯೇಕ ಭಾಗಗಳಾಗಿ ವಿಂಗಡಿಸಿ ದಂತೆ ಮಳಿಗೆಗಳನ್ನು ನಿರ್ಮಿಸಲಾಗಿದೆ. ಒಂದೊಂದು ವಿಭಾಗದಲ್ಲೂ 100ಕ್ಕೂ ಹೆಚ್ಚು ಮಳಿಗೆಗಳಿವೆ. ಒಂದು ಮಳಿಗೆಯಲ್ಲಿ ಸುತ್ತಾಡಿದವರು, ಎರಡು ಹಾಗೂ ಮೂರನೇ ಮಳಿಗೆಗಳೂ ಇವೆ ಎಂಬುದನ್ನೇ ಮರೆತು ಮನೆಯ ಹಾದಿ ಹಿಡಿಯುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಪುಸ್ತಕ ಮಳಿಗೆಗಳ ಸದ್ಯದ ಸ್ಥಿತಿ “ಮನೆಯೊಂದು ಮೂರು ಬಾಗಿಲು’ ಎನ್ನುವಂತಾಗಿದೆ.

ಕಷ್ಟಗಳಿವೆ ಕೇಳುವವರಿಲ್ಲ: ಪುಸ್ತಕ ಮಳಿಗೆಗಳಿಗೆ ವಿದ್ಯುತ್‌ ಹಾಗೂ ಫ್ಯಾನ್‌ ಸೌಲಭ್ಯ ಒದಗಿಸಲಾಗುವುದು ಎಂದು
ಪ್ರತಿ ಬಾರಿಯೂ ಹೇಳಲಾಗುತ್ತದೆ. ಆದರೆ, ಅದೆಲ್ಲ ಕೇವಲ ಆಶ್ವಾಸನೆ ಎಂಬುದು ಮೈಸೂರಿನಲ್ಲಿ ಸಾಬೀತಾಯಿತು. ಫ್ಯಾನ್‌ ಗಳು ಯಾವಾಗ ತಿರುಗಲು ಪ್ರಾರಂಭಿಸುತ್ತವೆ, ಯಾವಾಗ ನಿಂತು ಹೋಗುತ್ತವೆ, ಲೈಟ್‌ಗಳು ಯಾವಾಗ ಹತ್ತಿಕೊಳ್ಳುತ್ತವೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟವರನ್ನು ವಿಚಾರಿ ಸಲು ಹೋದರೆ, ಅವರ ಫೋನ್‌ಗಳು ಬ್ಯುಸಿ ಆಗಿರುತ್ತವೆ. ಅಕಸ್ಮಾತ್‌ ಅವರು ಎದುರಿಗೇ ಸಿಕ್ಕಿಬಿಟ್ಟರೂ, ಮತ್ತೂಬ್ಬರ ಕಡೆಗೆ ಕೈ ತೋರಿಸಿ ನುಣುಚಿಕೊಳ್ಳುತ್ತಾರೆ. ಭಾರೀ ಸಂಖ್ಯೆಯಲ್ಲಿ ಜನ ಬರುವುದ ರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳು ಮಾರಾಟವಾಗುತ್ತವೆ ಎಂಬುದು ಹಲವರ ನಿರೀಕ್ಷೆಯಾಗಿತ್ತು. ಹಾಗೆಂದೇ ಕಲಬುರಗಿ, ಗದಗ, ಜಮಖಂಡಿ, ರಾಣೇಬೆನ್ನೂರಿನಂಥ ಊರುಗಳಿಂದ ಲಾರಿ ಮಾಡಿಕೊಂಡು ಪುಸ್ತಕಗಳನ್ನು ತಂದವರಿದ್ದಾರೆ. ಆದರೆ,
ಮೊದಲ ದಿನ ನೀರಸ ಎಂಬಂಥ ಪ್ರತಿಕ್ರಿಯೆ ದೊರಕಿದೆ. ಮತ್ತೂ ವಿವರಿಸಿ ಹೇಳಬೇ ಕೆಂದರೆ, ಮಳಿಗೆಗಳಿಗೆ ಬರುವವರು ಪುಸ್ತಕ ಗಳನ್ನು ಜಸ್ಟ್‌ ನೋಡುವುದರಲ್ಲಿ, ಪುಟಗಳನ್ನು ತಿರುವಿ ಹಾಕಿ ಹೋಗಿ ಬಿಡುವುದರಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲೂ ಪರಿಸ್ಥಿತಿ ಹೀಗೇ ಮುಂದುವರಿದರೆ, ತಂದಿರುವ ಅಷ್ಟೂ ಪುಸ್ತಕಗಳೊಂದಿಗೆ ಊರಿನ ದಾರಿ ಹಿಡಿಯಬೇಕಾಗುತ್ತದೆ. ಅದನ್ನು ಬಿಟ್ಟು ಬೇರೆ ದಾರಿಯೇ ಇಲ್ಲವಲ್ಲ ಎಂಬುದು ಹಲವು ವ್ಯಾಪಾರಿಗಳ ಮಾತು. ಮಳಿಗೆಯಲ್ಲಿ ಪುಸ್ತಕವನ್ನು ಪರಿಶೀಲಿಸುತ್ತಿರುವ ಸಾಹಿತ್ಯಾಸಕ್ತರು.

 ● ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next